ಇಬ್ಬರು ಮಹಿಳಾ ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ
ರಸಾಯನಶಾಸ್ತ್ರದಲ್ಲಿ ವಿಶೇಷ ಸಂಶೋಧನೆ ನಡೆಸಿದ ಇಬ್ಬರು ಮಹಿಳಾ ವಿಜ್ಞಾನಿಗಳಿಗೆ 2020ನೇ ಸಾಲಿನ ನೊಬೆಲ್ ಪುರಸ್ಕಾರ ಲಭಿಸಿದೆ. ಜೀನೋಮ್ ಎಡಿಟಿಂಗ್ ವಿಧಾನದ ಅಭಿವೃದ್ಧಿಗಾಗಿ ಎಮ್ಯಾನುಯೆಲ್ ಚಾರ್ಪೆಂಟಿಯರ್ ಮತ್ತು ಜೆನಿಫರ್ ಎ.ಡೌಡ್ನ ಅವರನ್ನು ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಎಮಾನ್ಯುಯೆಲ್ ಅವರು ಜರ್ಮನಿಯ ಬರ್ಲಿನ್‌ನ ಮ್ಯಾಕ್ಸ್ ಬ್ಲ್ಯಾಂಕ್ ಯೂನಿಟ್ ಫಾರ್ ದಿ ಸೈನ್ಸ್ ಆಫ್ ಪ್ಯಾಥೊಜೆನ್ಸ್‌ನ ವಿಭಾಗದ ನಿರ್ದೇಶಕಿಯಾಗಿದ್ದಾರೆ. ಜೆನಿಫರ್ ಎ.ಡೌಡ್ನ ಅಮೆರಿಕದ ಬರ್ಕ್ಲಿಯ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಪ್ರೊಫೆಸರ್ ಆಗಿದ್ದಾರೆ.
ತಳಿಗುಣ(ಜೀನ್) ತಂತ್ರಜ್ಞಾನದಲ್ಲಿ ಅತ್ಯಂತ ತೀಕ್ಷ್ಣವಾದ ತಂತ್ರಗಳ(ಟೂಲ್ಸ್) ಅನ್ವೇಷಣೆಯನ್ನು ಎಮಾನ್ಯುಯೆಲ್ ಮತ್ತು ಜೆನಿಫರ್ ಮಾಡಿದ್ದಾರೆ. ತಳಿಗುಣ ತಿದ್ದುಪಡಿಗೆ ಬಳಸಲಾಗುವ ಅತ್ಯಂತ ಸೂಕ್ಷ್ಮ ಕ್ರಿಸ್‌ಪರ್(CRISPR/Cas9) ಕತ್ತರಿಗಳನ್ನು (ಜೆನೆಟಿಕ್ ಸಿಸರ್ಸ್) ಈ ಇಬ್ಬರು ಮಹಿಳೆಯರು ಅಭಿವೃದ್ಧಿ ಪಡಿಸಿದ್ದಾರೆ.
ಎಮ್ಯಾನುಯೆಲ್ ಚಾರ್ಪೆಂಟಿಯರ್ ಅವರು ಬ್ಯಾಕ್ಟಿರಿಯಾರಗಳ ಬಗ್ಗೆ ಅಧ್ಯಯನ ಕೈಗೊಂಡಿದ್ದ ವೇಳೆ ಹೊಸ ಕಣವೊಂದು ಪತ್ತೆಯಾಗಿತ್ತು. ವೈರಸ್‌ನ ಡಿಎನ್‌ಎಯ ಕೆಲವು ಭಾಗಗಳನ್ನು ಕತ್ತರಿಸಿಹಾಕಿ ಅದನ್ನು ನಿಷ್ಪ್ರಯೋಜಕ ಯೋಜಕವನ್ನಾಗಿ ಮಾಡುತ್ತಿತ್ತು ಈ ಬ್ಯಾಕ್ಟಿರಿಯಾದ ಕಣ. ಇದರ ಮೇಲೆ ಸಂಶೋಧನೆ ನಡೆಸಿ 2011ರಲ್ಲಿಅವರು ಪ್ರಬಂಧ ಮಂಡಿಸಿದ್ದರು. ನಂತರ ಜೆನ್ನಿಫರ್ ಎ.ಡೌಡ್ನ ಅವರ ಜತೆಗೂಡಿ ಜೀನ್ ಎಡಿಟಿಂಗ್ ವಿಧಾನ ರೂಪಿಸಿದ್ದರು. ವಿಭಾಗವೊಂದರ ನೊಬೆಲ್ ಪ್ರಶಸ್ತಿ ಜಂಟಿಯಾಗಿ ಮಹಿಳಾ ತಂಡದ ಪಾಲಾಗಿದ್ದು ಇದೇ ಮೊದಲು ಎನ್ನಲಾಗಿದೆ.