Polluted Cities : ವಿಶ್ವದ 20 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ 13 ನಗರಗಳು
13 Of World’s 20 Most Polluted Cities In India, Delhi Most Polluted Capital
ವಿಶ್ವದ ಅತ್ಯಂತ ಕಲುಷಿತ ಗಾಳಿಯನ್ನು ಹೊಂದಿರುವ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಜಗತ್ತಿನ 20 ಅತ್ಯಂತ ಕಲುಷಿತ ನಗರಗಳಲ್ಲಿ 13 ನಗರಗಳು ಭಾರತದಲ್ಲೇ ಇವೆ ಎಂದು ತಿಳಿದು ಬಂದಿದೆ. ಸ್ವಿಸ್ ವಾಯು ಗುಣಮಟ್ಟದ ತಂತ್ರಜ್ಞಾನ ಕಂಪನಿ ಐಕ್ಯೂಏರ್‌ನ ‘ವಿಶ್ವ ವಾಯು ಗುಣಮಟ್ಟ ವರದಿ 2024’ ಪ್ರಕಾರ, ದೆಹಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾಗಿಯೇ ಉಳಿದಿದ್ದು, 2024 ರಲ್ಲಿ, ಭಾರತವು ವಿಶ್ವದ ಐದನೇ ಅತ್ಯಂತ ಕಲುಷಿತ ರಾಷ್ಟ್ರವಾಗಿತ್ತು. 2023ರಲ್ಲಿ, ಭಾರತವು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿತ್ತು.
ಈ ಪಟ್ಟಿಯಲ್ಲಿ ಮೇಘಾಲಯದ ಬರ್ನಿಹತ್ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನ ದೆಹಲಿ ಪಡೆದುಕೊಂಡಿದೆ. 2024ರಲ್ಲಿ ಭಾರತ ವಿಶ್ವದ ಐದನೇ ಅತ್ಯಂತ ಕಲುಷಿತ ರಾಷ್ಟ್ರವಾಗಿದ್ದರೆ, 2023ರಲ್ಲಿ ಭಾರತ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿತ್ತು.
*ವಿಶ್ವದ 20 ಅತ್ಯಂತ ಕಲುಷಿತ ನಗರಗಳಲ್ಲಿ 13 ಭಾರತೀಯ ನಗರಗಳು :
ಬರ್ನಿಹತ್, ದೆಹಲಿ, ಮುಲ್ಲನ್‌ಪುರ (ಪಂಜಾಬ್), ಫರಿದಾಬಾದ್, ಲೋನಿ, ನವದೆಹಲಿ, ಗುರಗಾಂವ್, ಗಂಗಾನಗರ, ಗ್ರೇಟರ್ ನೋಯ್ಡಾ, ಭಿವಾಡಿ, ಮುಜಫರ್‌ನಗರ, ಹನುಮಾನ್‌ಗಢ ಮತ್ತು ನೋಯ್ಡಾ.
*ಜೀವಿತಾವಧಿ ಕುಸಿತ :
ವಾಯು ಮಾಲಿನ್ಯವು ಭಾರತದಲ್ಲಿ ಗಂಭೀರ ಆರೋಗ್ಯ ಅಪಾಯವಾಗಿದ್ದು, ಇದು ಅಂದಾಜು 5.2 ವರ್ಷಗಳ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಕಳೆದ ವರ್ಷ ಪ್ರಕಟವಾದ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಅಧ್ಯಯನದ ಪ್ರಕಾರ, 2009 ರಿಂದ 2019 ರವರೆಗೆ ಭಾರತದಲ್ಲಿ ಪ್ರತಿ ವರ್ಷ ಸುಮಾರು 1.5 ಮಿಲಿಯನ್ ಸಾವುಗಳು PM2.5 ಮಾಲಿನ್ಯದಿಂದ ಸಂಭವಿಸಿವೆ ಎಂದು ಹೇಳಿದೆ.
ವಿಶ್ವದ 10 ಅತ್ಯಂತ ಕಲುಷಿತ ನಗರಗಳಲ್ಲಿ ಆರು ಭಾರತದಲ್ಲಿವೆ :
ವಿಶ್ವದ 10 ಅತ್ಯಂತ ಕಲುಷಿತ ನಗರಗಳಲ್ಲಿ ಆರು ಭಾರತದಲ್ಲಿವೆ. ದೆಹಲಿಯಲ್ಲಿ ವಾಯು ಮಾಲಿನ್ಯದ ಮಟ್ಟ ನಿರಂತರವಾಗಿ ಹೆಚ್ಚಿನ ಮಟ್ಟದಲ್ಲಿ ದಾಖಲಾಗಿದೆ. WHO ನೀಡಿದ ಮಿತಿಯ ಪ್ರಕಾರ ವಾರ್ಷಿಕ PM2.5 ಮಟ್ಟ ಪ್ರತಿ ಘನ ಮೀಟರ್‌ಗೆ 5 ಮೈಕ್ರೋಗ್ರಾಂ ಇರಬೇಕು. ಆದರೆ ಇಲ್ಲಿ ವಾರ್ಷಿಕ ಸರಾಸರಿ PM2.5 ಮಟ್ಟ ಪ್ರತಿ ಘನ ಮೀಟರ್‌ಗೆ 91.6 ಮೈಕ್ರೋಗ್ರಾಂಗಳಷ್ಟಿದೆ. 2023ರ ಪ್ರತಿ ಘನ ಮೀಟರ್‌ಗೆ 92.7 ಮೈಕ್ರೋಗ್ರಾಂಗಳಷ್ಟಿತ್ತು. ಈ ಅಂಕಿ ಅಂಶ ಕಳೆದ ಹಲವು ವರ್ಷಗಳಿಂದ ಹೆಚ್ಚೇನು ಬದಲಾಗಿಲ್ಲ. ಒಟ್ಟಾರೆಯಾಗಿ ಭಾರತದ ಶೇಕಡ 35 ರಷ್ಟು ನಗರಗಳು ವಾರ್ಷಿಕ PM2.5 ಮಟ್ಟವನ್ನು WHO ಮಿತಿಯಾದ ಪ್ರತಿ ಘನ ಮೀಟರ್‌ಗೆ 5 ಮೈಕ್ರೋಗ್ರಾಂಗಳಿಗಿಂತ 10 ಪಟ್ಟು ಹೆಚ್ಚು ದಾಖಲಿಸಿವೆ.
ಹಾಗಾದರೆ PM2.5 ಎಂದರೇನು?
PM2.5 ಎಂದರೆ ಗಾಳಿಯಲ್ಲಿ ಇರುವ 2.5 ಮೈಕ್ರಾನ್‌ಗಳಿಗಿಂತ ಚಿಕ್ಕದಾದ ಸೂಕ್ಷ್ಮ ಮಾಲಿನ್ಯ ಕಣಗಳು. ಈ ಕಣಗಳು ಶ್ವಾಸಕೋಶ ಮತ್ತು ರಕ್ತಪ್ರವಾಹವನ್ನು ಪ್ರವೇಶಿಸಿ ಉಸಿರಾಟದ ತೊಂದರೆಗಳು, ಹೃದ್ರೋಗ ಮತ್ತು ಕ್ಯಾನ್ಸರ್‌ಗೆ ಕಾರಣವಾಗಬಹುದು. ಇದರ ಮೂಲಗಳಲ್ಲಿ ವಾಹನಗಳಿಂದ ಬರುವ ಹೊಗೆ, ಕೈಗಾರಿಕಾ ಹೊರಸೂಸುವಿಕೆ ಮತ್ತು ಮರ ಅಥವಾ ಬೆಳೆ ಉಳಿಕೆಗಳನ್ನು ಸುಡುವುದು ಸೇರಿವೆ.
ಸೌಮ್ಯ ಸ್ವಾಮಿನಾಥನ್ ನೀಡಿದ ಸಲಹೆಗಳೇನು?
ವಾಯು ಗುಣಮಟ್ಟದ ದತ್ತಾಂಶ ಸಂಗ್ರಹಣೆಯಲ್ಲಿ ಭಾರತ ಪ್ರಗತಿ ಸಾಧಿಸಿದೆ ಎಂದು ಮಾಜಿ WHO ಮುಖ್ಯ ವಿಜ್ಞಾನಿ ಮತ್ತು ಆರೋಗ್ಯ ಸಚಿವಾಲಯದ ಸಲಹೆಗಾರ್ತಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ. ಆದರೆ ಈ ಬಗ್ಗೆ ಸಮರ್ಪಕ ಕ್ರಮದ ಕೊರತೆ ಇದೆ. ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ನಮ್ಮ ಬಳಿ ಡೇಟಾ ಇದೆ, ಈಗ ನಾವು ಕ್ರಮ ಕೈಗೊಳ್ಳಬೇಕಾಗಿದೆ’ ಎಂದಿದ್ದಾರೆ.
ಜೊತೆಗೆ ಅವರು ಇದಕ್ಕೆ ಪರಿಹಾರವನ್ನೂ ನೀಡಿದ್ದಾರೆ. ಉದಾಹರಣೆಗೆ ಬಯೋಮಾಸ್ ಅನ್ನು LPG ಯೊಂದಿಗೆ ಬದಲಾಯಿಸುವುದು. ಭಾರತವು ಈಗಾಗಲೇ ಇದಕ್ಕಾಗಿ ಒಂದು ಯೋಜನೆಯನ್ನು ಹೊಂದಿದೆ. ಆದರೆ ನಾವು ಹೆಚ್ಚುವರಿ ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡಬೇಕು. ಬಡ ಕುಟುಂಬಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಹೆಚ್ಚಿನ ಸಬ್ಸಿಡಿ ಸಿಗಬೇಕು. ಇದು ಅವರ ಆರೋಗ್ಯವನ್ನು ಸುಧಾರಿಸುವುದು ಮಾತ್ರವಲ್ಲದೆ, ಹೊರಾಂಗಣ ವಾಯು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಎಂದಿದ್ದಾರೆ.
ಅಲ್ಲದೆ ನಗರಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ವಿಸ್ತರಿಸುವುದು ಮತ್ತು ಕೆಲವು ಕಾರುಗಳಿಗೆ ದಂಡ ವಿಧಿಸುವುದು ಸಹಾಯ ಮಾಡಬಹುದು ಎಂದು ಅವರು ಹೇಳಿದರು. ಇದಕ್ಕಾಗಿ ಪ್ರೋತ್ಸಾಹ ಮತ್ತು ದಂಡಗಳ ಮಿಶ್ರ ವಿಧಾನ ಅಗತ್ಯ ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದರು.