ದೇಶದ ರಕ್ಷಣೆಗಾಗಿ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ ಎಂಬ ಮೂರು ಪ್ರಮುಖ ಪಡೆಗಳಿವೆ. ಭೂಸೇನೆಗೆ ಜನರಲ್, ವಾಯುಸೇನೆಗೆ ಏರ್ ಚೀಫ್ ಮಾರ್ಷಲ್ ಮತ್ತು ನೌಕಾಸೇನೆಗೆ ಅಡ್ಮಿರಲ್ ಮುಖ್ಯಸ್ಥರು. ಈ ಮೂರೂ ಸೇನೆಗಳ ಮಹಾದಂಡನಾಯಕರಾಗಿ ರಾಷ್ಟ್ರಪತಿಗಳು ಕಾರ್ಯನಿರ್ವಹಿಸುತ್ತಾರೆ. ಮೊದಲ ಬಾರಿಗೆ 2019 ರ ಆಗಸ್ಟ್ 15 ರಂದು ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಣಾ ಮುಖ್ಯಸ್ಥರ (ಸಿಡಿಎಸ್) ಹುದ್ದೆಯನ್ನು ರಚಿಸುವುದಾಗಿ ಘೋಷಿಸಿದ್ದರು.
ಮಹಾದಂಡನಾಯಕರ ಹೊರತಾಗಿ ಸೇನೆಗಳ ನಡುವೆ ಉತ್ತಮ ಸಂವಹನ, ಸಮನ್ವಯ ಸಾಧಿಸಿ ಅವನ್ನು ಮುನ್ನಡೆಸಲು ಓರ್ವ “ಮುಖ್ಯ ದಂಡನಾಯಕ’ರ ಅಗತ್ಯ ಇದೆ ಎಂಬುದಾಗಿ ಕಾರ್ಗಿಲ್ ಪುನರ್ ಪರಿಶೀಲನಾ ಸಮಿತಿ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಭೂಸೇನಾ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ಮೊದಲ ಸಿಡಿಎಸ್ ಆಗಿ ಕೇಂದ್ರ ಸರಕಾರ ನೇಮಕ ಮಾಡಿದೆ. ಜನರಲ್ ರಾವತ್, ಮಾರ್ಚ್ 2022 ರವರೆಗೆ ಸಿಡಿಎಸ್ ಆಗಿ ಸೇವೆ ಸಲ್ಲಿಸಲಿದ್ದಾರೆ.
1999ರ ಕಾರ್ಗಿಲ್ ಯುದ್ಧದ ನಂತರ ಉನ್ನತ ಸೇನಾ ಸುಧಾರಣೆಗಳಿಗಾಗಿ ರಚಿಸಿದ ಕಾರ್ಗಿಲ್ ಪುನರ್ ಪರಿಶೀಲನಾ ಸಮಿತಿ ಮಾಡಿದ ಪ್ರಮುಖ ಶಿಫಾರಸುಗಳಲ್ಲಿ ಸಿಡಿಎಸ್ ಹುದ್ದೆಯೂ ಒಂದು. 2016ರ ಡಿಸೆಂಬರ್‌ನಲ್ಲಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿ.ಬಿ. ಶೇಕತ್ಕರ್ ಕಮಿಟಿ ಮಾಡಿದ 99 ಶಿಫಾರಸುಗಳಲ್ಲೂ ಇದು ಇತ್ತು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಈ ಬಗ್ಗೆ ಪ್ರಸ್ತಾವ ಇಡಲಾಗಿತ್ತು. ಆಗಿನ ಉಪಪ್ರಧಾನಿ ಎಲ್.ಕೆ. ಅಡ್ವಾಣಿ ಅವರ ನೇತೃತ್ವದ ಸಚಿವರ ಸಮಿತಿ ಇದನ್ನು ಶಿಫಾರಸು ಮಾಡಿತ್ತು.
# ಅಗತ್ಯವೇನು.?
ಸ್ವಾತಂತ್ರ್ಯ ನಂತರ ದೇಶ ಕಂಡ ಇದುವರೆಗಿನ ಯುದ್ಧಗಳಲ್ಲಿ (1962, 1971, 1999) ಮೂರೂ ಪಡೆಗಳ ನಡುವೆ ಸಮನ್ವಯದ ಕೊರತೆಯಿಂದ ಕೆಲವೊಂದು ಆಡಳಿತಾತ್ಮಕ ತೊಡಕುಗಳು ಕಂಡು ಬಂದಿದ್ದವು. ಸೈನ್ಯದ ಕಾರ್ಯತಂತ್ರಗಳ ಕುರಿತಂತೆ ರಕ್ಷಣಾ ಸಚಿವರು, ಪ್ರಧಾನಿಗೆ ಸಿಂಗಲ್ ಪಾಯಿಂಟ್ ಮಿಲಿಟರಿ ಸಲಹೆಗಾರರಾಗಿ ಸಿಡಿಎಸ್ ಕಾರ್ಯನಿರ್ವಹಿಸುತ್ತಾರೆ.
ಮೂರು ಪಡೆಗಳ ನಡುವೆ ಕೊಂಡಿಯಾಗಿ ದೀರ್ಘಕಾಲಿಕ ಯೋಜನೆಗಳು, ತರಬೇತಿ ಇತ್ಯಾದಿ ಎಲ್ಲ ವಿಧದಲ್ಲೂ ಸಿಡಿಎಸ್ ಹುದ್ದೆ ಪ್ರಯೋಜನಕ್ಕೆ ಬರುತ್ತದೆ. ಮಹಾದಂಡನಾಯಕರಾಗಿ ರಾಷ್ಟ್ರಪತಿ ಇದ್ದರೂ, ಅವರು ಸಾಂವಿಧಾನಿಕ ಮುಖ್ಯಸ್ಥರು. ಸ್ವತಃ ಸೈನ್ಯದಲ್ಲಿ ಕಾರ್ಯನಿರ್ವಹಿಸಿದ ಅನುಭವವ ಇರುವುದರಿಂದ ಅದರ ಆಧಾರದಲ್ಲಿ “ಕಾರ್ಯಕಾರಿ ಮುಖ್ಯಸ್ಥರು’ ಎಂಬ ನೆಲೆಯಲ್ಲಿ ಸಿಡಿಎಸ್ ಪ್ರಮುಖರಾಗುತ್ತಾರೆ.
# ಈಗಿನ ವ್ಯವಸ್ಥೆ ಹೇಗಿದೆ?
ಸದ್ಯ ಭಾರತದಲ್ಲಿ ಎಲ್ಲ ರಕ್ಷಣಾ ಪಡೆಗಳಿಗೆ ಪ್ರಧಾನ ಮುಖ್ಯಸ್ಥರು ಚೇರ್‌ಮ್ಯಾನ್ ಆಫ್ ಚೀಫ್ ಆಫ್ ಸ್ಟಾಫ್ ಕಮಿಟಿ (ಸಿಒಎಸ್‌ಸಿ). ಹಿರಿಯ ಅಧಿಕಾರಿ ಸಿಒಎಸ್‌ಸಿ ಆಗುತ್ತಾರೆ (ನಿವೃತ್ತಿವರೆಗೆ). ಆದರೆ ಇದೊಂದು ಹೆಚ್ಚುವರಿ ಜವಾಬ್ದಾರಿಯಾಗಿದ್ದು, ಅವಧಿಯೂ ಅಲ್ಪವಾಗಿರುತ್ತದೆ. 2012ರಲ್ಲಿ ನರೇಶ್ ಚಂದ್ರ ಟಾಸ್ಕ್ಫೋರ್ಸ್ ಕಮಿಟಿ ಶಾಶ್ವತ ಸಿಒಎಸ್‌ಸಿ ನೇಮಕಕ್ಕೆ ಶಿಫಾರಸು ಮಾಡಿತ್ತಾದರೂ, ಅದು ಕಾರ್ಯಗತಗೊಂಡಿಲ್ಲ.
# ಹಿಂದೆ ಇತ್ತು 5 ಸ್ಟಾರ್ ಹುದ್ದೆ
ಭೂಸೇನೆಯಲ್ಲಿ ಫೀಲ್ಡ್ ಮಾರ್ಷಲ್, ವಾಯುಸೇನೆಯಲ್ಲಿ ಮಾರ್ಷಲ್ ಆಫ್ ದ ಏರ್‌ಫೋರ್ಸ್, ನೌಕಾಸೇನೆಯಲ್ಲಿ ಅಡ್ಮಿರಲ್ ಆಫ್ ದ ಫ್ಲೀಟ್: ಈ ಮೂರೂ 5 ಸ್ಟಾರ್ ರ್
ಯಾಂಕ್‌ಗಳು. ಇವರಿಗೆ ನಿವೃತ್ತಿ, ಪೆನ್ಸ್ಯನ್ ಇಲ್ಲ. ಆಜೀವಪರ್ಯಂತ ಸೇವಾವಧಿ ಇದ್ದು, ಇತರ ಅಧಿಕಾರಿಗಳಂತೆಯೇ ಅಧಿಕೃತ ಕಾರ್ಯಕ್ರಮಗಳಲ್ಲಿ ಸಂಪೂರ್ಣ ಸಮವಸ್ತ್ರಧಾರಿಗಳಾಗಿರಬೇಕು.
ಇದುವರೆಗೆ ಇಬ್ಬರು ಫೀಲ್ಡ್ ಮಾರ್ಷಲ್‌ಗಳು ಆಗಿ ಹೋಗಿದ್ದಾರೆ (ಸ್ಯಾಮ್ ಮಾನೆಕ್‌ಷಾ, ಕೆ.ಎಂ. ಕಾರ್ಯಪ್ಪ). ಓರ್ವ ಮಾರ್ಷಲ್ ಆಫ್ ದ ಏರ್‌ಫೋರ್ಸ್ (ಅರ್ಜನ್ ಸಿಂಗ್) 2017ರಲ್ಲಿ ನಿಧನರಾಗಿದ್ದಾರೆ. ಅಡ್ಮಿರಲ್ ಆಫ್ ದ ಫ್ಲೀಟ್ ಹುದ್ದೆಗೆ ಯಾರೂ ಏರಿಲ್ಲ. ಈಗ ಈ ಮೂರೂ ಹುದ್ದೆಗಳು ಚಾಲ್ತಿಯಲ್ಲಿಲ್ಲ. ಇವರ ಅನಂತರದ 4 ಸ್ಟಾರ್ ಯಾಂಕ್‌ಗಳು ಈಗ ಸರ್ವೋಚ್ಚ. ಈ ಸ್ಟಾರ್‌ಗಳು ಅಧಿಕಾರಿಯ ಸಮವಸ್ತ್ರದ ಕೊರಳ ಪಟ್ಟಿಯಲ್ಲಿ ಇರುತ್ತವೆ.
# ಶಸಸ್ತ್ರ ಪಡೆ ಮುಖ್ಯಸ್ಥರ ಪಾತ್ರವೇನು?
ಮೂರು ಸೇನೆಗಳಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವರಿಗೆ ಪ್ರಧಾನ ಸಲಹೆಗಾರಾಗಿ ಸಶಸ್ತ್ರ ಪಡೆ ಮುಖ್ಯಸ್ಥರು ಕಾರ್ಯನಿರ್ವಹಿಸಲಿದ್ದಾರೆ. ಇದೇ ವೇಳೆ ಮೂರು ಸೇನೆಯ ಮುಖಸ್ಥರು ತಮ್ಮ ಸೇವೆಗೆ ಸಂಬಂಧಿಸಿದಂತೆ ರಕ್ಷಣಾ ಸಚಿವರಿಗೆ ರಕ್ಷಣಾ ಸಚಿವರಿಗೆ ಸಲಹೆ ನೀಡುವುದನ್ನು ಮುಂದುವರಿಸಬಹುದಾಗಿದೆ.
ಮೂರು ಸೇನಾ ಪಡೆಗಳು ಮತ್ತು ಅದರ ಮುಖ್ಯಸ್ಥರಿಗೆ ಯಾವುದೇ ಸೇನಾ ಆದೇಶ ನೀಡುವ ಅಧಿಕಾರ ಸಶಸ್ತ್ರ ಪಡೆ ಮುಖ್ಯಸ್ಥರಿಗೆ ಇರುವುದಿಲ್ಲ. ಮೂರು ಸೇನಾ ಪಡೆಗಳ ಆಡಳಿತ ಮುಖ್ಯಸ್ಥರಾಗಿ ಶಸಸ್ತ್ರ ಪಡೆ ಮುಖ್ಯಸ್ಥರು ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೇ ಬಾಹ್ಯಾಕಾಶ ಮತ್ತು ಸೈಬರ್‌ಗೆ ಸಂಬಂಧಿಸಿದ ವಿಷಯದ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ಹೊಂದಿರುತ್ತಾರೆ.
# ಯಾವೆಲ್ಲ ದೇಶದಲ್ಲಿ ಸಿಡಿಎಸ್ ಇದೆ.. ?
ಯುನೈಟೆಡ್ ಕಿಂಗ್‌ಡಂ, ಕೆನಡಾ, ಫ್ರಾನ್ಸ್, ಇಟಲಿ ಇತ್ಯಾದಿ ದೇಶಗಳಲ್ಲಿ ಸಿಡಿಎಸ್ ಇದೆ. ಕೆಲವೆಡೆ ಹೆಸರು ಬೇರೆಯಾದರೂ ಕಾರ್ಯ ಒಂದೇ. ಇಟಲಿ, ಸ್ಪೇನ್, ಯು.ಕೆ., ಕೆನಡಾದಲ್ಲಿ ಚೀಫ್ ಆಫ್ ದ ಡಿಫೆನ್ಸ್ ಸ್ಟಾಫ್, ಫ್ರಾನ್ಸ್‌ನಲ್ಲಿ ಚೀಫ್ ಆಫ್ ಸ್ಟಾಫ್ ಆಫ್ ದ ಆರ್ಮೀಸ್, ಚೀನದಲ್ಲಿ ಚೀಫ್ ಆಫ್ ದ ಜನರಲ್ ಸ್ಟಾಫ್, ಜಪಾನ್‌ನಲ್ಲಿ ಚೀಫ್ ಆಫ್ ಸ್ಟಾಫ್, ಜಾಯಿಂಟ್ ಸ್ಟಾಫ್ ಎಂದು ಸಿಡಿಎಸ್ ಹುದ್ದೆಯನ್ನು ಕರೆಯಲಾಗುತ್ತದೆ. ಪಾಕಿಸ್ಥಾನದಲ್ಲೂ ಈ ಹುದ್ದೆ ಇದೆ ಎಂಬುದು ಗಮನಾರ್ಹ.