ಎಮೋಜಿ (Emoji) ಇತಿಹಾಸ ಗೊತ್ತೇ ..?
ಎಸ್ಸೆಮ್ಮೆಸ್, ಚಾಟ್ ಹಾಗೂ ವಾಟ್ಸ್ ಆಪ್ ಮೆಸೇಜಿನಂತಹ ಮಾಧ್ಯಮಗಳಲ್ಲಿ ಭಾವನೆಗಳನ್ನು ಅಭಿವ್ಯಕ್ತಿಸಲು ನೆರವಾಗುವ ಪುಟಾಣಿ ಚಿತ್ರ: ವಿಮೋಟೈಕನ್‍ಗಳ ಸುಧಾರಿತ ರೂಪ ಎಂದರೂ ಸರಿಯೇ. ಎಸ್ಸೆಮ್ಮೆಸ್ ಕಳಹಿಸುವಾಗ, ಚಾಟ್ ಮಾಡುವಾಗಲೆಲ್ಲ ಪಠ್ಯದೊಡನೆ ಕೆಲ ಭಾವನೆಗಳನ್ನೂ ಅಭಿವ್ಯಕ್ತಿಸಲು ನೆರವಾಗುವ ಪುಟ್ಟ ಚಿತ್ರಗಳನ್ನು ಎಮೋಜಿಗಳೆಂದು ಕರೆಯುತ್ತಾರೆ.
ಈ ಚಿತ್ರಾಕ್ಷರಗಳು ಮೊದಲಿಗೆ ಕಾಣಿಸಿಕೊಂಡದ್ದು ಜಪಾನ್ ದೇಶದಲ್ಲಿ. ಅಲ್ಲಿನ ಎನ್‍ಟಿಟಿ ಡೋಕೋಮೋ ಸಂಸ್ಥೆ 1990ರ ದಶಕದ ಕೊನೆಯಲ್ಲಿ ಇವುಗಳನ್ನು ಪರಿಚಯಿಸಿತಂತೆ.
ಸ್ಮಾರ್ಟ್‍ಫೋನುಗಳ, ಮೆಸೇಜಿಂಗ್ ಸೇವೆಗಳ ಬಳಕೆ ಹೆಚ್ಚುತ್ತಿದ್ದಂತೆ ಇವು ಈಗ ಎಲ್ಲೆಲ್ಲೂ ಕಾಣಸಿಗುತ್ತಿವೆ. ಜಿಮೇಲ್, ಫೇಸ್‍ಬುಕ್ ಸೇರಿದಂತೆ ಹಲವೆಡೆ ಎಮೋಟೈಕನ್‍ಗಳನ್ನು ಟೈಪಿಸುತ್ತಿದ್ದಂತೆ ಅದು ತನ್ನಷ್ಟಕ್ಕೆ ತಾನೇ ಎಮೋಜಿ ಆಗಿ ಬದಲಾಗುವ ವ್ಯವಸ್ಥೆ ಕೂಡ ಇದೆ. ಯುನಿಕೋಡ್ ಶಿಷ್ಟತೆಯಲ್ಲೂ ಈ ಚಿತ್ರಾಕ್ಷರಗಳು ಸ್ಥಾನ ಪಡೆದಿವೆ.
ಬೇರೆ ಬೇರೆ ತಂತ್ರಾಂಶ ಬಳಸುವ ಸಾಧನಗಳಲ್ಲಿ ನಾವು ಬೇರೆ ಬೇರೆ ವಿನ್ಯಾಸದ ಎಮೋಜಿಗಳನ್ನು ನೋಡಬಹುದು. ಆಪಲ್ ಸಂಸ್ಥೆ ತಯಾರಿಸುವ ಐಫೋನ್, ಐಪ್ಯಾಡ್ ಮುಂತಾದ ಸಾಧನಗಳಲ್ಲಿರುವ ಎಮೋಜಿಗಳ ಪೈಕಿ ಕ್ಯಾಲೆಂಡರ್ ಚಿತ್ರವಿರುವ ಎಮೋಜಿಯಲ್ಲಿ ಜುಲೈ 17ರಂದು ಎಂಬ ದಿನಾಂಕ ಇದೆ. ಅದಕ್ಕಾಗಿ ಅ ದಿನವನ್ನು ಎಮೋಜಿ ದಿನ ಎಂದು ಕರೆಯುತ್ತಾರೆ. 2002ರಲ್ಲಿ ಆಪಲ್ ಕ್ಯಾಲೆಂಡರ್ ತಂತ್ರಾಂಶ(ಐಕ್ಯಾಲ್) ಬಿಡುಗಡೆಯಾದದ್ದು ಆ ದಿನದಂದು.