ಭಾರತದ ಮೊದಲ ಮೈಕ್ರೋಚಿಪ್ ‘ವಿಕ್ರಮ್ 3201’ (Vikram 3201) : ಮಹತ್ವ ಮತ್ತು ವಿಶೇಷತೆಗಳ ಸಂಪೂರ್ಣ ಮಾಹಿತಿ
Vikram 3201 : ನಾವಿಂದು ವ್ಯಾಪಕವಾಗಿ ಬಳಸುತ್ತಿರುವ ಸ್ಮಾರ್ಟ್ ಫೋನ್ಗಳು, ಡಿಜಿಟಲ್ ಸಾಧನಗಳು, ವಾಹನಗಳು, ಎಲೆಕ್ಟ್ರಿಕ್ ಉಪಕರಣಗಳು, ಯುದ್ಧದ ಶಸ್ತ್ರಾಸ್ತ್ರ.. ಹೀಗೆ ಮೊದಲಾದವುಗಳಿಗೆ ಅತಿ ಮುಖ್ಯವಾದ ಅಂಗವೆಂದರೆ ಅದು ಸೆಮಿಕಂಡಕ್ಟರ್ ಚಿಪ್ಗಳು. ಕಚ್ಚಾ ತೈಲ ಕಪ್ಪು ಚಿನ್ನ ಎನಿಸಿಕೊಂಡರೆ, ಚಿಪ್ಗಳು ಡಿಜಿಟಲ್ ವಲಯದ ವಜ್ರ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದಷ್ಟೇ ಪ್ರಾಮುಖ್ಯತೆಯನ್ನು ಇದು ಹೊಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನಡೆಸಲು ಇದು ಕೂಡ ಪ್ರಮುಖ ಅಸ್ತ್ರವಾಗಿದೆ. ಚಿಪ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಬೇಕೆಂಬ ಭಾರತದ ಕನಸು ನನಸಾಗಿದೆ. ಭಾರತದ ಹೊಸ ಬಾಹ್ಯಾಕಾಶ ದರ್ಜೆಯ ಮೈಕ್ರೋಪ್ರೊಸೆಸರ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಮೇಡ್ ಇನ್ ಇಂಡಿಯಾ ಚಿಪ್ ತಯಾರಾಗಿದೆ. ಡಿಜಿಟಲ್ ವಲಯದಲ್ಲಿ ‘ವಿಕ್ರಮ’ ಸಾಧಿಸಲು ಭಾರತ ಮುಂದಡಿಯಿಟ್ಟಿದೆ.
ಹೌದು, ಭಾರತ ದೇಶೀಯವಾಗಿ ‘ವಿಕ್ರಮ್ 32 ಮೈಕ್ರೋಪ್ರೊಸೆಸರ್’ (Vikram-32 Chip) ಅನ್ನು ಉತ್ಪಾದಿಸಿದೆ. ಇದನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರಧಾನಿ ಮೋದಿ ಅವರಿಗೆ ಈಚೆಗೆ ಹಸ್ತಾಂತರಿಸಿದ್ದಾರೆ. ಏನಿದು ಸ್ಥಳೀಯ ನಿರ್ಮಿತ 32-ಬಿಟ್ ಮೈಕ್ರೋಪ್ರೊಸೆಸರ್ ‘ವಿಕ್ರಮ್-32’? ಸೆಮಿಕಂಡಕ್ಟರ್ ಅಥವಾ ಮೈಕ್ರೋಪ್ರೊಸೆಸರ್ ಎಂದರೇನು? ಜಗತ್ತಿಗೆ ಇದು ಏಕೆ ಮುಖ್ಯ ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ.
ಏನಿದು ವಿಕ್ರಮ್-32 ಚಿಪ್?
ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿದ ‘ವಿಕ್ರಮ್ 3201’ ಚಿಪ್, 32-ಬಿಟ್ ಮೈಕ್ರೋಪ್ರೊಸೆಸರ್ ಆಗಿದೆ. ಇದನ್ನು ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ವಿಎಸ್ಎಸ್ಎಲ್) ಅಭಿವೃದ್ಧಿಪಡಿಸಿದೆ. ಚಂಡೀಗಢದಲ್ಲಿರುವ ಇಸ್ರೋದ ಸೆಮಿಕಂಡಕ್ಟರ್ ಲ್ಯಾಬೊರೇಟರಿ (ಎಸ್ಸಿಎಲ್) ನಲ್ಲಿ ಇದನ್ನು ತಯಾರಿಸಲಾಯಿತು. ರಾಕೆಟ್, ಉಪಗ್ರಹಗಳು ಮತ್ತು ಇತರ ಹೆಚ್ಚಿನ ವಿಶ್ವಾಸಾರ್ಹತೆ ವ್ಯವಸ್ಥೆಗಳಲ್ಲಿ ಬಳಸಲು ಉದ್ದೇಶಿಸಲಾಗಿದೆ. ಇದು 2009 ರಿಂದ ಭಾರತೀಯ ಉಡಾವಣಾ ವಾಹನಗಳಿಗೆ ಶಕ್ತಿ ತುಂಬುತ್ತಿರುವ ಇಸ್ರೋದ ಹಿಂದಿನ 16-ಬಿಟ್ ಪ್ರೊಸೆಸರ್ ವಿಕ್ರಮ್ 1601ನ ಉತ್ತರಾಧಿಕಾರಿಯಾಗಿದೆ. ಅಂದರೆ, ವಿಕ್ರಮ್ 16 ಚಿಪ್ನ ಅಪ್ಗ್ರೇಡ್ ಆಗಿದೆ.
ಇದು ಏಕೆ ಮಹತ್ವದ್ದು?
ಇಲ್ಲಿಯವರೆಗೆ ಭಾರತವು ನಿರ್ಣಾಯಕ ಬಾಹ್ಯಾಕಾಶ ತಂತ್ರಜ್ಞಾನಗಳಿಗಾಗಿ ವಿದೇಶಿ ಅವಲಂಬನೆಯಲ್ಲಿತ್ತು. ಇದರಿಂದ ರಫ್ತು ನಿರ್ಬಂಧಗಳು, ಪೂರೈಕೆ ಅಡಚಣೆ ಅಥವಾ ಸಂಭಾವ್ಯ ಭದ್ರತಾ ದುರ್ಬಲತೆಗಳಂತಹ ಸಮಸ್ಯೆ ಎದುರಾಗುತ್ತಿತ್ತು. ಈಗ ವಿಕ್ರಮ್-32 ಚಿಪ್ನಿಂದಾಗಿ ಭಾರತವು ಉನ್ನತ ಮಟ್ಟದ ಸೆಮಿಕಂಡಕ್ಟರ್ ವಿನ್ಯಾಸ ಮತ್ತು ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಈ ಚಿಪ್ ಜಾಗತಿಕ ಸೆಮಿಕಂಡಕ್ಟರ್ ಉದ್ಯಮದಲ್ಲಿ ಪೈಪೋಟಿಯಲ್ಲಿರುವ ರಾಷ್ಟ್ರಗಳ ಸಾಲಿನಲ್ಲಿ ಭಾರತವನ್ನು ನಿಲ್ಲಿಸಿದೆ.
16-ಬಿಟ್ನಿಂದ 32-ಬಿಟ್ಗೆ ಅಪ್ಗ್ರೇಡ್
ಇದುವರೆಗೆ ಇಸ್ರೋ ತನ್ನ ಉಡಾವಣಾ ವಾಹನಗಳಿಗೆ ಹಳೆಯ ವಿಕ್ರಮ್-1601 ಅನ್ನು ಬಳಸುತ್ತಿತ್ತು. ಇದು 10 ವರ್ಷಗಳಿಗೂ ಹೆಚ್ಚು ಕಾಲ ಇಸ್ರೋದ ಉಡಾವಣಾ ವಾಹನಗಳಿಗೆ ಶಕ್ತಿ ತುಂಬಿತ್ತು. ಈ ಹಿಂದೆ 16 ಬಿಟ್ನ ಚಿಪ್ ತಯಾರಿಸಿದ್ದ ಇಸ್ರೋ ಈಗ 32 ಬಿಟ್ನ ಚಿಪ್ ಅಭಿವೃದ್ಧಿಪಡಿಸಿದೆ. ಹೆಚ್ಚಿನ ಪ್ರಮಾಣದ ಡೇಟಾ ನಿರ್ವಹಿಸಲು, ಆಧುನಿಕ ಸಾಫ್ಟ್ವೇರ್ ಬೆಂಬಲಿಸಲು ಮತ್ತು ವೇಗವಾಗಿ ಹೆಚ್ಚು ನಿಖರವಾದ ಲೆಕ್ಕಾಚಾರ ನಿರ್ವಹಿಸಲು ಅಪ್ಗ್ರೇಡ್ ಚಿಪ್ ಸಹಕಾರಿಯಾಗಿದೆ.
ವೈಶಿಷ್ಟ್ಯಗಳೇನು?
*ಇದು ವೇಗವಾದ ಸಂಸ್ಕರಣೆ ಮತ್ತು ದೊಡ್ಡ ಮೆಮೊರಿಯನ್ನು ನಿರ್ವಹಿಸುತ್ತದೆ. ಹೆಚ್ಚಿನ ಪ್ರಮಾಣದ ಡೇಟಾವನ್ನು ಪರಿಣಾಮಕಾರಿಯಾಗಿ ಪ್ರಕ್ರಿಯೆಗೊಳಿಸಲು ಅನುವು ಮಾಡಿಕೊಡುತ್ತದೆ. ಕಾರ್ಯಾಚರಣೆಯ ಸಮಯದಲ್ಲಿ 500 mW ಗಿಂತ ಕಡಿಮೆ ವಿದ್ಯುತ್ ಬಳಸುತ್ತದೆ.
*ಏರೋಸ್ಪೇಸ್ ಮತ್ತು ಉಪಗ್ರಹ ಕಾರ್ಯಾಚರಣೆಗಳಲ್ಲಿ ಅಗತ್ಯವಿರುವ ಸಂಕೀರ್ಣ ಲೆಕ್ಕಾಚಾರಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಮಾರ್ಗದರ್ಶನ, ಸಂಚರಣೆ, ನಿಯಂತ್ರಣಕ್ಕೆ ಅಗತ್ಯವಿರುವ ಸಂಕೀರ್ಣ ಗಣಿತದ ಲೆಕ್ಕಾಚಾರಗಳನ್ನು ಸಕ್ರಿಯಗೊಳಿಸುತ್ತದೆ.
*ಪ್ರೊಸೆಸರ್ ಬಾಹ್ಯಾಕಾಶ ಅನ್ವಯಿಕೆಗಳಿಗೆ ಅನುಗುಣವಾಗಿ ಕಸ್ಟಮ್ ಇನ್ಸ್ಟ್ರಕ್ಷನ್ ಸೆಟ್ ಆರ್ಕಿಟೆಕ್ಚರ್ (ISA) ಅನ್ನು ಬಳಸುತ್ತದೆ.
*ಇದು ಏರೋಸ್ಪೇಸ್ ಎಂಜಿನಿಯರಿಂಗ್ನಲ್ಲಿ ವ್ಯಾಪಕವಾಗಿ ಬಳಸಲಾಗುವ ಅಡಾ ಭಾಷೆಯಲ್ಲಿ ಪ್ರೋಗ್ರಾಮಿಂಗ್ ಅನ್ನು ಬೆಂಬಲಿಸುತ್ತದೆ.
*ಕಂಪೈಲರ್, ಅಸೆಂಬ್ಲರ್, ಲಿಂಕರ್ ಮತ್ತು ಸಿಮ್ಯುಲೇಟರ್ನಂತಹ ಎಲ್ಲಾ ಪೋಷಕ ಸಾಫ್ಟ್ವೇರ್ ಪರಿಕರಗಳನ್ನು ಇಸ್ರೋ ಆಂತರಿಕವಾಗಿ ಅಭಿವೃದ್ಧಿಪಡಿಸಿದೆ.
*ಉಪಗ್ರಹ ಉಡಾವಣೆ ಮತ್ತು ಬಾಹ್ಯಾಕಾಶ ಹಾರಾಟದ ಸಮಯದಲ್ಲಿ ಹೆಚ್ಚಿನ ಕಂಪನ, ತಾಪಮಾನವನ್ನು ನಿರ್ವಹಿಸಲು ಪರೀಕ್ಷಿಸಲಾಗಿದೆ. ಪ್ರೊಸೆಸರ್ -55ºC ನಿಂದ 125ºC ವರೆಗಿನ ತಾಪಮಾನದ ವ್ಯಾಪ್ತಿಯಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತದೆ.
*ಮೈಕ್ರೊಪ್ರೊಸೆಸರ್ ಅನ್ನು SCL ನ 180nm CMOS ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ. ಇದು ದೃಢವಾದ ಕಾರ್ಯಕ್ಷಮತೆ ಮತ್ತು ಏಕೀಕರಣವನ್ನು ಖಚಿತಪಡಿಸುತ್ತದೆ.
ಬಾಹ್ಯಾಕಾಶ ಮಿಷನ್ಗಷ್ಟೇ ಸೀಮಿತವೇ?
ವಿಕ್ರಮ್-32 ಅನ್ನು ಪ್ರಾಥಮಿಕವಾಗಿ ಉಪಗ್ರಹಗಳು ಮತ್ತು ರಾಕೆಟ್ಗಳಿಗಾಗಿ ನಿರ್ಮಿಸಲಾಗಿದ್ದರೂ, ಅದರ ದೃಢವಾದ ವಿನ್ಯಾಸವು ಇತರ ನಿರ್ಣಾಯಕ ಕ್ಷೇತ್ರಗಳಿಗೂ ಸೂಕ್ತವಾಗಿದೆ. ರಕ್ಷಣಾ ವ್ಯವಸ್ಥೆಗಳು, ಏರೋಸ್ಪೇಸ್ ತಂತ್ರಜ್ಞಾನಗಳು, ಸುಧಾರಿತ ಆಟೋಮೋಟಿವ್ ಪರಿಹಾರಗಳು ಮತ್ತು ನಿರ್ಣಾಯಕ ಇಂಧನ ಮೂಲಸೌಕರ್ಯದಂತಹ ಹೆಚ್ಚಿನ ವಿಶ್ವಾಸಾರ್ಹತೆಯ ಕ್ಷೇತ್ರಗಳಿಗೆ ಸೂಕ್ತವಾಗಿದೆ. ಬಾಹ್ಯಾಕಾಶದಲ್ಲಿ ಅದರ ಕಾರ್ಯಕ್ಷಮತೆಯನ್ನು ಖಚಿತಪಡಿಸುತ್ತದೆ. ಅಷ್ಟೇ ಅಲ್ಲದೇ, ಕಂಪ್ಯೂಟರ್ಗಳು, ರಾಡಾರ್ ವ್ಯವಸ್ಥೆಗಳು, ವಿದ್ಯುತ್ ವಾಹನಗಳು ಮತ್ತು ಇಂಧನ ಗ್ರಿಡ್ ನಿಯಂತ್ರಣಗಳಿಗೆ ಪ್ರಯೋಜನವನ್ನು ನೀಡುತ್ತದೆ. 2021 ರಲ್ಲಿ ಪ್ರಾರಂಭಿಸಲಾದ ಭಾರತ ಸೆಮಿಕಂಡಕ್ಟರ್ ಮಿಷನ್ ಮತ್ತು ವಿನ್ಯಾಸ-ಸಂಯೋಜಿತ ಪ್ರೋತ್ಸಾಹಕ (DLI) ಯೋಜನೆಯ ಅಡಿಯಲ್ಲಿ ವಿಕ್ರಮ್-32 ರ ಅಭಿವೃದ್ಧಿಯು ಒಂದು ಪ್ರಮುಖ ಸಾಧನೆಯಾಗಿದೆ. ಇದು ಆಮದು ಮಾಡಿಕೊಂಡ ಮೈಕ್ರೋಚಿಪ್ಗಳ ಮೇಲಿನ ಭಾರತದ ಅವಲಂಬನೆ ಕಡಿಮೆಗೊಳಿಸುತ್ತದೆ. ಆತ್ಮನಿರ್ಭರ ಭಾರತ (ಸ್ವಾವಲಂಬಿ ಭಾರತ) ಕಡೆಗೆ ಒಂದು ದೊಡ್ಡ ಹೆಜ್ಜೆಯಾಗಿದೆ.
ವಿಕ್ರಮ್-32 vs ಇಂಟೆಲ್/ ARM ಚಿಪ್ಗಳು
ದೈನಂದಿನ ಪರಿಸರದಲ್ಲಿ ವೇಗ, ಬಹು-ಕಾರ್ಯ ಮತ್ತು ವಿದ್ಯುತ್ ದಕ್ಷತೆಗಾಗಿ ಗ್ರಾಹಕ ಸಂಸ್ಕಾರಕಗಳನ್ನು ವಿನ್ಯಾಸಗೊಳಿಸಲಾಗಿದೆ. ಆದರೆ, ವಿಕ್ರಮ್-32 ಅನ್ನು ತೀವ್ರ ವಿಶ್ವಾಸಾರ್ಹತೆ ಮತ್ತು ಮಿಷನ್-ನಿರ್ಣಾಯಕ ಕಾರ್ಯಕ್ಷಮತೆಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ರಾಕೆಟ್ ಉಡಾವಣೆಗಳ ಸಮಯದಲ್ಲಿ ತೀವ್ರವಾದ ಕಂಪನಗಳು, ಬಾಹ್ಯಾಕಾಶದಲ್ಲಿ ತೀವ್ರ ತಾಪಮಾನ ಮತ್ತು ಕಾಸ್ಮಿಕ್ ವಿಕಿರಣವನ್ನು ತಡೆದುಕೊಳ್ಳಬಲ್ಲದು. ಮುಖ್ಯವಾಗಿ, ಚಿಪ್ ಸಂಪೂರ್ಣವಾಗಿ ಭಾರತದ ನಿಯಂತ್ರಣದಲ್ಲಿದೆ. ನಿರ್ಣಾಯಕ ರಾಷ್ಟ್ರೀಯ ಕಾರ್ಯಾಚರಣೆಗಳಲ್ಲಿ ಭದ್ರತೆ ಮತ್ತು ನಂಬಿಕೆಯನ್ನು ಖಾತ್ರಿಪಡಿಸುತ್ತದೆ.
ಮಿಕ್ರಮ್ ಚಿಪ್ ಮೈಲುಗಲ್ಲು
ಇಸ್ರೋ ಈಚೆಗೆ ನಡೆಸಿದ ಪಿಎಸ್ಎಲ್ವಿ-ಸಿ60 ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ವಿಕ್ರಮ್-32 ಸಾಧನಗಳ ಮೊದಲ ಬ್ಯಾಚ್ ಅನ್ನು ಬಳಕೆ ಮಾಡಲಾಗಿತ್ತು. ಅವು ಬಾಹ್ಯಾಕಾಶ ಪರಿಸ್ಥಿತಿಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿವೆ. ಈ ಮೈಲಿಗಲ್ಲು ಚಿಪ್ ಅನ್ನು ಬಾಹ್ಯಾಕಾಶ ಕಾರ್ಯಾಚರಣೆಗೆ ಅರ್ಹ ಎಂದು ಗುರುತಿಸಿತು. ಭವಿಷ್ಯದ ಕಾರ್ಯಾಚರಣೆಗಳಿಗಾಗಿ ಇಸ್ರೋಗೆ ದೇಶೀಯವಾಗಿ ಉತ್ಪಾದಿಸಲಾದ ಮೈಕ್ರೊಪ್ರೊಸೆಸರ್ ಕೊಡುಗೆ ನೀಡಲಾಗಿದೆ.
ಭವಿಷ್ಯದ ಸವಾಲುಗಳೇನು?
ವಿಕ್ರಮ್-32 ಅನ್ನು 180-ನ್ಯಾನೋಮೀಟರ್ ಪ್ರೋಸೆಸ್ ಬಳಸಿ ನಿರ್ಮಿಸಲಾಗಿದೆ. ಆದರೆ, ಚಿಪ್ ತಯಾರಿಕೆಯ ಜಾಗತಿಕ ಪ್ರಮುಖ ಸಂಸ್ಥೆಗಳು, 3 ನ್ಯಾನೋಮೀಟರ್ ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪ್ರೊಸೆಸರ್ಗಳನ್ನು ತಯಾರಿಸುತ್ತಿವೆ. ಈ ಹಂತಕ್ಕೆ ಬರಲು ಗಣನೀಯ ಪ್ರಮಾಣದ ಹೂಡಿಕೆ ಮತ್ತು ಸಂಶೋಧನೆಯ ಅಗತ್ಯವಿದೆ. ಭಾರತಕ್ಕೆ ನುರಿತ ಎಂಜಿನಿಯರ್ಗಳು, EDA (ಪರಿಶೋಧನಾ ದತ್ತಾಂಶ ವಿಶ್ಲೇಷಣೆ) ಪರಿಕರಗಳು ಮತ್ತು ನಿರ್ಣಾಯಕ ವಸ್ತುಗಳಿಗೆ ಪೂರೈಕೆ ವ್ಯವಸ್ಥೆ ಅಗತ್ಯವಿದೆ. ಅದಕ್ಕಾಗಿ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಅಗತ್ಯವಿದೆ. ಬಾಹ್ಯಾಕಾಶ ದರ್ಜೆಯ ಚಿಪ್ಗಳಿಂದ ಮಾಸ್-ಮಾರುಕಟ್ಟೆ ಗ್ರಾಹಕ ಪ್ರೊಸೆಸರ್ಗಳ ಹಂತಕ್ಕೆ ಬರುವುದು ಸವಾಲಿನದ್ದಾಗಿದೆ.
ಸಾಂದರ್ಭಿಕ ಚಿತ್ರ
ಚಿಪ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇರುವವರ್ಯಾರು?
ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ತೈವಾನ್ ಮುಂಚೂಣಿಯಲ್ಲಿದೆ. ವಿಶ್ವದ ಅತಿದೊಡ್ಡ ಕಾಂಟ್ರಾಕ್ಟ್ ಚಿಪ್ ತಯಾರಕರಾದ TSMCಯಿಂದಾಗಿ ಹೈಟೆಕ್ ಚಿಪ್ ತಯಾರಿಕೆ ನಾಯಕನಾಗಿದೆ. ದಕ್ಷಿಣ ಕೊರಿಯಾ ಸ್ಯಾಮ್ಸಂಗ್ ಮೂಲಕ ಪ್ರಾಬಲ್ಯ ಹೊಂದಿದೆ. ಅಮೆರಿಕದ ಇನ್ಟೆಲ್, ಎನ್ವಿಡಿಯಾ ಕಂಪನಿಗಳ ಮೂಲಕ ಚಿಪ್ ತಯಾರಿಕೆಯಲ್ಲಿ ತನ್ನದೇ ಕೊಡುಗೆ ನೀಡುತ್ತಿದೆ. R&D ಸೌಲಭ್ಯಗಳನ್ನು ಹೊಂದಿರುವ ಇಸ್ರೇಲ್ ಹಾಗೂ ದೊಡ್ಡ ಉತ್ಪಾದನಾ ಸಾಮರ್ಥ್ಯ ಮತ್ತು ಅತ್ಯುತ್ತಮ ದೇಶೀಯ ಉದ್ಯಮವನ್ನು ಹೊಂದಿರುವ ಚೀನಾ ಕೂಡ ಚಿಪ್ ತಯಾರಿಕೆಯಲ್ಲಿ ಮುಂಚೂಣಿ ದೇಶಗಳ ಸಾಲಿನಲ್ಲಿವೆ. ಈ ಸಾಲಿಗೆ ಸೇರಲು ಭಾರತ ಡಿಜಿಟಲ್ ಕ್ರಾಂತಿಯ ಹೆಜ್ಜೆ ಇಟ್ಟಿದೆ.
ಸೆಮಿಕಂಡಕ್ಟರ್ ಚಿಪ್ ಆಮದು ಏರಿಕೆ
ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಸೆಮಿಕಂಡಕ್ಟರ್ ಚಿಪ್ ಆಮದಿನಲ್ಲಿ ಏರಿಕೆ ಕಂಡುಬಂದಿದೆ. 2021-22 ರಲ್ಲಿ ಭಾರತವು 1,789 ಕೋಟಿ ಚಿಪ್ಗಳನ್ನು ಆಮದು ಮಾಡಿಕೊಂಡಿದೆ. 2022-23ನೇ ಸಾಲಿನಲ್ಲಿ 1,464 ಕೋಟಿ ಹಾಗೂ 2023-24ನೇ ಸಾಲಿನಲ್ಲಿ 1,843 ಕೋಟಿ ಚಿಪ್ಗಳನ್ನು ಆಮದು ಮಾಡಿಕೊಂಡಿದೆ. ಆಮದು ಪ್ರಮಾಣ ಹೆಚ್ಚಾಗುತ್ತಿದೆ. ಜಾಗತಿಕ ಮಟ್ಟದ ನಿರ್ಬಂಧಗಳ ಸಮಯದಲ್ಲಿ ಆಮದಿಗೆ ಪೆಟ್ಟು ಬಿದ್ದರೆ, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ, ಚಿಪ್ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಭಾರತ ಹೆಜ್ಜೆ ಇಟ್ಟಿದೆ.
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (02-09-2025)
- ಭಾರತದ ಮೊದಲ ಮೈಕ್ರೋಚಿಪ್ ‘ವಿಕ್ರಮ್ 3201’ (Vikram 3201) : ಮಹತ್ವ ಮತ್ತು ವಿಶೇಷತೆಗಳ ಸಂಪೂರ್ಣ ಮಾಹಿತಿ
- ಏಷ್ಯಾದ ಅತ್ಯಂತ ಸುರಕ್ಷಿತ ದೇಶ ಸಿಂಗಾಪುರ (Asia’s Safest Country)
- Current Affairs Quiz : ಪ್ರಚಲಿತ ಘಟನೆಗಳ ಕ್ವಿಜ್ (01-09-2025)
- ಇಂದಿನ ಪ್ರಚಲಿತ ವಿದ್ಯಮಾನಗಳು / 01-09-2025 (Today’s Current Affairs)