ಇಂದಿನ ಪ್ರಚಲಿತ ವಿದ್ಯಮಾನಗಳು / 08-07-2025 (Today’s Current Affairs)
ಇಂದಿನ ಪ್ರಚಲಿತ ವಿದ್ಯಮಾನಗಳು / Today’s Current Affairs
ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಹೆಸರು ನಾಮ ನಿರ್ದೇಶನ ಮಾಡಿದ ಇಸ್ರೇಲ್
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ನೊಬೆಲ್ ಶಾಂತಿ (Nobel Peace Prize) ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಾರೆ. ಸೋಮವಾರ ಶ್ವೇತಭವನದಲ್ಲಿ ನಡೆದ ಭೋಜನಕೂಟದ ಸಂದರ್ಭದಲ್ಲಿ, ನೆತನ್ಯಾಹು ಅವರು ನೊಬೆಲ್ ಸಮಿತಿಗೆ ಕಳುಹಿಸಿದ ನಾಮನಿರ್ದೇಶನ ಪತ್ರದ ಪ್ರತಿಯನ್ನು ಸಹ ಹಸ್ತಾಂತರಿಸಿದರು.
ಟ್ರಂಪ್ ಅವರು ಜಗತ್ತಿನಲ್ಲಿ ಈಗ ಶಾಂತಿ ಮಂತ್ರವನ್ನು ಜಪಿಸುತ್ತಿದ್ದಾರೆ. ವಿಶೇಷವಾಗಿ ಈಗ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲು ಟ್ರಂಪ್ ಬಹಳಷ್ಟು ಶ್ರಮಿಸುತ್ತಿದ್ದಾರೆ. ಟ್ರಂಪ್ ಅವರ ಈ ಕೆಲಸಕ್ಕೆ ಎಲ್ಲಾ ಇಸ್ರೇಲಿಗಳು ಮಾತ್ರವಲ್ಲದೆ,ಯಹೂದಿ ಜನರು ಮತ್ತು ಪ್ರಪಂಚದಾದ್ಯಂತದ ಅನೇಕ ಅಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದರು.
ಭಾರತದ ಜೊತೆಗಿನ ಯುದ್ಧವನ್ನು ನಿಲ್ಲಿಸಿದ್ದಕ್ಕೆ ಪಾಕಿಸ್ತಾನ ಸಹ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿತ್ತು.ಇಲ್ಲಿಯವರೆಗೆ ಅಮೆರಿಕದ ಮೂವರು ಅಧ್ಯಕ್ಷರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದಾರೆ. 1906 ರಲ್ಲಿ ಥಿಯೋಡರ್ ರೂಸ್‌ವೆಲ್ಟ್, 1919 ರಲ್ಲಿ ವುಡ್ರೋ ವಿಲ್ಸನ್ ಮತ್ತು 2009 ರಲ್ಲಿ ಬರಾಕ್ ಒಬಾಮಾ ಅವರಿಗೆ ನೊಬೆಲ್ ಸಿಕ್ಕಿದೆ.
23 ಲಕ್ಷಕ್ಕೆ ರೂ.ಗೆ ಸಿಗುತ್ತೆ ಯುಎಇ ಜೀವಿತಾವಧಿ ‘ಗೋಲ್ಡನ್ ವೀಸಾ’
ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಅತಿದೊಡ್ಡ ವಲಸಿಗ ಸಮುದಾಯಗಳಲ್ಲಿ ಒಂದಾಗಿರುವ ಭಾರತೀಯ ಪ್ರಜೆಗಳಿಗೆ ನಾಮನಿರ್ದೇಶನದ ಆಧಾರದ ಮೇಲೆ ಕೆಲವು ಷರತ್ತುಗಳೊಂದಿಗೆ ಹೊಸ ರೀತಿಯ ಗೋಲ್ಡನ್ ವೀಸಾ ಪರಿಚಯಿಸಿದೆ. ‘ಹೊಸ ನಾಮನಿರ್ದೇಶನ ಆಧಾರಿತ ವೀಸಾ ನೀತಿ’ ಅಡಿಯಲ್ಲಿ, ಭಾರತೀಯರು AED 1,00,000 (ಸುಮಾರು 23.30 ಲಕ್ಷ ರೂ.) ಶುಲ್ಕ ಪಾವತಿಸಿ ಯುಎಇ ಗೋಲ್ಡನ್ ವೀಸಾ ಪಡೆಯಬಹುದು.ಇದು ಜೀವಿತಾವಧಿ ವರೆಗಿನ ವೀಸಾ ಆಗಿದೆ. ಸುಮಾರು 5,000 ಕ್ಕೂ ಹೆಚ್ಚು ಭಾರತೀಯರು ನಾಮನಿರ್ದೇಶನ ಆಧಾರಿತ ವೀಸಾಗೆ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ಯುಎಇ ಆಡಳಿತ ತಿಳಿಸಿದೆ.
ಗೋಲ್ಡನ್ ವೀಸಾದ ಪ್ರಯೋಜನ ಏನು?
ಈ ವೀಸಾ ಪಡೆದ ನಂತರ ಒಬ್ಬರು ತಮ್ಮ ಕುಟುಂಬ ಸದಸ್ಯರನ್ನು ದುಬೈಗೆ ಕರೆತರುವ ಸ್ವಾತಂತ್ರ್ಯವನ್ನು ಪಡೆಯುತ್ತಾರೆ. ವೀಸಾ ಆಧರಿಸಿ ಸೇವಕರು ಮತ್ತು ಚಾಲಕರನ್ನು ನೇಮಿಸಿಕೊಳ್ಳಬಹುದು. ಯುಎಇಯಲ್ಲಿ ಯಾವುದೇ ವ್ಯವಹಾರ ಅಥವಾ ವೃತ್ತಿಪರ ಕೆಲಸವನ್ನು ಮಾಡಬಹುದು. ಆದರೆ, ಆಸ್ತಿ ಮಾರಾಟ ಅಥವಾ ವಿಭಜನೆಯ ಸಂದರ್ಭದಲ್ಲಿ ನಾಮನಿರ್ದೇಶಿತ ಆಧಾರಿತ ವೀಸಾ ಶಾಶ್ವತವಾಗಿ ಉಳಿಯುತ್ತದೆ. ಅಮೆರಿಕದ ಗೋಲ್ಡನ್ ವೀಸಾ ದುಬಾರಿಯಾಗಿದ್ದು, ಇದಕ್ಕೆ ಹೋಲಿಸಿದರೆ ಯುಎಇ ಗೋಲ್ಡನ್ ವೀಸಾ ಕೈಗೆಟುಕುವ ದರದಲ್ಲಿದೆ.
ಐಸಿಸಿ ಹೊಸ ಸಿಇಒ ಆಗಿ ಸಂಜೋಗ್ ಗುಪ್ತಾ ನೇಮಕ
ಸಂಜೋಗ್ ಗುಪ್ತಾ ಅವರನ್ನು ಸೋಮವಾರ ಜಯ್ ಶಾ ನೇತೃತ್ವದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ನೇಮಿಸಲಾಯಿತು. ಜಿಯೋಸ್ಟಾರ್‌ನಲ್ಲಿ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದ ಗುಪ್ತಾ, ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹೊಸ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಐಸಿಸಿ 25 ದೇಶಗಳಿಂದ 2,500 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದು, ಅದರಲ್ಲಿ 12 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ ಎಂದು ಹೇಳಿದೆ.ಐಸಿಸಿ ಉಪಾಧ್ಯಕ್ಷ ಇಮ್ರಾನ್ ಖ್ವಾಜಾ, ಇಸಿಬಿ ಅಧ್ಯಕ್ಷ ರಿಚರ್ಡ್ ಥಾಂಪ್ಸನ್, ಎಸ್‌ಎಲ್‌ಸಿ ಅಧ್ಯಕ್ಷ ಶಮ್ಮಿ ಸಿಲ್ವಾ ಮತ್ತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರನ್ನೊಳಗೊಂಡ ನಾಮನಿರ್ದೇಶನ ಸಮಿತಿಗೆ ನಾಮನಿರ್ದೇಶನಗಳನ್ನು ಕಳುಹಿಸಲಾಗಿತ್ತು. ಅವರು ಗುಪ್ತಾ ಅವರನ್ನು ಶಿಫಾರಸು ಮಾಡಿದರು. ನಂತರ ಐಸಿಸಿ ಅಧ್ಯಕ್ಷ ಜಯ್ ಶಾ ಶಿಫಾರಸನ್ನು ಅನುಮೋದಿಸಿದರು, ಇದನ್ನು ಪೂರ್ಣ ಐಸಿಸಿ ಮಂಡಳಿಯು ಅನುಮೋದಿಸಿತು.
ಅವರು ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು 2010 ರಲ್ಲಿ ಸ್ಟಾರ್ ಇಂಡಿಯಾ (ಈಗ ಜಿಯೋಸ್ಟಾರ್) ಸೇರಿದರು. ವರ್ಷಗಳಲ್ಲಿ, ಅವರು 2020 ರಲ್ಲಿ ಡಿಸ್ನಿ ಮತ್ತು ಸ್ಟಾರ್ ಇಂಡಿಯಾದಲ್ಲಿ ಕ್ರೀಡಾ ಮುಖ್ಯಸ್ಥರಾಗುವ ಮೊದಲು ವಿಷಯ, ಪ್ರೋಗ್ರಾಮಿಂಗ್ ಮತ್ತು ಕಾರ್ಯತಂತ್ರದಲ್ಲಿ ಬಹು ನಾಯಕತ್ವದ ಪಾತ್ರಗಳನ್ನು ನಿರ್ವಹಿಸಿದರು. ವಯಾಕಾಮ್18 ಮತ್ತು ಡಿಸ್ನಿ ಸ್ಟಾರ್ ವಿಲೀನದ ನಂತರ ನವೆಂಬರ್ 2024 ರಲ್ಲಿ ಗುಪ್ತಾ ಅವರನ್ನು ಜಿಯೋಸ್ಟಾರ್ ಸ್ಪೋರ್ಟ್ಸ್‌ನ ಸಿಇಒ ಆಗಿ ನೇಮಿಸಲಾಯಿತು.
ಒಂದೇ ಮ್ಯಾಚ್ನಲ್ಲಿ 34 ದಾಖಲೆ ಬರೆದ ಶುಭ್ಮನ್ ಗಿಲ್

ಎಡ್ಜ್ಬಾಸ್ಟನ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಗೆಲುವು ದಾಖಲಿಸಿತು. ಈ ಭರ್ಜರಿ ಗೆಲುವಿನ ರೂವಾರಿ ಶುಭ್ಮನ್ ಗಿಲ್. ಏಕೆಂದರೆ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 269 ರನ್ ಬಾರಿಸಿದ್ದ ಗಿಲ್, ದ್ವಿತೀಯ ಇನಿಂಗ್ಸ್ನಲ್ಲಿ 161 ರನ್ ಕಲೆಹಾಕಿದರು. ಈ ಮೂಲಕ ಭಾರತ ತಂಡವು ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಭರ್ಜರಿ ಬ್ಯಾಟಿಂಗ್ನೊಂದಿಗೆ ಗಿಲ್ ಹಲವು ದಾಖಲೆಗಳನ್ನು ಬರೆದಿರುವುದು ವಿಶೇಷ. ಆ ದಾಖಲೆಗಳ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ…
1.ಕ್ರಿಕೆಟ್ ಇತಿಹಾಸದಲ್ಲಿ ಟೆಸ್ಟ್ ಪಂದ್ಯದಲ್ಲಿ 400, ಏಕದಿನದಲ್ಲಿ 200, ಟಿ20ಐನಲ್ಲಿ 100 ರನ್ ಗಳಿಸಿದ ಏಕೈಕ ಆಟಗಾರ ಎಂಬ ವಿಶ್ವ ದಾಖಲೆ ಶುಭ್ಮನ್ ಗಿಲ್ ಪಾಲಾಗಿದೆ. (ಟೆಸ್ಟ್ 430, ಏಕದಿನದಲ್ಲಿ 208, ಟಿ20ಐನಲ್ಲಿ 126)
2.ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್ಮನ್ ಗಳಿಸಿದ ಅತ್ಯಧಿಕ ಒಟ್ಟು ಸ್ಕೋರ್ ದಾಖಲೆ ಕೂಡ ಗಿಲ್ ಹೆಸರಿಗೆ ಸೇರ್ಪಡೆಯಾಗಿದೆ. (430 ರನ್ಸ್)
3.ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ನಲ್ಲಿ ಭಾರತದ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ ರೆಕಾರ್ಡ್ ಕೂಡ ಶುಭ್ಮನ್ ಗಿಲ್ ಪಾಲಾಗಿದೆ. (430 ರನ್ಸ್)
4.ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ರನ್ಗಳಿಸಿದ ಬ್ಯಾಟರ್ ಕೂಡ ಶುಭ್ಮನ್ ಗಿಲ್. (430 ರನ್ಸ್)
5.ಟೆಸ್ಟ್ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಕಲೆಹಾಕಿದ ನಾಯಕನೆಂಬ ಹೆಗ್ಗಳಿಕೆಗೂ ಶುಭ್ಮನ್ ಗಿಲ್ ಪಾತ್ರರಾಗಿದ್ದಾರೆ. (269 ರನ್ಸ್) 6.SENA ದೇಶಗಳಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ ಭಾರತೀಯನ ದಾಖಲೆ ಕೂಡ ಗಿಲ್ ಪಾಲಾಗಿದೆ. (269 ರನ್ಸ್) (SENA = ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲೆಂಡ್, ಆಸ್ಟ್ರೇಲಿಯಾ)
7.ಟೆಸ್ಟ್ ಪಂದ್ಯವೊಂದರಲ್ಲಿ ನಾಲ್ಕು ಶತಕಗಳ ಭಾಗವಾಗಿ ಮೊದಲ ಇನ್ನಿಂಗ್ಸ್ನಲ್ಲಿ 200+ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ 100+ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಗಿಲ್ ತಮ್ಮದಾಗಿಸಿಕೊಂಡಿದ್ದಾರೆ.
8.ಎಡ್ಜ್ಬಾಸ್ಟನ್ನಲ್ಲಿ ಎರಡೂ ಇನ್ನಿಂಗ್ಸ್ಗಳಲ್ಲಿ 50+ ಗಳಿಸಿದ ಮೊದಲ ಭಾರತೀಯ ನಾಯಕ ಎಂಬ ಹಿರಿಮೆಗೂ ಗಿಲ್ ಪಾತ್ರರಾಗಿದ್ದಾರೆ.
9.ಬರ್ಮಿಂಗ್ಹ್ಯಾಮ್ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ 10ನೇ ಆಟಗಾರ ಶುಭ್ಮನ್ ಗಿಲ್. (269 ರನ್ಸ್) 10.ಎಡ್ಜ್ಬಾಸ್ಟನ್ನಲ್ಲಿ ಭಾರತೀಯ ಬ್ಯಾಟ್ಸ್ಮನ್ ಗಳಿಸಿದ ಗರಿಷ್ಠ ಸ್ಕೋರ್ ದಾಖಲೆ ಸಹ ಗಿಲ್ ಪಾಲಾಗಿದೆ. (269 ರನ್ಸ್)
11.ಮೊದಲ ಎರಡು ಟೆಸ್ಟ್ಗಳಲ್ಲಿ ಅತ್ಯಧಿಕ ರನ್ ಗಳಿಸಿದ ನಾಯಕ ಶುಭ್ಮನ್ ಗಿಲ್. (585 ರನ್ಸ್)
12.ಟೆಸ್ಟ್ ಪಂದ್ಯವೊಂದರಲ್ಲಿ 400-ರನ್ಗಳನ್ನು ಕಲೆಹಾಕಿದ ಮೊದಲ ಭಾರತೀಯ ಗಿಲ್. (269 & 161 ರನ್ಸ್)
13.ಎಡ್ಜ್ಬಾಸ್ಟನ್ನಲ್ಲಿ ಟೆಸ್ಟ್ ಪಂದ್ಯ ಗೆದ್ದ ಮೊದಲ ಭಾರತೀಯ ನಾಯಕ ಶುಭ್ಮನ್ ಗಿಲ್.
14.ನಾಯಕತ್ವದ ಚೊಚ್ಚಲ ಸರಣಿಯಲ್ಲಿ ಅತಿ ಹೆಚ್ಚು ರನ್ಗಳಿಸಿದ ಭಾರತೀಯ ಬ್ಯಾಟರ್ ಶುಭ್ಮನ್ ಗಿಲ್. (585 ರನ್ಸ್)
15.ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ನಾಯಕನೆಂಬ ದಾಖಲೆ ಕೂಡ ಗಿಲ್ ಪಾಲಾಗಿದೆ. (8 ಸಿಕ್ಸರ್ಗಳು)
16.ವಿದೇಶದಲ್ಲಿ ಟೆಸ್ಟ್ ಪಂದ್ಯಗಳಲ್ಲಿ ದ್ವಿಶತಕ ಬಾರಿಸಿದ ಮೊದಲ ಭಾರತೀಯ ನಾಯಕ ಶುಭ್ಮನ್ ಗಿಲ್.
17.ಇಂಗ್ಲೆಂಡ್ನಲ್ಲಿ ಟೆಸ್ಟ್ ಪಂದ್ಯದಲ್ಲಿ ಅತ್ಯಧಿಕ ರನ್ಗಳಿಸಿದ ಎರಡನೇ ಬ್ಯಾಟರ್ ಗಿಲ್. (430)
18.ಟೆಸ್ಟ್ ಪಂದ್ಯದಲ್ಲಿ ನಾಯಕನಾಗಿ ಎರಡನೇ ಅತಿ ಹೆಚ್ಚು ಬೌಂಡರಿ ಬಾರಿಸಿದ ವಿಶ್ವ ದಾಖಲೆ ಶುಭ್ಮನ್ ಗಿಲ್ ಹೆಸರಿಗೆ ಸೇರ್ಪಡೆಯಾಗಿದೆ. (54 ಫೋರ್)
19.ಒಂದೇ ಟೆಸ್ಟ್ನಲ್ಲಿ ಎರಡು ಬಾರಿ 150+ ಸ್ಕೋರ್ಗಳನ್ನು ಗಳಿಸಿದ ವಿಶ್ವ ಎರಡನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಯನ್ನು ಗಿಲ್ ತಮ್ಮದಾಗಿಸಿಕೊಂಡಿದ್ದಾರೆ.
20.ಇಂಗ್ಲೆಂಡ್ನಲ್ಲಿ ಅವಳಿ ಶತಕಗಳನ್ನು ಗಳಿಸಿದ ಎರಡನೇ ಭಾರತೀಯ ಎಂಬ ಹಿರಿಮೆಗೂ ಗಿಲ್ ಪಾತ್ರರಾಗಿದ್ದಾರೆ.
21.ಇಂಗ್ಲೆಂಡ್ನಲ್ಲಿ 3 ಶತಕ ಸಿಡಿಸಿದ 3ನೇ ಕ್ಯಾಪ್ಟನ್ ಎಂಬ ಹೆಗ್ಗಳಿಕೆಯನ್ನು ಗಿಲ್ ತಮ್ಮದಾಗಿಸಿಕೊಂಡಿದ್ದಾರೆ. (4 ಇನ್ನಿಂಗ್ಸ್ಗಳಲ್ಲಿ 3)
22.ಟೆಸ್ಟ್ ಪಂದ್ಯದಲ್ಲಿ 250+ & 100+ ಗಳಿಸಿದ ವಿಶ್ವದ 3ನೇ ಬ್ಯಾಟರ್ ಎಂಬ ದಾಖಲೆಯನ್ನು ಗಿಲ್ ನಿರ್ಮಿಸಿದ್ದಾರೆ.
23.ಟೆಸ್ಟ್ ಪಂದ್ಯದಲ್ಲಿ ಅವಳಿ ಶತಕಗಳನ್ನು ಬಾರಿಸಿದ 3ನೇ ಭಾರತೀಯ ನಾಯಕ ಎಂಬ ಹಿರಿಮೆಗೂ ಗಿಲ್ ಪಾತ್ರರಾಗಿದ್ದಾರೆ.
24.ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ 3ನೇ ಕಿರಿಯ ನಾಯಕ ಶುಭ್ಮನ್ ಗಿಲ್. (25 ವರ್ಷ 291 ದಿನ)
25.ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅವಳಿ ಶತಕಗಳನ್ನು ಬಾರಿಸಿದ ವಿಶ್ವದ 3ನೇ ಕ್ಯಾಪ್ಟನ್ ಶುಭ್ಮನ್ ಗಿಲ್.
26.ಟೆಸ್ಟ್ ಮತ್ತು ಏಕದಿನ ಪಂದ್ಯಗಳೆರಡರಲ್ಲೂ ದ್ವಿಶತಕಗಳನ್ನು ಬಾರಿಸಿದ ವಿಶ್ವದ 5ನೇ ಆಟಗಾರ ಗಿಲ್. (ಟೆಸ್ಟ್ಗಳಲ್ಲಿ 269, ODIನಲ್ಲಿ 208)
27.ಟೆಸ್ಟ್ ಪಂದ್ಯವೊಂದರಲ್ಲಿ ಅವಳಿ ಶತಕಗಳನ್ನು ಬಾರಿಸಿದ 3ನೇ ಭಾರತೀಯ ನಾಯಕನೆಂಬ ದಾಖಲೆ ಗಿಲ್ ಪಾಲಾಗಿದೆ.
28.ಎಡ್ಜ್ಬಾಸ್ಟನ್ನಲ್ಲಿ ನಡೆದ ಟೆಸ್ಟ್ ಇನ್ನಿಂಗ್ಸ್ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ಗಳಿಸಿದ 5ನೇ ಬ್ಯಾಟರ್ ಶುಭ್ಮನ್ ಗಿಲ್. (269 ರನ್ಸ್)
29.ಟೆಸ್ಟ್ನಲ್ಲಿ ಭಾರತೀಯ ಬ್ಯಾಟ್ಸ್ಮನ್ನಿಂದ ಗಳಿಸಿದ 7ನೇ ಅತ್ಯಧಿಕ ವೈಯಕ್ತಿಕ ಸ್ಕೋರ್ನ ದಾಖಲೆ ಕೂಡ ಗಿಲ್ ಪಾಲಾಗಿದೆ. (269 ರನ್ಸ್)
30.ಇಂಗ್ಲೆಂಡ್ನಲ್ಲಿ ಪ್ರವಾಸಿ ಬ್ಯಾಟ್ಸ್ಮನ್ ಗಳಿಸಿದ 8ನೇ ಅತ್ಯಧಿಕ ವೈಯಕ್ತಿಕ ಸ್ಕೋರ್ ಶುಭ್ಮನ್ ಗಿಲ್ ಬ್ಯಾಟ್ನಿಂದ ಮೂಡಿಬಂದಿದೆ. (269 ರನ್ಸ್)
31.ಒಂದೇ ಪಂದ್ಯದಲ್ಲಿ 200 ಮತ್ತು 100 ರನ್ಗಳಿಸಿದ ವಿಶ್ವ 9ನೇ ಬ್ಯಾಟ್ಸ್ಮನ್ ಶುಭ್ಮನ್ ಗಿಲ್.
32.ಟೆಸ್ಟ್ ಪಂದ್ಯವೊಂದರಲ್ಲಿ ಅವಳಿ ಶತಕಗಳನ್ನು ಬಾರಿಸಿದ 9ನೇ ಭಾರತೀಯ ಬ್ಯಾಟ್ಸ್ಮನ್ ಗಿಲ್.
33.ವಿದೇಶಿ ಟೆಸ್ಟ್ ಪಂದ್ಯವನ್ನು ಗೆದ್ದ ಅತ್ಯಂತ ಕಿರಿಯ ಭಾರತೀಯ ನಾಯಕನೆಂಬ (25 ವರ್ಷ 301 ದಿನ) ದಾಖಲೆ ಶುಭ್ಮನ್ ಗಿಲ್ ಪಾಲಾಗಿದೆ.
34.SENA ಟೆಸ್ಟ್ಗಳಲ್ಲಿ POTM ಗೆದ್ದ 8ನೇ ಭಾರತೀಯ ನಾಯಕನೆಂಬ ಹಿರಿಮೆಗೂ ಶುಭ್ಮನ್ ಗಿಲ್ ಪಾತ್ರರಾಗಿದ್ದಾರೆ.
ಕನ್ನಡದಲ್ಲಿ ಪ್ರಚಲಿತ ವಿದ್ಯಮಾನಗಳು (Current Affairs in Kannada 2025) |
Current Affairs Kannada Quiz Test / ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ |
- ಇಂದಿನ ಪ್ರಚಲಿತ ವಿದ್ಯಮಾನಗಳು / 12-07-2025 (Today’s Current Affairs)
- ICC T20 World Cup 2026 : ಟಿ20 ವಿಶ್ವಕಪ್ ಕ್ರಿಕೆಟ್ಗೆ ಅರ್ಹತೆ ಪಡೆದ ಇಟಲಿ, ನೆದರ್ಲ್ಯಾಂಡ್ಸ್
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (12-07-2025)
- ಇಂದಿನ ಪ್ರಚಲಿತ ವಿದ್ಯಮಾನಗಳು / 11-07-2025 (Today’s Current Affairs)
- Richest Indians in U.S. : ಅಮೇರಿಕಾದಲ್ಲಿ ಟಾಪ್-10 ಶ್ರೀಮಂತ ಭಾರತೀಯರ ಪಟ್ಟಿ