Current AffairsSpardha Times

ವಿಚ್ಛೇದಿತ ಮುಸ್ಲಿಂ ಮಹಿಳೆಯರೂ ಪತಿಯಿಂದ ಜೀವನಾಂಶ ಪಡೆಯಬಹುದು : ಸುಪ್ರೀಂ​ ಮಹತ್ವದ ತೀರ್ಪು

Share With Friends

ವಿಚ್ಛೇದಿತ ಮುಸ್ಲಿಂ ಮಹಿಳೆ ಪತಿಯಿಂದ ಜೀವನಾಂಶ ಕೇಳುವ ಕುರಿತು ಸುಪ್ರೀಂಕೋರ್ಟ್​ ಇಂದು ಮಹತ್ವದ ತೀರ್ಪು ನೀಡಿದೆ. ಮುಸ್ಲಿಂ ಮಹಿಳೆಯರ ಪರವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮುಸ್ಲಿಂ ಮಹಿಳೆಯರು ತಮ್ಮ ಗಂಡನಿಂದ ಜೀವನಾಂಶ ಪಡೆಯಲು ಸಿಆರ್‌ಪಿಸಿಯ ಸೆಕ್ಷನ್ 125 ರ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ತನ್ನ ಪತ್ನಿಗೆ ಜೀವನಾಂಶ ನೀಡುವಂತೆ ತೆಲಂಗಾಣ ಹೈಕೋರ್ಟ್ ನೀಡಿದ ಆದೇಶವನ್ನು ಮುಸ್ಲಿಂ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ. ಮೊಹಮ್ಮದ್ ಅಬ್ದುಲ್ ಸಮದ್ ಎಂಬ ವ್ಯಕ್ತಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನು ಒಳಗೊಂಡ ನ್ಯಾಯಪೀಠ ವಜಾಗೊಳಿಸಿದ ಸಂದರ್ಭದಲ್ಲಿ ಈ ತೀರ್ಪು ನೀಡಿದೆ. ಸಿಆರ್‌ಪಿಸಿಯ ಸೆಕ್ಷನ್ 125 ರ ಅಡಿಯಲ್ಲಿ ವಿಚ್ಛೇದಿತ ಪತ್ನಿಗೆ ಜೀವನಾಂಶ ಪಾವತಿಸುವ ನಿರ್ದೇಶನದ ವಿರುದ್ಧ ಮೊಹಮ್ಮದ್ ಅಬ್ದುಲ್ ಸಮದ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠ ತಿರಸ್ಕರಿಸಿತು.

ಮುಸ್ಲಿಂ ಮಹಿಳೆಯರ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯಿದೆ 1986 ಜಾತ್ಯತೀತ ಕಾನೂನನ್ನು ಅತಿಕ್ರಮಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿ ನಾಗರತ್ನ ಮತ್ತು ನ್ಯಾಯಮೂರ್ತಿ ಮಾಸಿಹ್ ಪ್ರತ್ಯೇಕ, ಆದರೆ ಸರ್ವಾನುಮತದ ತೀರ್ಪುಗಳನ್ನು ನೀಡಿದರು. 10,000 ಜೀವನಾಂಶ ನೀಡುವಂತೆ ಮೊಹಮ್ಮದ್ ಸಮದ್ ಗೆ ಹೈಕೋರ್ಟ್ ಸೂಚಿಸಿತ್ತು. ಜೀವನಾಂಶವನ್ನು ಕೋರುವ ಕಾನೂನು ಎಲ್ಲಾ ವಿವಾಹಿತ ಮಹಿಳೆಯರಿಗೆ ಅವರ ಧರ್ಮವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಪೀಠವು ಸ್ಪಷ್ಟಪಡಿಸಿದೆ.

ಮುಸ್ಲಿಂ ಮಹಿಳೆಯರು ಸೆಕ್ಷನ್ 125 ವ್ಯಾಪ್ತಿಯಿಂದ ಹೊರತಲ್ಲ :
ಮುಸ್ಲಿಂ ಮಹಿಳೆಯರ (ವಿಚ್ಛೇದನದ ಮೇಲಿನ ಹಕ್ಕುಗಳ ರಕ್ಷಣೆ) ಕಾಯ್ದೆ 1986, ಜಾತ್ಯತೀತ ಕಾನೂನಿನ ವ್ಯಾಪ್ತಿಯಿಂದ ಹೊರತಲ್ಲ ಎಂದು ಕೋರ್ಟ್ ಹೇಳಿದೆ.”ವಿವಾಹಿತ ಮಹಿಳೆಯರು ಮಾತ್ರವಲ್ಲದೆ, ಎಲ್ಲ ಮಹಿಳೆಯರಿಗೂ ಸಿಆರ್‌ಪಿಸಿ ಸೆಕ್ಷನ್ 125 ಅನ್ವಯವಾಗುತ್ತದೆ ಎಂಬ ಮುಖ್ಯ ನಿರ್ಣಯದೊಂದಿಗೆ ನಾವು ಕ್ರಿಮಿನಲ್ ಮೇಲ್ಮನವಿಯನ್ನು ವಜಾಗೊಳಿಸುತ್ತಿದ್ದೇವೆ” ಎಂದು ನ್ಯಾ. ನಾಗರತ್ನ ತಿಳಿಸಿದ್ದಾರೆ. ನ್ಯಾ. ಬಿವಿ ನಾಗರತ್ನ ಮತ್ತು ನ್ಯಾ ಆಗಸ್ಟೀನ್ ಜಾರ್ಜ್ ಮಸಿಹ್ ಅವರು ಪ್ರತ್ಯೇಕ ತೀರ್ಪುಗಳನ್ನು ಪ್ರಕಟಿಸಿದರೂ, ಇಬ್ಬರ ಆಶಯ ಒಂದೇ ರೀತಿ ಪ್ರಕಟವಾಗಿದೆ. ಯಾವ ಧರ್ಮಕ್ಕೆ ಸೇರಿದವರಾದರೂ, ಜೀವನ ನಿರ್ವಹಣಾ ವೆಚ್ಚ ಕೇಳುವ ಕಾನೂನು ಎಲ್ಲ ಮಹಿಳೆಯರಿಗೂ ಅನ್ವಯವಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಜೀವನ ನಿರ್ವಹಣೆ ವೆಚ್ಚವು ದಾನ ದತ್ತಿಯಲ್ಲ, ಅದು ಮಹಿಳೆಯರ ಹಕ್ಕು ಎಂದು ನ್ಯಾಯಪೀಠ ತೀಕ್ಷ್ಣವಾಗಿ ಹೇಳಿದೆ. “ಗೃಹಿಣಿಯಾಗಿರುವ ಪತ್ನಿ, ತಮ್ಮನ್ನು ಭಾವನಾತ್ಮಕವಾಗಿ ಹಾಗೂ ಇತರೆ ರೀತಿಗಳಲ್ಲಿ ಅವಲಂಬಿಸಿರುತ್ತಾರೆ ಎಂಬ ವಾಸ್ತವ ಸಂಗತಿ ಬಗ್ಗೆ ಕೆಲವು ಗಂಡಂದಿರಿಗೆ ತಿಳಿವಳಿಕೆಯೇ ಇರುವುದಿಲ್ಲ. ಭಾರತೀಯ ಪುರುಷರು ಗೃಹಿಣಿಯರ ಪಾತ್ರವನ್ನು ಹಾಗೂ ತ್ಯಾಗವನ್ನು ಗುರುತಿಸುವ ಸಮಯ ಬಂದಿದೆ” ಎಂದು ನ್ಯಾ. ಬಿವಿ ನಾಗರತ್ನ ಹೇಳಿದರು.

ತೆಲಂಗಾಣದ ಕೌಟುಂಬಿಕ ನ್ಯಾಯಾಲಯವು ಪತ್ನಿಗೆ 20 ಸಾವಿರ ರೂ ಜೀವನಾಂಶ ನೀಡುವಂತೆ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮೊಹಮ್ಮದ್ ಅಬ್ದುಲ್ ಸಮದ್ ಎಂಬುವವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಬ್ದುಲ್ ಸಮದ್ ತಮಗೆ ತ್ರಿವಳಿ ತಲಾಖ್ ನೀಡಿದ್ದಾರೆ ಎಂದು ಪ್ರತಿಪಾದಿಸಿ, ಸಿಆರ್‌ಪಿಸಿ ಸೆಕ್ಷನ್ 125ರ ಅಡಿ ಮಹಿಳೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲಿ ಮಹಿಳೆಯ ಪರ ತೀರ್ಪು ಬಂದಿತ್ತು.

2023ರ ಡಿಸೆಂಬರ್ 13ರಂದು ಹೈಕೋರ್ಟ್‌, ಸಮದ್ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿತ್ತು. ಆದರೆ ಮಧ್ಯತರ ಜೀವನ ನಿರ್ವಹಣೆ ವೆಚ್ಚವಾಗಿ 10 ಸಾವಿರ ರೂ ನೀಡುವಂತೆ ಹೇಳಿದ್ದ ಕೋರ್ಟ್, ಈ ಪ್ರಕರಣದಿಂದ ಅನೇಕ ಪ್ರಶ್ನೆಗಳು ಉದ್ಭವಿಸಿದ್ದು, ಅವುಗಳನ್ನು ಪರಿಹರಿಸುವ ಅಗತ್ಯವಿದೆ ಎಂದು ಹೇಳಿತ್ತು.ಸಿಆರ್‌ಪಿಸಿ ಸೆಕ್ಷನ್ 125ಕ್ಕಿಂತ ಇಲ್ಲಿ ಮುಸ್ಲಿಂ ಮಹಿಳೆಯರ (ವಿಚ್ಛೇದನ ಮೇಲಿನ ಹಕ್ಕುಗಳ ರಕ್ಷಣೆ) ಕಾಯ್ದೆ, 1986 ನಿಯಮಗಳು ಅನ್ವುವಾಗುತ್ತದೆ. ಇದನ್ನು ಹೈಕೋರ್ಟ್ ಪರಿಗಣಿಸಿಲ್ಲ ಎಂದು ಸಮದ್, ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದ್ದರು.

1986ರಲ್ಲಿ ಶಾ ಬಾನೊ ಪ್ರಕರಣದಲ್ಲಿನ ಸುಪ್ರೀಂ ಕೋರ್ಟ್ ತೀರ್ಪನ್ನು ರದ್ದುಗೊಳಿಸಲು ಆಗಿನ ರಾಜೀವ್ ಗಾಂಧಿ ಸರ್ಕಾರ ಜಾರಿಗೊಳಿಸಿದ್ದ ಈ ವಿಶೇಷ ಕಾನೂನಿನ ಸೆಕ್ಷನ್ 3 ಹಾಗೂ 4ರ ಅಡಿಯಲ್ಲಿ ಮಹೆರ್ ಮತ್ತು ಇತರೆ ಪೂರಕ ಭತ್ಯೆಗಳನ್ನು ನೀಡುವಂತೆ ಮ್ಯಾಜಿಸ್ಟ್ರೇಟ್ ಆದೇಶಿಸಲು ಅವಕಾಶ ನೀಡಿದೆ. ಹೀಗಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ಸಿಆರ್‌ಪಿಸಿ ಸೆಕ್ಷನ್ 125 ಅನ್ವಯವಾಗುವುದಿಲ್ಲ ಎಂದು ಹೇಳಿದ್ದರು.

Leave a Reply

Your email address will not be published. Required fields are marked *

error: Content Copyright protected !!