AwardsCurrent AffairsLatest Updates

ವಾಯುಪಡೆ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ಅಶೋಕ ಚಕ್ರ ಗೌರವ

Share With Friends

ಭಾರತದ ಅತ್ಯುನ್ನತ ಶಾಂತಿಕಾಲೀನ ವೀರತ್ವ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಭಾರತೀಯ ವಾಯುಪಡೆ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನಿಸಿದರು. ನವದೆಹಲಿಯ ಕರ್ತವ್ಯ ಪಥ್ನಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಈ ಗೌರವ ನೀಡಲಾಯಿತು.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ಕ್ಕೆ ಕಾಲಿಟ್ಟ ಮೊದಲ ಭಾರತೀಯ ಎಂಬ ಐತಿಹಾಸಿಕ ಸಾಧನೆ ಮಾಡಿದ ಶುಭಾಂಶು ಶುಕ್ಲಾ, ದೇಶದ ಮಾನವ ಬಾಹ್ಯಾಕಾಶ ಯಾನ ಕಾರ್ಯಕ್ರಮಕ್ಕೆ ಹೊಸ ಆಯಾಮ ನೀಡಿರುವುದಕ್ಕಾಗಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ ನಡೆದ ಐತಿಹಾಸಿಕ ಆಕ್ಸಿಯಂ-4 (Axiom-4) ಮಿಷನ್‌ನ ಭಾಗವಾಗಿ, ಶುಕ್ಲಾ 18 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಕಾಲ ಕಳೆದಿದ್ದರು. ಈ ಮೂಲಕ ಅವರು ಬಾಹ್ಯಾಕಾಶಕ್ಕೆ ತೆರಳಿದ ಎರಡನೇ ಭಾರತೀಯರಾಗಿದ್ದು, 41 ವರ್ಷಗಳ ಬಳಿಕ ಭಾರತ ಮತ್ತೆ ಮಾನವ ಬಾಹ್ಯಾಕಾಶ ಯಾನದಲ್ಲಿ ಮಹತ್ವದ ಹೆಜ್ಜೆ ಇಟ್ಟಿತು. ಇದಕ್ಕೂ ಮೊದಲು 1984ರಲ್ಲಿ ರಾಕೇಶ್ ಶರ್ಮಾ ರಷ್ಯಾದ ಸೋಯುಜ್ ಯಾನದಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು.

ಯುದ್ಧವಿಮಾನ ಪೈಲಟ್ ಆಗಿರುವ ಶುಭಾಂಶು ಶುಕ್ಲಾ ಅವರಿಗೆ ಸುಮಾರು 2,000 ಗಂಟೆಗಳ ಹಾರಾಟ ಅನುಭವವಿದ್ದು, ಸು-30 ಎಂಕೆಐ, ಮಿಗ್-21, ಮಿಗ್-29, ಜಾಗ್ವಾರ್, ಹಾಕ್, ಡೋರ್ನಿಯರ್ ಮತ್ತು ಎಎನ್-32 ಸೇರಿದಂತೆ ಹಲವು ವಿಮಾನಗಳನ್ನು ಹಾರಿಸಿರುವ ದಾಖಲೆಯಿದೆ.

ಆಕ್ಸಿಯಂ-4 ಮಿಷನ್ ವೇಳೆ ಅವರು ಸುಧಾರಿತ ವೈಜ್ಞಾನಿಕ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದ್ದು, ಜಾಗತಿಕ ಬಾಹ್ಯಾಕಾಶ ತಜ್ಞರಿಂದ ಭಾರೀ ಪ್ರಶಂಸೆ ಗಳಿಸಿದೆ. ಈ ಮಿಷನ್ ಅನ್ನು ಅಮೆರಿಕದ ಖಾಸಗಿ ಸಂಸ್ಥೆ ಆಕ್ಸಿಯಂ ಸ್ಪೇಸ್ ಕಾರ್ಯಗತಗೊಳಿಸಿದ್ದು, ನಾಸಾ, ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA) ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಹಭಾಗಿತ್ವ ಹೊಂದಿದ್ದವು.ಲಖನೌ ಮೂಲದ ಶುಭಾಂಶು ಶುಕ್ಲಾ ಅವರು 2006ರ ಜೂನ್‌ನಲ್ಲಿ ಭಾರತೀಯ ವಾಯುಪಡೆಯ ಯುದ್ಧವಿಮಾನ ವಿಭಾಗಕ್ಕೆ ಆಯ್ಕೆಯಾಗಿದ್ದರು.

ಕರ್ನಲ್ ಸೋಫಿಯಾ ಕುರೇಷಿ (Colonel Sofiya Qureshi) ಅವರಿಗೆ ವಿಶಿಷ್ಟ ಸೇವಾ ಪದಕ ಪ್ರದಾನ

ಆಪರೇಷನ್ ‘ಸಿಂದೂರ್’ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿ ದೇಶದ ಗಮನ ಸೆಳೆದ ಕರ್ನಲ್ ಸೋಫಿಯಾ ಕುರೇಷಿ ಅವರನ್ನು 2026ರ ಗಣರಾಜ್ಯೋತ್ಸವ ಗೌರವ ಪಟ್ಟಿಯಲ್ಲಿ ವಿಶಿಷ್ಟ ಸೇವಾ ಪದಕ (Vishisht Seva Medal) ಗೆ ಆಯ್ಕೆ ಮಾಡಲಾಗಿದೆ.

ಆಪರೇಷನ್ ಸಿಂದೂರ್ ವೇಳೆ ಕರ್ನಲ್ ಕುರೇಷಿ ಅವರು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಶ್ರಿ ಅವರೊಂದಿಗೆ ನಡೆಸಿದ ಪತ್ರಿಕಾಗೋಷ್ಠಿಗಳು ದೇಶಾದ್ಯಂತ ಗಮನ ಸೆಳೆದಿದ್ದವು.

77ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ (ಜನವರಿ 25, 2026) 70 ಸಶಸ್ತ್ರ ಪಡೆ ಸಿಬ್ಬಂದಿಗೆ ಶೌರ್ಯ ಮತ್ತು ಸೇವಾ ಪದಕಗಳನ್ನು ಪ್ರದಾನ ಮಾಡಿದರು. ಈ ಪಟ್ಟಿಯಲ್ಲಿ ಆರು ಮರಣೋತ್ತರ ಪ್ರಶಸ್ತಿಗಳು ಸಹ ಸೇರಿವೆ.

ಪ್ರದಾನಗೊಂಡ ಪ್ರಮುಖ ಪ್ರಶಸ್ತಿಗಳು:
ಅಶೋಕ ಚಕ್ರ – 1
ಕೀರ್ತಿ ಚಕ್ರ – 3
ಶೌರ್ಯ ಚಕ್ರ – 13 (ಒಂದು ಮರಣೋತ್ತರ)
ಬಾರ್ ಟು ಸೇನಾ ಮೆಡಲ್ (ಗ್ಯಾಲಂಟ್ರಿ) – 1
ಸೇನಾ ಮೆಡಲ್‌ಗಳು (ಗ್ಯಾಲಂಟ್ರಿ) – 44 (ಐದು ಮರಣೋತ್ತರ)
ನೌಸೇನಾ ಮೆಡಲ್‌ಗಳು (ಗ್ಯಾಲಂಟ್ರಿ) – 6
ವಾಯುಸೇನಾ ಮೆಡಲ್‌ಗಳು (ಗ್ಯಾಲಂಟ್ರಿ) – 2

ಪ್ರಶಸ್ತಿಗೆ ಆಯ್ಕೆಯಾದ ಕೆಲವು ಪ್ರಮುಖರು:
ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ – ಅಶೋಕ ಚಕ್ರ (ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮೊದಲ ಭಾರತೀಯ)

ಗ್ರೂಪ್ ಕ್ಯಾಪ್ಟನ್ ಪ್ರಸಾಂತ್ ಬಾಲಕೃಷ್ಣನ್ ನಾಯರ್, ಮೇಜರ್ ಅರ್ಶದೀಪ್ ಸಿಂಗ್, ನೈಬ್ ಸುಬೇದಾರ್ ದೋಲೆಶ್ವರ್ ಸುಬ್ಬಾ – ಕೀರ್ತಿ ಚಕ್ರ

ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ – ಉತ್ತಮ ಯುದ್ಧ ಸೇವಾ ಪದಕ

ರಾಷ್ಟ್ರಪತಿಗಳಿಂದ ಒಟ್ಟು 301 ಸೇನಾ ಪದಕಗಳು ಪ್ರದಾನಗೊಂಡಿದ್ದು, ಇದರಲ್ಲಿ:
30 ಪರಮ್ ವಿಶಿಷ್ಟ ಸೇವಾ ಪದಕ
4 ಉತ್ತಮ ಯುದ್ಧ ಸೇವಾ ಪದಕ
56 ಅತಿ ವಿಶಿಷ್ಟ ಸೇವಾ ಪದಕ
9 ಯುದ್ಧ ಸೇವಾ ಪದಕ
2 ಡಿಸ್ಟಿಂಗ್ವಿಶ್ಡ್ ಬಾರ್ ಟು ಸೇನಾ ಮೆಡಲ್
43 ಡಿಸ್ಟಿಂಗ್ವಿಶ್ಡ್ ಸೇನಾ ಮೆಡಲ್
8 ಡಿಸ್ಟಿಂಗ್ವಿಶ್ಡ್ ನೌಸೇನಾ ಮೆಡಲ್
14 ಡಿಸ್ಟಿಂಗ್ವಿಶ್ಡ್ ವಾಯುಸೇನಾ ಮೆಡಲ್
135 ವಿಶಿಷ್ಟ ಸೇವಾ ಪದಕಗಳು ಸೇರಿವೆ.

ಇದೇ ವೇಳೆ, 77ನೇ ಗಣರಾಜ್ಯೋತ್ಸವದ ಪೂರ್ವಸಂಧ್ಯೆಯಲ್ಲಿ ಸಶಸ್ತ್ರ ಪಡೆ ಸಿಬ್ಬಂದಿಗೆ 98 ಮೆನ್ಶನ್‌ಡ್-ಇನ್-ಡಿಸ್ಪ್ಯಾಚಸ್ ಗೌರವಗಳು ಪ್ರದಾನಗೊಂಡವು. ಇದರಲ್ಲಿ ಭಾರತೀಯ ಸೇನೆಯ 81 ಮಂದಿ (ಐದು ಮರಣೋತ್ತರ ಸೇರಿ), ನೌಕಾಪಡೆಯ 15 ಮಂದಿ ಹಾಗೂ ಗಡಿ ರಸ್ತೆ ಅಭಿವೃದ್ಧಿ ಮಂಡಳಿಯ 2 ಮಂದಿ (ಮರಣೋತ್ತರ) ಸೇರಿದ್ದಾರೆ.

ಅಶೋಕ ಚಕ್ರ ಪ್ರಶಸ್ತಿ :

ದೇಶದ ಶಾಂತಿಕಾಲದ ಅತೀ ಉನ್ನತ ವೀರತ್ವ ಪ್ರಶಸ್ತಿಯಾದ ಅಶೋಕ ಚಕ್ರ ಪ್ರಶಸ್ತಿಯನ್ನು ಅತ್ಯುನ್ನತ ಸಾಹಸ, ಧೈರ್ಯ ಮತ್ತು ತ್ಯಾಗ ಪ್ರದರ್ಶಿಸಿದ ವ್ಯಕ್ತಿಗಳಿಗೆ ಭಾರತ ಸರ್ಕಾರ ನೀಡುತ್ತದೆ. 1952ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಯನ್ನು ಆರಂಭದಲ್ಲಿ ‘ಅಶೋಕ ಚಕ್ರ ವರ್ಗ–I’ ಎಂದು ಕರೆಯಲಾಗುತ್ತಿತ್ತು. 1967ರಿಂದ ಇದಕ್ಕೆ ಅಧಿಕೃತವಾಗಿ ಅಶೋಕ ಚಕ್ರ ಎಂಬ ಹೆಸರು ನೀಡಲಾಗಿದೆ.

ಭಾರತದ ರಾಷ್ಟ್ರಪತಿಗಳು ಈ ಪ್ರಶಸ್ತಿಯನ್ನು ಗಣರಾಜ್ಯೋತ್ಸವ (ಜನವರಿ 26) ಅಥವಾ ಸ್ವಾತಂತ್ರ್ಯ ದಿನ (ಆಗಸ್ಟ್ 15)ದಂದು ಪ್ರದಾನ ಮಾಡುತ್ತಾರೆ. ಶತ್ರು ವಿರುದ್ಧದ ಯುದ್ಧವಲ್ಲದ ಸಂದರ್ಭಗಳಲ್ಲಿ ತೋರಿದ ಅಪೂರ್ವ ಸಾಹಸಕ್ಕಾಗಿ ಈ ಗೌರವ ನೀಡಲಾಗುತ್ತದೆ.

ಸಶಸ್ತ್ರ ಪಡೆಗಳ ಸದಸ್ಯರು, ಅರೆಸೈನಿಕ ಪಡೆಗಳು, ಪೊಲೀಸ್ ಸಿಬ್ಬಂದಿ ಮಾತ್ರವಲ್ಲದೆ, ನಾಗರಿಕರಿಗೂ ಅಶೋಕ ಚಕ್ರ ಪ್ರಶಸ್ತಿ ಲಭಿಸಬಹುದು. ವಿಶೇಷವಾಗಿ ದೇಶದ ಸುರಕ್ಷತೆ, ಸಾರ್ವಜನಿಕ ರಕ್ಷಣೆಯ ಸಂದರ್ಭದಲ್ಲಿ ಜೀವದ ಹಂಗನ್ನು ತೊರೆದು ತೋರಿದ ವೀರತೆಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅಗತ್ಯವಿದ್ದರೆ ಮರಣೋತ್ತರವಾಗಿ ಕೂಡ ಈ ಗೌರವ ಪ್ರದಾನ ಮಾಡಲಾಗುತ್ತದೆ.

ಅಶೋಕ ಚಕ್ರ ಪದಕವು ಬಂಗಾರದ ಬಣ್ಣದ ವೃತ್ತಾಕಾರದಲ್ಲಿದ್ದು, ಅದರ ಮಧ್ಯದಲ್ಲಿ ಅಶೋಕ ಚಕ್ರ ಚಿಹ್ನೆ ಅಳವಡಿಸಲಾಗಿದೆ. ಹಿಂಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ‘ಅಶೋಕ ಚಕ್ರ’ ಎಂಬ ಅಕ್ಷರಗಳು ಕೆತ್ತಲ್ಪಟ್ಟಿವೆ.

ಶಾಂತಿಕಾಲದ ವೀರತ್ವ ಪ್ರಶಸ್ತಿಗಳಲ್ಲಿ ಅಶೋಕ ಚಕ್ರಕ್ಕೆ ಅಗ್ರಸ್ಥಾನವಿದ್ದು, ಇದು ದೇಶದ ಶೌರ್ಯ, ತ್ಯಾಗ ಮತ್ತು ಧೈರ್ಯದ ಪ್ರತೀಕವಾಗಿಯೇ ಪರಿಗಣಿಸಲಾಗಿದೆ.


author avatar
spardhatimes
error: Content Copyright protected !!