Current AffairsSpardha Times

ಇಂದಿನ ಪ್ರಚಲಿತ ವಿದ್ಯಮಾನಗಳ ಹೈಲೈಟ್ಸ್ / 21-05-2021

Share With Friends

# ತರುಣ್​ ತೇಜ್​ಪಾಲ್ ನಿರ್ದೋಷಿ  


ತಹಲ್ಕಾ ನಿಯತಕಾಲಿಕದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ ಪಾಲ್ ಅತ್ಯಾಚಾರ ಪ್ರಕರಣದಲ್ಲಿ ನಿರ್ದೋಷಿ ಎಂದು ಗೋವಾ ನ್ಯಾಯಾಲಯ ಆದೇಶ ಪ್ರಕಟಿಸಿದೆ. 2013 ರಲ್ಲಿ ನಿಯತಕಾಲಿಕೆ ಗೋವಾದ ಪಂಚತಾರಾ ಹೋಟೆಲ್ ನಲ್ಲಿ ಆಯೋಜಿಸಿದ್ದ ವೇಳೆ ಲಿಫ್ಟ್ ನೊಳಗೆ ತನ್ನ ಸಹದ್ಯೋಗಿಯೊಬ್ಬರಿಗೆ ತರುಣ್ ತೇಜ್ ಪಾಲ್ ಅತ್ಯಾಚಾರ ಮಾಡಿದ್ದರು ಎಂದು ಆರೋಪಿಸಲಾಗಿತ್ತು. 8 ವರ್ಷಗಳ ಬಳಿಕ ಅತ್ಯಾಚಾರ ಪ್ರಕರಣದಲ್ಲಿ ತರುಣ್ ತೇಜ್ ಪಾಲ್ ನಿರ್ದೋಷಿ ಎಂದು ಗೋವಾ ಸೆಷನ್ಸ್ ನ್ಯಾಯಾಲಯ ಆದೇಶ ಪ್ರಕಟಿಸಿದೆ.

# ಶಾಲೆಗಳಲ್ಲಿ ಯೋಗ ಕಲಿಸಲು ಅನುಮತಿ : 
ಅಮೆರಿಕಾದ ಅಲಬಾಮಾ ರಾಜ್ಯದ ಶಾಲೆಗಳಲ್ಲಿ ಯೋಗ ಕಲಿಸಲು ಮತ್ತೆ ಅನುಮತಿ ನೀಡಲಾಗಿದೆ. ಶಾಲೆಗಳಲ್ಲಿ ಭಾರತೀಯ ಮೂಲದ ಯೋಗ ಕಲಿಕೆಗೆ ಅವಕಾಶ ಕಲ್ಪಿಸುವ ಕಾಯ್ದೆಗೆ ಅಲ್ಲಿನ ಗವರ್ನರ್ ಕೇ ಐವೇ ಅಂಕಿತ ಹಾಕಿದ್ದಾರೆ. ಯೋಗದಲ್ಲಿ ಹಿಂದೂ ಸಂಪ್ರದಾಯದಂತೆ ನಮಸ್ಕಾರ ಮಾಡುವ ಪದ್ಧತಿ ಇದ್ದ ಕಾರಣ ಈ ಹಿಂದೆ ಶಾಲೆಗಳಲ್ಲಿ ಯೋಗ ಕಲಿಸಲು ನೆಷೇಧ ವಿಧಿಸಲಾಗಿತ್ತು. ಇದೀಗ ಮತ್ತೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗ ಕಲಿಸಲು ಅನುಮತಿ ನೀಡಲಾಗಿದ್ದು, ಈ ನಿಯಮ ಬರುವ ಆಗಷ್ಟ್‍ನಿಂದ ಜಾರಿಗೆ ಬರಲಿದೆ.

# ಪ್ರಪ್ರಥಮ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಚ್ ನಿಧನ


ದೇಶದ ಪ್ರಪ್ರಥಮ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಬಾಕ್ಸಿಂಗ್ ತರಬೇತುದಾರ ಒ.ಪಿ.ಭಾರದ್ವಾಜ್ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. 1968 ರಿಂದ 1989 ರವರೆಗೆ ರಾಷ್ಟ್ರೀಯ ಬಾಕ್ಸಿಂಗ್ ತಂಡದ ಕೋಚ್ ಆಗಿದ್ದ ಅವರ ಗರಡಿಯಲ್ಲಿ ಪಳಗಿದ್ದ ಹಲವಾರು ಮಂದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ನಾಡಿಗೆ ಕೀರ್ತಿ ತಂದಿದ್ದಾರೆ.

# ‘ಚಿಪ್ಕೊ ಚಳವಳಿ’ ಪ್ರವರ್ತಕ ಸುಂದರಲಾಲ್‌ ಬಹುಗುಣ ನಿಧನ


ಖ್ಯಾತ ಪರಿಸರವಾದಿ ಹಾಗೂ ‘ಚಿಪ್ಕೊ ಚಳವಳಿ’ ಪ್ರವರ್ತಕ ಸುಂದರಲಾಲ್‌ ಬಹುಗುಣ ಅವರು ಕೋವಿಡ್‌-19ನಿಂದಾಗಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಬೃಹತ್‌ ಅಣೆಕಟ್ಟು, ಕೈಗಾರಿಕೆ ಮತ್ತು ರಸ್ತೆಗಳ ನಿರ್ಮಾಣಕ್ಕಾಗಿ ಅರಣ್ಯ ನಾಶ ಆಗುತ್ತಿರುವುದನ್ನು ತಡೆಯಲೆಂದು 1973ರಲ್ಲಿ ಚಿಪ್ಕೊ ಚಳವಳಿ ಆರಂಭವಾಗಿತ್ತು. ಉತ್ತರ ಪ್ರದೇಶದಲ್ಲಿ ಈ ಚಳವಳಿಗೆ ಪರಿಸರವಾದಿ ಸುಂದರ್‌ ಲಾಲ್‌ ಬಹುಗುಣ ನಾಂದಿ ಹಾಡಿದ್ದರು.

ಪರಿಸರ ಕಾರ್ಯಕರ್ತರಾಗಿದ್ದ ಸುಂದರ್ ಲಾಲ್ ಬಹುಗುಣ, ಕಾಡುಗಳು ಮತ್ತು ಹಿಮಾಲಯ ಪರ್ವತಗಳ ನಾಶವನ್ನು ತಪ್ಪಿಸಲು ಗ್ರಾಮಸ್ಥರ ಮನವೊಲಿಸಲು ಶಿಕ್ಷಣ ನೀಡುವ ಸಲುವಾಗಿ ತಮ್ಮ ಜೀವನವನ್ನೇ ಕಳೆದರು. ಬಹುಗುಣ ಅವರ ಪ್ರಯತ್ನದಿಂದಾಗಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಮರಗಳನ್ನು ಕತ್ತರಿಸುವುದಕ್ಕೆ ನಿಷೇಧ ಹೇರಿದರರು. “ಪರಿಸರ ವಿಜ್ಞಾನ ಶಾಶ್ವತ ಆರ್ಥಿಕತೆ” ಎಂಬುದೇ ಬಹುಹುಣ ಅವರ ಘೋಷಣೆಯಾಗಿತ್ತು. ಸುಂದರ್ ಲಾಲ್ ಬಹುಗುಣರವರು ಉತ್ತರಖಂಡದ ತೆಹ್ರಿ ಬಳಿ ಮರೊಡ ಎಂಬ ಹಳ್ಳಿಯಲ್ಲಿ 9 ಜನವರಿ 1927ರಂದು ಜನಿಸಿದರು. ತನ್ನ ಹದಿಮೂರನೇ ವಯಸ್ಸಿನಲ್ಲಿ ಶ್ರೀ ದೇವ್ ಸುಮನ್ ರವರ ಮಾರ್ಗದರ್ಶನದಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಪ್ರಾರಂಭಿಸಿದರು.

# ಚಿಪ್ಕೊ ಚಳುವಳಿ :
ಚಿಪ್ಕೊ ಚಳುವಳಿಯು ಕಾಡು ಪ್ರದೇಶ ಹಾಗೂ ಕಾಡಿನ ಮರಗಳನ್ನು ರಕ್ಷಿಸಲು ಉತ್ತರಪ್ರದೇಶದಲ್ಲಿ 26 ಮಾರ್ಚ್ 1974ರಂದು ಪ್ರಾರಂಭಿಸಿದರು. ಹಳ್ಳಿಯಿಂದ ಹಳ್ಳಿಗೆ ಪ್ರಯಾಣ ಬೆಳೆಸುವ ಮೂಲಕ ಚಳುವಳಿಗೆ ಬೆಂಬಲವನ್ನು ಪಡೆದರು. ಚಿಪ್ಕೊ ಚಳುವಳಿಯು, ಕರ್ನಾಟಕದಲ್ಲಿ ಅಪ್ಪಿಕೊ ಚಳುವಳಿಗೆ ಸ್ಫೂರ್ತಿಯನ್ನು ನೀಡಿತು. ಬಹುಗುಣರವರು ‘ಪರಿಸರವು ಶಾಶ್ವತ ಆರ್ಥಿಕತೆ’ ಎಂಬ ಚಿಪ್ಕೊ ಘೋಷಣೆಯನ್ನು ರಚಿಸಿದ್ದಾರೆ. ಅವರು ಚಳುವಳಿಯನ್ನು ಇನ್ನಷ್ಟು ಪ್ರಾಮುಖ್ಯಗೊಳಿಸಲು 1981ರಿಂದ 1983ರವರೆಗೆ ಹಳ್ಳಿಯಿಂದ ಹಳ್ಳಿಗೆ ಪ್ರಯಾಣ ಮಾಡಿ ಚಳುವಳಿಗೆ ಬೆಂಬಲವನ್ನು ಪಡೆದರು.

# ಪ್ರಶಸ್ತಿಗಳು :
1981ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಆದರೆ ಅದನ್ನು ನಿರಾಕರಿಸಿದರು.
1987ರಲ್ಲಿ ರೈಟ್ ಲೈವ್ಲಿಹುಡ್ ಅವಾರ್ಡ್ (ಚಿಪ್ಕೊ ಚಳುವಳಿ).
1986ರಲ್ಲಿ ಜಮ್ನಾಲಾಲ್‌ ಬಜಾಜ್‌ ಪ್ರಶಸ್ತಿ.
1989ರಲ್ಲಿ ಐಐಟಿ ರೂರ್ಕಿ ಅವರು ಡಾಕ್ಟರ್ ಆಫ್ ಸೋಷಿಯಲ್ ಸೈನ್ಸಸ್ ಗೌರವ ಪದವಿ ನೀಡಿದರು.
2009ರಲ್ಲಿ ಪರಿಸರ ಸಂರಕ್ಷಣೆಗಾಗಿ ಭಾರತ ಸರ್ಕಾರವು ಪದ್ಮ ವಿಭೂಷಣ ಪ್ರಶಸ್ತಿ ನೀಡಿದೆ

# ಕೋವಿಡ್‌ ಪ್ರತಿಕಾಯ ಗುರುತಿಸುವ ‘ಡಿಪ್‌ಕೋವನ್’ ಕಿಟ್ ಅಭಿವೃದ್ಧಿಪಡಿಸಿದ ಡಿಆರ್‌ಡಿಒ :
ರಕ್ಷಣಾ ಸಂಶೋಧನಾ ವಿಭಾಗ ಡಿಆರ್ ಡಿಒ ದೇಹದಲ್ಲಿ ಕೋವಿಡ್ -19 ಪ್ರತಿಕಾಯ ಪತ್ತೆ ಮಾಡುವ ಡಿಪ್ ಕೊವನ್ ಕಿಟ್ ಅನ್ನು ಪರಿಚಯಿಸಿದೆ. ಡಿಆರ್ ಡಿಓ ಅಡಿಯಲ್ಲಿ ರಕ್ಷಣಾ ಫಿಸಿಯಾಲಜಿ ಅಂಡ್ ಅಲೈಡ್ ಸೈನ್ಸಸ್ ಸಂಸ್ಥೆ(ಡಿಐಪಿಎಎಸ್) ಈ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ, ಎಸ್‌ಎಆರ್ ಎಸ್-ಕೋವಿ -2 ವೈರಸ್ ನ ಸ್ಪೈಕ್ ಮತ್ತು ನ್ಯೂಕ್ಲಿಯೊಕ್ಯಾಪ್ಸಿಡ್ (ಎಸ್ ಎನ್) ಪ್ರೋಟೀನ್ ಗಳನ್ನು ಪತ್ತೆ ಮಾಡುತ್ತದೆ. ಇದು ಶೇ. 97 ರಷ್ಟು ಸೂಕ್ಷ್ಮತೆ ಮತ್ತು ಶೇ.99ರಷ್ಟು ನಿರ್ದಿಷ್ಟತೆ ಹೊಂದಿದೆ. ನವದೆಹಲಿ ಮೂಲದ ಅಭಿವೃದ್ಧಿ ಮತ್ತು ಉತ್ಪಾದನಾ ರೋಗ ನಿರ್ಣಯ ಕಂಪನಿ ವ್ಯಾನ್ಗಾರ್ಡ್ ಡಯಾಗ್ನೋಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಈ ಕಿಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

# 13 ನಕ್ಸಲರ ಹತ್ಯೆ 
ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಎಟಪಲ್ಲಿ ಅರಣ್ಯ ಪ್ರದೇಶದಲ್ಲಿ ನಡೆದ ಭಾರೀ ಎನ್ ಕೌಂಟರ್ ನಲ್ಲಿ ಕನಿಷ್ಠ 13 ನಕ್ಸಲೀಯರನ್ನು ಪೊಲೀಸರು ಹತ್ಯೆ ಮಾಡಿದ್ದಾರೆ

# ಕೇಂದ್ರದ ಮಾಜಿ‌ ಸಚಿವ ಬಾಬಾಗೌಡ ಪಾಟೀಲ ನಿಧನ : 
ರೈತ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ (78) ಅನಾರೋಗ್ಯದಿಂದ ನಿಧನರಾದರು. ಬೈಲಹೊಂಗಲ ತಾಲ್ಲೂಕಿನ ಚಿಕ್ಕಬಾಗೇವಾಡಿ ಗ್ರಾಮದವರಾದ ಅವರು ರೈತ ಸಂಘದ ಮೂಲಕ ಹೋರಾಟ ಆರಂಭಿಸಿದ್ದರು. ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ 1998ರಲ್ಲಿ ಸ್ಪರ್ಧಿಸಿ ಇಲ್ಲಿ ಬಿಜೆಪಿಯ ಗೆಲುವಿನ ಖಾತೆ ಆರಂಭಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸಚಿವರೂ ಆಗಿದ್ದರು. 1989ರ ವಿಧಾನಸಭಾ ಚುನಾವಣೆಯಲ್ಲಿ ರೈತ ಸಂಘದಿಂದ ಕಿತ್ತೂರು ಮತ್ತು ಧಾರವಾಡ ಮತ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಎರಡೂ ಕಡೆಯೂ ಜಯಗಳಿಸಿದ್ದರು.

# ಆಕ್ಸ್ ಫರ್ಡ್ ವಿವಿಯ ವಿದ್ಯಾರ್ಥಿ ನಾಯಕಿಯಾದ ಅವ್ನಿ ಭೂತಾನಿ :


ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕಿಯಾಗಿ ಭಾರತೀಯ ಮೂಲದ ಅವ್ನಿ ಭೂತಾನಿ ಆಯ್ಕೆಯಾಗಿದ್ದಾರೆ. ಮಗ್ದಲೇನ್ ಕಾಲೇಜಿನಲ್ಲಿ ಮಾನವ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿರುವ ಅವ್ನಿ ಅವರು ವಿದ್ಯಾರ್ಥಿ ಒಕ್ಕೂಟಕ್ಕೆ ನಡೆದ ಉಪ ಚುನಾವಣೆಯಲ್ಲಿ ವಿದ್ಯಾರ್ಥಿ ನಾಯಕಿಯಾಗಿ ಹೊರಹೊಮ್ಮಿದ್ದಾರೆ.

ವಿದ್ಯಾರ್ಥಿ ಯೂನಿಯನ್ ಎಲೆಕ್ಷನ್‍ಗೆ 11ಕ್ಕೂ ಹೆಚ್ಚು ಮಂದಿ ಸ್ಪರ್ಧಿಸಿದ್ದರೂ ಅವ್ನಿ ಅವರು ಇತರ ಎಲ್ಲರಿಗಿಂತ ಅತ್ಯಧಿಕ ಮತ ಗಳಿಸಿ ಆಯ್ಕೆಯಾಗಿದ್ದಾರೆ. ಈ ಹಿಂದೆ ವಿದ್ಯಾರ್ಥಿ ನಾಯಕಿಯಾಗಿದ್ದ ಭಾರತೀಯ ಮೂಲದ ರಶ್ಮಿ ಸಮಂತ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್ ಒಂದರ ವಿವಾದದ ಹಿನ್ನಲೆಯಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಶ್ಮಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನವನ್ನು ಅವ್ನಿ ತುಂಬಿದ್ದಾರೆ.

# ಕೇರಳ ಆರೋಗ್ಯ ಸಚಿವೆಯಾದ ವೀಣಾ ಜಾರ್ಜ್
ಕೇರಳ ಮುಖ್ಯಮಂತ್ರಿಯಾಗಿ ಆಧಿಕಾರ ಸ್ವೀಕರಿಸಿರುವ ಪಿಣರಾಯಿ ವಿಜಯನ್ ಅವರು ಪತ್ರಕರ್ತೆಯಾಗಿ ನಂತರ ರಾಜಕಾರಣಿಯಾಗಿ ಪರಿವರ್ತನೆಯಾಗಿರುವ ವೀಣಾ ಜಾರ್ಜ್ ಅವರಿಗೆ ಆರೋಗ್ಯ ಖಾತೆ ನೀಡಿದ್ದಾರೆ. ವೀಣಾ ಅವರು ಅರ್ನಮುಲಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ತಮ್ಮ ನಾಯಕತ್ವ ಗುಣಗಳಿಗೆ ಖ್ಯಾತರಾದ ಜಾರ್ಜ್​, 15 ವರ್ಷ ಪ್ರಮುಖ ಮಲಯಾಳಂ ಚಾನೆಲ್​ಗಳಲ್ಲಿ ನ್ಯೂಸ್ ಆಯಂಖರ್​ ಆಗಿ ಜನಪ್ರಿಯರಾಗಿದ್ದು, 2016 ರಲ್ಲಿ ಮೊದಲ ಬಾರಿಗೆ ಶಾಸಕಿಯಾಗಿದ್ದರು. ಸಿಪಿಐ(ಎಂ)ನ ಪಟ್ಟನಂತಿಟ್ಟ ಪ್ರದೇಶ ಸಮಿತಿಯ ಸದಸ್ಯರಾಗಿರುವ ಅವರು, 2018 ಮತ್ತು 2019 ರಲ್ಲಿ ಪಟ್ಟನಂತಿಟ್ಟದಲ್ಲಿ ಪ್ರವಾಹ ಉಂಟಾದಾಗ ಮಾಡಿದ ಸೇವೆಗೆ ಗುರುತಿಸಲ್ಪಟ್ಟಿದ್ದಾರೆ ಎನ್ನಲಾಗಿದೆ.

error: Content Copyright protected !!