Latest UpdatesSports

ಟಿ20 ವಿಶ್ವಕಪ್ ಫೈನಲ್ : ಅಹಮದಾಬಾದ್‌ನ ಭಾರತ-ನ್ಯೂಜಿಲೆಂಡ್ ಫೈನಲ್ ಫೈಟ್

Share With Friends

T20 World Cup Final : ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ನಾಳೆ ಮುಖಾಮುಖಿಯಾಗಲಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಮಹತ್ವದ ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ರೋಚಕ 7 ರನ್ ಜಯ ಸಾಧಿಸಿ ಫೈನಲ್‌ಗೆ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೇವಲ 42 ಎಸೆತಗಳಲ್ಲಿ 89 ರನ್ ಸಿಡಿಸಿ ಮಿಂಚಿದ್ದು, ಭಾರತ ತಂಡ 7 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿ ದಾಖಲೆ ಮೊತ್ತ ದಾಖಲಿಸಿತ್ತು.

ಇನ್ನೊಂದೆಡೆ, ಮಿಚೆಲ್ ಸ್ಯಾಂಟ್ನರ್ ನಾಯಕತ್ವದ ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್ ಭರ್ಜರಿ ಜಯ ಸಾಧಿಸಿ ಫೈನಲ್ ತಲುಪಿದೆ. ಈ ಪಂದ್ಯದಲ್ಲಿ ಫಿನ್ ಆಲೆನ್ ಕೇವಲ 33 ಎಸೆತಗಳಲ್ಲಿ ಶತಕ ಸಿಡಿಸಿ ಟೂರ್ನಿಯ ಇತಿಹಾಸದಲ್ಲೇ ಅತಿ ವೇಗದ ಶತಕ ದಾಖಲಿಸಿದ್ದಾರೆ.

ಟಿ20 ಪಂದ್ಯಗಳ ಒಟ್ಟು ಮುಖಾಮುಖಿ ದಾಖಲೆಯಲ್ಲಿ ಭಾರತ ತಂಡ 18 ಜಯಗಳೊಂದಿಗೆ ಮುನ್ನಡೆಯಲ್ಲಿದ್ದು, ನ್ಯೂಜಿಲೆಂಡ್ 11 ಬಾರಿ ಗೆದ್ದಿದೆ. ಆದರೆ ಟಿ20 ವಿಶ್ವಕಪ್‌ನಲ್ಲಿ ನಡೆದ ಮೂರು ಪಂದ್ಯಗಳಲ್ಲೂ ನ್ಯೂಜಿಲೆಂಡ್ ತಂಡವೇ ಜಯ ಸಾಧಿಸಿದೆ. ಹೀಗಾಗಿ ನಾಳೆಯ ಫೈನಲ್ ಪಂದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಟಿ20 ವಿಶ್ವಕಪ್‌ ಫೈನಲ್‌ ತನಕ ಭಾರತ ನಡೆದು ಬಂದು ಹಾದಿ :

ಹಾಲಿ ಆವೃತ್ತಿಯಲ್ಲಿ ಎಂಟು ಪಂದ್ಯಗಳಿಂದ ಏಳು ಗೆಲುವುಗಳು, ಅದರಲ್ಲಿ ಕೊನೆಯದಾಗಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ರೋಮಾಂಚಕ ಗೆಲುವು, ಭಾರತವನ್ನು ಐಸಿಸಿ ಪುರುಷರ ಟಿ20 ವಿಶ್ವಕಪ್ 2026 ರ ಫೈನಲ್‌ಗೆ ಮುನ್ನಡೆಸಿದೆ. ಫೈನಲ್‌ ವರೆಗಿನ ಭಾರತದ ಜರ್ನಿ ಹೇಗಿತ್ತು ಎಂಬ ವರದಿ ಇಲ್ಲಿದೆ.

ಅಮೆರಿಕ ವಿರುದ್ಧ 29 ರನ್‌ ಗೆಲುವು
ಮುಂಬೈನಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಅಮೆರಿಕ ವಿರುದ್ಧ 161 ರನ್‌ ಗಳಿಸಿ ಸೋಲುವ ಭೀತಿಗೆ ಸಿಲುಕಿತ್ತು. ಆದರೆ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್(ಮೂರು ವಿಕೆಟ್‌) ಮತ್ತು ಅರ್ಶ್‌ದೀಪ್‌ ಸಿಂಗ್ ಹಾಗೂ ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್‌ಗಳನ್ನು ಕಿತ್ತು ಭಾರತಕ್ಕೆ ಗೆಲುವು ತಂದುಕೊಟ್ಟರು. ನಾಯಕ ಸೂರ್ಯಕುಮಾರ್ ಯಾದವ್ 49 ಎಸೆತಗಳಲ್ಲಿ 84 ರನ್ ಗಳಿಸಿದರು.

ನಮೀಬಿಯಾ ವಿರುದ್ಧ 93 ರನ್‌ ಜಯ
ಎರಡನೇ ಪಂದ್ಯದಲ್ಲಿ ಭಾರತ ಪ್ರಬಲ ಬ್ಯಾಟಿಂಗ್ ಪ್ರದರ್ಶನ ನೀಡಿತು. ಇಶಾನ್ ಕಿಶನ್ (24 ಎಸೆತಗಳಲ್ಲಿ 61) ಮತ್ತು ಹಾರ್ದಿಕ್ ಪಾಂಡ್ಯ (28 ಎಸೆತಗಳಲ್ಲಿ 52) ಚುರುಕಾದ ಅರ್ಧಶತಕಗಳನ್ನು ಗಳಿಸುವ ಮೂಲಕ ಭಾರತವು ದೆಹಲಿಯಲ್ಲಿ ನಡೆದ ಈ ಪಂದ್ಯದಲ್ಲಿ 209/9 ಗಳಿಸಿತು. ಗುರಿ ಬೆನ್ನಟ್ಟಿದ ನಮೀಬಿಯಾ 9.1 ಓವರ್‌ಗಳಲ್ಲಿ 86/2 ರನ್ ಗಳಿಸಿ ಭರವಸೆಯ ಆರಂಭವನ್ನು ಪಡೆದರೂ, ಆ ಬಳಿಕ ಭಾರತದ ಬಿಗು ದಾಳಿಗೆ ತತ್ತರಿಸಿ 116 ರನ್‌ಗಳಿಗೆ ಆಲೌಟ್ ಆಯಿತು.

ಪಾಕ್‌ ವಿರುದ್ಧ 61 ರನ್‌ ಜಯಭೇರಿ
ಟಿ20 ವಿಶ್ವಕಪ್‌ಗೂ ಮುನ್ನ ಬಹಿಷ್ಕಾರದ ಹೈಡ್ರಾಮಾ ಮಾಡಿದ್ದ ಪಾಕಿಸ್ತಾನಕ್ಕೆ ಭಾರತ 61 ರನ್‌ಗಳ ಸೋಲುಣಿಸಿತು. ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವು ತನ್ನದಾಗಿಸಿಕೊಂಡ ಭಾರತ ಸೂಪರ್‌-8 ಹಂತ ಪ್ರವೇಶಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 7 ವಿಕೆಟ್‌ಗೆ 175 ರನ್‌ ಕಲೆಹಾಕಿತು. ಈ ಮೊತ್ತ ಕಡಿಮೆಯಾಯಿತೇ ಎಂದು ಅಭಿಮಾನಿಗಳು ಚಿಂತೆಗೀಡಾದರೂ, ಭಾರತೀಯ ಬೌಲರ್‌ಗಳು ಅದಕ್ಕೆ ಆಸ್ಪದ ಕೊಡಲಿಲ್ಲ. ಪಾಕಿಸ್ತಾನವನ್ನು 18 ಓವರ್‌ಗಳಲ್ಲಿ 114 ರನ್‌ಗೆ ಆಲೌಟ್‌ ಮಾಡಿ 61 ರನ್‌ಗಳಲ್ಲಿ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡಿತು.

ನೆದರ್‌ಲೆಂಡ್ಸ್‌ ವಿರುದ್ಧ 17 ರನ್‌ ಗೆಲುವು
ಭಾರತ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ನೆದರ್‌ಲೆಂಡ್ಸ್‌ ವಿರುದ್ಧ 17 ರನ್‌ಗಳಿಂದ ಗೆಲುವು ಸಾಧಿಸಿತು. ತಂಡದ ಬೌಲಿಂಗ್‌ ವಿಭಾಗಕ್ಕೆ ಸ್ಪರ್ಧೆ ಎದುರಾದರೂ, ಪಂದ್ಯ ಗೆಲ್ಲಲು ಸಫಲವಾದ ಭಾರತ ‘ಎ’ ಗುಂಪಿನಲ್ಲಿ 8 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ಸೂಪರ್‌-8 ಪ್ರವೇಶಿಸಿತು. ಭಾರತ 6 ವಿಕೆಟ್‌ ನಷ್ಟದಲ್ಲಿ 193 ರನ್‌ ಕಲೆಹಾಕಿತು. ಬೃಹತ್‌ ಗುರಿ ಬೆನ್ನತ್ತಿದ ನೆದರ್‌ಲೆಂಡ್ಸ್‌ ಕೆಲ ಹೋರಾಟದ ಹೊರತಾಗಿಯೂ 7 ವಿಕೆಟ್‌ ನಷ್ಟದಲ್ಲಿ 176 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು
ಅಜೇಯವಾಗಿ ಮುನ್ನುಗ್ಗುತ್ತಿದ್ದ ಭಾರತಕ್ಕೆ ದಕ್ಷಿಣ ಆಫ್ರಿಕಾ ಮೊದಲ ಸೋಲಿನ ಏಟು ನೀಡಿತು. ಅಹಮದಾಬಾದ್‌ನಲ್ಲಿ ನಡೆದ ಸೂಪರ್‌-8 ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ಬಳಗ 76 ರನ್‌ಗಳಿಂದ ಪರಾಭವಗೊಂಡಿತು. ದ.ಆಫ್ರಿಕಾ 7 ವಿಕೆಟ್‌ ನಷ್ಟದಲ್ಲಿ 187 ರನ್‌ ಕಲೆಹಾಕಿದರೆ, ಬೃಹತ್‌ ಮೊತ್ತ ಬೆನ್ನತ್ತಿದ ಭಾರತ 18.5 ಓವರ್‌ಗಳಲ್ಲಿ ಕೇವಲ 111 ರನ್‌ಗೆ ಅಲೌಟಾಯಿತು.

ಜಿಂಬಾಬ್ವೆ ವಿರುದ್ಧ ಭರ್ಜರಿ ಜಯ
ದಕ್ಷಿಣ ಆಫ್ರಿಕಾ ವಿರುದ್ಧ ಒಂದು ಹೀನಾಯ ಸೋಲಿನಿಂದಾಗಿ ಜಿಂಬಾಬ್ವೆ ವಿರುದ್ಧದ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ 4 ವಿಕೆಟ್‌ಗೆ 256 ರನ್‌ ಪೇರಿಸಿ 72 ರನ್‌ ಅಂತರದ ಗೆಲುವು ಸಾಧಿಸಿ ಸೆಮಿಫೈನಲ್‌ ರೇಸ್‌ನಲ್ಲಿ ಉಳಿದುಕೊಂಡಿತು.

ವಿಂಡೀಸ್‌ ವಿರುದ್ಧ 5 ವಿಕೆಟ್‌ ಜಯ
ಮತ್ತೊಂದು ಮಸ್ಟ್‌ ವಿನ್‌ ಗೇಮ್‌ ಪಂದ್ಯದಲ್ಲಿ ಭಾರತ ತಂಡ ವೆಸ್ಟ್‌ಇಂಡೀಸ್‌ ವಿರುದ್ಧ 196 ರನ್‌ ಬೆನ್ನತ್ತಿ ಗೆದ್ದು ಸೆಮಿಫೈನಲ್‌ ಪ್ರವೇಶಿಸಿತು. ಟೂರ್ನಿಯ ಬಹುತೇಕ ಪಂದ್ಯಗಳಲ್ಲಿ ತಂಡದಿಂದ ಹೊರಗಿದ್ದ ಸಂಜು ಸ್ಯಾಮ್ಸನ್‌ ಈ ಪಂದ್ಯದಲ್ಲಿ ಭಾರತದ ಆಪತ್ಬಾಂಧವರಾಗಿ ಮೂಡಿಬಂದರು. ಅವರ ಏಕಾಂಗಿ ಹೋರಾಟ ತಂಡವನ್ನು ಸೆಮೀಸ್‌ಗೇರಿಸಿತು.

ಇಂಗ್ಲೆಂಡ್‌ ವಿರುದ್ಧ 7 ರನ್‌ ರೋಚಕ ಜಯ
ವಾಂಖೇಡೆ ಕ್ರೀಡಾಂಗಣದಲ್ಲಿ ರನ್‌ ಮಳೆಯನ್ನೇ ಸುರಿಸಿದ ಇಂಗ್ಲೆಂಡ್‌ ವಿರುದ್ಧದ ರಣರೋಚಕ ಸೆಮಿಫೈನಲ್‌ನಲ್ಲಿ ಭಾರತ 7 ರನ್‌ ರೋಚಕ ಗೆಲುವು ಸಾಧಿಸಿತು. ಬೃಹತ್‌ ಮೊತ್ತ ಕಲೆಹಾಕಿದರೂ ಒಂದು ಹಂತದಲ್ಲಿ ಸೋಲಿನ ಭೀತಿಯಲ್ಲಿದ್ದ ಭಾರತ, ಕೊನೆಯಲ್ಲಿ ಮತ್ತೆ ಮೇಲುಗೈ ಸಾಧಿಸಿ 2 ಬಾರಿ ಚಾಂಪಿಯನ್‌ ಇಂಗ್ಲೆಂಡ್‌ಗೆ ಶಾಕ್ ನೀಡಿತು.



author avatar
spardhatimes
error: Content Copyright protected !!