Current AffairsLatest Updates

Golden Dome : ಅಂತರಿಕ್ಷದಲ್ಲಿ ಅಮೆರಿಕದ ಶಸ್ತ್ರಾಸ್ತ್ರ, ಏನಿದು ‘ಗೋಲ್ಡನ್ ಡೋಮ್’ ವಾಯು ರಕ್ಷಣಾ ವ್ಯವಸ್ಥೆ..?

Share With Friends

Trump’s proposed Golden Dome missile defence system Missile Defence System

Highlights :
*ಗೋಲ್ಡನ್ ಡೋಮ್ ಯುನೈಟೆಡ್ ಸ್ಟೇಟ್ಸ್‌ಗೆ ಪ್ರಸ್ತಾವಿತ ಬಹು-ಪದರದ ರಕ್ಷಣಾತ್ಮಕ ವ್ಯವಸ್ಥೆಯಾಗಿದ್ದು, ಮುಖ್ಯ ಭೂಭಾಗಕ್ಕೆ ಒಡ್ಡಲಾಗುವ “ಬ್ಯಾಲಿಸ್ಟಿಕ್, ಹೈಪರ್‌ಸಾನಿಕ್ ಮತ್ತು ಕ್ರೂಸ್ ಕ್ಷಿಪಣಿಗಳ ಬೆದರಿಕೆಯನ್ನು” ಎದುರಿಸಲು ಉದ್ದೇಶಿಸಲಾಗಿದೆ.
*ಈ ಯೋಜನೆಯು ಥಾಡ್‌, S-400 ಮತ್ತು S-500 ಗಿಂತಲೂ ಅತ್ಯಾಧುನಿಕವಾಗಿದೆ. ಅದಲ್ಲದೇ ಇದು ಬಾಹ್ಯಾಕಾಶಕ್ಕೂ ಯುದ್ಧವನ್ನು ವಿಸ್ತರಿಸುವ ಆತಂಕವನ್ನು ಸೃಷ್ಟಿಸಿದೆ.
*ಈ ಯೋಜನೆಯು ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಮತ್ತು ಸುಮಾರು $175 ಶತಕೋಟಿ ವೆಚ್ಚವಾಗಲಿದೆ
*ಈಗಾಗಲೇ ಗೋಲ್ಡನ್ ಡೋಮ್‌ಗಾಗಿ 25 ಬಿಲಿಯನ್ ಡಾಲರ್‌ಗಳನ್ನು ಅಮೆರಿಕ ಸರ್ಕಾರ ಹಂಚಿಕೆ ಮಾಡಿದೆ.
*ಗೋಲ್ಡನ್ ಡೋಮ್ ಯೋಜನೆಯ ಮೇಲ್ವಿಚಾರಣೆಗೆ ಅಮೆರಿಕ ಬಾಹ್ಯಾಕಾಶ ಪಡೆಯ ಜನರಲ್ ಮೈಕೆಲ್ ಗಟ್ಲಿನ್ ನೇಮಕ

ನೀವು ಐರನ್ ಡೋಮ್ ಎಂಬ ಹೆಸರು ಕೇಳಿರಬಹುದು. ಇದು ಹಮಾಸ್ ಉಗ್ರರು ಹಾರಿಸಿದ ಸಾವಿರಾರು ರಾಕೆಟ್‌ಗಳಿಂದ ಇಸ್ರೇಲ್ ಜನರನ್ನು ರಕ್ಷಿಸಿದ ಒಂದು ಅತ್ಯಾಧುನಿಕ ವ್ಯವಸ್ಥೆ. ಇದೀಗ ತನ್ನ ಜನರನ್ನು ರಕ್ಷಿಸಲು ಇದಕ್ಕಿಂತಲೂ ಮುಂದುವರೆದ ಮತ್ತು ಬಲಿಷ್ಠ ಗೋಲ್ಡನ್ ಡೋಮ್ ಅಥವಾ ಚಿನ್ನದ ಗುಮ್ಮಟವನ್ನು ಅಮೆರಿಕ ಸಿದ್ಧಪಡಿಸುತ್ತಿದೆ.

ಅಮೆರಿಕ ತನ್ನ ಬದಲಾಗುತ್ತಿರುವ ಯುದ್ಧ ತಂತ್ರಗಳಿಗೆ ಸರಿಹೊಂದುವಂತೆ ಇಂಥದ್ದೊಂದು ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯನ್ನು ತಯಾರು ಮಾಡುತ್ತಿದೆ. ಇದರ ಭಾಗವಾಗಿ, ಇದೇ ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರಗಳನ್ನು ನಿಯೋಜಿಸಲಾಗುತ್ತಿದೆ. ಇತ್ತೀಚೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಯೋಜನೆಯನ್ನು ಘೋಷಿಸಿದರು. ಇದಕ್ಕೆ ತಗಲುವ ವೆಚ್ಚ 175 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಇದು ಅಮೆರಿಕವನ್ನು ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿ ದಾಳಿಯಿಂದಲೂ ರಕ್ಷಿಸುತ್ತದೆ ಎಂಬುದು ಗಮನಾರ್ಹ.

ಈ ಗೋಲ್ಡನ್ ಡೋಮ್ ವ್ಯವಸ್ಥೆಯು ನೆಲ ಮತ್ತು ಬಾಹ್ಯಾಕಾಶದಿಂದ ಅಮೆರಿಕದ ವಾಯು ಪ್ರದೇಶದ ಮೇಲೆ ಕಣ್ಣಿಡುತ್ತದೆ. ತಮ್ಮ ದೇಶದ ಕಡೆಗೆ ಬರುವ ಕ್ಷಿಪಣಿಗಳು ಮತ್ತು ಇತರ ಬೆದರಿಕೆಗಳನ್ನು ಮೊದಲೇ ಪತ್ತೆ ಮಾಡುತ್ತದೆ. ಹೆಚ್ಚಿನ ಸಮಯ ಅವುಗಳು ಉಡಾವಣೆಯಾಗುವ ಮೊದಲೇ ಅವುಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿರುತ್ತವೆ.

ಬಾಹ್ಯಾಕಾಶದಿಂದಲೇ ಉಡಾಯಿಸಲಾದ ಪ್ರತಿಬಂಧಕ ಜಾಲವು ಈ ವ್ಯವಸ್ಥೆಯಲ್ಲಿ ಅತ್ಯಂತ ಮುಖ್ಯವಾಗಿದೆ. ಇವುಗಳಲ್ಲಿ ಲೇಸರ್ ಶಸ್ತ್ರಾಸ್ತ್ರಗಳೂ ಸಹ ಇರುವ ಸಾಧ್ಯತೆ ಇದೆ. ಇದು ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಪ್ರಸ್ತಾಪಿಸಿದ ಸ್ಟಾರ್ ವಾರ್ಸ್ ವ್ಯವಸ್ಥೆಯನ್ನು ನೆನಪಿಸುತ್ತದೆ.

ಅಮೆರಿಕ ದೊಡ್ಡ ದೇಶ. ಅಲ್ಲಿನ ಎಲ್ಲಾ ನಗರಗಳು ಗೋಲ್ಡನ್ ಡೋಮ್ ಅಡಿಯಲ್ಲೇ ಆವರಿಸಲ್ಪಡಬೇಕಾದರೆ, ಬಾಹ್ಯಾಕಾಶದಲ್ಲಿ ಪ್ರತಿಬಂಧಕಗಳ ಜಾಲವನ್ನು ರಚಿಸಬೇಕಾಗುತ್ತದೆ ಎಂದು ಬ್ರೂಕಿಂಗ್ಸ್ ಇನ್ಸ್ಟಿಟ್ಯೂಟ್‌ನಲ್ಲಿ ವಿದೇಶಾಂಗ ನೀತಿ ಕಾರ್ಯಕ್ರಮದ ಸಂಶೋಧನಾ ವಿಭಾಗದ ನಿರ್ದೇಶಕಿ ಮಿಚೆಲ್ ಒ’ಹನ್ಲಾನ್ ಹೇಳಿದ್ದಾರೆ. ಬಾಹ್ಯಾಕಾಶಕ್ಕೆ ಲೇಸರ್‌ಗಳನ್ನು ಕಳುಹಿಸುವುದು ಸುಲಭವಲ್ಲ ಎಂದೂ ಅವರು ಹೇಳುತ್ತಾರೆ. ಅದಕ್ಕಾಗಿ, ಬಾಹ್ಯಾಕಾಶ ನೌಕೆಗೆ ಹೆಚ್ಚಿನ ಪ್ರಮಾಣದ ಇಂಧನ, ಕನ್ನಡಿಗಳು ಮತ್ತು ಇತರ ವಸ್ತುಗಳನ್ನು ಸೇರಿಸಬೇಕಾಗುತ್ತದೆ. ಚೀನಾ, ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾದಿಂದ ಬರುವ ಬೆದರಿಕೆಗಳನ್ನು ಎದುರಿಸಲು ಅಮೆರಿಕ ಇದನ್ನು ರೆಡಿ ಮಾಡುತ್ತಿದೆ. ಚೀನಾ ಮತ್ತು ರಷ್ಯಾ ಈಗಾಗಲೇ ಈ ಯೋಜನೆಯನ್ನು ಬಲವಾಗಿ ವಿರೋಧಿಸಿವೆ. ಇವು ಜಗತ್ತಿನಲ್ಲಿ ತೀವ್ರ ಅಸ್ಥಿರತೆ ಸೃಷ್ಟಿಸುತ್ತವೆ ಮತ್ತು ಬಾಹ್ಯಾಕಾಶವನ್ನು ಯುದ್ಧ ವಲಯವನ್ನಾಗಿ ಪರಿವರ್ತಿಸುತ್ತವೆ ಎಂಬುದು ಆ ದೇಶಗಳ ದೂರು.

ಮೂರು ವರ್ಷಗಳಲ್ಲಿ ಪೂರ್ಣ :
ಈ ಯೋಜನೆಯು ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಮತ್ತು ಸುಮಾರು $175 ಶತಕೋಟಿ ವೆಚ್ಚವಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಈ ಉಪಕ್ರಮವನ್ನು ಮುನ್ನಡೆಸಲು ಯುಎಸ್ ಬಾಹ್ಯಾಕಾಶ ಪಡೆಯ ಜನರಲ್ ಮೈಕೆಲ್ ಎ. ಗುಟ್ಲಿನ್ ಅವರನ್ನು ನೇಮಿಸಲಾಗಿದೆ.

ಈಗಾಗಲೇ 25 ಬಿಲಿಯನ್ ಡಾಲರ್‌ ಹಂಚಿಕೆ :
ಈಗಾಗಲೇ ಗೋಲ್ಡನ್ ಡೋಮ್‌ಗಾಗಿ 25 ಬಿಲಿಯನ್ ಡಾಲರ್‌ಗಳನ್ನು ಅಮೆರಿಕ ಸರ್ಕಾರ ಹಂಚಿಕೆ ಮಾಡಿದೆ. ಇದನ್ನು ನಿರ್ಮಿಸಲು 175 ಬಿಲಿಯನ್ ಡಾಲರ್ ಖರ್ಚಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಹೀಗಿದ್ದರೂ ಈ ವ್ಯವಸ್ಥೆ ಸಾಕಷ್ಟು ಸಂಕೀರ್ಣತೆಗಳಿಂದ ಕೂಡಿದ್ದು, ಅಂತಿಮವಾಗಿ 500 ಬಿಲಿಯನ್ ಡಾಲರ್ ತಲುಪಬಹುದು ಎಂದು ಅಮೆರಿಕ ಕಾಂಗ್ರೆಸ್ ಬಜೆಟ್ ಕಚೇರಿ ಅಂದಾಜಿಸುತ್ತದೆ. ಮುಂದಿನ ಮೂರು ವರ್ಷಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಬೇಕೆಂದು ಟ್ರಂಪ್ ಈಗಾಗಲೇ ಸೂಚಿಸಿದ್ದಾರೆ. ಈ ಯೋಜನೆಗೆ ಸೇರಲು ಕೆನಡಾ ಆಸಕ್ತಿ ವ್ಯಕ್ತಪಡಿಸಿದೆ ಎಂದು ಅವರು ಹೇಳಿದ್ದಾರೆ.

ಮೇಲ್ವಿಚಾರಣೆಗೆ ಮೈಕೆಲ್ ಗಟ್ಲಿನ್ ನೇಮಕ
ಗೋಲ್ಡನ್ ಡೋಮ್ ಯೋಜನೆಯ ಮೇಲ್ವಿಚಾರಣೆಗೆ ಅಮೆರಿಕ ಬಾಹ್ಯಾಕಾಶ ಪಡೆಯ ಜನರಲ್ ಮೈಕೆಲ್ ಗಟ್ಲಿನ್ ಅವರನ್ನು ನೇಮಿಸಲಾಗಿದೆ. ಇವರಿಗೆ ವಾಯುಪಡೆಯಲ್ಲಿ 30 ವರ್ಷಗಳಷ್ಟು ಅನುಭವವಿದೆ. 2021ರಲ್ಲಿ ಬಾಹ್ಯಾಕಾಶ ಪಡೆಗೆ ಸೇರಿದ ಇವರು, ಕ್ಷಿಪಣಿ ರಕ್ಷಣೆ, ಬಾಹ್ಯಾಕಾಶ ವ್ಯವಸ್ಥೆಗಳಲ್ಲಿ ಪರಿಣಿತರಾಗಿ ಹೆಸರುವಾಸಿಯಾದವರು.

error: Content Copyright protected !!