ಶಾಲೆಗಳು, ಸರಕಾರಿ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಕಡ್ಡಾಯ : ಹೊಸ ಮಾರ್ಗಸೂಚಿಯಲ್ಲಿ ಏನಿದೆ..?
ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ (Vande Mataram)ಗೆ 150 ವರ್ಷ ಪೂರ್ಣವಾಗಿರುವ ಹಿನ್ನೆಲೆಯಲ್ಲಿ ಅದರ ಗಾಯನಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ನಿಯಮಗಳನ್ನು ಬಿಡುಗಡೆ ಮಾಡಿದೆ. ಅದರನ್ವಯ, ‘ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಷ್ಟ್ರಗೀತೆ ‘ಜನ ಗಣ ಮನ’ಕ್ಕೂ ಮೊದಲು, ‘ವಂದೇ ಮಾತರಂ’ ಗೀತೆಯನ್ನು ಕಡ್ಡಾಯವಾಗಿ ಮೊದಲಿನ 2 ಚರಣದ ಬದಲು 3 ನಿಮಿಷ 10 ಸೆಕೆಂಡ್ ಅವಧಿ ಹೊಂದಿರುವ ಪೂರ್ತಿ (ಎಲ್ಲ 6 ಚರಣ) ಹಾಡಬೇಕು ಅಥವಾ ನುಡಿಸಬೇಕು’ ಎಂದು ಸೂಚಿಸಿದೆ.
‘ಸರ್ಕಾರದ ಪ್ರಶಸ್ತಿ ಪ್ರದಾನ ಸೇರಿದಂತೆ ರಾಷ್ಟ್ರಪತಿಗಳು ಭಾಗಿಯಾಗುವ ಎಲ್ಲಾ ಸಮಾರಂಭಗಳಲ್ಲಿ ಅವರ ಆಗಮನ ಮತ್ತು ನಿರ್ಗಮನದ ವೇಳೆ ವಂದೇ ಮಾತರಂ ಮೊಳಗಬೇಕು. ಶಾಲೆ-ಕಾಲೇಜುಗಳಲ್ಲೂ ಪ್ರಾರ್ಥನೆ ವೇಳೆ ಗೀತೆ ಹಾಡಬೇಕು. ಈ ವೇಳೆ ಕಡ್ಡಾಯವಾಗಿ ಎದ್ದು ನಿಲ್ಲಬೇಕು’ ಎಂದು ಹೊಸ ನಿಯಮಾವಳಿಯಲ್ಲಿ ಉಲ್ಲೇಖಿಸಲಾಗಿದೆ.ಆದರೆ, ಚಿತ್ರಮಂದಿರಗಳಲ್ಲಿ ಪ್ರಸಾರ ಆಗುವ ಸಾಕ್ಷ್ಯಚಿತ್ರ ಅಥವಾ ಸಿನಿಮಾಗಳ ಮಧ್ಯೆ ಇದು ಪ್ರಸಾರವಾದರೆ ಜನರು/ಪ್ರೇಕ್ಷಕರು ಎದ್ದುನಿಲ್ಲುವ ಅಗತ್ಯವಿಲ್ಲ.
ವಂದೇ ಮಾತರಂ ಬಗ್ಗೆ:
ವಂದೇ ಮಾತರಂ ಅನ್ನು 1870 ರ ದಶಕದಲ್ಲಿ ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ರಚಿಸಿದರು.ಇದನ್ನು ಅವರ ಕಾದಂಬರಿ ಆನಂದಮಠದಲ್ಲಿ ಸೇರಿಸಲಾಯಿತು. ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಈ ಹಾಡು ಪ್ರಬಲ ಘೋಷಣೆಯಾಯಿತು.
1950 ರಲ್ಲಿ, ಸಂವಿಧಾನ ಸಭೆಯು ವಂದೇ ಮಾತರಂ ಅನ್ನು ಭಾರತದ ರಾಷ್ಟ್ರೀಯ ಗೀತೆಯಾಗಿ ಅಂಗೀಕರಿಸಿತು, ಆದರೆ ಜನ ಗಣ ಮನವನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಯಿತು. ಸಾಮಾನ್ಯವಾಗಿ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲಾಗುತ್ತದೆ, ಆದರೆ ಗೃಹ ಸಚಿವಾಲಯವು ಈಗ ಅಧಿಕೃತ ಪ್ರದರ್ಶನಗಳಲ್ಲಿ ರಾಷ್ಟ್ರಗೀತೆಯೊಂದಿಗೆ ನುಡಿಸುವಾಗ ಎಲ್ಲಾ ಆರು ಚರಣಗಳನ್ನು ಕಡ್ಡಾಯಗೊಳಿಸುತ್ತದೆ.
ಹೊಸ ಮಾರ್ಗಸೂಚಿಯಲ್ಲಿ ಏನಿದೆ..?
*ಇನ್ನು ಮುಂದೆ ವಂದೇ ಮಾತರಂನ ಎಲ್ಲಾ 6 ಚರಣಗಳನ್ನು 3 ನಿಮಿಷ 10 ಸೆಕೆಂಡ್ಗಳೊಳಗೆ ಹಾಡಬೇಕು
*ರಾಷ್ಟ್ರಪತಿಗಳ ಆಗಮನ, ನಿರ್ಗಮನ, ತ್ರಿವರ್ಣ ಧ್ವಜಾರೋಹಣ, ಗವರ್ನರ್ಗಳ ಭಾಷಣದ ವೇಳೆ ಗಾಯನ ಕಡ್ಡಾಯ
*ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಪ್ರಾರ್ಥನೆ ವೇಳೆ ರಾಷ್ಟ್ರೀಯ ಗೀತೆಯಾದ ವಂದೇ ಮಾತರಂ ಅನ್ನು ತಪ್ಪದೇ ಹಾಡಬೇಕು
*ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆ- ಎರಡನ್ನೂ ಹಾಡಬೇಕಾದ ಸಂದರ್ಭದಲ್ಲಿ, ವಂದೇ ಮಾತರಂ ಮೊದಲು ಹಾಡಬೇಕು
*ರಾಷ್ಟ್ರಗೀತೆ ‘ಜನ ಗಣ ಮನ’ದ ರೀತಿ ವಂದೇ ಮಾತರಂ ಮೊಳಗುವಾಗ ಎದ್ದುನಿಂತು ಗೌರವ ಸಲ್ಲಿಸುವುದು ಕಡ್ಡಾಯ
*ಸಿನಿಮಾ ಅಥವಾ ಸಾಕ್ಷ್ಯಚಿತ್ರಗಳ ಪ್ರಸಾರದ ವೇಳೆ ಮಧ್ಯದಲ್ಲಿ ವಂದೇ ಪ್ರಸಾರ ಆದರೆ ಎದ್ದುನಿಲ್ಲುವ ಅಗತ್ಯವಿಲ್ಲ
*ಸರ್ಕಾರಿ/ಖಾಸಗಿ ಕಾರ್ಯಕ್ರಮಗಳಲ್ಲಿ ಅಗತ್ಯವಿದ್ದರೆ ಗೀತೆಯ ಮುದ್ರಿತ ಪ್ರತಿಯನ್ನು ಸಭಿಕರಿಗೆ ವಿತರಿಸಬೇಕು
*ಸೂಕ್ತ ಶಿಸ್ತಿನೊಂದಿಗೆ ಯಾವುದೇ ಕಾರ್ಯಕ್ರಮದಲ್ಲಾದರೂ ವಂದೇ ಮಾತರಂ ಗಾಯನಕ್ಕೆ ಅನುಮತಿಯಿದೆ
*1870ರಲ್ಲಿ ಬಂಗಾಳಿ ಕವಿ ಬಂಕಿಮ ಚಂದ್ರ ಚಟರ್ಜಿ ಅವರು ‘ವಂದೇ ಮಾತರಂ’ ದೇಶಭಕ್ತಿ ಕವಿತೆಯನ್ನು ರಚಿಸಿದ್ದರು
*ಇದರರ್ಥ- ತಾಯಿ, ನಿನಗೆ ನನ್ನ ನಮನ ಎಂದು. ಮಾತೃಭೂಮಿಯನ್ನು ಗೌರವಿಸುವ ಉದ್ದೇಶ ಹೊಂದಿರುವ ಗೀತೆ
*ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಈ ಗೀತೆ ಭಾರತೀಯ ರಾಷ್ಟ್ರೀಯತೆಯ ಪ್ರಮುಖ ಸಂಕೇತವಾಯಿತು
*1937ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ‘ವಂದೇ ಮಾತರಂ’ ಅನ್ನು ರಾಷ್ಟ್ರೀಯ ಗೀತೆಯಾಗಿ ಅಳವಡಿಸಿಕೊಂಡಿತು
*ಈ ಗೀತೆಯಲ್ಲಿ ಆರು ಚರಣ ಇವೆ. ಆದರೆ 4 ಚರಣಗಳಲ್ಲಿ ದುರ್ಗಾಮಾತೆಯ ಗುಣಗಾನದ ಅಂಶಗಳು ಇವೆ
*ಮುಸ್ಲಿಮರ ವಿರೋಧ ಕಾರಣ 4 ಚರಣಗಳನ್ನು ಕೈಬಿಡಲಾಯಿತು. ಈಗ ಆ ನಾಲ್ಕೂ ಚರಣ ಸೇರಿಸಿ ಕಡ್ಡಾಯ
ಪೂರ್ಣ ವಂದೇ ಮಾತರಂ ಎಲ್ಲಿ ಕಡ್ಡಾಯ?
ಪದ್ಮ ಪ್ರಶಸ್ತಿಗಳು, ಔಪಚಾರಿಕ ರಾಜ್ಯ ಕಾರ್ಯಕ್ರಮಗಳಲ್ಲಿ ರಾಷ್ಟ್ರಪತಿಗಳ ಆಗಮನ ಮತ್ತು ನಿರ್ಗಮನ, ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿಗಳ ಭಾಷಣದ ಮೊದಲು ಮತ್ತು ನಂತರ, ರಾಜ್ಯದಲ್ಲಿ ಔಪಚಾರಿಕ ಕಾರ್ಯಕ್ರಮಗಳಲ್ಲಿ ರಾಜ್ಯಪಾಲರ/ಲೆಫ್ಟಿನೆಂಟ್ ಗವರ್ನರ್ಗಳ ಆಗಮನ ಮತ್ತು ನಿರ್ಗಮನ, ರಾಷ್ಟ್ರೀಯ ಧ್ವಜ ಮೆರವಣಿಗೆಯಲ್ಲಿ, ರಾಷ್ಟ್ರಪತಿಗಳ ಸಂದೇಶವನ್ನು ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದಲ್ಲಿ ಪ್ರಸಾರ ಮಾಡುವ ಮೊದಲು ಮತ್ತು ನಂತರ, ರಾಷ್ಟ್ರಧ್ವಜವನ್ನು ಹಾರಿಸುವಾಗ, ಸರ್ಕಾರಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ಸಚಿವರು ಭಾಗವಹಿಸುವ ಪ್ರಮುಖ ಕಾರ್ಯಕ್ರಮಗಳಲ್ಲಿ, ಶಾಲೆಗಳಲ್ಲಿ ಮತ್ತು ಸರ್ಕಾರಿ ಆದೇಶದಂತೆ ಆಯೋಜಿಸಲಾದ ಕಾರ್ಯಕ್ರಮಗಳಲ್ಲಿ ನಾಗರಿಕ ಗೌರವ ಕಾರ್ಯಕ್ರಮದಲ್ಲಿ.
ವಂದೇ ಮಾತರಂ ಎಲ್ಲಿ ಕಡ್ಡಾಯವಲ್ಲ?
ಸಿನಿಮಾ ಮಂದಿರಗಳಲ್ಲಿ ವಂದೇ ಮಾತರಂ ನಿಯಮ ಅನ್ವಯಿಸುವುದಿಲ್ಲ. ಸಿನಿಮಾದ ಸಮಯದಲ್ಲಿ ವಂದೇ ಮಾತರಂ ನುಡಿಸಿದರೆ, ಪ್ರೇಕ್ಷಕರು ಎದ್ದು ನಿಲ್ಲುವ ಅಗತ್ಯವಿಲ್ಲ. ಗೃಹ ಸಚಿವಾಲಯವು ಸ್ಪಷ್ಟವಾಗಿ ಹೇಳುವಂತೆ ಇದು ಪ್ರೇಕ್ಷಕರಲ್ಲಿ ಗೊಂದಲ ಮತ್ತು ಅವ್ಯವಸ್ಥೆಗೆ ಕಾರಣವಾಗಬಹುದು, ಆದ್ದರಿಂದ ಸಿನಿಮಾ ಮಂದಿರಗಳಿಗೆ ಈ ವಿನಾಯಿತಿ ನೀಡಲಾಗಿದೆ. ಸಿನಿಮಾ ಪ್ರಾರಂಭವಾಗುವ ಮೊದಲು ವಂದೇ ಮಾತರಂ ನುಡಿಸುವುದು ಕಡ್ಡಾಯವಲ್ಲ. ಯಾವುದೇ ಖಾಸಗಿ ಸಮಾರಂಭದಲ್ಲಿ ಅದನ್ನು ಹಾಡುವುದು ಅಥವಾ ನುಡಿಸುವುದು ಕಡ್ಡಾಯವಲ್ಲ. ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ಸಭೆಗೆ ಇದು ಕಡ್ಡಾಯವಲ್ಲ. ಯಾವುದೇ ಅನೌಪಚಾರಿಕ ಸಭೆಗೂ ಇದು ಕಡ್ಡಾಯವಲ್ಲ.
ಎಷ್ಟು ನಿಮಿಷಗಳು ಅಥವಾ ಎಷ್ಟು ಪ್ಯಾರಾಗಳನ್ನು ಹಾಡಬೇಕು?
ವಂದೇ ಮಾತರಂ ರಾಷ್ಟ್ರ ಹಾಡಾಗಿದ್ದರೂ, ವಂದೇ ಮಾತರಂನ ಆರು ಮಧ್ಯಂತರಗಳನ್ನು ನುಡಿಸುವುದು ಅಥವಾ ಹಾಡುವುದು ಕಡ್ಡಾಯವಾಗಿರುತ್ತದೆ ಎಂದು ಆದೇಶವು ಹೇಳುತ್ತದೆ. ಅವಧಿ 3 ನಿಮಿಷಗಳು ಮತ್ತು 10 ಸೆಕೆಂಡುಗಳು. ಈ ಸಮಯದಲ್ಲಿ ನಿಲ್ಲುವುದು ಕಡ್ಡಾಯವಾಗಿರುತ್ತದೆ.
ರಾಷ್ಟ್ರಗೀತೆ ಮೊದಲಾ ಅಥವಾ ರಾಷ್ಟ್ರೀಯ ಹಾಡು ಮೊದಲು?
ಒಂದು ಕಾರ್ಯಕ್ರಮದಲ್ಲಿ ಎರಡೂ ಹಾಡುಗಳನ್ನು ಒಟ್ಟಿಗೆ ನುಡಿಸಿದಾಗ, ವಂದೇ ಮಾತರಂ ಮೊದಲು ಬರುತ್ತದೆ, ನಂತರ ಜನ ಗಣ ಮನ ಬರುತ್ತದೆ ಎಂದು ಆದೇಶವು ಸ್ಪಷ್ಟವಾಗಿ ಹೇಳುತ್ತದೆ. ಎರಡರಲ್ಲೂ ನಿಲ್ಲುವುದು ಕಡ್ಡಾಯವಾಗಿದೆ.
ವಿವಾದ ಏನು?:
ವಂದೇ ಮಾತರಂ ಎಂಬುದು 1870ರ ದಶಕದಲ್ಲಿ ಬಂಗಾಳಿ ಕವಿ ಬಂಕಿಮಚಂದ್ರ ಚಟರ್ಜಿ (Bankim Chandra Chatterjee) ಬರೆದ ದೇಶಭಕ್ತಿಯ ಕವಿತೆಯಾಗಿದ್ದು, ಇದನ್ನು ಮೊದಲು 1882ರಲ್ಲಿ ಅವರ ಬಂಗಾಳಿ ಕಾದಂಬರಿ ‘ಆನಂದಮಠ’ದಲ್ಲಿ ಪ್ರಕಟಿಸಲಾಯಿತು. ಇದರ ಆರಂಭಿಕ ಸಾಲಿನ ಅರ್ಥ ‘ನಾನು ನಿನಗೆ ನಮಸ್ಕರಿಸುತ್ತೇನೆ, ತಾಯಿ’. ಇದು ಮಾತೃಭೂಮಿಯನ್ನು ಉಲ್ಲೇಖಿಸುತ್ತದೆ.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಈ ಹಾಡು ಭಾರತೀಯ ರಾಷ್ಟ್ರೀಯತೆಯ ಪ್ರಮುಖ ಸಂಕೇತವಾಯಿತು. 1937ರಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ವಂದೇ ಮಾತರಂ ಅನ್ನು ರಾಷ್ಟ್ರೀಯ ಗೀತೆಯಾಗಿ ಅಳವಡಿಸಿಕೊಂಡಿತು, ಆದರೆ ಮೊದಲ 2 ಚರಣ ಮಾತ್ರ ಬಳಸಲು ನಿರ್ಧರಿಸಿ ಉಳಿದವನ್ನು ಕೈಬಿಟ್ಟಿತು. ಏಕೆಂದರೆ ಉಳಿದ 4ರಲ್ಲಿ ದುರ್ಗಾ ಮಾತೆಯ ಗುಣಗಾನದ ಅಂಶಗಳಿದ್ದವು. ಏಕದೇವೋಪಾಸಕರಾದ ಮುಸ್ಲಿಮರು ಉಳಿದ ಚರಣಗಳಿಗೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದ್ದ ಕಾರಣ, ಜಾತ್ಯತೀತತೆ ಸಾರುವ ದೃಷ್ಟಿಯಿಂದ ಗಾಯನದಿಂದ ಉಳಿದ 4 ಚರಣ ಕೈಬಿಡಲಾಯಿತು. ಆದರೆ, ಇದೀಗ 1937ರಲ್ಲಿ ತೆಗೆದುಹಾಕಿದ್ದ 4 ಚರಣಗಳನ್ನೂ ಕಡ್ಡಾಯವಾಗಿ ಹಾಡಬೇಕು ಎಂದು ಆದೇಶಿಸಲಾಗಿರುವುದು ಗಮನಾರ್ಹ.
ಬಂಕಿಮ್ ಚಂದ್ರ ಚಟರ್ಜಿ ಸಂಯೋಜಿಸಿದ “ವಂದೇ ಮಾತರಂ” ಹಾಡನ್ನು “ರಾಷ್ಟ್ರಗೀತೆ” ಎಂದು ಕರೆಯಲಾಗುತ್ತದೆ. ರಾಷ್ಟ್ರಗೀತೆಯ ಸಾಹಿತ್ಯ ಹೀಗಿದೆ:
ವಂದೇಮಾತರಂ
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ ॥ವಂದೇ॥
ಶುಭ್ರಜ್ಯೋತ್ಸ್ನಾ ಪುಲಕಿತಯಾಮಿನೀಂ
ಪುಲ್ಲಕುಸುಮಿತ ದ್ರುಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ ॥ ವಂದೇ ॥
ಕೋಟಿಕೋಟಿ ಕಂಠ ಕಲಕಲ ನಿನಾದ-ಕರಾಲೇ
ಕೋಟಿ ಕೋಟಿ ಭುಜೈರ್ಧೃತ-ಖರ-ಕರವಾಲೇ
ಅಬಲಾ ಕೇಯನೋ ಮಾ ಏತೋ ಬಲೇ
ಬಹುಬಲ ಧಾರಿಣೀಂ ನಮಾಮಿ ತಾರಿಣೀಂ
ರಿಪುದಲ-ವಾರಿಣೀಂ ಮಾತರಾಮ್ ॥ ವಂದೇ ॥
ತುಮಿ ವಿದ್ಯಾ ತುಮಿ ಧರ್ಮ ತುಮಿ ಹೃದಿ ತುಮಿ ಮರ್ಮ
ತ್ವಂ ಹಿ ಪ್ರಾಣಾಃ ಶರೀರೇ
ಬಾಹುತೇ ತುಮಿ ಮಾ ಶಕ್ತಿ
ಹೃದಯೇ ತುಮಿ ಮಾ ಭಕ್ತಿ
ತೋ ಮಾರಯಿ ಪ್ರತಿಮಾ ಗಡಿ ಮಂದಿರೇ ಮಂದಿರೇ ॥ ವಂದೇ ॥
ತ್ವಂ ಹಿ ದುರ್ಗಾ ದಶ-ಪ್ರಹರಣ-ಧಾರಿಣೀ
ಕಮಲಾ ಕಮಲದಳ-ವಿಹಾರಿಣೀ
ವಾಣೀ ವಿದ್ಯಾದಾಯಿನೀ
ನಮಾಮಿ ತ್ವಾಂ
ನಮಾಮಿ ಕಮಲಾಂ ಅಮಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಮ್ ॥ ವಂದೇ ॥
ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ
ಧರಣೀಂ ಭರಣೀಂ ಮಾತರಮ್ ॥


