ಭಾರತ–ದಕ್ಷಿಣ ಕೊರಿಯಾ ನಡುವೆ 25 ಪ್ರಮುಖ ಒಪ್ಪಂದಗಳು ಘೋಷಣೆ
ನವದೆಹಲಿ: ಲೀ ಜೇ-ಮ್ಯುಂಗ್ ಅವರ ಭಾರತ ರಾಜ್ಯ ಭೇಟಿ ಸಂದರ್ಭದಲ್ಲಿ ಭಾರತ ಮತ್ತು ದಕ್ಷಿಣ ಕೊರಿಯಾ ನಡುವೆ ಮಹತ್ವದ ಉನ್ನತ ಮಟ್ಟದ ಮಾತುಕತೆಗಳು ನಡೆದಿದ್ದು, 25 ಪ್ರಮುಖ ಫಲಿತಾಂಶಗಳನ್ನು ಎರಡೂ ರಾಷ್ಟ್ರಗಳು ಘೋಷಿಸಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಹೈದರಾಬಾದ್ ಹೌಸ್ ನಲ್ಲಿ ನಡೆದ ಸಭೆಯ ನಂತರ, ವ್ಯಾಪಾರ, ತಂತ್ರಜ್ಞಾನ, ರಕ್ಷಣಾ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಮಹತ್ವಾಕಾಂಕ್ಷಿ ಮಾರ್ಗಸೂಚಿ ರೂಪಿಸಲಾಗಿದೆ.
ಸುಮಾರು 8 ವರ್ಷಗಳ ಬಳಿಕ ದ.ಕೊರಿಯಾದ ಅಧ್ಯಕ್ಷರು ಭಾರತ ಪ್ರವಾಸ ನಡೆಸುತ್ತಿದ್ದು, ದ.ಕೊರಿಯಾ ಅಧ್ಯಕ್ಷ ಲಿ ಜೇ ಮಿಯಾಂಗ್ ಏ.20ರಂದು ದೆಹಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಭೆ ನಡೆಸಲಿದ್ದಾರೆ. ಇದಕ್ಕೂ ಮೊದಲು ಅವರು ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶವೆಂದು ಬಣ್ಣಿಸಿದ್ದು, ಉಭಯದೇಶಗಳ ದ್ವಿಪಕ್ಷೀಯ ಸಂಬಂಧದಿಂದ ಅನೇಕ ಲಾಭವಾಗಲಿದೆ ಎಂದು ತಿಳಿಸಿದ್ದಾರೆ. ಇನ್ನು, ಇವರ ಪ್ರವಾಸ ಉಭಯದೇಶಗಳ ನಡುವಿನ ಹಲವು ವಾಣಿಜ್ಯ ಕ್ಷೇತ್ರಗಳಲ್ಲಿ ಸಂಬಂಧ ವೃದ್ದಿಗೊಳಿಸುವ ಮೂಲಕ ದ್ವಿಪಕ್ಷೀಯ ವಾಣಿಜ್ಯ ಸಂಬಂಧವನ್ನು 2030ರ ವೇಳೆಗೆ $50ಬಿಲಿಯನ್ ಡಾಲರ್ ಮಾಡುವ ನಿಟ್ಟನಲ್ಲಿ ಕೇಂದ್ರಿತವಾಗಿದೆ.
8 ವರ್ಷಗಳ ಬಳಿಕ ಭಾರತ ಪ್ರವಾಸ ಮಾಡಿದ ಮೊದಲ ದ.ಕೊರಿಯಾ ಅಧ್ಯಕ್ಷ :
ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ತಮ್ಮ ಅಧಿಕೃತ ಭೇಟಿಗೂ ಮುನ್ನ ಈ ಹೇಳಿಕೆಗಳನ್ನು ದ.ಕೊರಿಯಾ ಅಧ್ಯಕ್ಷರು ಹಂಚಿಕೊಂಡಿದ್ದಾರೆ. ಇನ್ನು, ಇಲ್ಲಿ ವಿಶೇಷವೆಂದರೆ, ಸುಮಾರು 8 ವರ್ಷಗಳ ಬಳಿಕ ಮೊದಲ ಬಾರಿಗೆ ಭಾರತ ಪ್ರವಾಸ ಬೆಳೆಸುತ್ತಿರುವ ಮೊದಲ ದ.ಕೊರಿಯಾದ ಅಧ್ಯಕ್ಷ ಎಂಬ ಲಿ ಜೇ ಮಿಯಾಂಗ್ ಆಗಿದ್ದಾರೆ. ಇನ್ನು, ಈ ಚರ್ಚೆಯಲ್ಲಿ ಉಭಯದೇಶಗಳ ನಡುವೆ ಶಿಪ್ ಬಿಲ್ಡಿಂಗ್ ವಲಯದ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ.
ಈ ಪ್ರವಾಸದ ರಾಜತಾಂತ್ರಿಕ ಮಹತ್ವವನ್ನು ಎತ್ತಿ ತೋರಿಸುತ್ತಾ, ಭಾರತದ ವಿದೇಶಾಂಗ ಸಚಿವಾಲಯ (MEA), ಈ ಭೇಟಿಯು ಎರಡೂ ದೇಶಗಳ ನಡುವಿನ “ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುನ್ನಡೆಸುವಲ್ಲಿ ಒಂದು ಮಹತ್ವದ ಮೈಲಿಗಲ್ಲು” ಎಂದು ಗಮನಿಸಿದೆ.
ಭವಿಷ್ಯಮುಖಿ ಸಹಭಾಗಿತ್ವದತ್ತ ಹೆಜ್ಜೆ
ಈ ಭೇಟಿಯ ಪ್ರಮುಖ ಘೋಷಣೆ ಎಂದರೆ ಭಾರತ–ಕೊರಿಯಾ ವಿಶೇಷ ತಂತ್ರಾತ್ಮಕ ಸಹಭಾಗಿತ್ವವನ್ನು “ಭವಿಷ್ಯಮುಖಿ ಸಹಭಾಗಿತ್ವ” (Futuristic Partnership) ಮಟ್ಟಕ್ಕೆ ಏರಿಸಲಾಗಿದೆ. ಇದರಡಿ ಹಡಗು ನಿರ್ಮಾಣ, ಸಮುದ್ರ ಲಾಜಿಸ್ಟಿಕ್ಸ್, ಸ್ಥಿರತೆ ಮತ್ತು ಇಂಧನ ಭದ್ರತೆ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವುದಕ್ಕೆ ಒತ್ತು ನೀಡಲಾಗಿದೆ. ಈ ಸಹಭಾಗಿತ್ವವು ಆರ್ಥಿಕ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ಬಲಿಷ್ಠ ನೆಲೆಯನ್ನು ರೂಪಿಸುವುದಾಗಿ ಉದ್ದೇಶಿಸಲಾಗಿದೆ.
ವಿವಿಧ ಕ್ಷೇತ್ರಗಳಲ್ಲಿ ಒಪ್ಪಂದಗಳು (MoUs)
ಎರಡೂ ದೇಶಗಳು ಹಲವಾರು ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು ಒಪ್ಪಂದ ಪತ್ರಗಳಿಗೆ ಸಹಿ ಹಾಕಿವೆ. ಮುಖ್ಯವಾಗಿ:
ಬಂದರುಗಳು ಮತ್ತು ಸಮುದ್ರ ಮೂಲಸೌಕರ್ಯ
ಉಕ್ಕು ಹಾಗೂ ಸರಕು ಸರಪಳಿ ಬಲಪಡಿಸುವುದು
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (SMEs)
ವಿಜ್ಞಾನ, ತಂತ್ರಜ್ಞಾನ ಮತ್ತು ಹೊಸ ಆವಿಷ್ಕಾರಗಳು
ಹವಾಮಾನ ಕ್ರಮಗಳು ಮತ್ತು ಸ್ಥಿರತೆ
ಸಾಂಸ್ಕೃತಿಕ ಮತ್ತು ಸೃಜನಾತ್ಮಕ ಕ್ಷೇತ್ರಗಳು
“ಇಂಡಿಯಾ–ಕೊರಿಯಾ ಡಿಜಿಟಲ್ ಬ್ರಿಡ್ಜ್” ಯೋಜನೆಯಡಿ ಕೃತಕ ಬುದ್ಧಿಮತ್ತೆ (AI), ಸೆಮಿಕಂಡಕ್ಟರ್ ಮತ್ತು ಐಟಿ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು ಒತ್ತು ನೀಡಲಾಗಿದೆ.
ವ್ಯಾಪಾರ ಮತ್ತು ಆರ್ಥಿಕ ಸಹಕಾರ
ಎರಡೂ ರಾಷ್ಟ್ರಗಳು ದ್ವಿಪಕ್ಷೀಯ ವ್ಯಾಪಾರವನ್ನು $27 ಬಿಲಿಯನ್‌ನಿಂದ $50 ಬಿಲಿಯನ್‌ಗೆ 2030ರೊಳಗೆ ಹೆಚ್ಚಿಸುವ ಗುರಿ ಹೊಂದಿವೆ. ಇದಕ್ಕಾಗಿ:
CEPA ಒಪ್ಪಂದದ ನವೀಕರಣ ಮಾತುಕತೆ ಪುನರಾರಂಭ
ಇಂಡಿಯಾ–ಕೊರಿಯಾ ಫೈನಾನ್ಷಿಯಲ್ ಫೋರಂ ಸ್ಥಾಪನೆ
ಭಾರತದಲ್ಲಿ ಕೊರಿಯಾ ಕೈಗಾರಿಕಾ ಪಟ್ಟಣ ನಿರ್ಮಾಣ ಪ್ರಸ್ತಾವನೆ
ಈ ಕ್ರಮಗಳು ಹೂಡಿಕೆ ಹರಿವು ಹೆಚ್ಚಿಸಿ ಆರ್ಥಿಕ ಒಗ್ಗೂಡಿಕೆಯನ್ನು ಬಲಪಡಿಸುವ ನಿರೀಕ್ಷೆಯಿದೆ.
ಹೊಸ ಸಂವಾದ ವೇದಿಕೆಗಳು ಮತ್ತು ಜಾಗತಿಕ ಸಹಕಾರ
ಸಹಭಾಗಿತ್ವದ ಭಾಗವಾಗಿ ಕೆಲವು ಹೊಸ ವೇದಿಕೆಗಳನ್ನು ಆರಂಭಿಸಲಾಗಿದೆ:
ಆರ್ಥಿಕ ಭದ್ರತಾ ಸಂವಾದ (Economic Security Dialogue)
ಹವಾಮಾನ ಬದಲಾವಣೆ, ಆರ್ಕ್ಟಿಕ್ ಸಹಕಾರ ಮತ್ತು ಸಮುದ್ರ ಭದ್ರತೆ ಕುರಿತ ಜಾಗತಿಕ ಸಹಕಾರ
ದಕ್ಷಿಣ ಕೊರಿಯಾ International Solar Alliance ಮತ್ತು ಇಂಡೋ-ಪೆಸಿಫಿಕ್ ಓಶನ್ಸ್ ಇನಿಶಿಯೇಟಿವ್‌ಗೆ ಸೇರಿದೆ. ಭಾರತವು Global Green Growth Institute ಸೇರಲು ಒಪ್ಪಿದೆ.
ಸಾಂಸ್ಕೃತಿಕ ವಿನಿಮಯ ಮತ್ತು ಜನಸಂಪರ್ಕ
2026–2030ರ ಅವಧಿಗೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಘೋಷಿಸಲಾಗಿದೆ. ಪ್ರವಾಸೋದ್ಯಮ, ಶಿಕ್ಷಣ, ಕ್ರೀಡೆ ಮತ್ತು ಸೃಜನಾತ್ಮಕ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಭಾರತದಲ್ಲಿ ಕೊರಿಯನ್ ಸಂಸ್ಕೃತಿ ಹಾಗೂ ಕೊರಿಯಾದಲ್ಲಿ ಭಾರತೀಯ ಸಿನೆಮಾ ಜನಪ್ರಿಯತೆ ಹೆಚ್ಚುತ್ತಿರುವ ಹಿನ್ನೆಲೆ, ಜನರಿಂದ ಜನರಿಗೆ ಸಂಪರ್ಕವನ್ನು ಇನ್ನಷ್ಟು ಗಟ್ಟಿಗೊಳಿಸಲು ಯೋಜಿಸಲಾಗಿದೆ. 2028–29 ಅನ್ನು “ಭಾರತ–ಕೊರಿಯಾ ಸ್ನೇಹ ವರ್ಷ”ವಾಗಿ ಆಚರಿಸುವುದಾಗಿ ಘೋಷಿಸಲಾಗಿದೆ. ಈ ಒಪ್ಪಂದಗಳು ಭಾರತ ಮತ್ತು ದಕ್ಷಿಣ ಕೊರಿಯಾ ನಡುವೆ ದೀರ್ಘಕಾಲೀನ ಸಹಕಾರವನ್ನು ಮತ್ತಷ್ಟು ಬಲಪಡಿಸುವತ್ತ ಮಹತ್ವದ ಹೆಜ್ಜೆಯಾಗಿವೆ.


