GKPersons and PersonaltySpardha Times

ಕನ್ನಡದ ಮೊದಲ ಕವಿಯತ್ರಿ ಅಕ್ಕಮಹಾದೇವಿ

Share With Friends

ಅಕ್ಕಮಹಾದೇವಿ ವಚನ ಸಾಹಿತ್ಯದ ಪ್ರಮುಖರಲ್ಲೊಬ್ಬರು. ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ. ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರಿವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಹೀಗೆ ಹಲವು ರೀತಿ ಗುರುತಿಸ ಬಹುದಾಗಿದೆ. ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು. ಸಾಕ್ಷಾತ್ ಶಿವ ( ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕ, ಹಲವಾರು ಭಕ್ತರಿಗೆ ಮಾದರಿಯಾಗಿದ್ದಾಳೆ.

ಶರಣೆ ಅಕ್ಕಮಹಾದೇವಿಯವರು ಜನಿಸಿದ್ದು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ-ಶಿರಾಳ ಕೊಪ್ಪದ ನಡುವೆ ಇರುವ ಉಡುತಡಿ ಅಥವಾ ಉಡಗಣಿ ಇಲ್ಲವೆ ಉಡುಗಣಿ ಎಂದೇ ಪ್ರಸಿದ್ದವಾಗಿರುವ ಪುಟ್ಟ ಗ್ರಾಮದಲ್ಲಿ. ವಚನ ಸಾಹಿತ್ಯವೆಂದಾಕ್ಷಣ ಪುರುಷರಲ್ಲಿ ಮೊದಲು ನೆನಪಾಗುವ ಹೆಸರು ಬಸವಣ್ಣನವರದ್ದು, ಸ್ತ್ರೀಯರಲ್ಲಿ ಮೊದಲು ನೆನಪಾಗುವ ಹೆಸರು ಅಕ್ಕಮಹಾದೇವಿಯದು. ಶರಣರ ಚರತ್ರೆಗೆ ಸಂಬಂಧಪಟ್ಟಂತೆ ಅನೇಕ ಅಸ್ಪಷ್ಟತೆಗಳು ಅಲ್ಲಲ್ಲಿ ಉಳಿದುಕೊಂಡಿದ್ದು, ಇದಕ್ಕೆ ಮಹಾದೇವಿಯಕ್ಕ ಹೊರತಲ್ಲ.

15ನೆಯ ಶತಮಾನದ ಪೂರ್ವದಲ್ಲಿ ಕಂಡು ಬರುವ ಅವಳ ಚರಿತ್ರೆ, ಆ ಬಳಿಕ ಪ್ರಭುದೇವರಂತೆ ವ್ಯತ್ಯಾಸಕ್ಕೆ ಗುರಿಯಾದಂತೆ ಕಾಣುತ್ತದೆ. ಈ ಕಾಲದಲ್ಲಿ ಮಹತ್ವ ಪಡೆದ ವಿರಕ್ತ ಸಂಪ್ರದಾಯ ವೈರಾಗ್ಯಕ್ಕೆ ಒಂದು ಕಡೆ ಪ್ರಭುವನ್ನು, ಇನ್ನೊಂದು ಕಡೆ ಅಕ್ಕಮಹಾದೇವಿಯನ್ನು ಚಿತ್ರಿಸಲು ತೊಡಗಿದುದೆ ಇದಕ್ಕೆ ಕಾರಣವೆಂದು ತೋರುತ್ತದೆ. ಹೀಗಾಗಿ ಹರಿಹರನಲ್ಲಿ ಬರುವ ಇವಳ ಚರತ್ರೆ ಪ್ರಭುಲಿಂಗ ಲೀಲೆ ಮತ್ತು ಈ ಪರೊಪರೆಯ ಸಾಹಿತ್ಯ ಕೃತಿಗಳಲ್ಲಿ ವ್ಯತ್ಯಾಸ ರೂಪವನ್ನು ಪಡೆದಿದೆ.

ಬಾಲ್ಯದಲ್ಲಿ ಮಹಾದೇವಿಗೆ ಸಂಸಾರದ ಮೇಲೆ ಇಷ್ಟವಿಲ್ಲ ಅವಳ ಆಟಗಳೆಲ್ಲ ಧಾರ್ಮಿಕವಾದ ಆಟಗಳು. ಶರಣಸತಿ ಲಿಂಗಪತಿ ಎಂಬ ಭಾವವು ಅರಳಿ ಅಧ್ಯಾತ್ಮಸಂಸ್ಕಾರ ಆತ್ಮದಲ್ಲಿ ಬೆರೆತು ಸಂಸಾರ ಬೇಡವಾಯಿತು. ಹರನನ್ನೇ ವರನನ್ನಾಗಿಸಿಕೊಂಡಳು. ಲೌಕಿಕ ಗಂಡನಾಗಿ ಬದುಕಿಗೆ ಬರಲು ಇಚ್ಛಿಸಿದ ಕೌಶಿಕನನ್ನು ಮೂರು ಕರಾರುಗಳನ್ನು ವಿಧಿಸಿ ಅದರಲ್ಲಿ ಅವನು ಸೋಲಲು, ಅವನಿಂದ ಬಿಡುಗಡೆ ಹೊಂದಿ ದಿಗಂಬರವನ್ನೇ ದಿವ್ಯಾಂಬರವನ್ನಾಗಿ ಮಾಡಿಕೊಂಡು ಸಾವಿಲ್ಲದ, ರೂಹಿಲ್ಲದ, ಕೇಡಿಲ್ಲದ ಚೆಲುವನಾದ ಚೆನ್ನಮಲ್ಲಿಕಾರ್ಜುನನ್ನು ಕೂಡಲು ಹೊರಟಳು.

ಅಕ್ಕಮಹಾದೇವಿಯ ಜೀವನದ ಮುಖ್ಯ ಘಟನೆಯೆಂದರೆ ರಾಜನಾದ ಕೌಶಿಕನ ವ್ಯಾಮೋಹಕ್ಕೆ ಆಕೆ ಗುರಿಯಾದುದು. ಈ ಕೌಶಿಕ ಯಾರು? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗೆಯ ಹೆಸರು ಅಂದು ಪ್ರಚಾರದಲ್ಲಿರಲಿಲ್ಲವಾಗಿ ಇದನ್ನೂ ನಾವು ಕಲ್ಪಿತ ನಾಮವೆಂದು ಇಟ್ಟು ಕೊಳ್ಳಬಹುದು. ಇಂಥ ಒಂದು ಘಟನೆ ಅವಳ ಜೀವನದಲ್ಲಿ ಸಂಭವಿಸಿದುದು ಸತ್ಯವೆಂದು ತೋರುತ್ತದೆ. ಇದನ್ನು ಪೋಷಿಸುವ ಧ್ವನಿಗಳು ಅವಳ ವಚನದಲ್ಲಿ ಕೇಳಿಸುತ್ತವೆ.

ವಿದ್ವಾಂಸರು ಈ ಕೌಶಿಕನನ್ನು ಬಳ್ಳೆಗಾವಿ ಪರಿಸರದಲ್ಲಿ ಆಳುತ್ತಿದ್ದ ಕಸಪಯ್ಯನೊಂದಿಗೆ ಸಮೀಕರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅಕ್ಕಮಹಾದೇವಿಯ ಉಜ್ವಲ ಲಾವಣ್ಯಕ್ಕೆ ಮೋಹಿತನಾದ ಕೌಶಿಕ ಒತ್ತಾಯದಿಂದ ಅವಳನ್ನು ಅರಮನೆ ತುಂಬಿಸಿಕೊಂಡನೆಂದೂ, ತನ್ನ ಭಾಕ್ತಿಕಜೀವನಕ್ಕೆ ಅಡ್ಡಬರದಂತೆ ವರ್ತಿಸಬೇಕೆಂದು ಅಕ್ಕಮಹಾದೇವಿ ಶರತ್ತು ಹಾಕಿದಳೆಂದೂ, ಆ ಶರತ್ತಗೆ ಕೌಶಿಕ ವ್ಯತಿರಿಕ್ತವಾಗಿ ನಡೆದುಕೊಂಡ ಕಾರಣ ಅವಳು ಅರಮನೆಯನ್ನು ತೊರೆದು ಮಲ್ಲಿಕಾರ್ಜುನ ಮೋಹಿತೆಯಾಗಿ ಹೊರಟಳೆಂದೂ ತಿಳಿದು ಬರುತ್ತದೆ. ಈ ಸಂಧರ್ಭದಲ್ಲಿ ಅವಳು ದಿಗಂಬರೆ ಯಾಗಿ ಹೊರಬಿದ್ದಳೆಂದು ಕಾವ್ಯಗಳು ಹೇಳುತ್ತವೆ.

ಇದು ಅಕ್ಕಮಹಾದೇವಿಯ ಜೀವನದಲ್ಲಿ ಒಂದು ಅಗ್ನಿದಿವ್ಯಘಟನೆ. ಆಕೆ ವಿಚಾರಸ್ವಾತಂತ್ರ್ಯದ ಮಹಿಳೆ. ಗಂಡ ಮತ್ತು ವಿಚಾರಸ್ವಾತಂತ್ರ್ಯ ಈ ಎರಡು ಆಯ್ಕೆಗಳು ಆಹ್ವಾನವಾದಾಗ ಗಂಡನನ್ನು ಧಿಕ್ಕರಿಸಿ ವಿಚಾರಸ್ವಾತಂತ್ರ್ಯವನ್ನು ಆಯ್ದುಕೊಂಡುದು ಲೋಕದ ಇತಿಹಾಸದಲ್ಲಿಯೇ ಅಪರೂಪದ ಘಟನೆಯಾಗಿದೆ.

ಶೂನ್ಯ ಸಂಪಾದನೆಕಾರರು ‘ಮಹಾದೇವಿಯಕ್ಕಗಳ ಸಂಪಾದನೆ’ ಎಂಬ ಒಂದು ಅಧ್ಯಾಯವನ್ನೇ ರಚಿಸಿ, ಅವರಿಗೆ ಗೌರವ ತೋರಿದ್ದಾರೆ. ಹರಿ ಮಹಾಕವಿಯ ಮಹಾದೇವಿಯಕ್ಕನ ರಗಳೆ, ಇಪ್ಪತ್ತನೆಯೆ ಶತಮಾನದ ನವೋದಯ ಕಾಲದ ಸಾಹಿತಿ ಎಚ್.ತಿಪ್ಪೇರುದ್ರಸ್ವಾಮಿಯವರ ‘ಕದಳಿಯ ಕರ್ಪುರ’ ಅಕ್ಕನವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಸಮರ್ಥ ಬರಹಗಳು .

ಅಧಿಕಾರ, ಸಂಪತ್ತು, ವೈಭವ, ಆಡಂಬರ, ಭೋಗ ಜೀವನಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಈ ಎಲ್ಲ ಬಂಧನಗಳಿಂದ ಬಿಡುಗಡೆ ಪಡೆದು, ಸಾಮಾನ್ಯರಲ್ಲಿ ಸಾಮಾನ್ಯಳಂತೆ ಜನ ಜೀವನದಲ್ಲಿ ಬೆರೆತುದು; ಇದಕ್ಕಾಗಿ ಅರಸೊತ್ತಿಗೆಯನ್ನು ಎದುರು ಹಾಕಿಕೊಳ್ಳಲು ಹಿಂಜರಿಯದಿದ್ದುದು.

ಶರಣ ಚಳುವಳಿಯಲ್ಲಿ ಭಾಗವಹಿಸಲು ನಿರ್ಣಯಿಸಿ, ಅನುಭವ ಮಂಟಪವನ್ನು ಪ್ರವೇಶ ಮಾಡಿದುದು. ಅಕ್ಕನವರ ಅನುಭವ ಮಂಟಪದ ಪ್ರವೇಶದ ಮೊದಲ ದಿನವನ್ನು ಸ್ಮರಿಸದ ಶರಣ ಸಾಹಿತ್ಯಕಾರನಿಲ್ಲ, ಎನ್ನುವಷ್ಟು ಅಪೂರ್ವ ಸ್ವಾಗತ ಆಕೆಗೆ ಶರಣರಿಂದ ದೊರಕಿತು. ಅಲ್ಲಿ ಅಲ್ಲಮಪ್ರಭು ಮತ್ತು ಅಕ್ಕನವರ ನಡುವೆ ನಡೆಯಿತೆನ್ನಲಾದ ಸಂಭಾಷಣೆ ; ಅನುಭಾವದ ಉತ್ತುಂಗದ ಋಷಿವಾಣಿಯ ರೂಪದಲ್ಲಿ ವಚನಗಳಲ್ಲಿ ಸಂಗ್ರಹಿತವಾಗಿದೆ.

ಕನ್ನಡ ಸಾಹಿತ್ಯ ಮೊದಲ ಬಂಡಾಯ ಕವಯತ್ರಿ ಮತ್ತು ವಚನಗಾರ್ತಿ ಹಾಗೂ ಮಹಿಳೆಯರ ಪ್ರತಿನಿಧಿಯಾಗಿ ಅಭಿವ್ಯಕ್ತಿಯಲ್ಲಿ ಪುರುಷ ಸಮಾಜವನ್ನು ಪ್ರತಿಭಟಿಸಿದವರು. ಸಾಮಾಜಿಕ ಬದಲಾವಣೆಗೆ ಶ್ರಮಿಸಿದವರು. “ಚನ್ನಮಲ್ಲಿಕಾರ್ಜುನ” ಎಂಬುದು ಈಕೆಯ ವಚನಗಳ ಅಂಕಿತ ನಾಮ. “ಯೋಗಾಂಗತ್ರಿವಿಧಿ” ಅಕ್ಕಮಹಾದೇವಿಯ ಪ್ರಮುಖ ಕೃತಿ.

# ನೆನಪಿನಲ್ಲಿಡಬೇಕಾದ ಅಂಶಗಳು :

➤ ಅಕ್ಕಮಹಾದೇವಿ ಜನನ= 12ನೇ ಶತಮಾನ
➤ ಜನನ ಸ್ಥಳ= ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿ
➤ ತಂದೆ= ನಿರ್ಮಲಶೆಟ್ಟಿ
➤ ತಾಯಿ= ಸುಮತಿ
➤ ಪತಿ= ಕೌಶಿಕ ಮಹಾರಾಜ
➤ ಬಿರುದು= ಕನ್ನಡದ ಮೊದಲ ಕವಿಯತ್ರಿ/ ವಚನಕಾರ್ತಿ
➤ ಆರಾಧ್ಯ ದೈವ= ಮಲ್ಲಿಕಾರ್ಜುನ
➤ ಅಂಕಿತನಾಮ= ಚೆನ್ನಮಲ್ಲಿಕಾರ್ಜುನ
➤ ಅಕ್ಕಮಹಾದೇವಿಯವರು ಇದಕ್ಕೆ ಪ್ರಸಿದ್ಧರು= “ಯೋಗಾಂಗ ತ್ರಿವಿಧಿ, ಸೃಷ್ಟಿಯ ವಚನ ಮಂತ್ರಗೋಪ್ಯ ಮತ್ತು ಇತರೆ ವಚನಗಳು”
➤ ಅಕ್ಕಮಹಾದೇವಿ ಲಿಂಗೈಕ್ಯ ಆಗಿರುವ ಸ್ಥಳ= ಶ್ರೀಶೈಲನ ಕದಳಿವನದಲ್ಲಿ,
➤ “ಅಕ್ಕಮಹಾದೇವಿಯವರು ಯೋಗಾಂಗ ತ್ರಿಪದಿ ಎಂಬ ತ್ರಿಪದಿ ಕಾವ್ಯವೊಂದನ್ನು ಬರೆದಿದ್ದಾರೆ ಇದು ಕನ್ನಡದ ಮೊದಲ ತ್ರಿಪದಿ ಕಾವ್ಯ”,

Leave a Reply

Your email address will not be published. Required fields are marked *

error: Content Copyright protected !!