ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಜೀವನ, ಸಾಧನೆ
ಭಾರತದ 9ನೇ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಪಿ.ವಿ.ನರಸಿಂಹ ರಾವ್ 14 ವರ್ಷಗಳ ಹಿಂದೆ ಇದೇ ದಿನ ( ಡಿ.೨೩,೨೦೦೪) ನಿಧನರಾದರು. ಅವರ ಗೌರವಾರ್ಥ ಪಿವಿಎನ್ ಬದುಕು-ಸಾಧನೆ ಕುರಿತು ಚಿತ್ರಣ ಇಲ್ಲಿದೆ. ಪಿ.ರಂಗರಾವ್ ಅವರ ಪುತ್ರರಾದ ಪಾಮುಲಪರ್ತಿ ವೆಂಕಟನರಸಿಂಹ ರಾವ್ ಜೂನ್ 28, 1921ರಲ್ಲಿ ಆಂಧ್ರಪ್ರದೇಶದ ಕರೀಂನಗರದಲ್ಲಿ ಜನಿಸಿದರು. ಅವರು ಹೈದರಾಬಾದ್‍ನ ಓಸ್ಮಾನಿಯಾ ವಿಶ್ವವಿದ್ಯಾಲಯ, ಬಾಂಬೆ ವಿಶ್ವವಿದ್ಯಾಲಯ ಮತ್ತು ನಾಗ್ಪುರ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ.
ಕೃಷಿಕರು ಮತ್ತು ಓರ್ವ ವಕೀಲರಾಗಿದ್ದ ಅವರು ರಾಜಕೀಯ ಪ್ರವೇಶಿಸಿ ಕೆಲವು ಮುಖ್ಯ ಖಾತೆಗಳನ್ನು ನಿರ್ವಹಿಸಿದರು. ಅವರು ಆಂಧ್ರಪ್ರದೇಶ ಸರ್ಕಾರದಲ್ಲಿ 1962-64ರವರೆಗೆ ಕಾನೂನು ಮತ್ತು ವಾರ್ತಾ ಸಚಿವರು ; 1964-67ರವರೆಗೆ ಕಾನೂನು ಮತ್ತು ದತ್ತಿಗಳ ಸಚಿವರು ; 1967ರವರೆಗೆ ಆರೋಗ್ಯ ಮತ್ತು ಔಷಧಿ ಮತ್ತು 1968-71ರವರೆಗೆ ಶಿಕ್ಷಣ ಸಚಿವರಾಗಿದ್ದರು. 1971-73ರವರೆಗೆ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು ; 1975-76ರವರೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ; 1968-74ರವರೆಗೆ ಆಂಧ್ರ ಪ್ರದೇಶದ ತೆಲುಗು ಅಕಾಡೆಮಿ ಅಧ್ಯಕ್ಷರಾಗಿ ; 1972ರಿಂದ ಮದ್ರಾಸ್‍ನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
1957-77ರವರೆಗೆ ಆಂಧ್ರ ಪ್ರದೇಶ ವಿಧಾನಸಭೆಯ ಸದಸ್ಯರಾಗಿದ್ದರು; 1977-84ರವರೆಗೆ ಲೋಕಸಭಾ ಸದಸ್ಯರಾಗಿದ್ದರು ಹಾಗೂ 1984ರ ಡಿಸೆಂಬರ್‍ನಲ್ಲಿ ರಾಮ್‍ತೆಕ್‍ನಿಂದ ಎಂಟನೆ ಲೋಕಸಭೆಗೆ ಚುನಾಯಿತರಾಗಿದ್ದರು. 1978-79ರಲ್ಲಿ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷರಾಗಿ ಅವರು ಲಂಡನ್ ವಿಶ್ವವಿದ್ಯಾಲಯದ ಏಷ್ಯನ್ ಅಂಡ್ ಆಫ್ರಿಕನ್ ಸ್ಟಡೀಸ್‍ನಿಂದ ಆಯೋಜಿಸಲಾಗಿದ್ದ ದಕ್ಷಿಣ ಏಷ್ಯಾ ಸಮಾವೇಶವೊಂದರಲ್ಲಿ ಭಾಗವಹಿಸಿದ್ದರು. ಶ್ರೀ ರಾವ್ ಅವರು ಆಂಧ್ರಪ್ರದೇಶ ಕೇಂದ್ರದ ಭಾರತೀಯ ವಿದ್ಯಾ ಭವನದ ಅಧ್ಯಕ್ಷರು ಸಹ ಆಗಿದ್ದರು.
ಅವರು ಜನವರಿ 14, 1980ರಿಂದ ಜುಲೈ 18, 1984ರವರೆಗೆ ವಿದೇಶಾಂಗ ವ್ಯವಹಾರ ಸಚಿವರಾಗಿದ್ದರು ; ಜುಲೈ 19, 1984ರಿಂದ ಡಿಸೆಂಬರ್ 31, 1984ರವರೆಗೆ ಗೃಹ ಸಚಿವರಾಗಿದ್ದರು ; ಡಿಸೆಂಬರ್ 31, 1984ರಿಂದ ಸೆಪ್ಟೆಂಬರ್ 25ರವರೆಗೆ ರಕ್ಷಣಾ ಸಚಿವರಾಗಿದ್ದರು. ನಂತರ ಸೆಪ್ಟೆಂಬರ್ 25, 1985ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಅಪಾರ ಆಸಕ್ತಿ ಎಲ್ಲ ಕ್ಷೇತ್ರಗಳಲ್ಲೂ ಅಪಾರ ಆಸಕ್ತಿ ಹೊಂದಿದ ವ್ಯಕ್ತಿಯಾಗಿದ್ದರು. ಸಂಗೀತ, ಸಿನಿಮಾ ಮತ್ತು ರಂಗಭೂಮಿಯನ್ನು ಬಹುವಾಗಿ ಇಷ್ಟಪಡುತ್ತಿದ್ದರು. ಭಾರತೀಯ ತತ್ತ್ವಶಾಸ್ತ್ರ ಮತ್ತು ಸಂಸ್ಕøತಿಯಲ್ಲಿ ವಿಶೇಷ ಒಲವು ಹೊಂದಿದ್ದರು. ಕಾಲ್ಪನಿಕ ವಿಜ್ಞಾನ ಹಾಗೂ ರಾಜಕೀಯ ವಿಶ್ಲೇಷಣೆಗಳನ್ನು ಬರೆಯುತ್ತಿದ್ದರು. 17 ಭಾಷೆಗಳನ್ನು ತಿಳಿದಿದ್ದ ಬಹು ಭಾಷಾ ಪಂಡಿತರಾಗಿದ್ದರು. ತೆಲುಗು ಮತ್ತು ಹಿಂದಿಗಳಲ್ಲಿ ಕವನಗಳನ್ನು ಬರೆಯುತ್ತಿದ್ದ ಅವರಿಗೆ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಇತ್ತು.
ಜ್ಞಾನಪೀಠದಿಂದ ಪ್ರಕಟಗೊಂಡ ದಿವಂಗತ ಶ್ರೀ ವಿಶ್ವನಾಥ ಸತ್ಯನಾರಾಯಣ ಅವರು ಪ್ರಸಿದ್ದ ವೆಯಿ ಪಡಗಳು ತೆಲುಗು ಕಾದಂಬರಿಯನ್ನು ಹಿಂದಿಯಲ್ಲಿ ಸಹಸ್ರಫನ್ ಹೆಸರಿನಲ್ಲಿ ಪ್ರಕಟಿಸಿದರು ; ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ದಿವಂಗತ ಶ್ರೀ ಹರಿ ನಾರಾಯಣ ಅಪ್ಟೆ ಅವರ ಪ್ರಸಿದ್ದ ಮರಾಠಿ ಕಾದಂಬರಿಯನ್ನು ಪನ್ ಲಕ್ಷತ್ ಕೊನ್ ಘೇಟೊವನ್ನು ತೆಲುಗಿನಲ್ಲಿ ಅಬಾಲ ಜೀವಿತಂ ಹೆಸರಿನಲ್ಲಿ ಭಾಷಾಂತರಿಸಿದರು. ಅವರು ಇತರ ಜನಪ್ರಿಯ ಕಾದಂಬರಿಗಳು ಮತ್ತು ಶ್ರೇಷ್ಠ ಕೃತಿಗಳನ್ನು ಮರಾಠಿಯಿಂದ ತೆಲುಗಿಗೆ ಹಾಗೂ ತೆಲುಗಿನಿಂದ ಹಿಂದಿಗೆ ಭಾಷಾಂತರ ಮಾಡಿದ್ದಾರೆ. ಅವರ ಅನೇಕ ಲೇಖನಗಳು ಬಹುಶ: ಅವರ ಒಂದು ಕಾವ್ಯನಾಮದ ಮೂಲಕ ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ. ರಾಜಕೀಯ ವಿಷಯಗಳು ಮತ್ತು ಅದಕ್ಕೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಅವರು ಅಮೆರಿಕ ಮತ್ತು ಪಶ್ಚಿಮ ಜರ್ಮನಿಯ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವರಾಗಿ 1974ರಲ್ಲಿ ಯು.ಕೆ, ಪಶ್ಚಿಮ ಜರ್ಮನಿ, ಸ್ವಿಟ್ಜರ್‍ಲೆಂಡ್, ಇಟಲಿ ಮತ್ತು ಈಜಿಪ್ಟ್‍ನಲ್ಲಿ ವ್ಯಾಪಕ ಪ್ರವಾಸ ಕೈಗೊಂಡರು.
ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ವೇಳೆ ಪಿವಿಎನ್, ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯ ಕ್ಷೇತ್ರಕ್ಕೆ ತಮ್ಮ ವಿದ್ವಾಂಸ ಪ್ರತಿಭೆ ಹಿನ್ನೆಲೆ ಹಾಗೂ ಸಮೃದ್ಧ ರಾಜಕೀಯ ಮತ್ತು ಅಡಳಿತಾತ್ಮಕ ಅನುಭವಗಳನ್ನು ಯಶಸ್ವಿಯಾಗಿ ಸಂವಹನ ಮಾಡಿದರು. ತಾವು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ 1980ರ ಜನವರಿಯಲ್ಲಿ ನವದೆಹಲಿಯಲ್ಲಿ ನಡೆದ ತೃತೀಯ ಯೂನಿಡೋ ಸಮಾವೇಶದ ಅಧ್ಯಕ್ಷತೆ ವಹಿಸಿದರು. 1980ರ ಮಾರ್ಚ್‍ನಲ್ಲಿ ನ್ಯೂಯಾರ್ಕ್‍ನಲ್ಲಿ ನಡೆದ ಗ್ರೂಪ್ ಆಫ್ 77ರ ಸಭೆಯ ಅಧ್ಯಕ್ಷತೆ ವಹಿಸಿದ್ದರು. 1981ರ ಫೆಬ್ರವರಿಯಲ್ಲಿ ನಡೆದ ಅಲಿಪ್ತ ರಾಷ್ಟ್ರಗಳ ವಿದೇಶಾಂಗ ಸಚಿವರ ಸಮಾವೇಶದಲ್ಲಿ ಅವರು ವಹಿಸಿದ ಪಾತ್ರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ರಾವ್ ಅವರ ಅಂತಾರಾಷ್ಟ್ರೀಯ ಆರ್ಥಿಕ ವಿಷಯಗಳಲ್ಲಿ ಅವರು ತೋರಿದ ವೈಯಕ್ತಿಕ ಆಸಕ್ತಿಗಳಿಂದ 1981ರ ಮೇ ತಿಂಗಳಲ್ಲಿ ಕ್ಯಾರಕಾಸ್‍ನಲ್ಲಿ ನಡೆದ ಇಸಿಡಿಸಿ ಕುರಿತ ಗ್ರೂಪ್ ಆಫ್ 77 ಸಮಾವೇಶದಲ್ಲಿ ಭಾರತೀಯ ನಿಯೋಗದ ನೇತೃತ್ವ ವಹಿಸಲು ನೆರವಾಯಿತು.
1982 ಮತ್ತು 1983 ಭಾರತ ಮತ್ತು ಅದರ ವಿದೇಶಾಂಗ ನೀತಿಯಲ್ಲಿ ಯಶಸ್ವಿ ವರ್ಷ. ಕೊಲ್ಲಿ ಯುದ್ಧದ ನೆರಳಿನಲ್ಲಿ ಏಳನೇ ಶೃಂಗಸಭೆ ಆಯೋಜಿಸುವಂತೆ ಅಲಿಪ್ತ ರಾಷ್ಟ್ರಗಳ ಚಳವಳಿ ಭಾರತಕ್ಕೆ ಮನವಿ ಮಾಡಿತು. ಇದು ಭಾರತವು ಚಳವಳಿಯ ಅಧ್ಯಕ್ಷತೆ ವಹಿಸಲು ಹಾಗೂ ಇಂದಿರಾ ಗಾಂಧಿ ಅವರು ಅದರ ಅಧ್ಯಕ್ಷರಾಗುವಂತೆ ಮಾಡಿತು. 1982ರಲ್ಲಿ ನವದೆಹಲಿ ಶೃಂಗಸಭೈ ಸಂದರ್ಭದಲ್ಲಿ ಅಲಿಪ್ತ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ಗಳಿಗೆ ಶ್ರೀ ಪಿ.ವಿ.ನರಸಿಂಹರಾವ್ ಅಧ್ಯಕ್ಷತೆ ವಹಿಸಿದ್ದರು. ಅದೇ ವರ್ಷ ಇನ್ನೊಂದು ಶೃಂಗಸಭೆ ನಡೆಸುವಂತೆ ವಿಶ್ವಸಂಸ್ಥೆ ಸೂಚನೆ ಮೇರೆಗೆ ನಡೆದ ಸಮಾವೇಶದಲ್ಲೂ ಇವರು ಅಧ್ಯಕ್ಷರಾಗಿದ್ದು. ನ್ಯೂಯಾಕ್‍ನಲ್ಲಿ ನಡೆದ ವಿಶ್ವ ವಿವಿಧ ರಾಷ್ಟ್ರಗಳ ಸರ್ಕಾರಗಳ ಮುಖ್ಯಸ್ಥ ಸಮಾವೇಶದಲ್ಲೂ ಪಿವಿಎನ್ ಪ್ರಮುಖ ಪಾತ್ರ ವಹಿಸಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಅವರು ಯುಎಸ್‍ಎ, ಯುಎಸ್‍ಎಸ್‍ಆರ್, ಪಾಕಿಸ್ತಾನ, ಬಾಂಗ್ಲಾದೇಶ, ಇರಾನ್, ವಿಯೆಟ್ನಾಂ ಮತ್ತು ಗುಯಾನ ಸೇರಿದಂತೆ ಜಂಟಿ ಆಯೋಗಗಳ ಸದಸ್ಯ ದೇಶವನ್ನು ಭಾರತದ ಪರವಾಗಿ ಅಧ್ಯಕ್ಷತೆ ವಹಿಸಿದ್ದರು.
ನರಸಿಂಹ ರಾವ್ ಅವರು ಜುಲೈ 19, 1984ರಂದು ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ನವೆಂಬರ್ 5, 1984ರಂದು ಯೋಜನಾ ಸಚವರ ಹೆಚ್ಚುವರಿ ಹೊಣೆಯೊಂದಿಗೆ ಅವರನ್ನು ಈ ಹುದ್ದೆಗೆ ಮರು ನೇಮಕ ಮಾಡಲಾಯಿತು. ಡಿಸೆಂಬರ್ 31, 1985 ರಿಂದ ಸೆಪ್ಟೆಂಬರ್ 25, 1985ರವರೆಗೆ ರಕ್ಷಣಾ ಸಚಿವರಾಗಿ ನೇಮಕಗೊಂಡರು. ಸೆಪ್ಟೆಂಬರ್ 25, 1985ರಮದು ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಅವರು 1991-1996ರವರೆಗೆ ಭಾರತದ 9ನೇ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದರು.
ಆರ್ಥಿಕ ಸುಧಾರಣೆಗಳ ಹರಿಕಾರ: ಆರ್ಥಿಕ ಸುಧಾರಣೆಗಳ ಹರಿಕಾರ ಎಂದೇ ಬಿಂಬಿತವಾಗಿದ್ದ ಅವರು ಕಾಂಗ್ರೆಸ್ ವಲಯದಲ್ಲಿ ರಾಜಕೀಯ ಚಾಣಾಕ್ಷ ಎಂದು ಸಹ ಗುರುತಿಸಿಕೊಂಡಿದ್ದರು.. ಪ್ರಧಾನಿಯಾಗಿ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಿದರು. ಆದರೆ ಇವರ ಅಳ್ವಿಕೆ ಬಾಬರಿ ಮಸೀದಿ ಧ್ವಂಸ ಮತ್ತು ಕೋಮುಗಲಭೆಗೆ ಸಾಕ್ಷಿಯಾಯಿತು. ಹಲವಾರು ಹಗರಣಗಳು ಇವರ ಕೊರಳಿಗೆ ಸುತ್ತಿಕೊಂಡು ಭಾರಿ ವಿವಾದಕ್ಕೂ ಗುರಿಯಾಗಿದ್ದರು. ಡಿಸೆಂಬರ್ 23, 2004ರಂದು ಹೃದಯಘಾತದಿಂದ ನವದೆಹಲಿಯಲ್ಲಿ ನಿಧನರಾದರು. ಅವರ ಅಂತ್ಯ ಕ್ರಿಯೆ ಹೈದರಾಬಾದ್‍ನಲ್ಲಿ ನಡೆಯಿತು.