ಧೂಮಕೇತುಗಳು
ಧೂಮಕೇತುಗಳು ಸೌರಮಂಡಲದ ಅತ್ಯಂತ ದೂರದ ಸದಸ್ಯರು. ಗಾತ್ರದಲ್ಲಿ ಅತ್ಯಂತ ಸಣ್ಣ ಕಾಯಗಳು. ಐದು ಬಿಲಿಯನ್ ವರ್ಷಗಳ ಹಿಂದೆ ಸೌರಮಂಡಲದ ರಚನೆಯಾದಾಗ ಹೊರವಲಯದಲ್ಲಿ ಉಳಿದುಕೊಂಡ ತುಣುಕುಗಳು ಧೂಮಕೇತುಗಳು.
ಧೂಮಕೇತುಗಳು ಸೂರ್ಯ ಮತ್ತು ಭೂಮಿಯ ಸಮೀಪಕ್ಕೆ ಬಂದಾಗ ತಮ್ಮ ಉದ್ದವಾದ ಪ್ರಕಾಶಮಾನವಾದ ವಿಲಕ್ಷಣ ಬಾಲದೊಂದಿಗೆ ರಾತ್ರಿಯಾಕಾಶದಲ್ಲಿ ಮನೋಹರವಾಗಿ ಕಾಣಿಸುತ್ತವೆ. ಆದರೆ ಸೂರ್ಯನ ಸಮೀಪಕ್ಕೆ ಬರುವ ಇಂಥ ಧೂಮಕೇತುಗಳು ವಿರಳ. ಆಗೊಮ್ಮೆ ಈಗೊಮ್ಮೆ ಮಾತ್ರ ಕಾಣಿಸಿಕೊಳ್ಳುತ್ತವೆ.
ಕೆಲವು ಧೂಮಕೇತುಗಳು ಆವರ್ತನೀಯವಾಗಿ ನಿರ್ದಿಷ್ಟ ಕಾಲಕ್ಕೆ ಸರಿಯಾಗಿ ಕಾಣಿಸಿಕೊಳ್ಳುತ್ತವೆ. ಉದಾ. ಹ್ಯಾಲಿ ಧೂಮಕೇತು ಪ್ರತಿ 76 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ. ಆದರೆ ಹೀಗೆ ಆವರ್ತನೀಯವಾಗಿ ಕಾಣಿಸಿಕೊಳ್ಳುವ ಧೂಮಕೇತುಗಳ ಸಂಖ್ಯೆ ವಿರಳ.
ಧೂಮಕೇತುಗಳ ರಚನೆ:
ಧೂಮಕೇತುಗಳ ರಚನೆಯನ್ನು ಗಮನಿಸಿದಾಗ ಅವುಗಳಲ್ಲಿ ಎರಡು ನಿರ್ದಿಷ್ಟ ಭಾಗಗಳನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ದ್ರವ್ಯವು ಹೆಚ್ಚು ಕೇಂದ್ರಿಕೃತವಾಗಿರುವ ತಲೆಯ ಭಾಗ ಮತ್ತು ದ್ರವ್ಯವು ವಿರಳವಾಗಿರುವ ಬಾಲದ ಭಾಗ. ತಲೆಯ ಭಾಗವನ್ನು ಕೋಮ ಎನ್ನುತ್ತೇವೆ. ಇದನ್ನು ದೂಮಕೇತುವಿನ ಬೀಜ ಎಂತಲೂ ಕರೆಯುವರು.
ಧೂಮಕೇತುವು ಸೂರ್ಯನ ಸಮೀಪಕ್ಕೆ ಬಂದಾಗ, ಅದರಲ್ಲಿರುವ ಧೂಳಿನ ಮೋಡಗಳು’ ಬಾಲ’ವಾಗಿ ಚದುರಿ ಹೋಗುತ್ತವೆ. ಈ ಭಾಲವು ಸೂರ್ಯನಿಗೆ ವಿರುದ್ಧ ದಿಕ್ಕಿನಲ್ಲಿ ಚಾಚಿಕೊಂಡಿರುತ್ತದೆ. ಅದು ಸೂರ್ಯನನ್ನು ಸಮೀಪಿದಷ್ಟು ಬಾಲ ಉದ್ದವಾಗಿ ಬೆಲೆಯುತ್ತದೆ. ಧೂಮಕೇತುವಿನ ಬಾಲ ಹಲವು ಸಹಸ್ರ ಕೀಲೋಮೀಟರ್‍ಗಳವರೆಗೆ ಅಥವಾ ಹಲವಾರು ಮಿಲಿಯನ್ ಕಿ.ಮೀಗಳವರೆಗೂ ಚಾಚಿಕೊಳ್ಳಬಹುದು. ಬಾಲ ಅದೆಷ್ಟು ತೆಳ್ಳಗಿರುತ್ತದೆ ಎಂದರೆ ಅದರ ಮೂಲಕ ನಕ್ಷತ್ರಗಳನ್ನು ನಿರಾಯಾಸವಾಗಿ ನೋಡಬಹುದು.
ಪ್ರತಿವರ್ಷ ಭೂಮಿಯ ಸಮೀಪಕ್ಕೆ 20 ರಿಂದ 30 ಧೂಮಕೇತುಗಳು ಬಂದುಹೋಗುತ್ತವೆ. ಅವುಗಳಲ್ಲಿ ದೊಡ್ಡ ಗಾತ್ರದವುಗಳು ಮಾತ್ರ ಬರಿಗಣ್ಣಿಗೆ ಕಾಣುತ್ತದೆ.
ಧೂಮಕೇತುಗಳಿಗೆ ಅವುಗಳನ್ನು ಕಂಡುಹಿಡಿದ ವಿಜ್ಞಾನಿಯ ಹೆಸರನ್ನೇ ಇಡಲಾಗಿದೆ. ಉದಾ: ಮೊದಲು ಹ್ಯಾಲಿ ಧೂಮಕೇತುವನ್ನು ಗುರ್ತಿಸಿದ್ದು ‘ಎಡ್ಮಂಡ್ ಹ್ಯಾಲಿ’ ಎಂಬ ಖಗೋಳಶಾಸ್ತ್ರಜ್ಞ. ಆದ್ದರಿಂದ ಅದಕ್ಕೆ ಅವನ ಹೆಸರನ್ನೇ ಇಡಲಾಗಿದೆ.
ಕೆವು ಪ್ರಮುಖ ಪ್ರಕಾಶಮಾನವಾದ ಧೂಮಕೇತುಗಳೆಂದರೆ,- ಹ್ಯಾಲಿ, ಹೇಲ್‍ಬಾಪ್, 1910 ರ ಡೇಲೈಟ್, 1965 ಇಕೆಯಾಸೆಕಿ, 1970 ರ ಬೆನೆಟ್, 1973 ರ ಕೊಹೊಟೆಕ್, 1976 ರ ವೆಸ್ಟ್ ಪ್ರಮುಖವಾದವುಗಳು.
• ಹ್ಯಾಲಿ ಧೂಮಕೇತು
ಇದನ್ನು ಪ್ರಥಮ ಬಾರಿಗೆ ಗುರುತಿಸಿದ ಕೀರ್ತಿ ಬ್ರಿಟಿಷ್ ಖಗೋಳವಿಜ್ಞಾನಿ ಎಡ್ಮಂಡ್ ಹ್ಯಾಲೀಗೆ ಸೇರುತ್ತದೆ. ಹ್ಯಾಲಿ ವಿಜ್ಞಾನಿಯು ಧೂಮಕೇತುಗಳ ಬಗ್ಗೆ ನಡೆಸಿದ ಸಂಶೋಧನೆಗಳಿಂದ ಹೆಚ್ಚು ಹೆಸರಾದವವನು. ಇವನು ಸರ್ ಐಸಾಕ್ ನ್ಯೂಟನ್‍ನ ‘ ಪ್ರಿನ್ಸಿಪಿಯಾ’ ಗ್ರಂಥ ರಚಿಸಲು ಉತ್ತೇಜನ ನೀಡಿ, ಅದನ್ನು ಪ್ರಕಟಿಸಲು ಬೇಕಾದ ಹಣಕಾಸಿನ ನೆರವನ್ನೂ ಸಹ ನೀಡಿದನು.
ಹ್ಯಾಲಿಯು 1682 ರಲ್ಲಿ ಒಂದು ಧೂಮಕೇತುವನ್ನು ವೀಕ್ಷಿಸಿದನು. ಅದೇ ಧೂಮಕೇತುವನ್ನು ಹ್ಯಾಲಿ ಧೂಮಕೇತುವೆಂದು ಹೆಸರಿಸಲಾಯಿತು. ಆ ಧೂಮಕೇತು 1607, 1531, 1456 ರಲ್ಲಿ ಕಂಡುಬಂದಿತೆಂದು ಅದರ ಕಕ್ಷೆಯ ಲೆಕ್ಕಹಾಕಿ ವಿವರಿಸಿದ. 1758 ರಲ್ಲಿ ಇದೇ ಧೂಮಕೇತು ಮತ್ತೊಮ್ಮೆ ಕಾಣಿಸಿಕೊಳ್ಳುವುದೆಂದ ಭವಿಷ್ಯ ನುಡಿದ. ಅವನ ಭವಿಷ್ಯ ನಿಜವಾಯಿತು. ಪ್ರತಿ 76 ವರ್ಷಗಳಿಗೊಮ್ಮೆ ಈ ಧೂಮಕೇತುವು ಕಾಣಿಸಿಕೊಳ್ಳುವುದೆಂದು ಲೆಕ್ಕಹಾಕಿ ವಿವರಿಸಿದ. ಇತ್ತೀಚೆಗೆ 1986 ರಲ್ಲಿ ಇದು ಭೂಮಿಯ ಸಮೀಪ ಹಾದುಹೋಯಿತು.