ಇಂದಿನ ಪ್ರಚಲಿತ ವಿದ್ಯಮಾನಗಳು (02-09-2023)
▶ ಆದಿತ್ಯಾ L1 ಉಪಗ್ರಹ ಉಡಾವಣೆ ಯಶಸ್ವಿ
ಚಂದ್ರಯಾನ-3 ಯಶಸ್ಸಿನ ಖುಷಿಯಲ್ಲಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇದೀಗ ತನ್ನ ಬಹು ನಿರೀಕ್ಷಿತ ಆದಿತ್ಯಾ L1 ಉಪಗ್ರಹ ಉಡಾವಣೆಯನ್ನು ಯಶಸ್ವಿಯಾಗಿ ಉಡಾಯಿಸಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಆದಿತ್ಯಾ ಎಲ್ 1 ನೌಕೆಯನ್ನು ಹೊತ್ತ ಪಿಎಲ್ಎಲ್ ವಿ- ಸಿ-57 ರಾಕೆಟ್ ಬೆಳಗ್ಗೆ 11.50ಕ್ಕೆ ನಭಕ್ಕೆ ಹಾರಿತು. ತನ್ನ ಎಲ್ಲ ಹಂತಗಳನ್ನು ಅತ್ಯುತ್ತಮವಾಗಿ ನಿಭಾಯಿಸಿದ ಪಿಎಸ್ ಎಲ್ ವಿ ಸಿ 57 ನೌಕೆ ಎಲ್ಲ ಮೂರೂ ಹಂತಗಳನ್ನು ಯಶಸ್ವಿಯಾಗಿ ನಿಭಾಯಿಸಿ ನೌಕೆಯನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ತಲುಪಿಸಿತು. ಆದಿತ್ಯ ಎಲ್1 ನೌಕೆ, ಒಟ್ಟು 7 ವೈಜ್ಞಾನಿಕ ಉಪಕರಣಗಳನ್ನ ಹೊತ್ತು ಸೂರ್ಯಶೋಧಕ್ಕೆ ಹೊರಡುತ್ತಿದೆ. ಇದರಲ್ಲಿ ಮೂರು ಉಪಕರಣಗಳು ಸೂರ್ಯನನ್ನು ನೋಡುತ್ತಾ ವಿವಿಧ ಭಾಗಗಳ ಅಧ್ಯಯನ ಮಾಡುತ್ತೆ. ಉಳಿದ ಮೂರು ಉಪಕರಣಗಳು, ಸೂರ್ಯನಿಂದ ಬರುವ ವಿಕಿರಣ ಮತ್ತು ವಸ್ತುಗಳನ್ನು ಅಳತೆ ಮಾಡುವ ಕೆಲಸ ಮಾಡುತ್ತೆ. ವಿಶೇಷ ಅಂದ್ರೆ ಆದಿತ್ಯ ಎಲ್1ನಲ್ಲಿರುವ ಉಪಕರಣಗಳು ಎಲ್1 ಪಾಯಿಂಟ್‌ನಲ್ಲೇ ಸುತ್ತುತ್ತಾ ಕೃತಕ ಗ್ರಹಣ ಕೂಡ ಸೃಷ್ಟಿಸಬಲ್ಲವು.
▶RBI ಗವರ್ನರ್ ಶಕ್ತಿಕಾಂತ ದಾಸ್ಗೆ A ಪ್ಲಸ್ ಗ್ರೇಡ್
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಗವರ್ನರ್ ಶಕ್ತಿಕಾಂತ ದಾಸ್ (Shaktikanta Das)ಅವರು ಗ್ಲೋಬಲ್ ಫೈನಾನ್ಸ್‌ನ ಸೆಂಟ್ರಲ್ ಬ್ಯಾಂಕರ್ ರಿಪೋರ್ಟ್ ಕಾರ್ಡ್ಸ್ 2023ರಲ್ಲಿ ಎ ಪ್ಲಸ್ ಗ್ರೇಡ್ ಗಳಿಸಿದ್ದಾರೆ. ಅಮೆರಿಕ ಮೂಲದ ಗ್ಲೋಬಲ್ ಫೈನಾನ್ಸ್ ಮ್ಯಾಗಜೀನ್ ಪ್ರಕಾರ ಮೂರು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ಪಟ್ಟಿಯಲ್ಲಿ ದಾಸ್ ಅಗ್ರಸ್ಥಾನದಲ್ಲಿದ್ದಾರೆ. ಸ್ವಿಟ್ಜರ್ಲೆಂಡ್‌ನ ಥಾಮಸ್ ಜೆ ಜೋರ್ಡಾನ್ ಮತ್ತು ವಿಯೆಟ್ನಾಂನ ನ್ಗುಯೆನ್ ಥಿ ಹಾಂಗ್ ಕ್ರಮವಾಗಿ ನಂತರದ ಎರಡು ಸ್ಥಾನಗಳಲ್ಲಿದ್ದಾರೆ. ಗ್ಲೋಬಲ್ ಫೈನಾನ್ಸ್ ಮ್ಯಾಗಜೀನ್‌ನ ಹೇಳಿಕೆಯ ಪ್ರಕಾರ, ಹಣದುಬ್ಬರ ನಿಯಂತ್ರಣ, ಆರ್ಥಿಕ ಬೆಳವಣಿಗೆಯ ಗುರಿಗಳು, ಕರೆನ್ಸಿ ಸ್ಥಿರತೆ ಮತ್ತು ಬಡ್ಡಿದರ ನಿರ್ವಹಣೆಯಲ್ಲಿ ಯಶಸ್ಸಿಗೆ A ನಿಂದ F ವರೆಗಿನ ಶ್ರೇಣಿಗಳನ್ನು ಆಧರಿಸಿದೆ. ಒಂದು ‘A’ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪ್ರತಿನಿಧಿಸುತ್ತದೆ ಮತ್ತು ‘F’ ಸಂಪೂರ್ಣ ವೈಫಲ್ಯವನ್ನು ಸೂಚಿಸುತ್ತದೆ. ಎ ಗ್ರೇಡ್ ಗಳಿಸಿದ ಗವರ್ನರ್‌ಗಳಲ್ಲಿ ಬ್ರೆಜಿಲ್‌ನ ರಾಬರ್ಟೊ ಕ್ಯಾಂಪೋಸ್ ನೆಟೊ, ಇಸ್ರೇಲ್‌ನ ಅಮೀರ್ ಯಾರೋನ್, ಮಾರಿಷಸ್‌ನ ಹರ್ವೇಶ್ ಕುಮಾರ್ ಸೀಗೋಲಮ್, ನ್ಯೂಜಿಲೆಂಡ್‌ನ ಆಡ್ರಿಯನ್ ಓರ್ ಮತ್ತು ಇತರರು ಸೇರಿದ್ದಾರೆ.ಆದರೆ ಎ ಮೈನಸ್ ಗ್ರೇಡ್ ಗಳಿಸಿದ ಗವರ್ನರ್‌ಗಳಲ್ಲಿ ಕೊಲಂಬಿಯಾದ ಲಿಯೊನಾರ್ಡೊ ವಿಲ್ಲಾರ್, ಡೊಮಿನಿಕನ್ ರಿಪಬ್ಲಿಕ್‌ನ ಹೆಕ್ಟರ್ ವಾಲ್ಡೆಜ್ ಅಸ್ಗೆಜ್ ಅಲ್ಬಿಝ್ಸನ್, ಐಸ್ ಲ್ಯಾಂಡ್ ನ ಇಸ್ಜೆಜ್ ಅಲ್ಬಿಸ್ಸನ್, ಇಂಡೋನೇಷ್ಯಾದ ಪೆರ್ರಿ ವಾರ್ಜಿಯೋ, ಮೆಕ್ಸಿಕೋದ ವಿಕ್ಟೋರಿಯಾ ರೋಡ್ರಿಗಸ್ ಸೆಜಾ ಇದ್ದಾರೆ.
▶ ಸಿಂಗಾಪುರ ಅಧ್ಯಕ್ಷರಾಗಿ ಭಾರತೀಯ ಮೂಲದ ವ್ಯಕ್ತಿ ಆಯ್ಕೆ
ಭಾರತೀಯ ಮೂಲದ ಸಿಂಗಾಪುರದ ಅರ್ಥಶಾಸ್ತ್ರಜ್ಞ ಥರ್ಮನ್ ಷಣ್ಮುಗರತ್ನಂ ಅವರು ಶುಕ್ರವಾರ ಸಿಂಗಾಪುರದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಿಂಗಾಪುರ ಅಧ್ಯಕ್ಷೀಯ ಚುನಾವಣೆಯಲ್ಲಿ ಷಣ್ಮುಗರತ್ನಂ ಅವರು, ಚೀನಾ ಮೂಲದ ಇಬ್ಬರು ಪ್ರತಿಸ್ಪರ್ಧಿಗಳನ್ನು ಸೋಲಿಸಿ, ಸಿಂಗಾಪುರದ 9ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 2011 ರಿಂದ 2019 ರವರೆಗೆ ಸಿಂಗಾಪುರದ ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದ 66 ವರ್ಷದ ಷಣ್ಮುಗರತ್ನಂ ಅವರು ಶೇ. 70.4 ರಷ್ಟು ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿಗಳಾದ ಎನ್‌ಜಿ ಕೊಕ್ ಸಾಂಗ್ ಮತ್ತು ತಾನ್ ಕಿನ್ ಲಿಯಾನ್ ಅವರು ಕ್ರಮವಾಗಿ ಶೇಕಡಾ 15.7 ಮತ್ತು 13.88 ರಷ್ಟು ಮತಗಳನ್ನು ಪಡೆದಿದ್ದಾರೆ. ಸಿಂಗಾಪುರದ ಜನ ಥರ್ಮನ್ ಷಣ್ಮುಗರತ್ನಂ ಅವರನ್ನು ನಿರ್ಣಾಯಕ ಅಂತರದಿಂದ ನಮ್ಮ ಮುಂದಿನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.
▶ ಅನೂರ್ಜಿತ ಮದುವೆಯಿಂದಾಗಿ ಹುಟ್ಟಿದ ಮಕ್ಕಳಿಗೂ ಆಸ್ತಿಯಲ್ಲಿ ಪಾಲಿದೆ: ಸುಪ್ರೀಂ ಕೋರ್ಟ್
ಹಿಂದೂ ಸಕ್ಸೆಶನ್ ಕಾಯ್ದೆಯಡಿ (ಎಚ್ಎಸ್ಎ) ಅನೂರ್ಜಿತ’ ವಿವಾಹಗಳಿಂದ ಜನಿಸಿದ ಮಕ್ಕಳು ತಮ್ಮ ಹೆತ್ತವರ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕನ್ನು ಸಾಧಿಸಬಹುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರ ನ್ಯಾಯಪೀಠವು ಹಿಂದೂ ವಿವಾಹ ಕಾಯ್ದೆಯ (ಎಚ್ಎಂಎ) ಸೆಕ್ಷನ್ 16 (1) ಮತ್ತು ಸೆಕ್ಷನ್ 16 (2) ರ ಅಡಿಯಲ್ಲಿ ಮಗುವು ಹಿಂದೂ ಸಕ್ಸೆಶನ್ ಕಾಯ್ದೆಯಡಿಯಲ್ಲಿ ಕಾನೂನುಬದ್ಧ ಸಂಬಂಧಿ ಎಂದು ತೀರ್ಪು ನೀಡಿತು. ಹಿಂದೂ ಕಾನೂನಿನ ಪ್ರಕಾರ, ಅನೂರ್ಜಿತ ಅಥವಾ ಅಮಾನ್ಯ ವಿವಾಹವನ್ನು ಕಾನೂನಿನಲ್ಲಿ ಜಾರಿಗೊಳಿಸಲಾಗುವುದಿಲ್ಲ. ಅದು ಕಾನೂನುಬಾಹಿರವಾಗಿರುತ್ತದೆ. ಅನೂರ್ಜಿತ ವಿವಾಹ ಆದಲ್ಲಿ, ಅಂತಹ ಮದುವೆಯನ್ನು ರದ್ದುಗೊಳಿಸಲು ಆದೇಶದ ಅಗತ್ಯವಿರುವುದಿಲ್ಲ. ಆದರೆ, ಅನೂರ್ಜಿತ ಆಗಿರಬಹುದಾದ ವಿವಾಹವನ್ನು ಆದೇಶದ ಮೂಲಕ ರದ್ದುಗೊಳಿಸಬೇಕು.
ಹಿಂದೂ ಕಾನೂನುಗಳ ಅಡಿಯಲ್ಲಿ ವಿವಾಹೇತರ ಸಂಬಂಧದಿಂದ ಹುಟ್ಟುವ ಮಕ್ಕಳು ತಮ್ಮ ಹೆತ್ತವರ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರಾಗಿದ್ದಾರೆಯೇ ಎಂಬ ಕಾನೂನು ವಿಷಯಕ್ಕೆ ಸಂಬಂಧಿಸಿದ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ನ ವಿಭಾಗೀಯ ಪೀಠವು ಹಿಂದಿನ ಪೂರ್ವನಿದರ್ಶನಗಳನ್ನು ಅನುಸರಿಸಲು ನಿರಾಕರಿಸಿದ ನಂತರ ಅಕ್ರಮ ವಿವಾಹ/ಸಂಬಂಧಗಳಿಂದ ಜನಿಸಿದ ಮಕ್ಕಳ ಕಾರಣಕ್ಕಾಗಿ ಹೋರಾಡಿದ ನಂತರ ಈ ಪ್ರಕರಣವನ್ನು 2011ರಲ್ಲಿ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಯಿತು. ಅಂತಹ ಮಕ್ಕಳು ತಮ್ಮ ಹೆತ್ತವರಿಗೆ ಸೇರಿದ ಯಾವುದೇ ಆಸ್ತಿಯ ಮೇಲೆ ಹಕ್ಕು ಹೊಂದಿರುತ್ತಾರೆ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತ್ತು. ಆದಾಗ್ಯೂ, ಮಕ್ಕಳ ಹಕ್ಕುಗಳು ಅವರ ಪೋಷಕರ ಆಸ್ತಿಗೆ ಸೀಮಿತವಾಗಿರುತ್ತವೆ. ಬೇರೆ ಯಾವುದೇ ಸಂಬಂಧವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 16 (3) ರ ಅಡಿಯಲ್ಲಿ ಅಂತಹ ಮಕ್ಕಳ ಪಾಲು ಅವರ ಪೋಷಕರ ಸ್ವಯಾರ್ಜಿತ ಆಸ್ತಿಗೆ ಮಾತ್ರ ಸೀಮಿತವಾಗಿದೆಯೇ ಎಂಬ ವಿಷಯವನ್ನು ಸುಪ್ರೀಂ ಕೋರ್ಟ್ ನಿರ್ಧರಿಸಿತು.
▶ ರೈಲ್ವೆ ಇತಿಹಾಸದಲ್ಲಿ ಇದೇ ಮೊದಲ ಬಾರಿ ಮಂಡಳಿಗೆ ಮೊದಲ ಮಹಿಳಾ ಅಧ್ಯಕ್ಷೆ ನೇಮಕ
ಕೇಂದ್ರ ಸರ್ಕಾರ ಗುರುವಾರ ಜಯಾ ವರ್ಮಾ ಸಿನ್ಹಾ ಅವರನ್ನು ರೈಲ್ವೆ ಮಂಡಳಿಯ ಸಿಇಒ ಮತ್ತು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ರೈಲ್ವೆ ಸಚಿವಾಲಯದ 105 ವರ್ಷಗಳ ಇತಿಹಾಸದಲ್ಲಿ ಆ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ರೈಲ್ವೆ ಇತಿಹಾಸದಲ್ಲಿ ಈ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಯ ಸಿನ್ಹಾ ಅವರು ಸೆಪ್ಟೆಂಬರ್ 1 ರಂದು ಅಥವಾ ನಂತರ ಅಧಿಕಾರ ವಹಿಸಿಕೊಳ್ಳುತ್ತಾರೆ. ಜಯ ವರ್ಮಾ ಸಿನ್ಹಾ ಅವರು ಅನಿಲ್ ಕುಮಾರ್ ಲಹೋಟಿ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಸೆಪ್ಟೆಂಬರ್ 1 ರಂದು ಸಿನ್ಹಾ ಅಧಿಕಾರ ವಹಿಸಿಕೊಳ್ಳುತ್ತಾರೆ. ಅನಿಲ್ ಕುಮಾರ್ ಅವರ ಅಧಿಕಾರಾವಧಿಯು ಆಗಸ್ಟ್ 31, 2024 ರಂದು ಕೊನೆಗೊಳ್ಳುತ್ತದೆ. ಸಿನ್ಹಾ ಅವರು ಅಕ್ಟೋಬರ್ 1 ರಂದು ನಿವೃತ್ತರಾಗಲಿದ್ದಾರೆ. ಜಯ ವರ್ಮಾ ಸಿನ್ಹಾ ಅವರು ಭಾರತೀಯ ರೈಲ್ವೆ ಸಂಚಾರ ಸೇವೆಯ 1986 ರ ಬ್ಯಾಚ್ ಅಧಿಕಾರಿ. ಅವರು ಪ್ರಸ್ತುತ ರೈಲ್ವೆ ಮಂಡಳಿಯಲ್ಲಿ ಸದಸ್ಯ (ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ) ಸ್ಥಾನವನ್ನು ಹೊಂದಿದ್ದಾರೆ. ಸಿನ್ಹಾ ಅವರು ರೈಲ್ವೇ ಮಂಡಳಿಯ (ಸಂಚಾರ ಸಾರಿಗೆ) ಹೆಚ್ಚುವರಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅಲಹಾಬಾದ್ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಯಾದ ಜಯಾ ವರ್ಮಾ ಸಿನ್ಹಾ ಅವರು 1988 ರಲ್ಲಿ ಭಾರತೀಯ ರೈಲ್ವೆ ಸಂಚಾರ ಸೇವೆ ಗೆ ಸೇರಿದ್ದರು. ಉತ್ತರ ರೈಲ್ವೆ, ಆಗ್ನೇಯ ರೈಲ್ವೆ ಮತ್ತು ಪೂರ್ವ ರೈಲ್ವೆ ಹೀಗೆ ಮೂರು ರೈಲ್ವೆ ವಲಯಗಳಲ್ಲಿ ಕೆಲಸ ಮಾಡಿದರು. ಬಾಲಸೋರ್ ರೈಲು ಅಪಘಾತದ ನಂತರ ಜಯಾ ಅವರು ಸದಸ್ಯರಾಗಿ (ಕಾರ್ಯಾಚರಣೆಗಳು ಮತ್ತು ವ್ಯವಹಾರ ಅಭಿವೃದ್ಧಿ) ರೈಲ್ವೆಯ ಮಾಧ್ಯಮ ತೊಡಗಿಸಿಕೊಳ್ಳುವಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು.
▶ ಭಾರತದ ಕ್ಯಾನ್ಸರ್ ತಜ್ಞ ರವಿ ಕಣ್ಣನ್ ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ
: ಭಾರತದ ಕ್ಯಾನ್ಸರ್ ತಜ್ಞ ರವಿ ಕಣ್ಣನ್ ( Dr Ravi Kannan R) ಅವರು ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.2023 ನೇ ಸಾಲಿನ ಮ್ಯಾಗ್ಸೆಸೆ ಪ್ರಶಸ್ತಿ ನಾಲ್ವರಿಗೆ ಹಂಚಿಕೆಯಾಗಿದ್ದು ಅದರಲ್ಲಿ ರವಿ ಕಣ್ಣನ್ ಕೂಡ ಒಬ್ಬರು.ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಏಷ್ಯಾದ ಅತ್ಯುನ್ನತ ಪ್ರಶಸ್ತಿಯಾಗಿದ್ದು ಏಷ್ಯಾದ ನೋಬೆಲ್ ಎಂದು ಗುರುತಾಗಿದೆ. 2007 ರಿಂದ ಅಸ್ಸಾಂನ Cachar Cancer Hospital and Research Centre (CCHRC) ನಿರ್ದೇಶಕರಾಗಿರುವ ರವಿ ಕಣ್ಣನ್, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಬಡ ರೋಗಿಗಳಿಗೆ ಉಚಿತ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ಪ್ರಮುಖರಾಗಿದ್ದಾರೆ. 2007ರ ಮೊದಲು ರವಿ ಕಣ್ಣನ್ ಅವರು ಚೆನ್ನೈನ ಅಡ್ಯಾರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಸರ್ಜನ್ ಆಗಿದ್ದರು. ರವಿ ಕಣ್ಣನ್ ಜೊತೆ EUGENIO LEMOS, MIRIAM CORONEAL ಹಾಗೂ KORVI RAKSHAND ಅವರಿಗೆ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ.ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ Ramon Magsaysay Award Foundation ವತಿಯಿಂದ 1958ರಿಂದ ಕೊಡಲಾಗುತ್ತಿದೆ. ಏಷ್ಯಾದಲ್ಲಿ ಸರ್ಕಾರಿ, ಸಮುದಾಯ, ವಿದೇಶಿ ಬಾಂಧವ್ಯ, ಆರೋಗ್ಯ, ಸಾಹಿತ್ಯ, ಕಲೆ, ಪತ್ರಿಕೋದ್ಯಮ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ಕೊಡಲಾಗುತ್ತದೆ. ಫಿಲಿಪ್ಪೀನ್ಸ್ ಮಾಜಿ ಅಧ್ಯಕ್ಷ ರಾಮನ್ ಮ್ಯಾಗ್ಸೆಸೆ ಅವರ ಸ್ಮರಣಾರ್ಥ ಈ ಪ್ರಶಸ್ತಿ ಕೊಡಲಾಗುತ್ತದೆ. ಸುಮಾರು ₹ 41 ಲಕ್ಷ (50,000 USD) ನಗದನ್ನು ಹೊಂದಿರುತ್ತದೆ.
▶ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಬಂಧನ
ಜೆಟ್ ಏರ್‌ವೇಸ್ ಸ್ಥಾಪಕ ನರೇಶ್ ಗೋಯಲ್ ಅವರನ್ನು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೆಪ್ಟೆಂಬರ್ 1ರಂದು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ. ಬ್ಯಾಂಕ್‌ನಿಂದ ಸಾಲ ಪಡೆದು, ಸಾಲದ ಹಣವನ್ನು ತನ್ನದೇ ಆದ ಇತರೆ ಕಂಪನಿಗಳಿಗೆ ವರ್ಗಾವಣೆ ಮಾಡಿರುವ ಆರೋಪದಲ್ಲಿ ಅವರನ್ನು ಬಂಧಿಸಲಾಗಿದೆ.ಕೆಲವು ಗಂಟೆಗಳ ಕಾಲ ಇ.ಡಿ ಕಚೇರಿಯಲ್ಲಿ ಗೋಯಲ್ ಅವರನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಮನಿ ಲಾಂಡರಿಂಗ್ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
▶ಆದಾಯ, ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ಮತ್ತೆ ನಂ. 2
ಆಗಸ್ವ್‌ನಲ್ಲಿ (ಜಿಎಸ್‌ಟಿ) ಆದಾಯ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 11ರಷ್ಟು ಏರಿಕೆ ಕಂಡಿದೆ. ಸುಧಾರಿತ ತೆರಿಗೆ ವ್ಯವಸ್ಥೆ ಮತ್ತು ವಂಚನೆಗಳನ್ನು ನಿಗ್ರಹಿಸುವ ಸರಕಾರದ ಕ್ರಮಗಳಿಂದಾಗಿ ತೆರಿಗೆ ಸಂಗ್ರಹ ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚುತ್ತಿದ್ದು, ಆಗಸ್ಟ್‌ನಲ್ಲಿ 1.59 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲಿಯೇ ಕರ್ನಾಟಕ ನಂ. 2 ಸ್ಥಾನದಲ್ಲಿದೆ. ಆಗಸ್ಟ್‌ನಲ್ಲಿ ತೆರಿಗೆ ಸಂಗ್ರಹ ಶೇ. 16ರಷ್ಟು ವೃದ್ಧಿಯಾಗಿದ್ದು 11,116 ಕೋಟಿ ರೂ.ಗೆ ಮುಟ್ಟಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ 9,583 ಕೋಟಿ ರೂ. ಸಂಗ್ರಹವಾಗಿತ್ತು.ಅತಿ ಹೆಚ್ಚಿನ ಜಿಎಸ್‌ಟಿ ಸಂಗ್ರಹದ ರಾಜ್ಯವಾಗಿ ತನ್ನ ಸ್ಥಾನವನ್ನು ಮಹಾರಾಷ್ಟ್ರ ಕಾಯ್ದುಗೊಂಡಿದೆ. ಆಗಸ್ಟ್‌ನಲ್ಲಿ ತೆರಿಗೆ ಸಂಗ್ರಹ ಶೇ. 23ರಷ್ಟು ಏರಿಕೆಯಾಗಿದ್ದು 23,282 ಕೋಟಿ ರೂ.ಗೆ ಮುಟ್ಟಿದೆ. 1.59 ಲಕ್ಷ ಕೋಟಿ ರೂ. ಸಂಗ್ರಹ2022ರ ಆಗಸ್ವ್‌ನಲ್ಲಿ ಜಿಎಸ್‌ಟಿ ಸಂಗ್ರಹ 1.43 ಲಕ್ಷ ಕೋಟಿ ರೂ.ಗಳಷ್ಟಿತ್ತು. 2023ರ ಆಗಸ್ಟ್‌ನಲ್ಲಿನ ಒಟ್ಟು ಜಿಎಸ್‌ಟಿ ಆದಾಯವಾದ 1,59,069 ಕೋಟಿ ರೂ.ಗಳಲ್ಲಿ ಕೇಂದ್ರ ಜಿಎಸ್‌ಟಿ 28,328 ಕೋಟಿ ರೂ.ಗಳಷ್ಟಿದೆ. ರಾಜ್ಯ ಜಿಎಸ್‌ಟಿ 35,794 ಕೋಟಿ ರೂ., ಇಂಟಿಗ್ರೇಟೆಡ್ ಜಿಎಸ್‌ಟಿ 83,251 ಕೋಟಿ ರೂ. (ಸರಕುಗಳ ಆಮದು ಸೇರಿದಂತೆ 43,550 ಕೋಟಿ ರೂ. ಸಂಗ್ರಹ) ಸಂಗ್ರಹವಾಗಿದೆ. ಅಲ್ಲದೇ, ಇದೇ ಅವಧಿಯಲ್ಲಿ 11,695 ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ 1,016 ಕೋಟಿ ರೂ. ಸೇರಿದಂತೆ) ಸುಂಕವನ್ನು ವಸೂಲಿ ಮಾಡಲಾಗಿದೆ.
▶ಕಚ್ಚಾ ಪೆಟ್ರೋಲಿಯಂ ಮೇಲಿನ ತೆರಿಗೆ ಕಡಿತ
ಕೇಂದ್ರ ಸರ್ಕಾರ ಶುಕ್ರವಾರ ಕಚ್ಚಾ ಪೆಟ್ರೋಲಿಯಂ ಮೇಲಿನ ತೆರಿಗೆಯನ್ನು ಪ್ರತಿ ಟನ್ಗೆ 6,700 ರೂ.ಗೆ ಇಳಿಸಿದೆ. ಈ ಹೊಸ ಬೆಲೆ ಸೆಪ್ಟೆಂಬರ್ 2 ರಿಂದ ಅನ್ವಯವಾಗಲಿದೆ. ಈ ಹಿಂದೆ ಆಗಸ್ಟ್ 14 ರಂದು ಸರ್ಕಾರವು ದೇಶೀಯ ಕಚ್ಚಾ ಪೆಟ್ರೋಲಿಯಂ ಮೇಲೆ ಪ್ರತಿ ಟನ್ಗೆ 7,100 ರೂ.ಗಳ ತೆರಿಗೆಯನ್ನು ನಿಗದಿಪಡಿಸಿತ್ತು. ಸರ್ಕಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಕೇಂದ್ರ ಸರ್ಕಾರವು ಡೀಸೆಲ್ ರಫ್ತು ಮೇಲಿನ ತೆರಿಗೆಯನ್ನು ಪ್ರತಿ ಲೀಟರ್ಗೆ 5.50 ರೂ.ಗಳಿಂದ 6 ರೂ.ಗೆ ಹೆಚ್ಚಿಸಿದೆ. ಅದೇ ಸಮಯದಲ್ಲಿ, ಜೆಟ್ ಇಂಧನ ಅಥವಾ ಎಟಿಎಫ್ ಮೇಲಿನ ಸುಂಕವನ್ನು ದ್ವಿಗುಣಗೊಳಿಸಲಾಗುವುದು, ಇದು ಈಗ 2 ರೂ.ಗಳಿಂದ 4 ರೂ.ಗೆ ಹೆಚ್ಚಾಗುತ್ತದೆ.
▶ಪುಸ್ತಕಗಳ ಮುದ್ರಣ ಮತ್ತು ನೋಂದಣಿ ಕಾಯಿದೆ, 1867ರ ತಿದ್ದುಪಡಿಗಳ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದೆ.
▶ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪ್ರಕಾರ ಅಸ್ಸಾಂನಲ್ಲಿ ಬಾಲ್ಯ ವಿವಾಹಗಳ ವಿರುದ್ಧದ ಅಭಿಯಾನವನ್ನು ಸೆಪ್ಟೆಂಬರ್‌ನಲ್ಲಿ ಮರುಪ್ರಾರಂಭಿಸಲಾಗುವುದು.
▶ನವದೆಹಲಿಯಿಂದ ಅಮೃತ ಕಲಶ ಯಾತ್ರೆಗೆ ಗೃಹ ಸಚಿವ ಅಮಿತ್ ಶಾ ಚಾಲನೆ.
ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ – ASI ‘ಅಡಾಪ್ಟ್ ಎ ಹೆರಿಟೇಜ್ 2.0’ ಕಾರ್ಯಕ್ರಮವನ್ನು ಪ್ರಾರಂಭಿಸಿತು.
▶ಆಗಸ್ಟ್‌ನಲ್ಲಿ ಭಾರತದ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು ವಾರ್ಷಿಕ ಆಧಾರದ ಮೇಲೆ 11 ಪ್ರತಿಶತದಷ್ಟು ಬೆಳೆದಿದೆ.
▶ಭಾರತದಲ್ಲಿ ಒಂದು ತಿಂಗಳಲ್ಲಿ ಮೊದಲ ಬಾರಿಗೆ 10 ಬಿಲಿಯನ್ UPI ವಹಿವಾಟುಗಳನ್ನು ನಡೆಸಲಾಗಿದೆ.
#CurrentAffairs, #DailyCurrentAffairs, #TodayCurrentAffairs, #CurrentAffairs, #SpardhaTimes, #CurrentAffairsToday, #CAToday, #ಪ್ರಚಲಿತವಿದ್ಯಮಾನಗಳು, #ಪ್ರಚಲಿತಘಟನೆಗಳು