ಕರ್ನಾಟಕದಲ್ಲಿ ನಿರ್ಮಾಣವಾಗಲಿದೆ 888 ಅಡಿ ಎತ್ತರದ ವಿಶ್ವದಲ್ಲೇ ಅತಿ ದೊಡ್ಡ ಬುದ್ಧನ ಪ್ರತಿಮೆ
ಕರ್ನಾಟಕದ ಗಡಿಜಿಲ್ಲೆ ಚಾಮರಾಜನಗರದಲ್ಲಿ 888 ಅಡಿ ಎತ್ತರದ ಬೃಹತ್ ಬುದ್ಧನ ಪ್ರತಿಮೆ ನಿರ್ಮಾಣಕ್ಕೆ ಸೋಮವಾರ ಅಧಿಕೃತ ಚಾಲನೆ ನೀಡಲಾಗಿದೆ. ಈ ಪ್ರತಿಮೆ ವಿಶ್ವದಲ್ಲೇ ಅತಿ ದೊಡ್ಡ ಬುದ್ಧನ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಚಾಮರಾಜನಗರದ ಉತ್ತವಳ್ಳಿಯ ಪಂಚಶೀಲ ಬೆಟ್ಟದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆ ರೂಪುಗೊಳ್ಳುತ್ತಿದ್ದು, ಗುಜರಾತ್ನ ಏಕತಾ ಪ್ರತಿಮೆಯನ್ನು ನಿರ್ಮಿಸಿದ ಸಂಸ್ಥೆಯೇ ಈ ಬೃಹತ್ ಪ್ರತಿಮೆಯನ್ನೂ ನಿರ್ಮಿಸಲು ಮುಂದಾಗಿದೆ.
ವಿಶ್ವ ಬೌದ್ಧ ಮಹಾ ಸಮ್ಮೇಳನ ಸಮಿತಿ, ಉಪಾಸಿಕ ಮತ್ತು ಉಪಾಸಕ ಚಾರಿಟಬಲ್ ಟ್ರಸ್ಟ್ ಹಾಗೂ ಇಂಟರ್ನ್ಯಾಷನಲ್ ಬುದ್ಧಿಸ್ಟ್ ಮಾಂಕ್ಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ನಾಗಸೇನಾ ವಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಜನೆಗೆ ಚಾಲನೆ ನೀಡಲಾಯಿತು.
ಈ ಯೋಜನೆ ಜಾರಿಗೆ ಬಂದಲ್ಲಿ, ಚೀನಾದ ಸ್ಪ್ರಿಂಗ್ ಟೆಂಪಲ್ ಬುದ್ಧ ಹಾಗೂ ಭಾರತದ ಸ್ಟ್ಯಾಚ್ಯೂ ಆಫ್ ಯುನಿಟಿ ಪ್ರತಿಮೆಗಳಿಗಿಂತಲೂ ಎತ್ತರವಾಗುವ ನಿರೀಕ್ಷೆಯಿದೆ. ಇದರಿಂದ ಪ್ರದೇಶವನ್ನು ಬೃಹತ್ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರವಾಗಿ ರೂಪಿಸುವ ಯೋಜನೆ ಇದೆ.
ಇದಕ್ಕೂ ಮುನ್ನ, ಇದೇ ಧೋಂಡೆನ್ಲಿಂಗ್ ವಸತಿಯಲ್ಲಿ 113 ಅಡಿ ಎತ್ತರದ ಗೋಲ್ಡನ್ ಬುದ್ಧ ಪ್ರತಿಮೆಯ ನಿರ್ಮಾಣ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ.
1974ರಲ್ಲಿ ಟಿಬೇಟಿಯನ್ ಶರಣಾರ್ಥಿಗಳಿಗೆ ಸ್ಥಾಪಿತವಾದ ಧೋಂಡೆನ್ಲಿಂಗ್ ವಸತಿ ಪ್ರದೇಶವು ಶಾಂತ ವಾತಾವರಣ ಹೊಂದಿದ್ದು, BRT ಟೈಗರ್ ರಿಸರ್ವ್ ಸಮೀಪದಲ್ಲಿದೆ. ಸ್ಥಳೀಯರು ಮತ್ತು ಅಧಿಕಾರಿಗಳು ಈ ಮಹಾ ಪ್ರತಿಮೆ ಯೋಜನೆ ಪ್ರದೇಶದ ಪ್ರವಾಸೋದ್ಯಮಕ್ಕೆ ದೊಡ್ಡ ಉತ್ತೇಜನ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
888 ಅಡಿ ಬುದ್ಧ ಪ್ರತಿಮೆ ಯೋಜನೆ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದು, 113 ಅಡಿ ಗೋಲ್ಡನ್ ಬುದ್ಧ ನಿರ್ಮಾಣ ಕಾರ್ಯ ಮಾತ್ರ ಪ್ರಸ್ತುತ ನಡೆಯುತ್ತಿದೆ.
ಇತರೆ ವಿಶ್ವದ ಪ್ರತಿಮೆಗಳಿಗೆ ಹೋಲಿಕೆ
ಚೀನಾದ ಸ್ಪ್ರಿಂಗ್ ಟೆಂಪಲ್ ಬುದ್ಧ (ಸುಮಾರು 420 ಅಡಿ)
ಭಾರತದ ಸ್ಟ್ಯಾಚ್ಯೂ ಆಫ್ ಯುನಿಟಿ (597 ಅಡಿ)
ಈ ಯೋಜನೆ ಪೂರ್ಣಗೊಂಡರೆ ಇವನ್ನೆಲ್ಲ ಮೀರಿಸುವ ವಿಶ್ವದ ಅತಿ ಎತ್ತರದ ಪ್ರತಿಮೆಯಾಗಲಿದೆ.
ಪ್ರಮುಖ ವಿವರಗಳು:
*ಸ್ಥಳ: ಹನೂರು ತಾಲ್ಲೂಕಿನ ಒಡೆಯರ್ಪಾಳ್ಯ ಸಮೀಪದ ಧೋಂಡೆನ್ಲಿಂಗ್ ಟಿಬೇಟಿಯನ್ ವಸತಿ ಪ್ರದೇಶ
*ಎತ್ತರ: 888 ಅಡಿ – ವಿಶ್ವದ ಇತರೆ ಪ್ರತಿಮೆಗಳನ್ನು ಮೀರುವ ಗುರಿ
*ಉದ್ದೇಶ: ಪ್ರವಾಸೋದ್ಯಮ ಅಭಿವೃದ್ಧಿ, ಸ್ಥಳೀಯ ಆರ್ಥಿಕತೆಗೆ ಉತ್ತೇಜನ
*888 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ವಿಶಾಲ ಭೂ ಪ್ರದೇಶ ಅಗತ್ಯವಾಗಿದ್ದು, ಸುತ್ತಮುತ್ತ ಧ್ಯಾನ ಕೇಂದ್ರಗಳು, ಬೌದ್ಧ ಮಠಗಳು, ಉದ್ಯಾನವನಗಳು ಮತ್ತು ಸಂಗ್ರಹಾಲಯ (ಮ್ಯೂಸಿಯಂ) ನಿರ್ಮಾಣ ಮಾಡುವ ಯೋಜನೆ ಇದೆ.
*ಪ್ರತಿಮೆ ಕಂಚು ಅಥವಾ ಉಕ್ಕಿನ ಸಂಯೋಜಿತ ವಸ್ತುಗಳಿಂದ ನಿರ್ಮಿಸುವ ಸಾಧ್ಯತೆ ಕುರಿತು ಪ್ರಾಥಮಿಕ ಚರ್ಚೆಗಳು ನಡೆದಿವೆ.
*ರಾತ್ರಿ ವೇಳೆಯಲ್ಲಿ ವಿಶೇಷ ಲೈಟಿಂಗ್ ವ್ಯವಸ್ಥೆ ಮೂಲಕ ಪ್ರತಿಮೆಯನ್ನು ಆಕರ್ಷಕವಾಗಿ ತೋರಿಸುವ ಯೋಜನೆ ರೂಪಿಸಲಾಗುತ್ತಿದೆ.
*ಮೈಸೂರು–ಚಾಮರಾಜನಗರ–ಬಂಡೀಪುರ ಪ್ರವಾಸ ಮಾರ್ಗದ ಜೊತೆಗೆ ಈ ಸ್ಥಳವನ್ನು ಕೂಡ ಸೇರಿಸಿ ಟೂರಿಸ್ಟ್ ಸರ್ಕ್ಯೂಟ್ ರೂಪಿಸುವ ಯೋಚನೆ ಇದೆ.


