ಪ್ರಚಲಿತ ಘಟನೆಗಳು (28-08-2020)
✦ ಐಪಿಎಲ್‌ನಿಂದ ಹೊರನಡೆದ ಸುರೇಶ್ ರೈನಾ
ಚೆನ್ನೈ ಸೂಪರ್ ಕಿಂಗ್ಸ್ ಆಲ್‌ರೌಂಡರ್ ಸುರೇಶ್ ರೈನಾ ಅವರು ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹೊರನಡೆದಿದ್ದಾರೆ . 33 ವರ್ಷದ ಆಟಗಾರ ರೈನ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ.
✦ ‘ಬ್ಲಾಕ್ ಪ್ಯಾಂಥರ್’ ಖ್ಯಾತಿಯ ನಟ ಚಾಡ್‌ವಿಕ್ ನಿಧನ
ರೀಗಲ್ ಬ್ಲ್ಯಾಕ್ ಪ್ಯಾಂಥರ್ ಎಂದೇ ಖ್ಯಾತಿ ಪಡೆದಿರುವ ಹಾಲಿವುಡ್ ನಟ ಚಾಡ್ವಿಕ್ ಬೋಸ್ಮನ್(43) ಕ್ಯಾನ್ಸರ್‍ನಿಂದ ನಿಧನರಾಗಿದ್ದಾರೆ. ಬೋಸ್‍ಮನ್ ಅವರಿಗೆ ನಾಲ್ಕು ವರ್ಷಗಳ ಹಿಂದೆ ಕರುಳಿನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಬ್ಲ್ಯಾಕ್ ಐಕಾನ್‍ಗಳಾದ ಜಾಕಿ ರಾಬಿನ್ಸನ್ ಮತ್ತು ಜೇಮ್ಸ್ ಬ್ರೌನ್ ಪಾತ್ರವನ್ನು ನಿರ್ವಹಿಸಿದ ನಟ ಚಾಡ್ವಿಕ್ ಬೋಸ್ಮನ್ ದಿಟ್ಟ ಹೋರಾಟಗಾರ, ಎಲ್ಲದರಲ್ಲೂ ಸತತ ಪರಿಶ್ರಮ ವಹಿಸಿದ್ದರು. ಜನರು ತುಂಬ ಪ್ರೀತಿಸುವ ಅನೇಕ ಚಿತಗಳನ್ನು ಕೊಟ್ಟಿದ್ದಾರೆ.ಬೋಸ್ಮನ್ ತನ್ನ ರೋಗದ ವಿಚಾರವಾಗಿ ಸಾರ್ವಜನಿಕವಾಗಿ ಎಲ್ಲೂ ಮಾತನಾಡಿರಲಿಲ್ಲ. ಅಸಂಖ್ಯಾತ ಶಸ್ತ್ರಚಿಕಿತ್ಸೆಗಳು ಮತ್ತು ಕೀಮೋಥೆರಪಿ ಸಮಯದಲ್ಲೂ ಮಾರ್ಷಲ್‍ನಿಂದ ಡಾ 5 ಬ್ಲಡ್ಸ್, ಆಗಸ್ಟ್ ವಿಲ್ಸನ್ಸ್ ಮಾ ರೈನಿಸ್ ಬ್ಲ್ಯಾಕ್ ಬಾಟಮ್ ಇನ್ನೂ ಹಲವಾರು ಚಿತ್ರಗಳನ್ನು ಚಿತ್ರೀಕರಿಸಲಾಗಿತ್ತು.
✦ ಎಸ್‌ಬಿಐ ಮುಂದಿನ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಕುಮಾರ್ ಖರಾ ಹೆಸರು ಶಿಫಾರಸು
ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಮುಂದಿನ ಅಧ್ಯಕ್ಷರಾಗಿ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ದಿನೇಶ್ ಕುಮಾರ್ ಖರಾ ಹೆಸರನ್ನು ‘ಬ್ಯಾಂಕ್ಸ್ ಬೋರ್ಡ್ ಬ್ಯೂರೋ (ಬಿಬಿಬಿ) ಶಿಫಾರಸು ಮಾಡಿದೆ. ಈಗಿರುವ ಹಾಲಿ ಅಧ್ಯಕ್ಷ ರಜನೀಶ್ ಕುಮಾರ್ ಅವರ ಮೂರು ವರ್ಷದ ಅವಧಿ ಅಕ್ಟೋಬರ್ 7ರಂದು ಕೊನೆಗೊಳ್ಳಲಿದೆ. ಹೀಗಾಗಿ ಹೊಸ ಅಧ್ಯಕ್ಷರನ್ನು ಬ್ಯೂರೋ ಶಿಫಾರಸು ಮಾಡಿದೆ. ‘ಬಿಬಿಬಿ’ ಶಿಫಾರಸನ್ನು ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಆನಂತರ ಕೇಂದ್ರ ಸಚಿವಸಂಪುಟದ ನೇಮಕಾತಿ ಸಮಿತಿಯು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ.
✦ ಕೋವಿಡ್‌ಗೆ ಬಲಿಯಾದ ಸಂಸದ
ತಮಿಳುನಾಡಿನ ಕನ್ಯಾಕುಮಾರಿಯ ಕಾಂಗ್ರೆಸ್ ಸಂಸದ ಎಚ್.ವಸಂತಕುಮಾರ್ ಕೊರೋನ ವೈರಸ್‌ಗೆ ಬಲಿಯಾಗಿದ್ದು, ಈ ವರ್ಷದ ಮಾರ್ಚ್‌ನಲ್ಲ್ಲಿ ನಡೆದಿದ್ದ ಸಂಸತ್ ಕಲಾಪದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಗಂಭೀರತೆ ಕುರಿತು ಮಾತನಾಡಿದ್ದಲ್ಲದೆ ವೈರಸ್‌ನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಸಲಹೆ ನೀಡಿದ್ದರು. ಆದರೆ ಅವರ ಮಾತಿಗೆ ಅಡ್ಡಿಪಡಿಸಿದ್ದ ಸ್ಪೀಕರ್ ಬಿರ್ಲಾ ಅವರು, ಮೈಕ್‌ನ್ನು ಕಟ್ ಮಾಡಿದ್ದರು.
✦ ಟಿಪ್ಪು ವಂಶಸ್ಥೆ ನೂರ್ ಇನಾಯತ್‌ಗೆ ಬ್ರಿಟನ್ ಗೌರವ
ಎರಡನೇ ಮಹಾಯುದ್ಧದಲ್ಲಿ ಬ್ರಿಟನ್ ಪರ ಗೂಢಾಚಾರಿಕೆ ಮಾಡಿ, ಜರ್ಮನಿಯಲ್ಲಿ ಧಾರುಣವಾಗಿ ಹತ್ಯೆಯಾಗಿದ್ದ ಟಿಪ್ಪು ವಂಶಸ್ಥೆ, ನೂರ್ ಇನಾಯತ್ ಖಾನ್ ಬ್ರಿಟನ್‌ನಲ್ಲಿ ಗೌರವ-ಕೃತಜ್ಞತೆಗೆ ಪಾತ್ರರಾಗಿದ್ದಾರೆ.ಮಧ್ಯ ಲಂಡನ್‌ನಲ್ಲಿ ನೂರ್ ಅವರು ನೆಲೆಸಿದ್ದ ಮನೆಯ ಗೋಡೆ ಮೇಲೆ ಅವರ ಹೆಸರಿನಲ್ಲಿ ನೀಲಿ ಫಲಕ ಹಾಕಿ ಬ್ರಿಟನ್ ಶುಕ್ರವಾರ ಸ್ಮರಿಸಿದೆ. ದೇಶಕ್ಕಾಗಿ ಗಮನಾರ್ಹ ಕೊಡುಗೆ ನೀಡಿದವರ ಹೆಸರನ್ನು, ಅವರ ಮನೆಯ ಗೋಡೆಯ ಮೇಲೆ ನೀಲಿ ಫಲಕದಲ್ಲಿ ಹಾಕಿ ಸ್ಮರಿಸುವ ಪರಂಪರೆಯನ್ನು ‘ಇಂಗ್ಲಿಷ್ ಹೆರಿಟೇಜ್’ ಎಂಬ ಚಾರಿಟಿ ಟ್ರಸ್ಟ್ 150 ವರ್ಷಗಳಿಂದಲೂ ಅನುಸರಿಸಿಕೊಂಡು ಬಂದಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಇದೇ ಮೊದಲ ಬಾರಿಗೆ ಭಾರತ ಮೂಲದ ಮಹಿಳೆಯನ್ನು ಗೌರವಿಸಲಾಗಿದೆ. 2ನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯಲ್ಲಿ ಮಡಿದ 75 ವರ್ಷಗಳ ನಂತರ ಬ್ರಿಟನ್ ಸರ್ಕಾರದಿಂದ ನೂರ್ ಅವರಿಗೆ ಈ ಮನ್ನಣೆ ದೊರಕಿದೆ..
ಲಂಡನ್‌ನಲ್ಲಿರುವ ‘4 ಟವೈಟೊನ್ ಸ್ಟ್ರೀಟ್, ಬ್ಲೂಮ್‌ಬರ್ಗ್’ ವಿಳಾಸದಲ್ಲಿರುವ ನೂರ್ ಅವರ ಮನೆ ಮೇಲೆ ನೀಲಿ ಫಲಕ ಹಾಕಲಾಗಿದೆ. 1943ರಲ್ಲಿ ನಾಜಿ ಆಕ್ರಮಿತ ಫ್ರಾನ್ಸ್‌ಗೆ ಬ್ರಿಟನ್‌ನ ವಿಶೇಷ ಕಾರ್ಯಾಚರಣೆಯ ರಹಸ್ಯ ರೇಡಿಯೊ ಆಪರೇಟರ್ ಆಗಿ ತೆರಳುವ ಮೊದಲು ನೂರ್ ಇದೇ ಮನೆಯಲ್ಲಿ ವಾಸವಾಗಿದ್ದರು.ಲಂಡನ್‌ನಲ್ಲಿರುವ ‘4 ಟವೈಟೊನ್ ಸ್ಟ್ರೀಟ್, ಬ್ಲೂಮ್‌ಬರ್ಗ್’ ವಿಳಾಸದಲ್ಲಿರುವ ನೂರ್ ಅವರ ಮನೆ ಭಾರತೀಯ ಸೂಫಿ ಸಂತ ಹಜರತ್ ಇನಾಯತ್ ಖಾನ್ ಅವರ ಪುತ್ರಿ ಮತ್ತು 18 ನೇ ಶತಮಾನದ ಮೈಸೂರು ದೊರೆ ಟಿಪ್ಪು ಸುಲ್ತಾನ್ ಅವರ ವಂಶಸ್ಥೆ ನೂರ್, 1944 ರಲ್ಲಿ ಜರ್ಮನಿಯ ‘ಡಚೌ ಕಾನ್ಸನ್‌ಟ್ರೇಷನ್ ಕ್ಯಾಂಪ್’ (ಯುದ್ಧ ಕೈದಿಗಳ ಶಿಬಿರ) ಹತ್ಯೆಗೀಡಾಗಿದ್ದರು. ಆದರೆ, ಆಕೆ ಸಾವಿಗೂ ಮುನ್ನ ತನಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಜರ್ಮನಿಗೆ ತಿಳಿಸಿರಲಿಲ್ಲ. ಕೊನೆಗೆ ತನ್ನ ಹೆಸರನ್ನೂ ಹೇಳಿರಲಿಲ್ಲ.
ಮೈಸೂರು ಮತ್ತು ಬರೋಡಾದ ಮಹಾರಾಜರ ಮನ್ನಣೆಗೆ ಪಾತ್ರರಾಗಿದ್ದ ಮೌಲಾಭಕ್ಷ್ ದೇಶದ ಸಂಗೀತ ಪರಂಪರೆಯ ಬಹುಮುಖ್ಯವಾದ ಕೊಂಡಿ ಎನಿಸಿದ್ದರು. ಮೌಲಾಭಕ್ಷ್ ಅವರು ಟಿಪ್ಪೂವಿನ ಮೊಮ್ಮಗಳೊಂದಿಗೆ ವಿವಾಹವಾಗಿದ್ದರು. ಈ ದಂಪತಿಯ ಮೊಮ್ಮಗಳು ನೂರ್. ಭಾರತೀಯ ತಂದೆ, ಅಮೆರಿಕನ್ ತಾಯಿ, ರಷ್ಯಾದಲ್ಲಿ ಜನನ, ಫ್ರಾನ್ಸ್‌ನಲ್ಲಿ ಬಾಲ್ಯ, ಬ್ರಿಟಿಷರ ಪರವಾಗಿ ಕಾರ್ಯನಿರ್ವಹಣೆ, ಕೊನೆಗೆ ಜರ್ಮನಿಯಲ್ಲಿ ದಾರುಣಸಾವು. ಇದು ನೂರ್ ಅವರ ಸಂಕ್ಷಿಪ್ತ ಪರಿಚಯ.
✦ 3.59 ಕೋಟಿಗೆ ಮಾರಾಟವಾಯ್ತು ಆರು ತಿಂಗಳ ಕುರಿಮರಿ
ಕುರಿಯ ವಿಶೇಷ ತಳಿಗಳಲ್ಲಿ ಒಂದಾಗಿರುವ ಟೆಕ್ಸೆಲ್ ರಾಮ್ 368,000 ಪೌಂಡ್‌ಗೆ (ಸುಮಾರು 3.59 ಕೋಟಿ ರೂಪಾಯಿ) ಮಾರಾಟವಾಗಿದ್ದು, ಇದೀಗ ದಾಖಲೆ ಮಾಡಿದೆ. ಸ್ಕಾಟ್‌ಲೆಂಡ್‌ನಲ್ಲಿ ನಡೆದ ಹರಾಜಿನಲ್ಲಿ ಈ ಕುರಿಯನ್ನು ಮಾರಾಟ ಮಾಡಲಾಗಿದೆ. ಕುರಿಯಲ್ಲಿಯೇ ಅತ್ಯಂತ ದುಬಾರಿ ಹಾಗೂ ವಿಶೇಷ ತಳಿ ಎಂದು ಇದನ್ನು ಗುರುತಿಸಲಾಗಿದೆ.2009ರಲ್ಲಿ ಈ ತಳಿಯ ಕುರಿಮರಿಯೊಂದು 230,000 ಪೌಂಡ್‌ಗೆ (ಅಂದರೆ ಸುಮಾರು 2.25 ಕೋಟಿ ರೂಪಾಯಿ) ಮಾರಾಟವಾಗಿ ದಾಖಲೆ ಸೃಷ್ಟಿಸಿತ್ತು. ಈ ದಾಖಲೆಯನ್ನು ಈ ಬಾರಿ ಮುರಿಯಲಾಗಿದೆ.
ಚಾರ್ಲಿ ಬೋಡೆನ್ ಎಂಬಾತ ಈ ಕುರಿಮರಿಯ ಮಾಲೀಕ. ಈ ಕುರಿತು ಈತ ಇಟ್ಟಿರುವ ಹೆಸರು ಡಬಲ್ ಡೈಮಂಡ್. ಈ ತಳಿಗಳ ಕುರಿಗಳ ಮಾಂಸಕ್ಕೆ ಕೂಡ ಬಲು ದುಬಾರಿ ಬೆಲೆಯಿದೆ. ಅಷ್ಟೇ ಅಲ್ಲದೇ ಇದರ ತುಪ್ಪಳ ಕೂಡ ಬಹಳ ಬೆಲೆ ಬಾಳುವ ಹಿನ್ನೆಲೆಯಲ್ಲಿ ಇದು ಇಷ್ಟು ದುಬಾರಿಯಾಗಲು ಕಾರಣ ಎನ್ನುತ್ತಾರೆ ಕುರಿ ಸಾಕಣೆಕಾರರು.ಜೆಫ್ ಐಕೆನ್ ಎಂಬಾತ ಇದನ್ನು ಖರೀದಿ ಮಾಡಿದ್ದಾನೆ. ಈ ತಳಿಯ ಕುರಿಯನ್ನು ಸಾಕಣೆ ಮಾಡಿ ಅದರ ವಂಶವನ್ನು ಇನ್ನಷ್ಟು ಬೆಳೆಸಲು ತಾನು ನಿರ್ಧರಿಸಿರುವುದಾಗಿ ಜೆಫ್ ಹೇಳಿದ್ದಾನೆ.
✦ ಚೀನದಲ್ಲಿ ಭಾರತದ ವೈದ್ಯ ಡಾ| ಕೊಟ್ನಿಸ್ ಪ್ರತಿಮೆ
ಎರಡನೇ ಮಹಾಯುದ್ಧದ ಹೊಸ್ತಿಲಿನಲ್ಲಿ, ಚೀನ ಕ್ರಾಂತಿ ವೇಳೆ ವೈದ್ಯಕೀಯವಾಗಿ ಅಪಾರ ಕೊಡುಗೆ ಸಲ್ಲಿಸಿದ್ದ ಭಾರತದ ವೈದ್ಯ ಡಾ| ದ್ವಾರಕನಾಥ್ ಕೊಟ್ನಿಸ್ ಅವರ ಕಂಚಿನ ಪ್ರತಿಮೆ ನಿರ್ಮಿಸಲು ಚೀನ ಮುಂದಾಗಿದೆ.ಉತ್ತರ ಚೀನದ ಶಿಜಿಯಾಝು ವಾಂಗಾದ ವೈದ್ಯಕೀಯ ವಿಶ್ವವಿದ್ಯಾಲಯ ಮುಂಭಾಗದಲ್ಲಿ ಕೊಟ್ನಿಸ್‌ರ ಪ್ರತಿಮೆ ಸೆಪ್ಟೆಂಬರ್‌ನಲ್ಲಿ ಅನಾವರಣಗೊಳ್ಳಲಿದೆ. 1937ರಲ್ಲಿ ಜಪಾನ್ ದಾಳಿಯಿಂದ ತತ್ತರಿಸಿದ್ದ ಚೀನದಲ್ಲಿ ಅಪಾರ ಸಾವು – ನೋವುಗಳಾಗಿದ್ದವು. ಸಹಸ್ರಾರು ಸೈನಿಕರು ಗಂಭೀರ ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ ಭಾರತದಿಂದ ಚೀನಕ್ಕೆ ಕಳುಹಿಸಲಾದ ಐವರು ವೈದ್ಯರ ತಂಡದಲ್ಲಿ ಕೊಟ್ನಿಸ್ ಕೂಡ ಒಬ್ಬರು.
ಸಹಸ್ರಾರು ಸೈನಿಕರ ಜೀವ ಉಳಿಸಿ, ಚೀನದ ಕಣ್ಣಲ್ಲಿ ಕೊಟ್ನಿಸ್ ಹೀರೋ ಆಗಿದ್ದರು. ಅನಂತರ ಕೊಟ್ನಿಸ್ ಚೀನದಲ್ಲಿಯೇ ನೆಲೆಸಿ, ಕೇವಲ 32ನೇ ವರ್ಷದಲ್ಲಿ ನಿಧನ ಹೊಂದಿದ್ದರು. ಸೊಲ್ಹಾಪುರ ಮೂಲದ ಕೊಟ್ನಿಸ್ ಅವರ ಜನ್ಮದಿನವನ್ನು ಚೀನ ಇವತ್ತಿಗೂ ಆಚರಿಸಿಕೊಂಡು ಬರುತ್ತಿದೆ.