GKScienceSpardha Times

ಚಲನೆ, ಚಲನೆಯ ವಿಧಗಳು

Share With Friends

➤ ಚಲನೆ – ಇನ್ನೊಂದು ಕಾಯದ ಸ್ಥಾನಕ್ಕೆ ಹೋಲಿಸಿದಾಗ ಒಂದು ಕಾಯದ ಸ್ಥಾನ ಕಾಲದೊಂದಿಗೆ ಬದಲಾಗುತ್ತಾ ಇರುವುದಕ್ಕೆ ‘ ಚಲನೆ’ ಎಂದು ಹೆಸರು.

➤ ಚಲಿಸಿದ ದೂರ- ಒಂದು ಸ್ಥಾನದಿಂದ ಮತ್ತೊಂದು ಸ್ತಾನಕ್ಕೆ ಕಾಯ ಚಲಿಸಿದಾಗ ಅದು ಚಲಿಸಿದ ಪಥದ ಉದ್ದವನ್ನು ಕಾಯವು ‘ ಚಲಿಸಿದ ದೂರ’ ಎನ್ನುತ್ತೇವೆ. ಇದೊಂದು ಅಧಿಶ ಪರಿಮಾಣ.

➤ ಸ್ಥಾನಪಲ್ಲಟ – ಕಾಯ ಚಲಿಸಲು ಪ್ರಾರಂಭಿಸಿದ ಸ್ಥಾನದಿಂದ ತಲುಪಿದ ಸ್ಥಾನಕ್ಕೆ ಇರುವ ಕನಿಷ್ಠ ದೂರವನ್ನು “ ಸ್ಥಾನಪಲ್ಲಟ” ಎನ್ನುತ್ತೇವೆ. ಇದೊಂದು ಸದಿಶ ಪರಿಮಾಣ.

➤ ಜವ – ಏಕಮಾನ ಕಾಲದಲ್ಲಿ ಒಂದು ಕಾಯವು ಚಲಿಸಿದ ದೂರವೇ ಅದರ ಜವ.
ಜವದ ಅಂತರಾಷ್ಟ್ರೀಯ ಏಕಮಾನ ಮೀ/ಸೆ.
ಜವ= ಚಲಿಸಿದ ದೂರ/ ತೆಗೆದುಕೊಂಡ ಕಾಲ

➤ ವೇಗ – ಏಕಮಾನ ಕಾಲದಲ್ಲಿ ಆಗುವ ಒಂದು ಕಾಯದ ಸ್ಥಾನಪಲ್ಲಟವೇ ಅದರ ವೇಗ. ಅಥವಾ ಕಾಯದ ಸ್ಥಾನಪಲ್ಲಟದ ದರವೇ ಅದರ ವೇಗ.
ವೇಗ = ಸ್ಥಾನಪಲ್ಲಟ/ ಕಾಲ
ಅಂತರಾಷ್ಟ್ರೀಯ ಪದ್ಧತಿಯಲ್ಲಿ ವೇಗದ ಅಳತೆಯ ಏಕಮಾನ ಮೀ/ಸೆ.

➤ ವೇಗೋತ್ಕರ್ಷ – ಒಂದು ಏಕಮಾನ ಕಾಲದಲ್ಲಿ ಕಾಯಕದ ವೇಗದಲ್ಲಿ ಆಗುವ ಬದಲಾವಣೆಗೆ ಅಥವಾ ವೇಗ ಬದಲಾವಣೆಯ ದರಕ್ಕೆ ‘ ವೇಗೋತ್ಕರ್ಷ’ ಎಂದು ಹೆಸರು. ಇದು ಸದಿಶ ಪರಿಮಾಣ.
ವೇಗೋತ್ಕರ್ಷ= ವೇಗದಲ್ಲಿ ಆದ ಬದಲಾವಣೆ/ ಬದಲಾವಣೆ ಆಗಲು ತೆಗೆದುಕೊಂಡ ಕಾಲ
ವೇಗೋತ್ಕರ್ಷ = ಅಂತಿಮ ವೇಗ- ಆರಂಬಿಕ ವೇಗ / ಕಾಲಾವಧಿ

➤ ಚಲನೆಗೆ ಸಂಬಂಧಿಸಿದ ವಿಜ್ಞಾನದ ಶಾಖೆಗಳು
1.ಯಂತ್ರ ವಿಜ್ಞಾನ – ಬಲ ಪ್ರಯೋಗ ಆದಾಗ ದ್ರವ್ಯ ಹೇಗೆ ವರ್ತಿಸುತ್ತದೆ ಎಂಬುದನ್ನು ಅಧ್ಯಯನ ಮಾಡುವ ಭೌತಶಾಸ್ತ್ರ ಶಾಖೆಯೇ ‘ ಯಂತ್ರಜ್ಞಾನ’( ಮೆಕ್ಯಾನಿಕ್ಸ್)

2. ಬಲ ವಿಜ್ಞಾನ ( ಚಲನಶಾಸ್ತ್ರ) -ಚಲನೆಯಲ್ಲಿ ಬದಲಾವಣೆಯನ್ನು ಉಂಟುಮಾಡಬಲ್ಲ ಬಲ ಪ್ರಯೋಗ ಆದಾಗ ದ್ರವ್ಯ ಹೇಗೆ ವರ್ತಿಸುತ್ತದೆ ಎಂಬುದನ್ನು ಅಧ್ಯಯನ ಮಾಡುವ ಯಂತ್ರಜ್ಞಾನ ಶಾಖೆಯೇ ಬಲವಿಜ್ಞಾನ.

3. ಗತಿ ವಿಜ್ಞಾನ _ ಕೇವಲ ಚಲನೆಯ ಅಳತೆ ಮತ್ತು ನಿಖರ ವರ್ಣನೆಯನ್ನು ಅಧ್ಯಯನ ವಸ್ತುವಾಗಿ ಉಳ್ಳ ಯಂತ್ರವಿಜ್ಞಾನ ಶಾಖೆಯೇ ‘ ಗತಿ ವಿಜ್ಞಾನ’.

4. ಸ್ಥಿತಿವಿಜ್ಞಾನ – ಚಲನೆಯನ್ನು ಉಂಟುಮಾಡಲು ಬಲಗಳ ಪ್ರಯೋಗವಾದಾಗ ದ್ರವ್ಯದ ವರ್ತನೆಯನ್ನು ಸಮತೋಲನದಲ್ಲಿ ಇರುವ ಬಲಗಳ ನಡುವಿನ ಸಂಬಂಧವನ್ನು ಅಧ್ಯಯನ ಮಾಡುವ ‘ ಯಂತ್ರವಿಜ್ಞಾನದ ಶಾಖೆಯೇ ‘ ಸ್ಥಿತಿವಿಜ್ಞಾನ’.

➤ ಚಲನೆಯ ವಿಧಗಳು
1. ಸರಳರೇಖೆಯ ಚಲನೆ : ವಸ್ತುವು ಸರಳರೇಖೆಯಲ್ಲಿ ಚಲಿಸಿದರೆ ಅದೇ ‘ಸರಳರೇಖೆ ಚಲನೆ.
ಉದಾ: ಕಾರು ನೇರ ರಸ್ತೆಯಲ್ಲಿ ನೇರವಾಗಿ ಚಲಿಸುತ್ತದೆ.

2. ವಕ್ರರೇಖೆಯ ಚಲನೆ: ವಸ್ತುಗಳು ವಕ್ರವಾಗಿ ಚಲಿಸಿದರೆ ಅದು ವಕ್ರರೇಖೆಯ ಚಲನೆ.
ಉದಾ: ಕಾರು ವಕ್ರ ರಸ್ತೆಯಲ್ಲಿ ವಕ್ರರೀತಿಯಲ್ಲಿ ಚಲಿಸುತ್ತವೆ.

3. ಆವರ್ತ ಚಲನೆ: ಸಮ ಅವಧಿಯಲ್ಲಿ ಏಕರೀತಿಯಲ್ಲಿ ಪುನರಾವರ್ತನೆ ಆಗುವ ಚಲನೆಯೇ ‘ ಆವರ್ತನ ಚಲನೆ’. ಇದನ್ನು ‘ ಆಂದೋಲನ ಚಲನೆ’ ಎಂದೂ ಕರೆಯುತ್ತಾರೆ.
ಆವರ್ತಕ ಚಲನೆಯಲ್ಲಿ ಇರುವ ಕಾಯ ಚಲನೆಯ ಪಥದ ಯಾವುದೇ ಬಿಂದುವನ್ನು ಯಾವ ದಿಕ್ಕಿನಲ್ಲಿ ದಾಟುತ್ತದೋ ಅದೇ ದಿಕ್ಕಿನಲ್ಲಿ ಎರಡನೇ ಬಾರಿ ದಾಟಲಾರಂಭಿಸಿದಾಗ ಒಂದು ಆಂದೋಲನ ಪೂರ್ಣವಾಗುತ್ತದೆ.
ಉದಾ: ಸರಳ ಲೋಲಕ, ಉಯ್ಯಾಲೆಯ ತೊನೆದಾಟ, ಪೀಟಿಲು ತಂತಿಯ ಕಂಪನ, ನೇತುಹಾಕಿದ ಸ್ಪ್ರೀಂಗ್‍ಗೆ ಕಟ್ಟಿದ ರಾಶಿಯನ್ನು ಕೆಳಕ್ಕೆ ಎಳೆದು ಬಿಟ್ಟಾಗ ಅದು ಮೇಲಕ್ಕೂ ಕೆಳಕ್ಕೂ ಪುಟಿಯುವಿಕೆ, ನೀರಿನ ಅಣುಗಳ ಕಂಪನ, ತೊಟ್ಟಿಲಿನ ತೂಗಾಟ ಇತ್ಯಾದಿ.

➤ ಸರಳಲೋಲಕ– ಭಾರರಹಿತ ವಿಸ್ತರಿಸಲಾಗದ, ತಿರುಚಿಕೊಳ್ಳದ ದಾರದ ನೆರವಿನಿಂದ ತೂಗಾಡುತ್ತಿರುವ ‘ ಬಿಂದು’ ರಾಶಿಯೇ ನಿಜವಾದ ಸರಳಲೋಲಕ. ಕಾಲದ ಅಳತೆಯಲ್ಲಿ ಸರಳಲೋಲಕ ಮುಖ್ಯ ಪಾತ್ರವಹಿಸುತ್ತವೆ.
➤ ಸರಳಲೋಲಕದ ಆವಿಷ್ಕಾರ – ಸರಳ ಲೋಲಕದ ನಿಯಮಗಳನ್ನು ಆವಿಷ್ಕರಿಸಿದವನು ಗೆಲಿಲಿಯೋ ಗೆಲಿಲಿ. ಇದು ಈತನ ಪ್ರಥಮ ಆವಿಷ್ಕಾರ. ಆಗ ಅವನ ವಯಸ್ಸು 20 ವರ್ಷ. ಗೆಲಿಲಿಯೋನ ಸರಳ ಲೋಲಕದ ಆವಿಷ್ಕಾರ ಬಳಸಿಕೊಂಡು ಸುದೀರ್ಘ ಕಾಲ ನಡೆಯಬಲ್ಲ ಗಡಿಯಾರ ರಚಿಸಿದವನು ‘ಕ್ರಿಶ್ಚಿಯನ್ ಹೈಗೆನ್ಸ್. ಯಾಂತ್ರಿಕ ಗಡಿಯಾರಗಳಲ್ಲಿ ಸರಳ ಲೋಲಕದ ತತ್ವವನ್ನು ಬಳಸಲಾಗಿದೆ.
➤ ಸರಳ ಲೋಲಕದ ನಿಯಮಗಳು
1. ಪಾರದ ಪರಿಮಾಣ ಕಮ್ಮಿ ಇದ್ದಾಗ ಲೋಲಕದ ಆಂದೋಲಾವಧಿ ಲೋಲಕದ ಗುಂಡಿನ ರಾಶಿ, ತೂಕ, ಸಾಂದ್ರತೆಗಳನ್ನು ಅವಲಂಬಿಸಿರುವುದಿಲ್ಲ.
2. ಪಾರದ ಪರಿಮಾಣ ಕಮ್ಮಿ ಇದ್ದಾಗ ಲೋಲಕದ ಆಂದೋಲನವಧಿ, ಲೋಲಕದ ಉದ್ದದ ವರ್ಗ ಮೂಲಕ್ಕೆ ನೇರ ಅನುಪಾತದಲ್ಲಿರುತ್ತವೆ.

4. ವೃತ್ತೀಯ ಚಲನೆ: ವಸ್ತುವು ವೃತ್ತಾಕಾರ ಪಥದಲ್ಲಿ ಚಲಿಸುತ್ತಿದೆ, ಅಂತಹ ಚಲನೆಯೇ ‘ ವೃತ್ತೀಯ ಚಲನೆ’.
ವೃತ್ತೀಯ ಚಲನೆಯ ವಿಧಗಳು
1. ಪರಿಭ್ರಮಣ ಚಲನೆ- ಒಂದು ವಸ್ತುವು ತನ್ನ ಸ್ಥಾನದಲ್ಲಿ ಬದಲಾವಣೆಯಾಗುತ್ತಾ ವೃತ್ತಾಕಾರ ಪಥದಲ್ಲಿ ಚಲಿಸಿದರೆ ಅಂತಹ ಚಲನೆಯನ್ನು ‘ ಪರಿಭ್ರಮಣ ಚಲನೆ’ ಎನ್ನುತ್ತೇವೆ.
ಉದಾ: ದೈತ್ಯ ಚಕ್ರವು ತಿರುಗುವಾಗ ಅದರ ವೃತ್ತೀಯ ಪಥದಲ್ಲಿ ಚಲಿಸುವಾಗ ಸ್ಥಾನದ ಬದಲಾವಣೆಯಾಗುತ್ತಿರುತ್ತದೆ.
ಉದಾ: ವಾಹನದ ಸ್ಟೀಯರಿಂಗ್

2. ಭ್ರಮಣ ಚಲನೆ – ಇಂತಹ ವೃತ್ತೀಯ ಚಲನೆಯಲ್ಲಿ ವಸ್ತುವು ತನ್ನ ಅಕ್ಷದ ಸುತ್ತ ಸುತ್ತುತ್ತದೆ.
ಉದಾ: ಬಗುರಿಯು ತನ್ನ ಸ್ಥಾನದಲ್ಲಿ ಬದಲಾವಣೆಯಾಗದೆ ವೃತ್ತೀಯ ಪಥದಲ್ಲಿ ತನ್ನ ಅಕ್ಷದ ಸುತ್ತ ಸುತ್ತುತ್ತಿರುತ್ತದೆ.

3. ಏಕರೂಪ ವೃತ್ತೀಯ ಚಲನೆ- ವೃತ್ತೀಯ ಪಥದಲ್ಲಿ ಸ್ಥಿರ ಜವದಿಂದ ಆಗುತ್ತಿರುವ ಚಲನೆಯೇ ‘ಏಕರೂಪ ವೃತ್ತೀಯ ಚಲನೆ’.
ಉದಾ: ಗಡಿಯಾರದಲ್ಲಿ ಮುಳ್ಳುಗಳ ಚಲನೆ
ಗಡಿಯಾರದಲ್ಲಿ ಮುಳ್ಳುಗಳು ಯಾವುದೇ ಕಾಲವಾಗಲಿ, ಯಾವುದೇ ಸಮಯದಲ್ಲಿ ಸ್ಥಿರವಾದ ಜವದಿಂದ ಚಲಿಸುತ್ತಿರುತ್ತವೆ. ಒಂದು ಸಾರಿ ವೇಗವಾಗಿ ಚಲಿಸಿ, ಮತ್ತೊಂದು ಸಾರಿ ನಿಧಾನವಾಗಿ ಚಲಿಸುವುದಿಲ್ಲ. ಅದರ ಜವವು ಯಾವಾಗಲೂ ಸ್ಥಿರವಾಗಿರುತ್ತದೆ.
ಅದೇ ರೀತಿ ಸೂರ್ಯನ ಸುತ್ತ ಗ್ರಹಗಳ ಚಲನೆ, ಭೂಮಿಯ ಸುತ್ತ ಚಂದ್ರನ ಚಲನೆ ಇವು ಏಕರೂಪ ವೃತ್ತೀಯ ಚಲನೆಗೆ ಉದಾಹರಣೆಗಳಾಗಿವೆ.

 

 

 

 

 

error: Content Copyright protected !!