GKScienceSpardha Times

ಜೀವಕೋಶ ಅಧ್ಯಯನ ( ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

Share With Friends

ಜೀವಕೋಶ ಇಂದು ತಿಳಿದ ಎಲ್ಲಾ ಜೀವಿಗಳಿಗೂ ಮೂಲಭೂತ ರಾಚನಿಕ, ಕಾರ್ಯಭಾರದ ಮತ್ತು ಜೈವಿಕ ಘಟಕ. ಜೀವಕೋಶವು ತನ್ನನ್ನು ತಾನೇ ನಕಲು ಮಾಡಿಕೊಳ್ಳಬಲ್ಲ ಜೀವದ ಕನಿಷ್ಠ ಘಟಕ ಮತ್ತು ಅದನ್ನು ಜೀವಿಗಳ “ಕಟ್ಟಡದ ಸೈಜುಗಲ್ಲು” ಎಂದು ಕರೆಯಲಾಗಿದೆ. ಜೀವಕೋಶಗಳ ಅಧ್ಯಯನವನ್ನು ಕೋಶ ಜೀವಶಾಸ್ತ್ರ ಎಂದು ಕರೆಯಲಾಗುತ್ತದೆ. ಜೀವಕೋಶ ಪದಕ್ಕೆ ಇಂಗ್ಲೀಶ್‌ನ ಸಂವಾದಿ ಪದ ಸೆಲ್ ,ಲ್ಯಾಟಿನ್‌ನ ಸೆಲ್ಲಾ ಪದದಿಂದ ಬಂದಿದ್ದು ಅದರ ಅರ್ಥ “ಚಿಕ್ಕ ಕೋಣೆ” ಎಂದು.

ಜೀವಕೋಶದಲ್ಲಿ ಪೊರೆಯೊಳಗೆ ಸುತ್ತುವರಿದ ಜೀವರಸ (ಸೈಟೊಪ್ಲಾಸಂ) ಇರುತ್ತದೆ ಮತ್ತು ಈ ಜೀವರಸದಲ್ಲಿ ಪ್ರೋಟೀನ್ ಮತ್ತು ನ್ಯೂಕ್ಲಿಯಿಕ್ ಆಮ್ಲಗಳಂತಹ ಜೈವಿಕ ಅಣುಗಳು ಇರುತ್ತವೆ. ಜೀವಿಗಳನ್ನು ಏಕಕೋಶಿಗಳು (ಬ್ಯಾಕ್ಟೀರಿಯವನ್ನೂ ಒಳಗೊಂಡು ಏಕಕೋಶ ಜೀವಿಗಳು) ಮತ್ತು ಬಹುಕೋಶಿಗಳು (ಸಸ್ಯಗಳು ಮತ್ತು ಪ್ರಾಣಿಗಳನ್ನು ಒಳಗೊಂಡ ಒಂದಕ್ಕಿಂತ ಹೆಚ್ಚು ಜೀವಕೋಶವಿರುವ ಜೀವಿಗಳು) ಎಂದು ವರ್ಗೀಕರಿಸಬಹುದು.

ಸಸ್ಯ ಮತ್ತು ಪ್ರಾಣಿಗಳ ಜೀವಕೋಶಗಳು ಜೀವಸಂಕುಲದಿಂದ ಜೀವಸಂಕುಲಕ್ಕೆ ಬೇರೆ ಬೇರೆಯಾಗುತ್ತವೆ. ಮಾನವನಲ್ಲಿ ನೂರು ಲಕ್ಷ ಕೋಟಿಗೂ ಹೆಚ್ಚು ಜೀವಕೋಶಗಳಿವೆ. ಬಹಳಷ್ಟು ಸಸ್ಯ ಮತ್ತು ಪ್ರಾಣಿಗಳ ಜೀವಕೋಶಗಳನ್ನು ಸೂಕ್ಷ್ಮದರ್ಶಕದಲ್ಲಿ ಮಾತ್ರ ನೋಡಲು ಸಾಧ್ಯ, ಅವುಗಳ ಅಳತೆ 1 ರಿಂದ 100 ಮೈಕ್ರೋಮೀಟರ್ ಅಥವಾ ಮೈಕ್ರಾನ್ ಇರುತ್ತದೆ.

ಜೀವಕೋಶವನ್ನು 1665 ರಲ್ಲಿ ರಾಬರ್ಟ್ ಹುಕ್ ಕಂಡುಹಿಡಿದ ಮತ್ತು ಈ ಜೈವಿಕ ಘಟಕಗಳು ಕ್ರೈಸ್ತ ಸನ್ಯಾಸಿಗಳ ನಿವಾಸವನ್ನು ಹೋಲುತ್ತಿದ್ದ ಕಾರಣಕ್ಕೆ ಆ ಹೆಸರು ಕೊಟ್ಟ.ಜೀವಕೋಶ ಸಿದ್ಧಾಂತವನ್ನು ಮೊದಲು 1839ರಲ್ಲಿ ಮ್ಯಾಥಿಯಾಸ್‌ ಜಾಕೋಬ್ ಸ್ಕಲೆಡೆನ್ ಮತ್ತು ಥಿಯೊಡರ್ ಸ್ಕವಾನ್ನ್ ಮಂಡಿಸಿದರು.

ಈ ಸಿದ್ಧಾಂತದ ಪ್ರಕಾರ ಎಲ್ಲಾ ಜೀವಿಗಳು ಒಂದು ಅಥವಾ ಹೆಚ್ಚು ಜೀವಕೋಶಗಳಿಂದ ರಚಿಸಲ್ಪಟ್ಟಿವೆ, ಎಲ್ಲಾ ಜೀವಿಗಳಲ್ಲಿ ಜೀವಕೋಶಗಳು ರಚನೆ ಮತ್ತು ಕಾರ್ಯನಿರ್ವಹಣೆಯ ಪ್ರಾಥಮಿಕ ಘಟಕಗಳು, ಎಲ್ಲಾ ಜೀವಕೋಶಗಳೂ ಇತರ ಈಗಾಗಲೇ ಇರುವ ಜೀವಕೋಶಗಳಿಂದ ಬಂದಿವೆ ಮತ್ತು ಎಲ್ಲಾ ಜೀವಕೋಶಗಳಲ್ಲಿಯೂ ಅದರ ಕಾರ್ಯಗಳನ್ನು ನಿಯಂತ್ರಿಸಲು ಹಾಗೂ ನಂತರದ ಪೀಳಿಗೆಯ ಜೀವಕೋಶಗಳಿಗೆ ಮಾಹಿತಿ ರವಾನಿಸಲು ಅಗತ್ಯವಾದ ಅನುವಂಶಿಕ ಮಾಹಿತಿ ಅಡಕವಾಗಿದೆ.ಜೀವಕೋಶಗಳು ಕನಿಷ್ಠ 350 ಕೋಟಿ ವರುಷಗಳ ಹಿಂದೆ ಭೂಮಿಯ ಮೇಲೆ ಮೊದಲು ಕಾಣಿಸಿಕೊಂಡವು.

# ಜೀವಕೋಶದ ಮೂರು ಪ್ರಮುಖ ಭಾಗಗಳು :
➤ ಕೋಶಪೊರೆ : ಜೀವಕೋಶವನ್ನು ರಕ್ಷಿಸಿ ಕೋಶದೊಳಗೆ ಹೋಗುವ ಮತ್ತು ಬರುವ ವಸ್ತುಗಳ ಚಲನೆಯನ್ನು ನಿಯಂತ್ರಿಸುವುದೇ ಕೋಶಪೊರೆ. ಕೋಶಪೊರೆ ಅತ್ಯಂತ ಸೂಕ್ಷ್ಮವಾದ ಪೊರೆಯಾಗಿದ್ದು ಜೀವಕೋಶವನ್ನು ಕೋಟೆಯಂತೆ ಆವರಿಸುತ್ತದೆ ಹಾಗೆಯೇ ಜೀವಕೋಶಕ್ಕೆ ನಿರ್ದಿಷ್ಟ ಆಕಾರ ನೀಡುತ್ತದೆ.

➤ ಕೋಶದ್ರವ್ಯ : ಇದು ಕೋಶಪೊರೆ ಮತ್ತು ಕೋಶಬೀಜದ ನಡುವೆ ಇರುವ ದ್ರವವಾಗಿದೆ.

♦ ಕೋಶಕೇಂದ್ರ (ಕೋಶಬೀಜ) : ಇದು ಜೀವಕೋಶದ ಮಧ್ಯೆ ಇರುವಂತಹ ಕಾಯ. ಇದು ನಾಲ್ಕು ಮುಖ್ಯ ಭಾಗಗಳನ್ನು ಹೊಂದಿದ್ದು ‘ವರ್ಣಜಾಲ’ ಎಂಬ ದಾರದಂತಹ ರಚನೆ ಪ್ರಮುಖವಾದುದು. ಇದು ಕೋಶ ವಿಭಜನೆಯ ಸಮಯದಲ್ಲಿ ಸಣ್ಣ ತಂತುಗಳಾಗಿ ಮಾರ್ಪಡುತ್ತದೆ. ಕೋಶ ಬೀಜವು ಕಿರುಕೋಶಬೀಜಗಳನ್ನು ಸಹ ಒಳಗೊಂಡಿರುತ್ತದೆ. ಕೋಶಕೇಂದ್ರ ದ್ರವ್ಯದಲ್ಲಿ ಕಾಣುವ ದಾರದ ಎಳೆಗಳಂತಹ ರಚನೆಗಳನ್ನು ‘ಕ್ರೊಮ್ಯಾಟಿನ್’ ಎಂದು ಕರೆಯುತ್ತಾರೆ.

➤ ನ್ಯೂಕ್ಲಿಯರ್ ಪೊರೆ :ಕೋಶಕೇಂದ್ರವನ್ನು ಆವರಿಸಿರುವ ಪೊರೆಯಾಗಿದೆ. ಇದರಲ್ಲಿ ಸಣ್ಣ ಸಣ್ಣ ರಂಧ್ರಗಳಿದ್ದು ಅವುಗಳ ಮೂಲಕ ಕೋಶಕೇಂದ್ರದ ಒಳಗೆ ಹಾಗೂ ಹೊರಗೆ ರಾಸಾಯನಿಕ ವಸ್ತುಗಳ ಸಾಗಾಣಿಕೆಯನ್ನು ನಿಯಂತ್ರಿಸುತ್ತದೆ.

➤ ಕಿರುಕೋಶ ಬೀಜ : ಕಿರುಕೋಶ ಬೀಜವು ರೈಬೋಸ್ ನ್ಯೂಕ್ಲಿಕ್ ಆಮ್ಲ ಮತ್ತು ಸಸಾರಜನಕದಿಂದ ಆಗಿರುತ್ತದೆ.

# ಜೀವಕೋಶದ ವಿವಿಧ ಕಣದಂಗಗಳು ಮತ್ತು ಅವುಗಳ ಕ್ರಿಯೆಗಳು :
♦ ಮೈಟೋಕಾಂಡ್ರಿಯಾ (ಶಕ್ತಿ ಉತ್ಪಾದನಾ ಕೇಂದ್ರ) :ಮೈಟೋಕಾಂಡ್ರಿಯಾ ಕಣದಂಗಗಳನ್ನು ವಿಜ್ಞಾನಿ ‘ಕೊಲ್ಲಿಕರ್’ ಕಂಡುಹಿಡಿದರು. ಇದು ಕೋಶದ ಉಸಿರಾಟ ಕೇಂದ್ರವಾಗಿದೆ. ಇಲ್ಲಿ ಶಕ್ತಿ ಬಿಡುಗಡೆಯಾಗುವುದರಿಂದ ಇದನ್ನು ಜೀವ ಕೋಶದ ಶಕ್ತಿ ಕೇಂದ್ರ ಎನ್ನುವರು.

♦ ರೈಬೋಸೋಮ (ಪ್ರೋಟೀನ್ ಕಾರ್ಖಾನೆ) :1955ರಲ್ಲಿ ‘ಫ್ಯಾರಡೆ’ ರೈಬೋಸೋಮ್ ಕಣದಂಗಗಳನ್ನು ಕಂಡುಹಿಡಿದರು. ಇದು ಸಸಾರಜನಕ ತಯಾರಿಸುವುದರೊಂದಿಗೆ ರೈಬೋಸೋಮುಗಳು ಪ್ರೋಟೀನ್ ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ.

♦ ಗಾಲ್ಗಿ ಸಂಕೀರ್ಣ : ಇದರ ಮುಖ್ಯ ಕಾರ್ಯ ಪ್ರೋಟೀನುಗಳನ್ನು ಸಂಗ್ರಹಿಸಿ ಜೀವಕೋಶಕ್ಕೆ ಬೇಕಾದ ಕಿಣ್ವಗಳನ್ನು ಉತ್ಪಾದಿಸುತ್ತದೆ. ಲೈಸೋಸೋಮ್ ಗಳನ್ನು ಉತ್ಪತ್ತಿ ಮಾಡಲು ಇದು ನೆರವಾಗುತ್ತದೆ.

♦ ಕೋಶರಸಾಂತರ ಜಾಲ : ಇದು ಕೋಶಪೊರೆಯಿಂದ ಕೋಶ ಬೀಜದವರೆಗೆ ಹರಡಿರುವ ನಳಿಕೆಗಳ ಜಾಲವಾಗಿದೆ.

♦ ಸೆಂಟ್ರಿಯೋಲ್ : ಕೋಶಕೇಂದ್ರದ ಸಮೀಪದಲ್ಲಿ ಇರುವ ಕಣದಂಗವಾಗಿದ್ದು ಕೋಶ ವಿಭಜನೆಯ ಸಂದರ್ಭದಲ್ಲಿ ಕದಿರಿನ ಎಳೆಗಳನ್ನು ಉತ್ಪತ್ತಿ ಮಾಡುತ್ತದೆ.

♦ ವರ್ಣಜಾಲ (ಕ್ರೋಮ್ಯಾಟಿನ್) :ಅನುವಂಶಿಕ ಲಕ್ಷಣಗಳನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುತ್ತದೆ. ಇದು ಡಿ.ಎನ್.ಎ ಮತ್ತು ಪ್ರೋಟೀನ್ ಗಳಿಂದ ಮಾಡಲ್ಪಟ್ಟಿವೆ.

♦ ಲೈಸೋಜೋಮ್ : ಅನುಪಯುಕ್ತ ವಸ್ತು ಮತ್ತು ಮುದಿ ಕೋಶಗಳ ನಾಶಕ್ಕೆ ಕಾರಣವಾಗುತ್ತದೆ. ಆದ್ದರಿಂದ ಇದನ್ನು ‘ಆತ್ಮಹತ್ಯಾ ಸಂಚಿ’ ಎಂದು ಕರೆಯುತ್ತಾರೆ. ಲೈಸೋಸೋಮ್ ಕಣದಂಗಗಳನ್ನು ಕಂಡುಹಿಡಿದ ವಿಜ್ಞಾನಿ ಕ್ರಿಶ್ಚಿಯನ್-ಡಿ-ಡು.

♦ ಕಿರುಕೋಶಬೀಜ ಕೇಂದ್ರ : ಇದು ದೇಹದಲ್ಲಿ ಸಸಾರಜನಕ ತಯಾರಿಸಲು ಬೇಕಾದ ವಸ್ತುಗಳನ್ನು ಸಜ್ಜುಗೊಳಿಸುತ್ತದೆ.

♦ ಸಮರೂಪಿ ವರ್ಣತಂತುಗಳು : ಕೋಶಗಳಲ್ಲಿ ಜೋಡಿಯಾಗಿರುವ ವರ್ಣತಂತುಗಳಿಗೆ ಸಮರೂಪಿ ವರ್ಣತಂತುಗಳು ಎನ್ನುವರು. ಇವುಗಳಲ್ಲಿ ಒಂದು ವರ್ಣತಂತುವು ಎರಡು ಸಮಾನಾಂತರ ಎಳೆಗಳಿಂದ ಕೂಡಿರುತ್ತದೆ. ಇವುಗಳನ್ನು ಬಂಧಿಸುವ ಬಿಂದುವನ್ನು ‘ಸೆಂಟ್ರಿಯೋಮಿಯರ್’ ಎನ್ನುವರು.

♦ ಕ್ಲೋರೋಪ್ಲಾಸ್ಪ್ (ಹರಿತ್ತು) : ಸಸ್ಯಕೋಶಗಳಲ್ಲಿ ಕಂಡುಬರುವ ಹಸಿರಾದ ಮತ್ತು ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಯುವ ಕೇಂದ್ರ ಮತ್ತು ಸೌರಶಕ್ತಿಯನ್ನು ರಾಸಾಯನಿಕ ಶಕ್ತಿಯನ್ನಾಗಿ ಪರಿವರ್ತಿಸುವುದು.

♦ ಎಂಡೋಪ್ಲಾಸ್ಮಿಕ್ ರೆಟಿಕ್ಯೂಲಮ್ ಕೋಶಕ್ಕೆ ಆಂತರಿಕವಾಗಿ ಆಧಾರ ನೀಡುವುದು ಮತ್ತು ಪ್ರೋಟಿನನ್ನು ಸಾಗಿಸುತ್ತದೆ.

# ಜೀವಕೋಶದ ಆಧಾರದ ಮೇಲೆ ಜೀವಿಗಳ ವಿಂಗಡನೆ :
➤ಏಕಕೋಶ ಜೀವಿಗಳು : ಇವು ಒಂದೇ ಜೀವಕೋಶವನ್ನು ಹೊಂದಿದ್ದು ಆ ಜೀವಕೋಶವು ಎಲ್ಲ ಕ್ರಿಯೆಗಳನ್ನು ಕೈಗೊಳ್ಳುತ್ತದೆ.

➤ಬಹುಕೋಶೀಯ ಜೀವಿಗಳು : ಇವು ಒಂದಕ್ಕಿಂತ ಹೆಚ್ಚು ಜೀವಕೋಶಗಳನ್ನು ಹೊಂದಿದ್ದು, ವಿಶಿಷ್ಟ ಅಂಗಾಂಶ, ಅಂಗ ಮತ್ತು ಅಂಗವ್ಯೂಹ ಹೊಂದಿದ ಜೀವಿಗಳನ್ನು ಬಹುಕೋಶಿಯ ಜೀವಿಗಳು ಎಂದು ಕರೆಯುತ್ತಾರೆ.

# ಕೋಶ ವಿಭಜನೆ :
ಒಂದು ಜೀವಕೋಶ ಪ್ರೌಢಾವಸ್ಥೆ ತಲುಪಿದಾಗ ವಿಭಜನೆ ಹೊಂದಿ ಎರಡು ಮರಿಕೋಶಗಳಾಗುವ ಕ್ರಿಯೆಗೆ ಕೋಶ ವಿಭಜನೆ ಎನ್ನುವರು. ಏಕಕೋಶ ಜೀವಿಗಳಲ್ಲಿ ಈ ವಿಭಜನೆ ಆ ಜೀವಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ, ಆದರೆ ಬಹುಕೋಶ ಜೀವಿಗಳಲ್ಲಿ ಬೆಳವಣಿಗೆ, ಸವೆದ ಭಾಗಗಳ ದುರಸ್ತಿ, ಪ್ರಜನನ ಕ್ರಿಯೆಗಳು ನಡೆಯುತ್ತದೆ. ಕೋಶ ವಿಭಜನೆಯಲ್ಲಿ ಎರಡು ವಿಧಗಳಿವೆ. ಅವು
1. ಮೈಟೋಸಿಸ್
2. ಮಿಯಾಸಿಸ್

1. ಮೈಟೋಸಿಸ್ : ಇದು ಮೇಲ್ವರ್ಗದ ಸಸ್ಯ ಹಾಗೂ ಪ್ರಾಣಿಗಳ ವರ್ಧನ ಕೋಶಗಳಲ್ಲಿ ಸಾಮಾನ್ಯವಾಗಿರುತ್ತದೆ. ಪ್ರೌಢಕೋಶವು ಎರಡು ಮರಿಕೋಶಗಳಾಗಿ ವಿಭಜಿಸುತ್ತದೆ. ಈ ವಿಭಜಿತ ಕೋಶಗಳಲ್ಲೂ ಪ್ರೌಢಕೋಶದಲ್ಲಿದ್ದಷ್ಟೆ ವರ್ಣರೇಖೆಗಳು ಇರುತ್ತವೆ.

2. ಮಿಯಾಸಿಸ್ : ವರ್ಣರೇಖೆಗಳನ್ನು ದ್ವಿಗುಣಿತ ಸ್ಥಿತಿಯಿಂದ ಏಕಸ್ಥಿತಿಗೆ ಇಳಿಸುವ ಕೋಶ ವಿಭಜನೆಯಲ್ಲಿ ಮೊದಲು ಸಂಖ್ಯಾಕ್ಷೀಣ ವಿಭಜನೆಯಾಗಿ ನಂತರ ಸಮಭಾಜಕ ವಿಭಜನೆಯಾಗುತ್ತದೆ.

Leave a Reply

Your email address will not be published. Required fields are marked *

error: Content Copyright protected !!