ಮೇ.11 : ರಾಷ್ಟ್ರೀಯ ತಂತ್ರಜ್ಞಾನ ದಿನ
11-05-2020 ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ. ರಾಜಸ್ತಾನದ ಪೋಖ್ರಾನ್ನಲ್ಲಿ 1998ರ ಈ ದಿನ ಭಾರತವು ಕೈಗೊಂಡ ಪ್ರಪ್ರಥಮ ಅಣ್ವಸ್ತ್ರ ಪರೀಕ್ಷೆಗಳ ಮಹಾ ಸಾಧನೆಯ ನೆನೆಪಿಗಾಗಿ ಪ್ರತಿ ವರ್ಷ ಮೇ 11 ರಾಷ್ಟ್ರೀಯ ತಂತ್ರಜ್ಞಾನ ದಿನ (National Technology Day) ಆಗಿ ಆಚರಿಸಲಾಗುತ್ತದೆ.
1998 ಮೇ 11 ಭಾರತದ ಪಾಲಿಗೆ ಅತ್ಯಂತ ಮಹತ್ವದ ದಿನ. ಅಂದು ಭಾರತವು ರಾಜಸ್ಥಾನದ ಪೊಖ್ರಾನ್ನಲ್ಲಿ ಸರಣಿ ಅಣುಬಾಂಬ್ ಸ್ಫೋಟದ ಪರೀಕ್ಷೆಗಳನ್ನು ಯಸಸ್ವಿಯಾಗಿ ನಡೆಸಿತು. ಅಷ್ಟೇ ಅಲ್ಲದೆ ಅದೇ ದಿನ ಬೆಂಗಳೂರಿನಲ್ಲಿ ಸ್ವದೇಶಿ ನಿರ್ಮಿತ ‘ಹನ್ಸಾ-3’ ಹೆಲಿಕಾಪ್ಟರಿನ ಯಶಸ್ವಿ ಹಾರಾಟ ನಡೆಸಿತು ಹಾಗೂ ಅದೇ ದಿನ ಸಂಪೂರ್ಣ ಸ್ವದೇಶಿ ನಿರ್ಮಿತ ತ್ರಿಶೂಲ್ ಕ್ಷಿಪಣಿಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಈ ಎಲ್ಲ ತಾಂತ್ರಿಕ ಸಾಧನೆಗಳ ಹಿನ್ನೆಲೆಯಲ್ಲಿ 1998 ಮೇ 11ರಿಂದ ರಾಷ್ಟ್ರೀಯ ತಂತ್ರಜ್ಞಾನ ದಿನವಾಗಿ ಆಚರಿಸಲಾಗುತ್ತಿದೆ.
ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಘೋಷಿಸಿದರು. ವಿಜ್ಞಾನ , ಸಮಾಜ ಮತ್ತು ಇಂಡಸ್ಟ್ರಿಗಳ ಏಕೀಕರಣದ ಸಂಕೇತವಾಗಿ, ವೈಜ್ಞಾನಿಕ ಸಂಶೋಧನೆ ಮತ್ತು ತಾಂತ್ರಿಕ ಸೃಜನಶೀಲತೆಯ ಗೌರವವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ.
ಭಾರತದ ಸಂವಿಧಾನದಲ್ಲಿ ‘ವಿಪ್’ (WHIP) ಎಂದರೇನು..? ಎಷ್ಟು ವಿಧಗಳು..?
ಭಾರತವು ಅಣುಬಾಂಬ್ ಸ್ಫೋಟ, ಕ್ಷಿಪಣಿ ಉಡಾವಣೆ, ವಿಮಾನಗಳ ನಿರ್ಮಾಣ , ಕೃಷಿ, ನೀರಾವರಿ ಸೇರಿದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡುವ ಮೂಲಕ ಜಗತ್ತಿನ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಿದ್ದು, ತಾಂತ್ರಿಕ ಕ್ಷೇತ್ರದಲ್ಲಿ ಎದುರಾಗುವ ಎಲ್ಲ ಅಡ್ಡಿಗಳನ್ನು ಸಮರ್ಥವಾಗಿ ಎದುರಿಸಲು ಸಮರ್ಥವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳ ನೆನಪಿಗಾಗಿ ಈ ದಿನವನು ಆಚರಿಸಲಾಗುತ್ತದೆ.
ಆ ದಿನದಂದು ಶಾಲಾ ಕಾಲೇಜುಗಳು, ತಾಂತ್ರಿಕ ಸಂಸ್ಥೆಗಳಲ್ಲಿ ಹಲವಾರು ಸ್ಪರ್ಧೆಗಳು ಉಪನ್ಯಾಸ, ರಸಪ್ರಶ್ನೆ, ಸಂವಾದ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗ್ತುದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಉನ್ನತ ಕೊಡುಗೆ ನೀಡಿದವರನ್ನು ಗುರುತಿಸಿ ಅವರಿಗೆ ಭಾರತದ ರಾಷ್ಟ್ರಪತಿಗಳು ರಾಷ್ಟ್ರೀಯ ತಂತ್ರಜ್ಞಾನ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾರೆ.