Current AffairsSpardha Times

2023ರಲ್ಲಿ ಭಾರತದಲ್ಲಿ ನಡೆದ ಟಾಪ್ 10 ರಾಜಕೀಯ ಘಟನೆಗಳು

Share With Friends

2023ರಲ್ಲಿ ಭಾರತದ ರಾಜಕಾರಣ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳ ಏಳುಬೀಳುಗಳು, ಗದ್ದಲ- ಕೋಲಾಹಲಗಳು ಸದ್ದು ಮಾಡಿವೆ. ಇನ್ನು ಕ್ರೀಡಾಪಟುಗಳ ಪ್ರತಿಭಟನೆಯಂತಹ ಘಟನೆಗಳು ರಾಜಕೀಯದ ಜತೆ ಥಳಕು ಹಾಕಿಕೊಂಡಿವೆ. ಚುನಾವಣೆಗಳು, ಸುಪ್ರೀಂಕೋರ್ಟ್ ತೀರ್ಪುಗಳು, ಸಂಸತ್‌ನಲ್ಲಿನ ಕೋಲಾಹಲಗಳು… ಹೀಗೆ ಈ ವರ್ಷದ ಆಯ್ದ ಪ್ರಮುಖ ರಾಜಕೀಯ ಘಟನೆಗಳ ಮಾಹಿತಿ ಇಲ್ಲಿದೆ.

1.ರಾಹುಲ್ ಗಾಂಧಿ ಅನರ್ಹತೆ
‘ಮೋದಿ ಸರ್‌ನೇಮ್’ ವಿವಾದದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ದೋಷಿ ಎಂದು ಗುಜರಾತ್‌ನ ಸೂರತ್ ನ್ಯಾಯಾಲಯ ತೀರ್ಪು ನೀಡಿತ್ತು. 2019ರಲ್ಲಿ ಕೋಲಾರದಲ್ಲಿ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ, ‘ಎಲ್ಲ ಕಳ್ಳರೂ ಮೋದಿ ಎಂಬ ಒಂದೇ ಸರ್‌ನೇಮ್ ಹೊಂದಿರುವುದು ಹೇಗೆ?’ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಹೇಳಿದ್ದರು. ಇದರ ವಿರುದ್ಧ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಮಾನನಷ್ಟ ದಾವೆ ಹೂಡಿದ್ದರು. ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾದ ಕಾರಣಕ್ಕೆ ರಾಹುಲ್ ಗಾಂಧಿ ಅವರನ್ನು ಮಾರ್ಚ್ ತಿಂಗಳಲ್ಲಿ ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು. ಈ ತೀರ್ಪನ್ನು ಗುಜರಾತ್ ಹೈಕೋರ್ಟ್ ಕೂಡ ಎತ್ತಿಹಿಡಿಯಿತು. ಬಳಿಕ ರಾಹುಲ್ ಗಾಂಧಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು. ಆಗಸ್ಟ್ 4ರಂದು ಸುಪ್ರೀಂಕೋರ್ಟ್, ರಾಹುಲ್ ವಿರುದ್ಧದ ಶಿಕ್ಷೆಗೆ ತಡೆ ನೀಡಿತು. ಆಗಸ್ಟ್ 7ರಂದು ಅವರ ಲೋಕಸಭೆ ಸದಸ್ಯತ್ವ ಮರಳಿ ದೊರಕಿತು.

2.ಕುಸ್ತಿಪಟುಗಳ ಪ್ರತಿಭಟನೆ
ಭಾರತೀಯ ಕುಸ್ತಿ ಸಂಸ್ಥೆ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಶರಣ್ ಅವರ ವಿರುದ್ಧ ಕೆಲವು ಕುಸ್ತಿಪಟುಗಳು ಬೃಹತ್ ಪ್ರತಿಭಟನೆಗಳನ್ನು ನಡೆಸಿದರು. ಬ್ರಿಜ್ ಭೂಷಣ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು ಎಂಬುದು ಕುಸ್ತಿಪಟುಗಳ ಆಗ್ರಹವಾಗಿತ್ತು. ಬಜರಂಗ್ ಪುನಿಯಾ, ವಿನೇಶ್ ಪೋಗಟ್, ಸಾಕ್ಷಿ ಮಲಿಕ್ ಮುಂತಾದವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು. ಇದಕ್ಕೆ ರೈತ ಸಂಘಟನೆಗಳು, ವಿಪಕ್ಷಗಳು ಬೆಂಬಲ ನೀಡಿದ್ದವು. ವಿವಾದದ ಬಳಿಕ ಕುಸ್ತಿ ಸಂಸ್ಥೆಯ ಚುನಾವಣೆಯನ್ನು ಮುಂದೂಡಲಾಗಿತ್ತು. ಇದರ ಬೆನ್ನಲ್ಲೇ ಜಾಗತಿಕ ಕುಸ್ತಿ ಸಂಸ್ಥೆಯು ಭಾರತದ ಕುಸ್ತಿ ಸಂಸ್ಥೆಯನ್ನು ಅಮಾನತು ಮಾಡಿತ್ತು. ವರ್ಷದ ಕೊನೆಯಲ್ಲಿ ಕುಸ್ತಿ ಸಂಸ್ಥೆಗೆ ಚುನಾವಣೆ ನಡೆದಿದ್ದು, ಬ್ರಿಜ್ ಭೂಷಣ್ ಅವರ ಆಪ್ತ ಸಂಜಯ್ ಸಿಂಗ್ ಅಧ್ಯಕ್ಷರಾಗಿ ಆಯ್ಕೆಯಾದರು. ಇದರಿಂದ ನೊಂದ ಸಾಕ್ಷಿ ಮಲಿಕ್, ತಾವು ಇನ್ನು ಕುಸ್ತಿ ಕ್ರೀಡೆಯನ್ನು ತ್ಯಜಿಸುವುದಾಗಿ ಪ್ರಕಟಿಸಿದರು.

3.ಮಹುವಾ ಮೊಯಿತ್ರಾ ಉಚ್ಚಾಟನೆ
ದೇಶದಲ್ಲಿ ಚರ್ಚೆಗೆ ಒಳಗಾದ ಮತ್ತೊಂದು ಘಟನೆಯೆಂದರೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡಿದ್ದು. ಗೌತಮ್ ಅದಾನಿ ವಿರುದ್ಧ ಸಂಸತ್‌ನಲ್ಲಿ ಪ್ರಶ್ನೆಗಳನ್ನು ಕೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಉದ್ದೇಶದಿಂದ ಮಹುವಾ ಅವರು ಉದ್ಯಮಿ ದರ್ಶನ್ ಹೀರಾನಂದಾನಿ ಅವರಿಂದ ಲಂಚ ಪಡೆದಿದ್ದರು. ಜತೆಗೆ ದುಬಾರಿ ಉಡುಗೊರೆಗಳನ್ನು ಸ್ವೀಕರಿಸಿದ್ದರು. ಅದಕ್ಕೆ ಪ್ರತಿಯಾಗಿ ತಮ್ಮ ಸಂಸತ್ ಖಾತೆಯ ಐಡಿಯನ್ನು ಉದ್ಯಮಿಗೆ ನೀಡಿದ್ದರು ಎಂದು ಮಹುವಾ ಅವರ ಮಾಜಿ ಗೆಳೆಯ ಜೈ ಅನಂತ್ ದೆಹಾದ್‌ರೈ ಆರೋಪಿಸಿದ್ದರು. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಈ ಬಗ್ಗೆ ಸ್ಪೀಕರ್‌ಗೆ ಪತ್ರ ಬರೆದಿದ್ದರು. ಸಂಸತ್‌ನ ನೈತಿಕ ಸಮಿತಿ ಸಲ್ಲಿಸಿದ ವರದಿ ಆಧಾರದಲ್ಲಿ ಮಹುವಾ ಅವರನ್ನು ಉಚ್ಚಾಟನೆ ಮಾಡಲಾಗಿದೆ.

4.ಕೆನಡಾ ಮತ್ತು ಅಮೆರಿಕ ಆರೋಪ
ಜಾಗತಿಕ ಮಟ್ಟದಲ್ಲಿ ಎಲ್ಲಾ ದೇಶಗಳ ಜತೆ ಉತ್ತಮ ಸಂಬಂಧ ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿರುವ ಭಾರತಕ್ಕೆ 2023ರಲ್ಲಿ ಕೆಲವು ಪ್ರಮುಖ ಹಿನ್ನಡೆಗಳಾಗಿವೆ. ಬ್ರಿಟನ್, ನ್ಯೂಜಿಲೆಂಡ್, ಕೆನಡಾ, ಅಮೆರಿಕ ಸೇರಿದಂತೆ ವಿವಿಧ ದೇಶಗಳಲ್ಲಿ ಖಲಿಸ್ತಾನಿ ಸಂಘಟನೆಗಳು ಭಾರತ ವಿರೋಧಿ ಪ್ರತಿಭಟನೆಗಳನ್ನು ನಡೆಸಿದ್ದವು. ಈ ನಡುವೆ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನ್ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್‌ನನ್ನು ಅಪರಿಚಿತರು ಗುಂಡಿಕ್ಕಿ ಕೊಂದಿದ್ದರು. ಇದರಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು. ಇದರ ಬೆನ್ನಲ್ಲೇ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿದೆ.

ಅತ್ತ ಅಮೆರಿಕದಲ್ಲಿರುವ ಮತ್ತೊಬ್ಬ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಭಾರತ ವಿಫಲ ಪ್ರಯತ್ನ ನಡೆಸಿದಾಗಿ ವರದಿಯಾಗಿದೆ. ನಿಖಿಲ್ ಗುಪ್ತಾ ಎಂಬಾತನ ಮೂಲಕ ಭಾರತ ಸರ್ಕಾರವು ಪನ್ನು ಕೊಲೆಗೆ ಸಂಚು ರೂಪಿಸಿತ್ತು ಎಂದು ಅಮೆರಿಕ ಆರೋಪಿಸಿದೆ. ಹೀಗಾಗಿ ಈ ವಿಚಾರವು ಭಾರತ- ಅಮೆರಿಕ ಸಂಬಂಧದ ಮೇಲೆ ಪರಿಣಾಮ ಬೀರಿದೆ. ಭಾರತೀಯ ನೌಕಾ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ, ಕತಾರ್‌ನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಎಂಟು ಮಂದಿಗೆ ಅಲ್ಲಿನ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿರುವುದು ಭಾರತಕ್ಕೆ ಮತ್ತೊಂದು ಸಂಕಟ ಉಂಟುಮಾಡಿದೆ. ಇಸ್ರೇಲ್‌ಗೆ ತನ್ನ ಸಬ್‌ಮೆರಿನ್ ಕುರಿತು ಮಾಹಿತಿ ನೀಡುವ ಗೂಢಚಾರಿಕೆ ನಡೆಸಿದ್ದಾರೆ ಎಂಬ ಆರೋಪದಡಿ ಬಂಧಿಸಲಾಗಿದ್ದ ನೌಕಾ ಪಡೆಯ ಮಾಜಿ ಅಧಿಕಾರಿಗಳನ್ನು ಶಿಕ್ಷೆಯಿಂದ ಪಾರುಮಾಡುವ ಸವಾಲು ಎದುರಾಗಿದೆ.

5.ದಿಲ್ಲಿ ಲಿಕ್ಕರ್ ಹಗರಣ
ದಿಲ್ಲಿಯಲ್ಲಿನ ಎಎಪಿ ಸರ್ಕಾರದ 2021-22ರ ಅಬಕಾರಿ ನೀತಿಯು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಆ ನೀತಿಯನ್ನು ಕಳೆದ ವರ್ಷವೇ ರದ್ದುಗೊಳಿಸಿದ್ದರೂ, ವಿವಾದ ಹಾಗೂ ತನಿಖೆ ಮುಂದುವರಿದಿದೆ. ಲಿಕ್ಕರ್ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದಲ್ಲಿ ತನಿಖೆ ನಡೆಸಿದ ಸಿಬಿಐ, ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಈ ವರ್ಷದ ಫೆಬ್ರವರಿಯಲ್ಲಿ ಬಂಧಿಸಿದೆ. ಈವರೆಗೂ ಅವರಿಗೆ ಜಾಮೀನು ದೊರಕಿಲ್ಲ. ಪ್ರಕರಣ ಸಂಬಂಧ ಸಿಬಿಐ ಮತ್ತು ಇಡಿ ಹಲವಾರು ದಾಳಿಗಳನ್ನು ನಡೆಸಿದ್ದವು. ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಒಮ್ಮೆ ವಿಚಾರಣೆ ನಡೆಸಲಾಗಿದ್ದು, ಮತ್ತೊಮ್ಮೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಲಾಗಿದೆ. ಕೇಜ್ರಿವಾಲ್ ಅವರನ್ನು ಬಂಧಿಸಲು ಯೋಜಿಸಲಾಗಿದೆ ಎಂದು ಎಎಪಿ ಆರೋಪಿಸಿದೆ.

6.ಜಿ20 ಶೃಂಗಸಭೆ
ಭಾರತವನ್ನು ಜಾಗತಿಕ ಮಟ್ಟದಲ್ಲಿ ಸಕಾರಾತ್ಮಕವಾಗಿ ಗಮನ ಸೆಳೆಯುವಂತೆ ಮಾಡಿದ ಘಟನೆಯೆಂದರೆ ದಿಲ್ಲಿಯಲ್ಲಿ ನಡೆದ ಜಿ20 ಶೃಂಗಸಭೆಯ ಸಫಲತೆ. ಸೆ. 9-10ರಂದು ನಡೆದ ಜಿ 20 ಶೃಂಗಸಭೆಯ 18ನೇ ಸಭೆಯ ಅಧ್ಯಕ್ಷತೆ ವಹಿಸಿದ ಭಾರತ, ಯಾವುದೇ ಲೋಪಗಳಾಗದಂತೆ ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಮೆಚ್ಚುಗೆ ಗಳಿಸಿತು. ಹೊಸದಿಲ್ಲಿ ನಾಯಕರ ಘೋಷಣೆಯನ್ನು ಯಾವುದೇ ವಿರೋಧವಿಲ್ಲದೆ ಸರ್ವಾನುಮತದಿಂದ ಅಂಗೀಕರಿಸಿದ್ದು ಈ ಸಭೆಯ ವಿಶೇಷತೆ. ಇದೇ ವೇಳೆ ಜಿ20ಗೆ ಆಫ್ರಿಕಾ ಒಕ್ಕೂಟವು ಕಾಯಂ ಸದಸ್ಯನಾಗಿ ಸೇರ್ಪಡೆಯಾಗುತ್ತಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಭಾರತ- ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ನಿರ್ಮಾಣದ ಕುರಿತು ಮಹತ್ವದ ಜಂಟಿ ಒಪ್ಪಂದ ನಡೆಯಿತು.

7.ಐಎನ್‌ಡಿಐಎ ಮೈತ್ರಿಕೂಟ ರಚನೆ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಮಣಿಸಲು ಸಮಾನ ಮನಸ್ಕ ವಿರೋಧ ಪಕ್ಷಗಳು ಸೇರಿ ಬೃಹತ್ ಮೈತ್ರಿಕೂಟ ರಚಿಸಿದವು. ಈ ಸಂಬಂಧ ಬಿಹಾರದಲ್ಲಿ ನಡೆದ ಮೊದಲ ಸಭೆಯಲ್ಲಿ 16 ಪಕ್ಷಗಳು ಭಾಗವಹಿಸಿದ್ದವು. ಬೆಂಗಳೂರಿನಲ್ಲಿ ನಡೆದ ಎರಡನೇ ಸಭೆ ಗಮನಾರ್ಹವಾಗಿತ್ತು. ಈ ಸಭೆಯಲ್ಲಿ ಮೈತ್ರಿಕೂಟಕ್ಕೆ ಐಎನ್‌ಡಿಐಎ (ಭಾರತೀಯ ರಾಷ್ಟ್ರೀಯ ವಿಕಾಸಾತ್ಮಕ ಸಮಾವೇಶಿ ಮೈತ್ರಿಕೂಟ) ಎಂಬ ಹೆಸರು ಇರಿಸಲಾಯಿತು. ಇದು ‘ಇಂಡಿಯಾ’ ಎಂಬ ಅರ್ಥ ಕೊಡಲಿದೆ ಎನ್ನುವುದು ಕಾವೇರಿದ ಚರ್ಚೆಗೆ ಕಾರಣವಾಯಿತು. ಮೂರನೇ ಸಭೆ ಮುಂಬಯಿ ಹಾಗೂ ನಾಲ್ಕನೇ ಸಭೆ ದಿಲ್ಲಿಯಲ್ಲಿ ನಡೆಯಿತು. ಭಿನ್ನಾಭಿಪ್ರಾಯ, ಟೀಕೆಗಳು, ಗೊಂದಲಗಳ ನಡುವೆ ಮೈತ್ರಿಕೂಟವನ್ನು ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಸುಮಾರು 28 ರಾಜಕೀಯ ಪಕ್ಷಗಳು ಇದರಲ್ಲಿ ಸೇರಿವೆ.

8.ಸಂಸತ್‌ನಲ್ಲಿ ದಾಳಿ
ಡಿ. 13ರಂದು ಸಂಸತ್ ಮೇಲಿನ ಉಗ್ರರ ದಾಳಿ (2001) ನಡೆದು 22 ವರ್ಷ ತುಂಬಿದ ಸಂದರ್ಭದಲ್ಲಿಯೇ ಮತ್ತೊಂದು ಅಘಾತಕಾರಿ ಘಟನೆ ನಡೆದಿದೆ. ಲೋಕಸಭೆ ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿಯೇ ಸಂದರ್ಶಕರ ಗ್ಯಾಲರಿಯಿಂದ ಇಬ್ಬರು, ಕೆಳಗೆ ಜಿಗಿದು, ಬಣ್ಣದ ಹೊಗೆಯನ್ನು ಬಿಡುಗಡೆ ಮಾಡಿದ್ದರು. ಇದೇ ವೇಳೆ ಸಂಸತ್‌ನ ಹೊರಗೆ ಮಹಿಳೆ ಸೇರಿದಂತೆ ಇಬ್ಬರು ಇದೇ ರೀತಿ ಬಣ್ಣದ ಹೊಗೆ ಸಿಡಿಸಿ ಘೋಷಣೆಗಳನ್ನು ಕೂಗಿದ್ದರು. ನಾಲ್ವರನ್ನು ಬಂಧಿಸಿದ ಪೊಲೀಸರು, ವಿಚಾರಣೆ ಬಳಿಕ ಮತ್ತೆ ಇಬ್ಬರನ್ನು ಬಂಧಿಸಿದರು. ದೇಶದ ವಿವಿಧ ಭಾಗಗಳ ಕಿಡಿಗೇಡಿಗಳು ಇದಕ್ಕೆ ಭಾಗಿಯಾಗಿದ್ದರು. ಮೈಸೂರು ಸಂಸದರ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ಪಡೆದು, ಇಬ್ಬರು ಸಂಸತ್ ಪ್ರವೇಶಿಸಿದ್ದು ಮತ್ತೊಂದು ವಿವಾದ ಸೃಷ್ಟಿಸಿದೆ. ಇದರ ತನಿಖೆ ನಡೆಯುತ್ತಿದೆ.

ಸಂಸತ್‌ನಲ್ಲಿನ ಭದ್ರತಾ ಲೋಪದ ಕುರಿತು ಅಮಿತ್ ಶಾ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿ ಗದ್ದಲ ನಡೆಸಿದ ಪ್ರತಿಪಕ್ಷಗಳ 146 ಸದಸ್ಯರನ್ನು ಲೋಕಸಭೆ ಹಾಗೂ ರಾಜ್ಯಸಭೆಗಳಿಂದ ಅಮಾನತು ಮಾಡಲಾಯಿತು. ಇಷ್ಟು ದಾಖಲೆ ಸಂಖ್ಯೆಯಲ್ಲಿ ಸಂಸದರ ಅಮಾನತು ಇತಿಹಾಸದಲ್ಲಿ ನಡೆದಿರಲಿಲ್ಲ. ಇದರ ನಡುವೆ ಕೇಂದ್ರ ಸರ್ಕಾರವು ಬ್ರಿಟಿಷರ ಕಾಲದ ಮೂರು ಅಪರಾಧ ಕಾನೂನುಗಳನ್ನು ಬದಲಿಸುವ ಮೂರು ಹೊಸ ಮಸೂದೆಗಳನ್ನು ಅಂಗೀಕರಿಸಿತು.

9.ಸುಪ್ರೀಂಕೋರ್ಟ್ ತೀರ್ಪುಗಳು
ದೇಶದ ಸುಪ್ರೀಂಕೋರ್ಟ್ ಈ ವರ್ಷದ ಅನೇಕ ಪ್ರಮುಖ ತೀರ್ಪುಗಳನ್ನು ಪ್ರಕಟಿಸಿದೆ. ಇವುಗಳಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ ಎನ್ನುವುದು ಹಾಗೂ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ಸರಿ ಎಂಬ ತೀರ್ಪುಗಳು ಗಮನ ಸೆಳೆದಿವೆ. ಮದುವೆಯ ಹಕ್ಕು ಮೂಲಭೂತ ಹಕ್ಕು ಅಲ್ಲ ಎಂದ ಸುಪ್ರೀಂಕೋರ್ಟ್, ಸಮಾನ ಲಿಂಗಿಗಳ ಮದುವೆಗೆ ಮಾನ್ಯತೆ ನೀಡಲಾಗದು ಎಂಬ ಕೇಂದ್ರದ ವಾದವನ್ನು ಎತ್ತಿ ಹಿಡಿಯಿತು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿಯನ್ನು ರದ್ದುಗೊಳಿಸಿದ 2019ರ ಕೇಂದ್ರ ಸರ್ಕಾರದ ನಿರ್ಧಾರ ಸರಿಯಾಗಿದೆ ಎಂದು ಕೋರ್ಟ್ ಹೇಳಿತು.

2016ರ ಅಪನಗದೀಕರಣ ಆದೇಶವು ಕಾನೂನುಬಾಹಿರವಲ್ಲ ಎಂದು ಸಹ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿತು. ಇನ್ನು ಚುನಾವಣಾ ಆಯುಕ್ತರ ನೇಮಕಾತಿಯು ಪ್ರಧಾನಿ, ಲೋಕಸಭೆಯ ವಿರೋಧಪಕ್ಷದ ನಾಯಕ ಮತ್ತು ಸಿಜೆಐ ಅವರನ್ನು ಒಳಗೊಂಡ ಸಮಿತಿಯಿಂದ ನಡೆಸಬೇಕು ಎಂಬುದಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಆದರೆ ವರ್ಷದ ಕೊನೆಯ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು, ಸಿಇಸಿ ಮತ್ತು ಇಸಿ ನೇಮಕಾತಿಗಳಲ್ಲಿ ಸಿಜೆಐ ಅವರನ್ನು ಹೊರಗಿಡುವ ವಿಧೇಯಕವನ್ನು ಅಂಗೀಕರಿಸಿತು.

10.ವಿಧಾನಸಭೆ ಚುನಾವಣೆಗಳು
2023ರಲ್ಲಿ ದೇಶದಲ್ಲಿ ಒಟ್ಟು 9 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆದಿವೆ. 2024ರಲ್ಲಿ ನಡೆಯುವ ಲೋಕಸಭೆ ಚುನಾವಣೆ ಮೇಲೆ ಈ ಚುನಾವಣಾ ಫಲಿತಾಂಶಗಳು ಪರಿಣಾಮ ಬೀರಲಿವೆ ಎನ್ನಲಾಗಿದೆ. ಈ ವರ್ಷದ ಆರಂಭದಲ್ಲಿ ಮೂರು ಈಶಾನ್ಯ ರಾಜ್ಯಗಳಲ್ಲಿ ಚುನಾವಣೆಗಳು ನಡೆದಿದ್ದವು. ಈ ಪೈಕಿ ತ್ರಿಪುರಾದಲ್ಲಿ ಬಿಜೆಪಿ ಹಾಗೂ ಐಪಿಎಫ್‌ಟಿ ಮೈತ್ರಿಕೂಟದ ಸರ್ಕಾರ ಮತ್ತೊಮ್ಮೆ ಚುನಾಯಿತವಾಯಿತು. ಮೇಘಾಲಯದಲ್ಲಿ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ ಮರಳಿ ಅಧಿಕಾರಕ್ಕೆ ಬಂದರೆ, ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿಪಿ ಮತ್ತು ಬಿಜೆಪಿ ಮೈತ್ರಿಕೂಟ ಪುನಃ ಗದ್ದುಗೆಗೆ ಏರಿತು. ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆ ದೇಶದ ಸಂಪೂರ್ಣ ಗಮನವನ್ನು ತನ್ನ ಕಡೆ ಸೆಳೆದುಕೊಂಡಿತ್ತು. ಈ ವೇಳೆ ಬೇರೆ ರಾಜ್ಯದಲ್ಲಿ ಚುನಾವಣೆ ಇರಲಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಇಲ್ಲಿ ಬಿಜೆಪಿ ಸರ್ಕಾರವನ್ನು ಉರುಳಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು.

ಇನ್ನು ವರ್ಷದ ಕೊನೆಯಲ್ಲಿ ನಡೆದ ಐದು ರಾಜ್ಯಗಳ ಚುನಾವಣೆ ಭಾರಿ ಸಂಚಲನ ಮೂಡಿಸಿತು. ತೆಲಂಗಾಣದಲ್ಲಿ ಸತತ ಎರಡು ವರ್ಷ ಅಧಿಕಾರದಲ್ಲಿದ್ದ ಬಿಆರ್‌ಎಸ್ ಪಕ್ಷವನ್ನು ಸೋಲಿಸಿ ಕಾಂಗ್ರೆಸ್ ಮೊದಲ ಬಾರಿ ಅಧಿಕಾರಕ್ಕೆ ಬಂದಿತು. ಆದರೆ ಅದು ಅಧಿಕಾರದಲ್ಲಿದ್ದ ರಾಜಸ್ಥಾನ ಹಾಗೂ ಛತ್ತೀಸ್‌ಗಢ ರಾಜ್ಯಗಳನ್ನು ಬಿಜೆಪಿ ಎದುರು ಕಳೆದುಕೊಂಡಿತ್ತು. ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡಿತು. ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಸೋಲು ಕಂಡು, ಜೊರಾಮ್ ಪೀಪಲ್ಸ್ ಮೂವ್‌ಮೆಂಟ್ ಅಧಿಕಾರ ಹಿಡಿಯಿತು.

2023ರಲ್ಲಿ ಜಗತ್ತಿನಲ್ಲಿ ನಡೆದ ಪ್ರಮುಖ ಘಟನೆಗಳ ಹಿನ್ನೋಟ

Leave a Reply

Your email address will not be published. Required fields are marked *

error: Content Copyright protected !!