ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲೈಸೆನ್ಸ್ ರದ್ದು : ಮುಂದೇನು..? ಗ್ರಾಹಕರ ಕಥೆಯೇನು..?
ದೇಶದ ಡಿಜಿಟಲ್ ಹಣಕಾಸು ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯಾಗಿ, Reserve Bank of India (ಆರ್‌ಬಿಐ) Paytm Payments Bank Limited ಗೆ ನೀಡಿದ್ದ ಬ್ಯಾಂಕಿಂಗ್ ಲೈಸೆನ್ಸ್ ಅನ್ನು ತತ್‌ಕ್ಷಣದಿಂದಲೇ ರದ್ದುಪಡಿಸಿದೆ. ಈ ನಿರ್ಧಾರವು 1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 22(4) ಅಡಿಯಲ್ಲಿ ಜಾರಿಗೆ ಬಂದಿದೆ. 2022ರಿಂದಲೂ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿವಿಧ ನಿರ್ಬಂಧಗಳನ್ನು ಎದುರಿಸುತ್ತಿದೆ. ಭಾರತದ ಡಿಜಿಟಲ್ ಪೇಮೆಂಟ್ ಲೋಕದಲ್ಲಿ ಕ್ರಾಂತಿ ಮಾಡಿದ್ದ ಪೇಟಿಎಂ ಸಂಸ್ಥೆಯ ಬ್ಯಾಂಕಿಂಗ್ ವಿಭಾಗಕ್ಕೆ ಈಗ ದೊಡ್ಡ ಹೊಡೆತ ಬಿದ್ದಿದೆ.
ದೇಶದ ಕೋಟ್ಯಾಂತರ ಜನರ ದೈನಂದಿನ ಹಣಕಾಸು ವ್ಯವಹಾರದ ಅವಿಭಾಜ್ಯ ಅಂಗವಾಗಿದ್ದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ನ ಬ್ಯಾಂಕಿಂಗ್ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕೃತವಾಗಿ ರದ್ದುಗೊಳಿಸಿದೆ.
| ಪ್ರಮುಖ ಅಂಶಗಳು: ಏಪ್ರಿಲ್ 24, 2026ರಿಂದಲೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಯಾವುದೇ ಬ್ಯಾಂಕಿಂಗ್ ಸೇವೆ ನೀಡಲು ಅನುಮತಿ ಇಲ್ಲ ಬ್ಯಾಂಕನ್ನು ಮುಚ್ಚುವ (Winding Up) ಪ್ರಕ್ರಿಯೆಗಾಗಿ ಹೈಕೋರ್ಟ್ ಮೊರೆ ಹೋಗಲು ಆರ್‌ಬಿಐ ತೀರ್ಮಾನ ನಿಯಮ ಉಲ್ಲಂಘನೆ ಮತ್ತು ಆಡಳಿತಾತ್ಮಕ ವೈಫಲ್ಯಗಳು ಕ್ರಮಕ್ಕೆ ಕಾರಣ |
ಏನಿದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್..?
Paytm ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಈ ಬ್ಯಾಂಕ್ 2017ರಲ್ಲಿ ಕಾರ್ಯಾರಂಭ ಮಾಡಿತ್ತು. ಡಿಜಿಟಲ್ ಮೂಲಕ ಖಾತೆ ತೆರೆಯುವಿಕೆ, ಹಣ ವರ್ಗಾವಣೆ, ವ್ಯಾಲೆಟ್ ಸೇವೆಗಳು ಮತ್ತು ಫಾಸ್ಟ್ಯಾಗ್ ಸೌಲಭ್ಯಗಳನ್ನು ಒದಗಿಸುತ್ತಿತ್ತು. ಕಡಿಮೆ ಸಮಯದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿ ಜನಪ್ರಿಯತೆಯನ್ನು ಗಳಿಸಿತ್ತು.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ಅಧಿಕೃತವಾಗಿ ನವೆಂಬರ್ 28, 2017 ರಂದು ಸ್ಥಾಪಿಸಲಾಯಿತು. ಈ ಬ್ಯಾಂಕ್‌ಗೆ Reserve Bank of India (RBI) ಅನುಮತಿ ನೀಡಿದ ನಂತರ ಇದು ಕಾರ್ಯಾರಂಭ ಮಾಡಿತು. ಡಿಜಿಟಲ್ ವ್ಯವಹಾರಗಳನ್ನು ಸುಲಭಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.
ಈ ಬ್ಯಾಂಕ್‌ನ ಸ್ಥಾಪಕರು Vijay Shekhar Sharma. ಅವರು ಪೇಟಿಎಂ ಕಂಪನಿಯ ಸ್ಥಾಪಕರೂ ಆಗಿದ್ದು, ಬ್ಯಾಂಕ್‌ನಲ್ಲಿ 51% ಹಂಚಿಕೆಯನ್ನು ಹೊಂದಿದ್ದರು. ಉಳಿದ 49% ಹಂಚಿಕೆಯನ್ನು One97 Communications ಹೊಂದಿತ್ತು.
ಲೈಸೆನ್ಸ್ ರದ್ದಿಗೆ ಕಾರಣವೇನು?
ಆರ್‌ಬಿಐ ಪ್ರಕಾರ:
ಬ್ಯಾಂಕಿಂಗ್ ನಿಯಮಗಳ ಪುನಃಪುನಃ ಉಲ್ಲಂಘನೆ
ಕೆವೈಸಿ ಪ್ರಕ್ರಿಯೆಗಳಲ್ಲಿ ಗಂಭೀರ ಲೋಪಗಳು
ಗ್ರಾಹಕರ ಹಾಗೂ ಠೇವಣಿದಾರರ ಹಿತಾಸಕ್ತಿಗೆ ವಿರುದ್ಧವಾದ ಕಾರ್ಯಾಚರಣೆ
ಈ ಹಿನ್ನೆಲೆಯಲ್ಲಿ 2022ರಿಂದಲೇ ಹಲವು ನಿರ್ಬಂಧಗಳನ್ನು ಹೇರಲಾಗಿತ್ತು. 2024ರಲ್ಲಿ ಹೊಸ ಠೇವಣಿಗಳು ಮತ್ತು ಕ್ರೆಡಿಟ್ ವ್ಯವಹಾರಗಳನ್ನೂ ನಿಷೇಧಿಸಲಾಗಿತ್ತು.
ಪೇಟಿಎಂ ನೀಡಿದ ಸೇವೆಗಳು :
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಬಳಕೆದಾರರಿಗೆ ಕೆಳಗಿನ ಸೇವೆಗಳನ್ನು ಒದಗಿಸುತ್ತಿತ್ತು:
ಸೇವಿಂಗ್ಸ್ ಮತ್ತು ಕರೆಂಟ್ ಖಾತೆಗಳು
ಡೆಬಿಟ್ ಕಾರ್ಡ್ ಸೌಲಭ್ಯ
ಮೊಬೈಲ್ ಆಪ್ ಮೂಲಕ ಆನ್‌ಲೈನ್ ಬ್ಯಾಂಕಿಂಗ್
UPI ಆಧಾರಿತ ತ್ವರಿತ ಡಿಜಿಟಲ್ ಪಾವತಿಗಳು
ವಾಲೆಟ್ ಮತ್ತು FASTag ಸೇವೆಗಳು
ಈ ಸೇವೆಗಳು ಬ್ಯಾಂಕ್ ಶಾಖೆಗೆ ಭೇಟಿ ನೀಡದೇ ಹಣಕಾಸು ವ್ಯವಹಾರಗಳನ್ನು ನಡೆಸಲು ಸಹಾಯ ಮಾಡಿದ್ದವು.
ಬೆಳವಣಿಗೆ ಮತ್ತು ಸಾಧನೆಗಳು
ಆರಂಭಿಕ ವರ್ಷಗಳಲ್ಲಿ ಬ್ಯಾಂಕ್ ಗಮನಾರ್ಹ ಬೆಳವಣಿಗೆಯನ್ನು ಕಂಡಿತು:
ಪ್ರತಿ ವರ್ಷ ನೂರಾರು ಕೋಟಿ ವ್ಯವಹಾರಗಳನ್ನು ನಿರ್ವಹಿಸಿತು
ಭಾರತದ ಪ್ರಮುಖ UPI ಬ್ಯಾಂಕ್‌ಗಳಲ್ಲಿ ಒಂದಾಗಿ ಹೊರಹೊಮ್ಮಿತು
ಕಡಿಮೆ ಅವಧಿಯಲ್ಲಿ ಲಾಭ ಗಳಿಸಿತು
ಎದುರಿಸಿದ ಸಮಸ್ಯೆಗಳು :
ಬ್ಯಾಂಕ್ RBI ನಿಯಮಾವಳಿಗಳನ್ನು ಪಾಲಿಸುವಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿತು:
KYC ನಿಯಮಗಳ ಉಲ್ಲಂಘನೆ
ಗ್ರಾಹಕ ಪರಿಶೀಲನಾ ದೋಷಗಳು
ನಿಯಮಾವಳಿ ಅನುಸರಣೆ ಕೊರತೆ
ಆರ್‌ಬಿಐ ಇಂತಹ ಕ್ರಮ ಕೈಗೊಳ್ಳಲು ಕಾರಣವೇನು..?
RBI ನೀಡಿರುವ ಮಾಹಿತಿಯ ಪ್ರಕಾರ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಕಾರ್ಯಾಚರಣೆಗಳು ಅದರ ಗ್ರಾಹಕರು ಮತ್ತು ಠೇವಣಿದಾರರ ಹಿತಾಸಕ್ತಿಗಳಿಗೆ ವಿರುದ್ಧವಾಗಿವೆ ಎಂದು ಕಂಡುಬಂದಿದೆ. ಜೊತೆಗೆ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಹಲವಾರು ಪ್ರಮುಖ ನಿಯಮಗಳನ್ನು ಪಾಲಿಸಲು ಬ್ಯಾಂಕ್ ಪದೇ ಪದೇ ವಿಫಲವಾಗಿದೆ. ಅದರಂತೆ, ಹಣಕಾಸು ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸವನ್ನು ಕಾಪಾಡಿಕೊಳ್ಳಲು ಇಂತಹ ನಿರ್ಧಾರ ಅಗತ್ಯವಾಗಿತ್ತು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಹಾಗಾಗಿ, ಏಪ್ರಿಲ್ 24, 2026 ರಿಂದ ಅಂದರೆ ಇಂದಿನ ನಿಂದಲೇ ಜಾರಿಗೆ ಬರುವಂತೆ ಈ ಬ್ಯಾಂಕ್ ಯಾವುದೇ ರೀತಿಯ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಅನುಮತಿ ಇರುವುದಿಲ್ಲ.
ಗ್ರಾಹಕರ ಹಣದ ಕಥೆಯೇನು..?
ಇನ್ನೂ, ಯಾವುದೇ ಬ್ಯಾಂಕ್ ಲೈಸೆನ್ಸ್ ಕಳೆದುಕೊಂಡಾಗ ಅಥವಾ ದಿವಾಳಿಯಾದಾಗ ಗ್ರಾಹಕರ ಹಿತಾಸಕ್ತಿ ಕಾಯಲು ಡಿಐಸಿಜಿಸಿ ಅಂದರೆ ಡೆಪಾಸಿಟ್ ಇನ್ಶೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಎಂಬ ವ್ಯವಸ್ಥೆ ಇರುತ್ತದೆ. ಇದರ ಅಡಿಯಲ್ಲಿ ಪ್ರತಿಯೊಬ್ಬ ಗ್ರಾಹಕನ ಠೇವಣಿಗೆ ಐದು ಲಕ್ಷ ರೂಪಾಯಿವರೆಗೆ ವಿಮಾ ರಕ್ಷಣೆ ಇರುತ್ತದೆ. ಅಂದರೆ, ನಿಮ್ಮ ಖಾತೆಯಲ್ಲಿ ಐದು ಲಕ್ಷ ರೂಪಾಯಿಗಿಂತ ಕಡಿಮೆ ಮೊತ್ತವಿದ್ದರೆ, ಆ ಹಣವನ್ನು ಮರಳಿ ಪಡೆಯುವ ಸಂಪೂರ್ಣ ಖಾತರಿಯನ್ನು ಆರ್‌ಬಿಐ ನೀಡುತ್ತದೆ.
ಹೀಗಾಗಿ ಸಣ್ಣ ಮಟ್ಟದ ಉಳಿತಾಯ ಹೊಂದಿರುವ ಗ್ರಾಹಕರು ಭಯಪಡುವ ಅಗತ್ಯವಿಲ್ಲ. ಇನ್ನೂ, ಲೈಸೆನ್ಸ್ ರದ್ದಾದ ನಂತರವೂ ಗ್ರಾಹಕರು ತಮ್ಮ ಖಾತೆಯಲ್ಲಿರುವ ಲಭ್ಯವಿರುವ ಹಣವನ್ನು ವಿತ್ ಡ್ರಾ ಮಾಡಲು ಅಥವಾ ಇತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಆರ್‌ಬಿಐ ಅವಕಾಶ ನೀಡುತ್ತದೆ. ಆದರೆ ನೆನಪಿರಲಿ, ಹೊಸದಾಗಿ ಹಣವನ್ನು ಜಮೆ ಮಾಡಲು ಅಂದರೆ ಕ್ರೆಡಿಟ್ ಮಾಡಲು ಅವಕಾಶ ಇರುವುದಿಲ್ಲ.
ಹಾಗಾಗಿ, ನಿಮ್ಮ ಬ್ಯಾಂಕ್ ಅಕೌಂಟ್ನಲ್ಲಿ ಹಣವಿದ್ದರೆ ಅದನ್ನು ನೀವು ಬಳಸಬಹುದು ಅಥವಾ ಸಂಪೂರ್ಣವಾಗಿ ಖಾಲಿ ಮಾಡಬಹುದು. ಇದಕ್ಕಾಗಿ ಆರ್‌ಬಿಐ ಒಂದು ನಿರ್ದಿಷ್ಟ ಕಾಲಮಿತಿಯನ್ನು ನೀಡಲಿದ್ದು, ಅದರೊಳಗೆ ನಿಮ್ಮ ವ್ಯವಹಾರಗಳನ್ನು ಪೂರ್ಣಗೊಳಿಸುವುದು ಉತ್ತಮ. ಮುಂದುವರೆದು, ಪೇಟಿಎಂ ಫಾಸ್ಟ್ಯಾಗ್ ಬಳಸುತ್ತಿರುವವರು ತಮ್ಮಲ್ಲಿರುವ ಬ್ಯಾಲೆನ್ಸ್ ಮುಗಿಯುವವರೆಗೆ ಅವುಗಳನ್ನು ಬಳಸಬಹುದು. ಆದರೆ ಒಮ್ಮೆ ಹಣ ಖಾಲಿಯಾದ ನಂತರ ಮತ್ತೆ ಟಾಪ್-ಅಪ್ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಗ್ರಾಹಕರು ತಮ್ಮ ಫಾಸ್ಟ್ಯಾಗ್ ಅನ್ನು ಬೇರೆ ಬ್ಯಾಂಕ್ಗಳಿಗೆ ಪೋರ್ಟ್ ಮಾಡಿಕೊಳ್ಳುವುದು ಅಥವಾ ಹೊಸ ಫಾಸ್ಟ್ಯಾಗ್ ಪಡೆದುಕೊಳ್ಳುವುದು ಸೂಕ್ತ.
ಗ್ರಾಹಕರು ಏನು ಮಾಡಬೇಕು ಮತ್ತು ಏನು ಮಾಡಬಾರದು..?
ಮೊದಲನೆಯದಾಗಿ ಯಾವುದೇ ವದಂತಿಗಳಿಗೆ ಅಥವಾ ಅನಧಿಕೃತ ಲಿಂಕ್ ಗಳಿಗೆ ಬಲಿಯಾಗಬೇಡಿ. ನಿಮ್ಮ ಹಣವನ್ನು ಮರಳಿಸುವುದಾಗಿ ಹೇಳಿ ಯಾರಾದರೂ ವೈಯಕ್ತಿಕ ಮಾಹಿತಿ ಅಥವಾ ಒಟಿಪಿ ಕೇಳಿದರೆ ನೀಡಬೇಡಿ. ಬ್ಯಾಂಕಿನ ಅಧಿಕೃತ ಆಪ್ ಅಥವಾ ವೆಬ್ ಸೈಟ್ ಮೂಲಕ ನಿಮ್ಮ ಬ್ಯಾಲೆನ್ಸ್ ಪರಿಶೀಲಿಸಿ ಮತ್ತು ಹಣ ವರ್ಗಾವಣೆ ಪ್ರಕ್ರಿಯೆ ಆರಂಭಿಸಿ. ಒಂದು ವೇಳೆ ತಾಂತ್ರಿಕ ತೊಂದರೆ ಎದುರಾದರೆ ಆರ್‌ಬಿಐ ನಿಯೋಜಿಸುವ ಲಿಕ್ವಿಡೇಟರ್ ಅಥವಾ ಅಧಿಕೃತ ಅಧಿಕಾರಿಯನ್ನು ಸಂಪರ್ಕಿಸಲು ಸಿದ್ಧರಾಗಿರಿ. ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸುವುದು ಮತ್ತು ಕಾಲಕಾಲಕ್ಕೆ ಬರುವ ಅಧಿಕೃತ ಪ್ರಕಟಣೆಗಳನ್ನು ಗಮನಿಸುವುದು ಇಂದಿನ ತುರ್ತು ಅಗತ್ಯವಾಗಿದೆ.


