Current AffairsLatest Updates

Inflation : ಭಾರತ ಮತ್ತು ಅಮೆರಿ ಹಣದುಬ್ಬರ ಇಳಿಕೆ, ಐತಿಹಾಸಿಕ ಕೆಳಮಟ್ಟಕ್ಕೆ ಕುಸಿದ ಪಾಕಿಸ್ತಾನ

Share With Friends

ಅಮೆರಿಕದ ಹಣದುಬ್ಬರ (US Inflation) ಏಪ್ರಿಲ್ ತಿಂಗಳಲ್ಲಿ ಶೇ. 2.3ರಷ್ಟಿದೆ. ವಿವಿಧ ಆರ್ಥಿಕ ತಜ್ಞರು ಮಾಡಿದ್ದ ಅಂದಾಜಿಗಿಂತ ತುಸು ಕಡಿಮೆ ಮಟ್ಟದಲ್ಲಿದೆ. ಹಿಂದಿನ ತಿಂಗಳಲ್ಲಿ (ಮಾರ್ಚ್) ಹಣದುಬ್ಬರ ಶೇ. 2.4 ಇತ್ತು. ಈಗ 10 ಮೂಲಾಂಕಗಳಷ್ಟು ಇಳಿಕೆ ಆಗಿದೆ. ನಾಲ್ಕು ವರ್ಷದಲ್ಲೇ ಇದು ಅತ್ಯಂತ ಕಡಿಮೆ ಹಣದುಬ್ಬರ ದರ ಎನಿಸಿದೆ.

ಏಪ್ರಿಲ್‌ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರವು ಆರು ವರ್ಷದ ಕನಿಷ್ಠ ಮಟ್ಟವಾದ ಶೇ. 3.16ರಷ್ಟು ದಾಖಲಾಗಿದೆ. ಇದು 2019ರ ಆಗಸ್ಟ್‌ ಬಳಿಕ ದಾಖಲಾಗಿ ರುವ ಕನಿಷ್ಠ ಮಟ್ಟ. ಗ್ರಾಹಕ ಬೆಲೆ ಸೂಚ್ಯಂಕ ಆಧರಿತ ಹಣದುಬ್ಬರವು ಮಾರ್ಚ್‌ನಲ್ಲಿ ಶೇ. 3.34ರಷ್ಟು ದಾಖಲಾಗಿತ್ತು. ಆರ್‌ಬಿಐ ನಿಗದಿಪಡಿಸಿರುವ ಶೇ. 4ರ ಸರಾಸರಿ ಗುರಿಗಿಂತಲೂ ಕಡಿಮೆ ದಾಖಲಾಗಿದೆ.

ಅಮೆರಿಕದಲ್ಲಿ ಏಪ್ರಿಲ್ ತಿಂಗಳಲ್ಲಿ ಆಹಾರ ವಸ್ತುಗಳ ಬೆಲೆ ಸೂಚ್ಯಂಕ ತುಸು ಏರಿಕೆಯಾಗಿದೆ. ಆದರೆ, ಇಂಧನ ಸೂಚ್ಯಂಕ ಕಡಿಮೆ ಆಗಿರುವುದು ಒಟ್ಟಾರೆ ಹಣದುಬ್ಬರ ಇಳಿಕೆಗೆ ಕಾರಣವಾಗಿದೆ. ಕೋರ್ ಇನ್​​ಫ್ಲೇಷನ್ ಅಥವಾ ಮುಖ್ಯ ವಸ್ತುಗಳ ಹಣದುಬ್ಬರ ದರ ಶೇ. 2.8ರಲ್ಲೇ ಮುಂದುವರಿದಿದೆ.

ಅಮೆರಿಕದಲ್ಲಿ ಹಣದುಬ್ಬರವನ್ನು ಶೇ. 2ಕ್ಕೆ ಕಟ್ಟಿ ನಿಲ್ಲಿಸುವ ಗುರಿ ಇದೆ. ಇದರಲ್ಲಿ ಹೆಚ್ಚೂಕಡಿಮೆ ಯಶಸ್ವಿಯಾಗುತ್ತಿದೆ. ಡೊನಾಲ್ಡ್ ಟ್ರಂಪ್ ಅವರು ಟ್ಯಾರಿಫ್ ಕ್ರಮಕ್ಕೆ ವಿರಾಮ ನೀಡಿರುವುದು, ಮತ್ತು ಈಗ ಹಣದುಬ್ಬರ ಸತತವಾಗಿ ಕೆಳಮಟ್ಟದಲ್ಲಿರುವುದು ಅಮೆರಿಕದಲ್ಲಿ ಬಡ್ಡಿದರ ಇಳಿಕೆಯ ಸಾಧ್ಯತೆಯನ್ನು ಹೆಚ್ಚಿಸಿದೆ. ಬಡ್ಡಿದರ ಇಳಿಸುವುದಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳುತ್ತಿದ್ದ ಫೆಡರಲ್ ರಿಸರ್ವ್ ಈಗ ದರ ಇಳಿಸಬೇಕಾಗಬಹುದು ಎನ್ನಲಾಗುತ್ತಿದೆ.

ಭಾರತದ ಹಣದುಬ್ಬರವೂ ಇಳಿಕೆ :
ಏಪ್ರಿಲ್ ತಿಂಗಳಲ್ಲಿ ಭಾರತದ ಹಣದುಬ್ಬರ ದರ ಶೇ. 3.16ರಷ್ಟಿದೆ. ಹಣದುಬ್ಬರವನ್ನು ಶೇ. 4ಕ್ಕೆ ಕಟ್ಟಿ ನಿಲ್ಲಿಸುವುದು ಆರ್​​ಬಿಐನ ಗುರಿಯಾಗಿದೆ. ಸತತ ಮೂರನೇ ತಿಂಗಳು ಈ ಮಟ್ಟಕ್ಕಿಂತ ಹಣದುಬ್ಬರ ಮೇಲೇರದಂತೆ ನೋಡಿಕೊಳ್ಳಲಾಗಿದೆ. ಆಹಾರವಸ್ತುಗಳ ಬೆಲೆ, ಅದರಲ್ಲೂ ತರಕಾರಿಗಳ ಬೆಲೆ ಏರಿಕೆ ಗಣನೀಯವಾಗಿ ತಗ್ಗಿರುವುದು ಹಣದುಬ್ಬರ ಇಳಿಕೆಗೆ ಕಾರಣ.

*ತರಕಾರಿ, ಮೊಟ್ಟೆ, ದ್ವಿದಳ ಧಾನ್ಯ, ಮಾಂಸ ಮತ್ತು ಮೀನು, ಏಕದಳ ಧಾನ್ಯ, ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಇಳಿಕೆಯೇ ಇದಕ್ಕೆ ಕಾರಣ ಎಂದು ಮಂಗಳವಾರ ಬಿಡುಗಡೆಯಾಗಿರುವ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (ಎನ್‌ಎಸ್‌ಒ) ವರದಿ ತಿಳಿಸಿದೆ. ಆಹಾರ ಪದಾರ್ಥಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ಮಾರ್ಚ್‌ನಲ್ಲಿ ಶೇ. 2.69ರಷ್ಟಿದ್ದ ಆಹಾರ ಹಣದುಬ್ಬರವು ಶೇ. 1.78ಕ್ಕೆ ತಗ್ಗಿದೆ.

*ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ)ದಲ್ಲಿ ಸುಮಾರು ಅರ್ಧದಷ್ಟು ಪಾಲನ್ನು ಹೊಂದಿರುವ ಆಹಾರ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ. 1.78ಕ್ಕೆ ಇಳಿಕೆಯಾಗಿದೆ. ಇದೇ ಹಣದುಬ್ಬರ ಮಾರ್ಚ್‌ನಲ್ಲಿ ಶೇ. 2.69ರಷ್ಟು ಇತ್ತು. ಇದರಿಂದ ಒಟ್ಟಾರೆ ಹಣದುಬ್ಬರ ಕುಸಿತ ಕಂಡಿದೆ.

*ಗ್ರಾಮೀಣ ಹಣದುಬ್ಬರದಲ್ಲಿ ಹೆಚ್ಚಿನ ಕುಸಿತ
ಗ್ರಾಮೀಣ ಹಣದುಬ್ಬರವು ಮಾರ್ಚ್‌ನಲ್ಲಿದ್ದ ಶೇ. 3.25ರಿಂದ ಏಪ್ರಿಲ್‌ನಲ್ಲಿ ಶೇ. 2.92ಕ್ಕೆ ಇಳಿಕೆಯಾಗಿದೆ. ಇದೇ ವೇಳೆ ನಗರ ಭಾಗದ ಹಣದುಬ್ಬರವು ಶೇ. 3.43ರಿಂದ ಶೇ. 3.36ಕ್ಕೆ ಇಳಿಕೆಯಾಗಿದ್ದು, ಅಲ್ಪ ಕುಸಿತ ಕಂಡಿದೆ.

ಮಾರ್ಚ್‌ನಲ್ಲಿ ಶೇ. 7.04ರಷ್ಟಿದ್ದ ತರಕಾರಿ ಬೆಲೆಗಳು ಏಪ್ರಿಲ್‌ನಲ್ಲಿ ಶೇ. 11ರಷ್ಟು ಕುಸಿದಿವೆ. ಧಾನ್ಯಗಳ ಬೆಲೆಗಳು ಮಾರ್ಚ್‌ನಲ್ಲಿದ್ದ ಶೇ. 5.93ಕ್ಕೆ ಹೋಲಿಸಿದರೆ ಶೇ. 5.35ರಷ್ಟು ಏರಿಕೆಯಾಗಿವೆ. ಆದರೆ ಇದೇ ವೇಳೆ ಬೇಳೆಕಾಳುಗಳ ಬೆಲೆಗಳು ಮಾರ್ಚ್‌ನಲ್ಲಿದ್ದ ಶೇ. 5.23ಕ್ಕೆ ಹೋಲಿಸಿದರೆ ಶೇ. 2.73ರಷ್ಟು ಕುಸಿತ ಕಂಡಿವೆ.

ಈ ವರ್ಷ ಸರಾಸರಿಗಿಂತ ಹೆಚ್ಚಿನ ಮಾನ್ಸೂನ್ ಮಳೆಯಾಗುವ ಮುನ್ಸೂಚನೆ ಇದ್ದು, ಕೃಷಿ ಆಧಾರಿತ ಆರ್ಥಿಕತೆಯಲ್ಲಿ ಬಲವಾದ ಕೃಷಿ ಉತ್ಪಾದನೆ ನಿರೀಕ್ಷಿಸಲಾಗಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆ ಹೆಚ್ಚಳದ ನಿರೀಕ್ಷೆಯೂ ಇದೆ. ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ. 1.76ಕ್ಕೆ ಇಳಿಕೆಯಾಗುವ ನಿರೀಕ್ಷೆ ಇದೆ. ಇದು ಮಾರ್ಚ್‌ನಲ್ಲಿ ಶೇ. 2.05ರಷ್ಟು ಇತ್ತು.

ಬಿರು ಬೇಸಿಗೆಯು ಆಹಾರ ಉತ್ಪಾದನೆ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ ಎಂಬುದನ್ನು ಇದು ತೋರಿಸುತ್ತಿದೆ. ಇದು ಅನೇಕ ಭಾರತೀಯ ಕುಟುಂಬಗಳಿಗೆ ನಿರಾಳತೆ ಮೂಡಿಸಿದೆ. ಕಾರಣ ಹೆಚ್ಚಿನ ಕುಟುಂಬಗಳ ಬಹುತೇಕ ವೆಚ್ಚ ಆಹಾರ ಪದಾರ್ಥಗಳಿಗೇ ಹೋಗುತ್ತದೆ.

ಕೇಂದೀಯ ಬ್ಯಾಂಕ್‌ 2025-26ನೇ ಹಣಕಾಸು ವರ್ಷದಲ್ಲಿ ಹಣದುಬ್ಬರವನ್ನು ಶೇ. 4ರಷ್ಟು ಇರಲಿದೆ ಎಂದು ಅಂದಾಜಿಸಿದೆ. ಮೊದಲ ತ್ರೈಮಾಸಿಕದಲ್ಲಿ ಶೇ. 3.6, ಎರಡನೇ ತ್ರೈಮಾಸಿಕದಲ್ಲಿ ಶೇ. 3.9 ಮತ್ತು ಮೂರನೇ ತ್ರೈಮಾಸಿಕದಲ್ಲಿ ಶೇ. 3.8 ಹಾಗೂ ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇ. 4.4 ಇರಬಹುದು ಎಂದು ಅಂದಾಜಿಸಿದೆ.

ಪಾಕಿಸ್ತಾನದ ಹಣದುಬ್ಬರ ಐತಿಹಾಸಿಕ ಕೆಳಮಟ್ಟದಲ್ಲಿ :
ಪಾಕಿಸ್ತಾನದಲ್ಲಿ ಏಪ್ರಿಲ್ ತಿಂಗಳ ಹಣದುಬ್ಬರ ಶೇ. 0.30ಕ್ಕೆ ಇಳಿದಿದೆ. ಮಾರ್ಚ್ ತಿಂಗಳಲ್ಲಿ ಶೇ. 0.70ರಷ್ಟಿತ್ತು. ಇದು ಪಾಕಿಸ್ತಾನದ ಸಾರ್ವಕಾಲಿಕ ಕನಿಷ್ಠ ಹಣದುಬ್ಬರ ದರ ಎನ್ನಲಾಗಿದೆ. ಇತ್ತೀಚಿನ ವರ್ಷಗಳಿಂದ ಪಾಕಿಸ್ತಾನದಲ್ಲಿ ಹಣದುಬ್ಬರ ಶೇ. 20-40ರಷ್ಟಿತ್ತು. ಬಹಳ ಅಲ್ಪ ಸಮಯದಲ್ಲಿ ಪಾಕಿಸ್ತಾನವು ಹಣದುಬ್ಬರಕ್ಕೆ ಕಡಿವಾಣ ಹಾಕಲು ಸಫಲವಾಗಿದೆ. ಆರ್ಥಿಕ ನೀತಿಗಳಲ್ಲಿ ಸುಧಾರಣೆ, ಹಣಕಾಸು ಶಿಸ್ತು ಕಾಯ್ದುಕೊಂಡಿದ್ದು ಇತ್ಯಾದಿ ವಿವಿಧ ಅಂಶಗಳು ಈ ಯಶಸ್ಸಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಹಣದುಬ್ಬರ ಎಂದರೇನು..?
ಅರ್ಥ ಶಾಸ್ತ್ರದಲ್ಲಿ, ಹಣದುಬ್ಬರ ವೆಂದರೆ ಆರ್ಥಿಕತೆಯ ಕಾಲಾವಧಿಯಲ್ಲಿ ಸರಕುಗಳ ಹಾಗೂ ಸೇವೆಗಳ ಸಾಮಾನ್ಯ ಬೆಲೆಗಳ ಮಟ್ಟದ ಏರಿಕೆ. ಬೆಲೆ ಏರಿಕೆಯಾದಾಗ, ಚಲಾವಣೆಯ ಪ್ರತಿ ಘಟಕವೂ ಕಡಿಮೆ ಪ್ರಮಾಣದಲ್ಲಿ ಸರಕುಗಳನ್ನು-ಸೇವೆಗಳನ್ನು ಕೊಂಡುಕೊಳ್ಳುತ್ತದೆ; ಹಾಗಾಗಿ ಹಣದುಬ್ಬರವೆಂದರೆ ಹಣದ ಕೊಂಡುಕೊಳ್ಳುವ ಸಾಮರ್ಥ್ಯದಲ್ಲಿನ ಕೊರೆತಯೂ ಹೌದು – ವಿನಿಮಯ ಮತ್ತು ಆರ್ಥಿಕತೆಯ ಲೆಕ್ಕದ ಘಟಕದ ಆಂತರಿಕ ಮಾಧ್ಯಮದಲ್ಲಿ ನೈಜ ಮೌಲ್ಯದ ನಷ್ಟವೂ ಆಗುತ್ತದೆ. ಹಣದುಬ್ಬರದ ಪ್ರಮಾಣವೇ ಬೆಲೆ ಏರಿಕೆಯ ಮುಖ್ಯ ಪ್ರಮಾಣವಾಗಿದ್ದು, ಕಾಲಾವಧಿಯಲ್ಲಿ ಹಣದುಬ್ಬರದ ದರ, ಸಾಮಾನ್ಯ ಬೆಲೆಯ ಸೂಚ್ಯಂಕಲ್ಲಿ ವಾರ್ಷಿಕ ಶೇಕಡಾವಾರು ಬದಲಾವಣೆ.

error: Content Copyright protected !!