ಆನ್‌ಲೈನ್ ಗೇಮಿಂಗ್ ನಿಷೇಧ ಕಾಯ್ದೆ (ಮಸೂದೆ) : Online Gaming Bill 2025
Online Gaming Bill 2025 : ಕೇಂದ್ರ ಸರ್ಕಾರ ಆನ್ಲೈನ್ ಗೇಮ್ ಗಳನ್ನು ನಿಷೇಧಿಸುವ ಕಾಯಿದೆಯೊಂದನ್ನು ಜಾರಿ ಮಾಡಿದೆ. ಈ ಬಾರಿಯ ಲೋಕಸಭೆಯ ಅಧಿವೇಶನದಲ್ಲಿ ಹಣ ಕಟ್ಟಿ ಆಡಲಾಗುವ ಆನ್ಲೈನ್ ಗೇಮ್ ಗಳನ್ನು ನಿಷೇಧಿಸುವ ಮಸೂದೆಯು ಅಂಗೀಕಾರಗೊಂಡಿತ್ತು. 2025ರ ಆಗಸ್ಟ್ 20ರಂದು ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರವಾಗಿ, ಆಗಸ್ಟ್ 21ರಂದು ರಾಜ್ಯಸಭೆಯಲ್ಲಿ ಅಂಗೀಕಾರವಾಗಿ ಕೊನೆಗೆ ಆಗಸ್ಟ್ 22ರಂದು ಈ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಅಂಕಿತ ಹಾಕಿದ್ದಾರೆ. ಈ ಮೂಲಕ ಈ ಕಾನೂನು ಹಣ ಕಟ್ಟಿ ಆಡಲಾಗುವ ಎಲ್ಲಾ ಆನ್ಲೈನ್ ಗೇಮ್ ಗಳನ್ನು ನಿಷೇಧಿಸುತ್ತದೆ.
ಇದರ ಹಿಂದಿನ ಕಾರಣವೇನು..?
ಆನ್ಲೈನ್ ಗೇಮ್ ಒಂದು ವ್ಯಸನ ವಾಗಿ ಮಾರ್ಪಟ್ಟಿದೆ. ಇದಕ್ಕೆ ಮಾರುಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅದಲ್ಲದೆ ಗೇಮಿಂಗ್ ಆಪ್ ಗಳ ಮೂಲಕ ಹಣ ಅಕ್ರಮ ವರ್ಗಾವಣೆ ಆಗುತ್ತಿದೆ. ಜೊತೆಗೆ ಹಣಕಾಸು ವಂಚನೆ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಹೀಗಾಗಿ ಇವುಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಮಸೂದೆಯನ್ನು ರೂಪಿಸಿದೆ.
ಈ ಕಾನೂನಿನಲ್ಲಿ ಏನಿದೆ..?
*ಆನ್ಲೈನ್ ಗೇಮ್ ಗಳಂತಹ ಚಟುವಟಿಕೆಗಳನ್ನ ಇದು ನಿಷೇಧಿಸುತ್ತದೆ. ಜೊತೆಗೆ ಈ ಗೇಮ್ ಗಳನ್ನು ಉತ್ತೇಜಿಸುವ ಹಾಗೂ ಜಾಹೀರಾತುಗಳನ್ನ ಪ್ರಕಟಿಸುವುದನ್ನು ಇದು ನಿಷೇಧಿಸುತ್ತದೆ.
*ಆನ್ಲೈನ್ ಗೇಮ್ ಗಳಲ್ಲಿ ಕೆಲವು ಆಟಗಳು ಮನರಂಜನೆ ನೀಡುತ್ತವೆ. ಇವುಗಳನ್ನು ಸೇರಿಸಿ ಆನ್ಲೈನ್ ಜೂಜಾಟ ಹಾಗೂ ಲಾಟರಿಗಳಂತಹ ಆಟಗಳನ್ನು ಕೂಡ ಇದು ನಿಷೇಧಿಸುತ್ತದೆ
*ಈ ಕಾನೂನಿನಡಿಯಲ್ಲಿ ಆನ್ಲೈನ್ ಗೇಮ್ ಆಡುವುದಕ್ಕೆ ಅವಕಾಶ ಹಾಗೂ ಪ್ರೋತ್ಸಾಹ ನೀಡುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಕೋಟಿ ರೂ. ದಂಡ ವಿಧಿಸಲಾಗುವುದು.
*ಜೊತೆಗೆ ಇಂತಹ ಆಟಗಳ ಕುರಿತು ಜಾಹೀರಾತು ಪ್ರಕಟಿಸಿದರೆ ಎರಡು ವರ್ಷಗಳವರೆಗೆ ಶಿಕ್ಷೆ ಮತ್ತು ಐವತ್ತು ಲಕ್ಷ ರೂ. ದಂಡ ವಿಧಿಸಲಾಗುವುದು.
*ಇನ್ನು ಅಪರಾಧಗಳ ಪುನರಾವರ್ತನೆಯ ಆದರೆ ಮೂರರಿಂದ ಐದು ವರ್ಷ ಜೈಲು ಹಾಗೂ ಎರಡು ಕೋಟಿ ರೂ. ವರೆಗೆ ದಂಡ ವಿಧಿಸಲಾಗುವುದು
*ಮೂಲಗಳ ಪ್ರಕಾರ, ಆನ್ಲೈನ್ ಗೇಮ್ಗಳಿಂದಾಗಿ ಭಾರತೀಯರು ಪ್ರತಿ ವರ್ಷ 15,000 ಕೋಟಿ ರೂ. ಯನ್ನು ಕಳೆದುಕೊಳ್ಳುತ್ತಿದ್ದಾರೆ. ಇನ್ನು ಕಳೆದ 31 ತಿಂಗಳಲ್ಲಿ ಈ ಆನ್ಲೈನ್ ಗೇಮ್ ವ್ಯಸನದಿಂದಾಗಿ ಕರ್ನಾಟಕದಲ್ಲಿ 32 ಜನರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಈ ಆನ್ಲೈನ್ ಗೇಮ್ ನಿಷೇಧದಿಂದಾಗಿ 400ಕ್ಕೂ ಅಧಿಕ ಕಂಪನಿಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಆನ್ಲೈನ್ ಗೇಮ್ ಗಳಲ್ಲಿ ಮೂರು ವಿಭಾಗಗಳಿವೆ:
*ರಿಯಲ್ ಮನಿ ಗೇಮ್ಸ್
*ಇ ಸ್ಪೋರ್ಟ್ಸ್
*ಸೋಶಿಯಲ್ ಗೇಮಿಂಗ್
ಈ ಆಟಗಳ ಪೈಕಿ ನಿಜವಾದ ಹಣ ಹೂಡಿಕೆ ಮಾಡಿ ಆಡುವ ಆಟಗಳನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದೆ. ಇನ್ನು ಇ-ಸ್ಪೋರ್ಟ್ಸ್ ಗಳಂತಹ ಆಟಗಳನ್ನು ಅನುಮತಿ ಪಡೆದು ಆಡಲು ಅವಕಾಶ ನೀಡಲಾಗಿದೆ. ಇದರ ಹೊರತಾಗಿ ಸೋಶಿಯಲ್ ಗೇಮ್ಸ್ ಗಳು ಹಣವಿಲ್ಲದೆ ಆಡುವ ಆಟಗಳಿಗೆ ಅನುಮತಿ ನೀಡಲಾಗಿದೆ. ಜೊತೆಗೆ ಈ ಆಟಗಳನ್ನು ಆಡುವಾಗ ಬ್ಯಾಂಕ್ ಅಥವಾ ಪೇಮೆಂಟ್ ಆಪ್ ಮೂಲಕ ಹಣ ಕಳಿಸುವುದನ್ನು ನಿಷೇಧಿಸಲಾಗಿದೆ. ಗೂಗಲ್ ಜಾಹೀರಾತುಗಳು, ಮೆಟಾ ಜಾಹೀರಾತುಗಳ ಮೂಲಕ ಇಂತಹ ಗೇಮ್ ಗಳನ್ನ ಪ್ರಚಾರ ಮಾಡುವುದಕ್ಕೆ ನಿಷೇಧಿಸಲಾಗಿದೆ.
ಇನ್ನು ಈ ಕಾಯ್ದೆಯು ಕೇಂದ್ರ ಸರ್ಕಾರಕ್ಕೆ ಆನ್ಲೈನ್ ಗೇಮ್ ಗಳನ್ನು ಗುರುತಿಸಲು, ವರ್ಗಿಕರಿಸಲು ಸಹಾಯಮಾಡುತ್ತದೆ. ಇದರಿಂದ ಸರ್ಕಾರವು ಅನಧಿಕೃತ ಆಪ್ ಗಳನ್ನು ಬ್ಲಾಕ್ ಮಾಡುವ ಹಾಗೂ ಸರ್ವರ್ ಗಳನ್ನು ಬ್ಲಾಕ್ ಮಾಡುವ ಅಧಿಕಾರವಿರುತ್ತದೆ. ಒಂದು ವೇಳೆ ಅಗತ್ಯವಿದ್ದರೆ ವಾರೆಂಟ್ ಇಲ್ಲದೆಯೂ ಕೂಡ ಬಂಧಿಸುವ ಅಧಿಕಾರವಿರುತ್ತದೆ.
ಇನ್ನುಳಿದಂತೆ ಗೇಮಿಂಗ್ ಕಂಪನಿಗಳು ಕೆಲವು ಕಡ್ಡಾಯ ನಿಯಮಗಳನ್ನು ಜಾರಿಗೆ ತರುವಂತೆ ಸೂಚನೆ ನೀಡಲಾಗಿದೆ. ಈ ಪೈಕಿ 18 ವರ್ಷಕ್ಕಿಂತ ಕಡಿಮೆ ಕಡಿಮೆ ಇರುವವರು ಈ ಗೇಮ್ ಗಳನ್ನು ಆಡುವುದಕ್ಕೆ ಪೋಷಕರ ಅನುಮತಿ ಪಡೆಯಬೇಕು. ದೀರ್ಘಕಾಲ ಆಡುವುದಕ್ಕೆ ತಡೆ ಹಿಡಿಯಲಾಗಿದೆ ಮತ್ತು ಬಳಕೆದಾರರು ದೂರು ಸಲ್ಲಿಸಲು ಅವಕಾಶ ನೀಡುವಂತೆ ಸೂಚಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಗೇಮಿಂಗ್ ಉದ್ಯಮ ತೀವ್ರವಾಗಿ ಬೆಳೆಯುತ್ತಿದ್ದು, 2025ರ ಹೊತ್ತಿಗೆ ಎಂಟು ಬಿಲಿಯನ್ ಡಾಲರ್ ನಷ್ಟು ಆಗುವ ಸಾಧ್ಯತೆ ಇದೆ. ಹೀಗಾಗಿ ಇವುಗಳಿಂದ ಜನರಲ್ಲಿ ಆರ್ಥಿಕ ಸಮಸ್ಯೆ, ಸಾಲ, ಆತ್ಮಹತ್ಯೆ, ಮೋಸ, ಕ್ರಮ ಹಣ ಹೂಡಿಕೆಯಂತಹ ತೊಂದರೆಗಳನ್ನು ತಂದು ಹಾಕುತ್ತದೆ. ಇಂತಹ ಸಮಸ್ಯೆಗಳಿಂದ ಜನರನ್ನ ರಕ್ಷಿಸಲು, ಯುವಕರನ್ನ ಸರಿದಾರಿಯತ್ತ ಕರೆದುಕೊಂಡು ಹೋಗುವುದು ಹಾಗೂ ಇಂತಹ ಆಟಗಳಲ್ಲಿ ಸ್ಪಷ್ಟ ನಿಯಮಗಳನ್ನ ರೂಪಿಸುವ ಮೂಲ ಉದ್ದೇಶವನ್ನು ಈ ಕಾನೂನು ಹೊಂದಿದೆ.
ಈ ಕಾನೂನು ಜಾರಿ ಬಳಿಕ ಕೆಲವು ವಿಷಯಗಳು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಈ ಗೇಮ್ಗಳ ನಿಷೇಧದಿಂದಾಗಿ ಸಾವಿರಾರು ಜನರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. ಅದಲ್ಲದೆ ಸದ್ಯಕ್ಕೆ ಆನ್ಲೈನ್ ಗೇಮ್ ಗಳನ್ನು ನಿಷೇಧದಿಂದಾಗಿ ಕೆಲವರು ಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (01-09-2025)
- ಇಂದಿನ ಪ್ರಚಲಿತ ವಿದ್ಯಮಾನಗಳು / 01-09-2025 (Today’s Current Affairs)
- ಸಮುದ್ರಯಾನ (Samudrayaan) : 5,000 ಮೀಟರ್ ಸಮುದ್ರದಾಳ ತಲುಪಲಿದ ಭಾರತೀಯ ಜಲಯಾತ್ರಿಗಳು
- ಆನ್ಲೈನ್ ಗೇಮಿಂಗ್ ನಿಷೇಧ ಕಾಯ್ದೆ (ಮಸೂದೆ) : Online Gaming Bill 2025
- ಭಾರತೀಯ ರೈಲ್ವೆಯಲ್ಲಿ ಸೆಕ್ಷನ್ ಕಂಟ್ರೋಲರ್ ಹುದ್ದೆಗಳಿಗೆ ನೇಮಕಾತಿ (Railways Recruitment)