ಜನವರಿ 8 : ಭೂಮಿಯ ಭ್ರಮಣ ದಿನಾಚರಣೆ (Earth’s Rotation Day)
ಪ್ರತಿ ವರ್ಷ ಜನವರಿ 8ರಂದು ಜಾಗತಿಕವಾಗಿ ಆಚರಿಸಲ್ಪಡುವ ಭೂಮಿಯ ಭ್ರಮಣ ದಿನಾಚರಣೆ (Earth’s Rotation Day), ಭೂಮಿಯ ಅಕ್ಷದ ಮೇಲೆ ನಡೆಯುವ ಭ್ರಮಣ ಚಲನೆಯನ್ನು ಎತ್ತಿಹಿಡಿಯುವ ಜೊತೆಗೆ ಫ್ರೆಂಚ್ ಭೌತಶಾಸ್ತ್ರಜ್ಞ ಲಿಯೋನ್ ಫೂಕೋ (Léon Foucault) ಅವರ ಐತಿಹಾಸಿಕ ಪೆಂಡುಲಮ್ ಪ್ರಯೋಗವನ್ನು ಸ್ಮರಿಸುತ್ತದೆ. 2026ರ ಜನವರಿ 8ರಂದು, ಭೂಮಿಯ ಭ್ರಮಣವನ್ನು ಸಾರ್ವಜನಿಕವಾಗಿ ಪ್ರಾಯೋಗಿಕವಾಗಿ ಸಾಬೀತುಪಡಿಸಿದ ಫೂಕೋ ಅವರ ಪ್ರಯೋಗಕ್ಕೆ 175 ವರ್ಷಗಳು ಪೂರ್ಣಗೊಳ್ಳುತ್ತಿವೆ. ಇದು ಕೇವಲ ವಿಜ್ಞಾನ ಸಾಧನೆಯಷ್ಟೇ ಅಲ್ಲ, ಭೂಮಿಯ ಚಲನೆಯ ಕುರಿತು ಮಾನವಕುಲದ ಅರಿವಿನ ಕ್ರಾಂತಿಕಾರಿ ಹಂತವನ್ನೂ ಸೂಚಿಸುತ್ತದೆ.
ಫೂಕೋ ಲೋಲಕ ಪ್ರಯೋಗದಲ್ಲಿ ದೀರ್ಘವಾದ ಲೋಲಕದ ದೋಲನದ ದಿಕ್ಕು ನಿಧಾನವಾಗಿ ಬದಲಾಗುತ್ತಿರುವುದು ಕಂಡುಬಂದಿತು. ಇದು ಲೋಲಕದ ಚಲನೆಯಿಂದಲ್ಲ, ಭೂಮಿಯ ಭ್ರಮಣದಿಂದ ಉಂಟಾಗುವ ಪರಿಣಾಮ ಎಂಬುದನ್ನು ಅವರು ತೋರಿಸಿದರು. ಈ ಪ್ರಯೋಗವು ಖಗೋಳಶಾಸ್ತ್ರ ಮತ್ತು ಭೌತಶಾಸ್ತ್ರದ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲಾಗಿದ್ದು, ಭೂಮಿಯ ಚಲನೆಯನ್ನು ಕಣ್ಣಿಗೆ ಕಾಣುವ ರೀತಿಯಲ್ಲಿ ಸಾಬೀತುಪಡಿಸಿದ ಮೊದಲ ಪ್ರಯೋಗವೆಂದು ಪರಿಗಣಿಸಲಾಗಿದೆ.
ಭೂಮಿಯ ಭ್ರಮಣದ ಮಹತ್ವ:
ಭೂಮಿಯ ಭ್ರಮಣದಿಂದಲೇ ದಿನ ಮತ್ತು ರಾತ್ರಿ ಉಂಟಾಗುತ್ತವೆ. ಜೊತೆಗೆ ಹವಾಮಾನ ವ್ಯವಸ್ಥೆ, ಗಾಳಿಯ ಹರಿವು, ಸಮುದ್ರ ಪ್ರವಾಹಗಳು ಮತ್ತು ಕಾಲಮಾನಗಳ ಲೆಕ್ಕಾಚಾರಕ್ಕೂ ಇದು ಪ್ರಮುಖ ಕಾರಣವಾಗಿದೆ. ಭೂಮಿಯ ಈ ನಿರಂತರ ಚಲನೆ ಇಲ್ಲದೆ ಜೀವನದ ಇಂದಿನ ವ್ಯವಸ್ಥೆ ಸಾಧ್ಯವಿರಲಿಲ್ಲ ಎಂಬುದು ವಿಜ್ಞಾನಿಗಳ ಅಭಿಪ್ರಾಯ.
ವಿಜ್ಞಾನ ಜಾಗೃತಿ ಸಂದೇಶ:
ಭೂಮಿಯ ಭ್ರಮಣ ದಿನಾಚರಣೆ ಯುವಜನತೆಯಲ್ಲಿ ವಿಜ್ಞಾನಾಸಕ್ತಿ ಮೂಡಿಸುವುದು, ಪ್ರಯೋಗಾಧಾರಿತ ಜ್ಞಾನಕ್ಕೆ ಮಹತ್ವ ನೀಡುವುದು ಹಾಗೂ ವಿಜ್ಞಾನಿಗಳ ಕೊಡುಗೆಗಳನ್ನು ಸ್ಮರಿಸುವ ಉದ್ದೇಶ ಹೊಂದಿದೆ. ಶಾಲಾ–ಕಾಲೇಜುಗಳಲ್ಲಿ ವಿಶೇಷ ಉಪನ್ಯಾಸಗಳು, ಪ್ರದರ್ಶನಗಳು ಹಾಗೂ ವಿಜ್ಞಾನ ಪ್ರಯೋಗಗಳ ಮೂಲಕ ಈ ದಿನವನ್ನು ಆಚರಿಸಲಾಗುತ್ತಿದೆ.
ಭೂಮಿಯ ಚಲನೆಯನ್ನು ಜಗತ್ತಿಗೆ ಸ್ಪಷ್ಟವಾಗಿ ತೋರಿಸಿದ ಲಿಯೋನ್ ಫೂಕೋ ಅವರ ಸಾಧನೆ ವಿಜ್ಞಾನ ಇತಿಹಾಸದಲ್ಲಿ ಸದಾ ಬೆಳಕಿನಂತೆ ಪ್ರಕಾಶಿಸುತ್ತಲೇ ಇರುತ್ತದೆ.
ಇತಿಹಾಸದ ಹಿನ್ನೆಲೆ: ಸಿದ್ಧಾಂತದಿಂದ ಸಾಬೀತಿನತ್ತ :
ಕ್ರಿ.ಪೂ. 470ರಷ್ಟೇ ಹಿಂದೆಯೇ ಕೆಲವು ಗ್ರೀಕ್ ಪಂಡಿತರು ಭೂಮಿ ಭ್ರಮಣಗೊಳ್ಳುತ್ತದೆ ಎಂಬ ಕಲ್ಪನೆಯನ್ನು ಮುಂದಿಟ್ಟಿದ್ದರು. ಆದರೆ ಅದು ಸಾವಿರಾರು ವರ್ಷಗಳ ಕಾಲ ಕೇವಲ ತತ್ವಚಿಂತನೆಯಾಗಿಯೇ ಉಳಿಯಿತು.
16ನೇ ಶತಮಾನದಲ್ಲಿ ನಿಕೋಲಸ್ ಕೋಪರ್ನಿಕಸ್ ಸೂರ್ಯಕೇಂದ್ರಿತ ಸಿದ್ಧಾಂತವನ್ನು ಪ್ರತಿಪಾದಿಸಿ, ಭೂಮಿ ಸೂರ್ಯನ ಸುತ್ತ ಭ್ರಮಣಗೊಳ್ಳುತ್ತದೆ ಎಂದು ತಿಳಿಸಿದರು. 1610ರಲ್ಲಿ ಗ್ಯಾಲಿಲಿಯೋ ಗ್ಯಾಲಿಲೇಯಿ ದೂರದರ್ಶಕ ಅವಲೋಕನಗಳ ಮೂಲಕ ಇದಕ್ಕೆ ಬೆಂಬಲ ನೀಡಿದರು. ಆದರೂ ಭೂಮಿಯ ಸ್ವಂತ ಭ್ರಮಣಕ್ಕೆ ನೇರವಾದ ಪ್ರಾಯೋಗಿಕ ಸಾಕ್ಷ್ಯ ದೊರಕಿರಲಿಲ್ಲ.
ಲಿಯೋನ್ ಫೂಕೋ ಅವರ ಐತಿಹಾಸಿಕ ಸಾಧನೆ (1851)
1851ರ ಜನವರಿ 8ರಂದು ಫ್ರಾನ್ಸ್ನ ಪ್ಯಾರಿಸ್ನ ಪ್ಯಾಂಥಿಯನ್ ಕಟ್ಟಡದಲ್ಲಿ ಲಿಯೋನ್ ಫೂಕೋ ನಡೆಸಿದ ಪೆಂಡುಲಮ್ ಪ್ರಯೋಗವು ಭೂಮಿಯ ಭ್ರಮಣವನ್ನು ನಿರ್ವಿವಾದವಾಗಿ ಸಾಬೀತುಪಡಿಸಿತು. ಇದು ಖಗೋಳಶಾಸ್ತ್ರದ ಲೆಕ್ಕಾಚಾರಗಳ ಹೊರತಾಗಿ, ಪ್ರಯೋಗಾಲಯ ಮಟ್ಟದಲ್ಲಿ ಕಂಡುಬರುವ ಮೊದಲ ಸ್ಪಷ್ಟ ಸಾಕ್ಷ್ಯವಾಗಿತ್ತು.
ಭೂಮಿಯ ಭ್ರಮಣದ ಪ್ರಮುಖ ಅಂಶಗಳು :
ಅಕ್ಷ ಮತ್ತು ವಾಲಿಕೆ:
ಭೂಮಿ ಉತ್ತರ–ದಕ್ಷಿಣ ಧ್ರುವಗಳನ್ನು ಸಂಪರ್ಕಿಸುವ ಕಲ್ಪಿತ ಅಕ್ಷದ ಮೇಲೆ ಭ್ರಮಣಗೊಳ್ಳುತ್ತದೆ. ಈ ಅಕ್ಷವು ಸೂರ್ಯನ ಸುತ್ತಲಿನ ಪರಿಕ್ರಮಣ ಸಮತಲಕ್ಕೆ ಸುಮಾರು 23.5 ಡಿಗ್ರಿ ವಾಲಿಕೆಯಲ್ಲಿದೆ. ಇದೇ ಋತುಬದಲಾವಣೆಗೆ ಕಾರಣ.
ಭ್ರಮಣ ಅವಧಿ ಮತ್ತು ವೇಗ:
ಭೂಮಿ ಒಂದು ಸಂಪೂರ್ಣ ಭ್ರಮಣವನ್ನು ಸುಮಾರು 24 ಗಂಟೆಗಳಲ್ಲಿ ಪೂರ್ಣಗೊಳಿಸುತ್ತದೆ. ಭೂಮಧ್ಯ ರೇಖೆಯ ಬಳಿ ಭ್ರಮಣ ವೇಗವು ಸುಮಾರು 1,670 ಕಿ.ಮೀ/ಗಂ ಆಗಿದೆ.
ಗ್ರಹದ ಆಯಾಮಗಳು:
ಧ್ರುವೀಯ ವ್ಯಾಸ: 12,714 ಕಿ.ಮೀ.
ಭೂಮಧ್ಯ ರೇಖೀಯ ವ್ಯಾಸ: 12,756 ಕಿ.ಮೀ.
ಈ ಸ್ವಲ್ಪ ವ್ಯತ್ಯಾಸವು ಭೂಮಿಯ ಅಂಡಾಕಾರದ (Oblate Spheroid) ಸ್ವಭಾವವನ್ನು ತೋರಿಸುತ್ತದೆ.
ಭೂಮಿಯ ಭ್ರಮಣದ ಮಹತ್ವ
ಹಗಲು–ರಾತ್ರಿ ಚಕ್ರ: ಜೀವಜಗತ್ತಿನ ದಿನಚರಿ ಮತ್ತು ಹವಾಮಾನ ನಿಯಂತ್ರಣಕ್ಕೆ ಆಧಾರ
ಋತುಬದಲಾವಣೆ: ಅಕ್ಷದ ವಾಲಿಕೆ ಮತ್ತು ಪರಿಕ್ರಮಣದ ಸಂಯೋಜಿತ ಪರಿಣಾಮ
ಕೋರಿಯೊಲಿಸ್ ಪರಿಣಾಮ: ಗಾಳಿ ಹರಿವು, ಸಾಗರ ಪ್ರವಾಹಗಳು ಮತ್ತು ಹವಾಮಾನ ವ್ಯವಸ್ಥೆಗಳ ಮೇಲೆ ಪ್ರಭಾವ


