ಭಾರತದ ಮೊದಲ ಆಸ್ಕರ್ ವಿಜೇತೆ ಭಾನು ಅಥೈಯಾ ನಿಧನ
ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯ ಕಾಸ್ಟೂಮ್ ಡಿಸೈನರ್ ಭಾನು ಅಥೈಯಾ ಅವರು ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ತಮ್ಮ ಜೀವಿತಾವಧಿಯಲ್ಲಿ ಆಸ್ಕರ್ ಸೇರಿ ಹಲವು ಪ್ರಮುಖ ಪ್ರಶಸ್ತಿಗಳನ್ನ ಅವರು ಗೆದ್ದ ಸಾಧನೆ ಮಾಡಿದ್ದಾರೆ. 1983ರಲ್ಲಿ ರಿಚರ್ಡ್ ಆಟನ್ಬರೋ ನಟನೆಯ ‘ಗಾಂಧಿ’ ಸಿನಿಮಾದಲ್ಲಿ ಅವರ ವಸ್ತ್ರ ವಿನ್ಯಾಸಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು.
# ಭಾರತಕ್ಕೆ ಮೊದಲ ಆಸ್ಕರ್ ತಂದ ಮಹಿಳೆ :
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ 1929, ಏಪ್ರಿಲ್ 28ರಂದು ಜನಿಸಿದ್ದ ಭಾನು ಅಥೈಯ್ಯಾ 1956ರಲ್ಲಿ ಸಿಐಡಿ ಎಂಬ ಹಿಂದಿ ಸಿನಿಮಾಗೆ ಕಾಸ್ಟೂಮ್ ಡಿಸೈನ್ ಮಾಡುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.
ಅಲ್ಲಿಂದ ಅವರ ಸಿನಿ ಪ್ರಯಾಣದಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.
1983ರಲ್ಲಿ ಗಾಂಧಿ ಸಿನಿಮಾದ ಅವರ ಕಾಸ್ಟೂಮ್ ವಿನ್ಯಾಸಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಅದೇ ವರ್ಷ ಅವರು ಬಾಫ್ತಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಲಗಾನ್ ಸಿನಿಮಾಕ್ಕೂ ಅವರು ವಸ್ತ್ರ ವಿನ್ಯಾಸ ಮಾಡಿದ್ದರು. ಆ ಚಿತ್ರದ ಕೆಲಸಕ್ಕೂ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತ್ತು. 2009ರಲ್ಲಿ ಫಿಲಂ ಫೇರ್ ಲೈಫ್ಟೈಮ್ ಅಚೀವ್ಮೆಂಟ್ ಅವಾರ್ಡ್ ಲಭಿಸಿದೆ. 2004ರಲ್ಲಿ ಶಾರುಕ್ ಖಾನ್ ಅಭಿನಯದ ಸ್ವದೇಸ್ ಚಿತ್ರ ಅವರ ಕೊನೆಯ ಕೆಲಸವಾಗಿತ್ತು.
ಇನ್ನು 2012 ರಲ್ಲಿ, ಅಥೈಯಾ ತಮ್ಮ ಆಸ್ಕರ್ ಪ್ರಶಸ್ತಿಯನ್ನು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್ ಗೆ ಸುರಕ್ಷಿತವಾಗಿಡಲು ಹಿಂದಿರುಗಿಸಿದರು. ಐದು ದಶಕಗಳ ವೃತ್ತಿ ಜೀವನದಲ್ಲಿ ಭಾನು ಅವರು 100 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಗುಲ್ಜಾರ್ ಅವರ ಲೆಕಿನ್” (1990) ಮತ್ತು ಅಶುತೋಷ್ ಗೋವಾರಿಕರ್ (2001) ನಿರ್ದೇಶಿಸಿದ “ಲಗಾನ್” ಚಿತ್ರಕ್ಕಾಗಿ ಅವರು ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಕೂಡ ಗೆದ್ದಿದ್ದಾರೆ.
# ಕಾಡಿದ ಆನಾರೋಗ್ಯ :
ಭಾನು ಅಥೈಯ್ಯಾ ಅವರಿಗೆ ಬ್ರೈನ್ ಟ್ಯೂಮರ್ ಇರುವುದು ಎಂಟು ವರ್ಷಗಳ ಹಿಂದೆ ತಿಳಿದುಬಂದಿತ್ತು. ಕಳೆದ ಮೂರು ವರ್ಷಗಳಿಂದ ಅವರ ದೇಹದ ಒಂದು ಬದಿ ಪಾರ್ಶ್ವವಾಯುಗೊಂಡು ಹಾಸಿಗೆ ಹಿಡಿದಿದ್ದರೆನ್ನಲಾಗಿದೆ. ಇಂದು ಮಲಗಿದ್ದಲ್ಲೇ ಕೊನೆಯುಸಿರೆಳೆದಿದ್ದಾರೆ.
1983 : ಅತ್ಯುತ್ತಮ ವಸ್ತ್ರವಿನ್ಯಾಸಕ್ಕಾಗಿ ಅಕಾಡೆಮಿ ಪ್ರಶಸ್ತಿ ಗಾಂಧಿ ಗೆದ್ದಿದ್ದಾರೆ
1983 : ಅತ್ಯುತ್ತಮ ವೇಷಭೂಷಣ ವಿನ್ಯಾಸಕ್ಕಾಗಿ ಬಾಫ್ಟಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು ( ಚಿತ್ರ : ಗಾಂಧಿ)
1991 : ಅತ್ಯುತ್ತಮ ವಸ್ತ್ರವಿನ್ಯಾಸಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಚಿತ್ರ : ಲೆಕಿನ್)
2002 : ಅತ್ಯುತ್ತಮ ವೇಷಭೂಷಣ ವಿನ್ಯಾಸಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ಚಿತ್ರ : ಲಗಾನ್ )
2009 : ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ
2013 : ಲಾಡ್ಲಿ ಜೀವಮಾನ ಸಾಧನೆ ಪ್ರಶಸ್ತಿ