ಪಹಲ್ಗಾಮ್ ನರಮೇಧಕ್ಕೆ 1 ವರ್ಷ : ಇಲ್ಲಿದೆ ಒಂದು ಹಿನ್ನೋಟ
ಪ್ರವಾಸಿಗರಲ್ಲಿ ಹಿಂದೂಗಳನ್ನು ಹುಡುಕಿ ಹತ್ಯೆ ಮಾಡಿದ ಪಹಲ್ಗಾಮ್ ಭಯೋತ್ಪಾದಕ ದಾಳಿ (Pahalgam Attack) ಇಂದಿಗೆ (ಏ.22) ಒಂದು ವರ್ಷ ಪೂರ್ಣಗೊಂಡಿದೆ. ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬದವರ ನೋವು, ಕಣ್ಣೀರು ಹಸಿಯಾಗಿಯೇ ಉಳಿದಿದೆ.
ಏನಾಯಿತು ಆ ದಿನ?
ಜಮ್ಮು-ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಎಂಬ ಸುಂದರ ಪ್ರವಾಸಿ ತಾಣದಲ್ಲಿ ಪ್ರವಾಸಿಗರು ಸಂಭ್ರಮದಲ್ಲಿದ್ದರು. ಪ್ರವಾಸಿಗರು ತೆರೆದ ಕಣಿವೆಯಲ್ಲಿ ಆನಂದಿಸುತ್ತಿದ್ದಾಗ ಇದ್ದಕ್ಕಿದ್ದಂತೆ, ಶಸ್ತ್ರಸಜ್ಜಿತ ವ್ಯಕ್ತಿಗಳು ಆ ಪ್ರದೇಶಕ್ಕೆ ಪ್ರವೇಶಿಸಿ ಮನಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿದರು. ಜನರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಲು ಪ್ರಾರಂಭಿಸಿದರು. ಈ ವೇಳೆ ಪ್ರವಾಸಿಗರ ಮೇಲೆ ಏಕಾಏಕಿ ದಾಳಿ ನಡೆಸಿದ ಉಗ್ರರು, ಹಿಂದೂಗಳನ್ನು ಹುಡುಕಿ ಕೊಂದರು. ಭಯೋತ್ಪಾದಕರ ದಾಳಿಗೆ 26 ಮಂದಿ ಪ್ರವಾಸಿಗರು ಪ್ರಾಣ ಕಳೆದುಕೊಂಡರು. ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಹಲವರು ಗಾಯಗೊಂಡರು. ಕಣ್ಣೆದುರೇ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಸ್ಥರ ದುಃಖ ಮುಗಿಲು ಮುಟ್ಟಿತು. ಹೆಣ್ಣೊಬ್ಬಳು ತನ್ನ ಪತಿಯ ಮೃತದೇಹದ ಮುಂದೆ ಕುಳಿತು ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ದಾಳಿಯ ಹೊಣೆ ಯಾರದು?
ಭಯೋತ್ಪಾದಕ ದಾಳಿಯ ಹೊಣೆಯನ್ನು ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಹೊತ್ತುಕೊಂಡಿದೆ. ಇದು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿದೆ. ಆದರೆ, ಪಾಕಿಸ್ತಾನ ಮಾತ್ರ ಈ ದಾಳಿಯಲ್ಲಿ ತನ್ನದೇನೂ ಪಾತ್ರವಿಲ್ಲ ಅಂತ ನಾಟಕವಾಡಿತು. ಪಾಕ್ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಕಮಾಂಡರ್ ಸಾಜಿದ್ ಜಾಟ್ ಸೇರಿದಂತೆ ಏಳು ಆರೋಪಿಗಳನ್ನು ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಯಿತು. ದಾಳಿಯ ಹಿಂದಿನ ಪಾಕ್ ಪಿತೂರಿಯನ್ನು ಸಹ ಎನ್ಐಎ ಬಹಿರಂಗಪಡಿಸಿತು.
ರಕ್ಷಣಾ ಕಾರ್ಯಾಚರಣೆ
ದಾಳಿಯ ಬೆನ್ನಲ್ಲೇ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ಸುರಕ್ಷಿತಗೊಳಿಸಿದವು. ತುರ್ತು ಸೇವೆಗಳನ್ನು ಸಕ್ರಿಯಗೊಳಿಸಲಾಯಿತು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಯಿತು. ಜನರು ಸುರಕ್ಷಿತ ಸ್ಥಳಕ್ಕೆ ತಲುಪಲು ಸಹಾಯ ಮಾಡುವಲ್ಲಿ ಸ್ಥಳೀಯ ನಿವಾಸಿಗಳು, ಪೋನಿ ಹ್ಯಾಂಡ್ಲರ್ಗಳು ಮತ್ತು ಮಾರ್ಗದರ್ಶಕರು ನಿರ್ಣಾಯಕ ಪಾತ್ರ ವಹಿಸಿದರು. ಅವರ ತ್ವರಿತ ಪ್ರತಿಕ್ರಿಯೆಯು ಇನ್ನೂ ಹೆಚ್ಚಿನ ಸಾವು-ನೋವುಗಳನ್ನು ತಡೆಯಲು ಸಹಾಯ ಮಾಡಿತು. ಈ ದಾಳಿಯು ಇಡೀ ರಾಷ್ಟ್ರವನ್ನು ಆಘಾತಗೊಳಿಸಿತು. ಇತ್ತೀಚಿನ ವರ್ಷಗಳಲ್ಲಿ ಚೇತರಿಸಿಕೊಳ್ಳುತ್ತಿದ್ದ ಕಾಶ್ಮೀರದ ಪ್ರವಾಸೋದ್ಯಮ ಕ್ಷೇತ್ರದ ಮೇಲೂ ಇದು ಬಲವಾದ ಪರಿಣಾಮ ಬೀರಿತು. ಘೋರ ಭಯೋತ್ಪಾದಕ ಕೃತ್ಯದಲ್ಲಿ ಅಸುನೀಗಿದವರಿಗಾಗಿ ಇಡೀ ದೇಶವೇ ಮರುಗಿತು.
ಪಹಲ್ಗಾಮ್ ದಾಳಿಗೆ ಪ್ರತೀಕಾರ ‘ಆಪರೇಷನ್ ಸಿಂಧೂರ’
ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಿಂದ ಅಮಾಯಕರ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ದಾಳಿಗೆ ಭಾರತವು ಪ್ರತೀಕಾರದ ಸಂಕಲ್ಪ ಮಾಡಿತು. ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆ ನಡೆಸಿತು. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತು. ಭಾರತ ಮತ್ತು ಪಾಕಿಸ್ತಾನ ನಡುವೆ 2025ರ ಮೇ 7 ರಂದು ಸಂಘರ್ಷ ಪ್ರಾರಂಭವಾಯಿತು. ಉಭಯ ದೇಶಗಳು ಪರಸ್ಪರರ ಮೇಲೆ ಶಸ್ತ್ರಾಸ್ತ್ರ ಪ್ರಯೋಗ ಮಾಡಿದವು. ಪಾಕಿಸ್ತಾನದ 11ಕ್ಕೂ ಹೆಚ್ಚು ವಾಯುನೆಲೆಗಳು ಮತ್ತು ಸೇನಾ ನೆಲೆಗಳನ್ನು ಭಾರತ ಯಶಸ್ವಿಯಾಗಿ ಧ್ವಂಸಗೊಳಿಸಿತು. ಬ್ರಹ್ಮೋಸ್ ಕ್ಷಿಪಣಿಗಳನ್ನು ಬಳಸಿದ ಈ ತೀವ್ರ ದಾಳಿಯಲ್ಲಿ ಸರ್ಗೋಧಾ, ನೂರ್ ಖಾನ್, ಭೋಲಾರಿ, ಜಾಕೋಬಾಬಾದ್, ಸುಕ್ಕೂರ್, ಮತ್ತು ರಹೀಮ್ ಯಾರ್ ಖಾನ್ನಂತಹ ಪಾಕ್ನ ಪ್ರಮುಖ ನೆಲೆಗಳು ಉಡೀಸ್ ಆದವು. ಇದು ಪಾಕ್ ವಾಯುಪಡೆಯ ಮೂಲಸೌಕರ್ಯಕ್ಕೆ ದೊಡ್ಡ ಹೊಡೆತ ನೀಡಿದೆ.
ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಿದ ಕ್ರೂರಿಗಳನ್ನು ಎಡೆಮುರಿ ಕಟ್ಟುವ ಸಂಕಲ್ಪಕ್ಕೆ ‘ಆಪರೇಷನ್ ಸಿಂಧೂರ’ ಅಂತ ಹೆಸರಿಡಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಮಹಿಳಾ ಯೋಧರು ಕೂಡ ದಿಟ್ಟತನದಿಂದ ಹೋರಾಡಿದ್ದಾರೆ. ಭಾರತ ನಡೆಸಿದ ಪ್ರತೀಕಾರದ ದಾಳಿಗೆ ಪಾಕ್ ಮತ್ತು ಪಾಕ್ ಆಕ್ರಮಿತ ಪ್ರದೇಶದಲ್ಲಿದ್ದ ಉಗ್ರರ ನೆಲೆಗಳು ಛಿದ್ರಗೊಂಡವು. 100ಕ್ಕೂ ಹೆಚ್ಚು ಉಗ್ರರು ಹತರಾದರು. ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಇಬ್ಬರು ಮಹಿಳಾ ಸೇನಾಧಿಕಾರಿಗಳು ವಿವರಣೆ ನೀಡುವ ಮೂಲಕ ದೇಶದ ಗಮನ ಸೆಳೆದರು. ಭಯೋತ್ಪಾದಕ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ಮಹಿಳೆಯರಿಗೆ ಮಹಿಳಾಧಿಕಾರಿಗಳಿಂದಲೇ ಸಾಂತ್ವನ ಹೇಳಿಸಿದಂತಿತ್ತು ಈ ನಡೆ.
‘ಆಪರೇಷನ್ ಮಹಾದೇವ’ – ಉಗ್ರರ ಅಂತ್ಯ
ಪಹಲ್ಗಾಮ್ನಲ್ಲಿ 26 ಪ್ರವಾಸಿಗರನ್ನು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ ಉಗ್ರರನ್ನು ಸದೆಬಡಿಯಲು ಭಾರತ ಕೈಗೊಂಡ ಕಾರ್ಯಾಚರಣೆಯೇ ‘ಆಪರೇಷನ್ ಮಹಾದೇವ’. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಡಚಿಗಾಮ್ ಅರಣ್ಯದಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ, ಪಹಲ್ಗಾಮ್ ದಾಳಿಯ ರೂವಾರಿಗಳಾದ ಮೂವರು ಭಯೋತ್ಪಾದಕರನ್ನು ಹೊಡೆದು ಹಾಕಿದವು. ಸೇನೆಗೆ ಖಚಿತ ಮಾಹಿತಿ ಆಧಾರದಲ್ಲಿ ಈ ಕಾರ್ಯಾಚರಣೆ ನಡೆದಿತ್ತು. ಸಂಸತ್ನಲ್ಲಿ ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರ ಚರ್ಚೆ ನಡೆಯುತ್ತಿರುವಾಗಲೇ ಈ ಎನ್ಕೌಂಟರ್ ನಡೆದಿರುವುದು ಗಮನಾರ್ಹ.
ಪಹಲ್ಗಾಮ್ ದಾಳಿ (Pahalgam Attack) – ಮುಖ್ಯಾಂಶಗಳು
ದಿನಾಂಕ: ಏಪ್ರಿಲ್ 22, 2025
ಸ್ಥಳ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರವಾಸಿ ಪ್ರದೇಶ
ಗುರಿ: ಪ್ರವಾಸಿಗರನ್ನು ಟಾರ್ಗೆಟ್ ಮಾಡಿದ ಭಯೋತ್ಪಾದಕ ದಾಳಿ
ಘಟನೆ: ಹಿಂದು ಪ್ರವಾಸಿಗರನ್ನು ಗುರುತಿಸಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ
ಸಾವಿನ ಸಂಖ್ಯೆ: 26 ಮಂದಿ ನಿರಪರಾಧ ನಾಗರಿಕರು ಮೃತಪಟ್ಟರು
ಗಾಯಾಳುಗಳು: ಅನೇಕರು ಗಂಭೀರವಾಗಿ ಗಾಯಗೊಂಡರು
ಹೊಣೆಗಾರಿಕೆ: ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆಗಳ ಮೇಲೆ ಶಂಕೆ
ದೇಶದ ಪ್ರತಿಕ್ರಿಯೆ: ಭಾರತದೆಲ್ಲೆಡೆ ತೀವ್ರ ಖಂಡನೆ, ಪ್ರತಿಭಟನೆಗಳು ಮತ್ತು ಸೇನೆಯಿಂದ ಆಪರೇಷನ್ ಸಿಂಧೂರ್ (Operation Sindoor)


