ಇಂಧನಗಳು
• ದಹನಕ್ರಿಯೆ:
ವಸ್ತುವೊಂದು ಆಕ್ಸಿಜನ್‍ನೊಂದಿಗೆ ಸಂಯೋಜನೆಯಾಗಿ ಬೆಳಕು ಮತ್ತು ಉಷ್ಣದ ರೂಪದಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುವ ಕ್ರಿಯೆಯನ್ನು ‘ದಹನಕ್ರಿಯೆ’ ಎನ್ನುತ್ತಾರೆ. ಉದಾ: ಜೀವಕೋಶದ ಮೈಟೋಕಾಂಡ್ರಯಾದಲ್ಲಿ ನಡೆಯುವ ಗ್ಲೂಕೋಸ್‍ನ ಉತ್ಕರ್ಷಣೆ , ಪೆಟ್ರೋಲ್‍ನ ದಹನ, ಸೌದೆ ಉರಿಯುವಿಕೆ
• ದಹ್ಯವಸ್ತು :
ದಹನಕ್ರಿಯೆಯಲ್ಲಿ ಉರಿಯುವ ವಸ್ತುವನ್ನು ದಹ್ಯವಸ್ತು ಎನ್ನುವರು. ದಹ್ಯವಸ್ತುಗಳಲ್ಲಿ ಮುಖ್ಯವಾಗಿ ಇಂಧನಗಳು ಸೇರಿವೆ.
ಕಾರ್ಬಾನಿಕ್ ಇಂಧನಗಳು- ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ
ಅಕಾರ್ಬಾನಿಕ್ ಇಂಧನಗಳು- ಹೈಡ್ರೋಜನ್ ಅನಿಲ
• ದಹನಾನುಕೂಲಿ:
ದಹನಕ್ರಿಯೆಯಲ್ಲಿ ದಹ್ಯವಸ್ತು ಉರಿಯಲು ಅಗತ್ಯವಾಗಿ ಆಕ್ಸಿಜನ್ ಅನಿಲದ ಅವಶ್ಯಕತೆಯಿದೆ. ಆದ್ದರಿಂದ ಅಮ್ಲಜನಕವನ್ನು ದಹನಾನುಕೂಲಿ ಎನ್ನುವರು.
• ದಹನಕ್ರಿಯೆಯ ವಿಧಗಳು
ಆಮ್ಲಜನಕದ ಬಳಕೆಯ ಆಧಾರದ ಮೇಲೆ ದಹನಕ್ರಿಯೆಯನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ.
1. ಆಮ್ಲಜನಕ ಸಹಿತ ದಹನಕ್ರಿಯೆ
ಈ ರೀತಿಯ ದಹನಕ್ರಿಯೆಗಳು ನಡೆಯಲು ಆಮ್ಲಜನಕದ ಅವಶ್ಯಕತೆಯಿದೆ.
ಉದಾ: * ಮರವು ಉರಿಯಬೇಕಾದರೆ ಗಾಳಿ
*ಪೆಟ್ರೊಲ್‍ನ ದಹನಕ್ಕೆ ಆಮ್ಲಜನಕದ ಅವಶ್ಯಕ.
2. ಆಮ್ಲಜನಕದ ರಹಿತ ದಹನಕ್ರಿಯೆ:
ಈ ರೀತಿಯ ದಹನಕ್ರಿಯೆಗಳು ನಡೆಯಲು ಆಮ್ಲಜನಕದ ಅವಶ್ಯಕತೆಯಿಲ್ಲ. ಆಮ್ಲಜನಕದ ಅನುಪಸ್ಥಿತಿಯಲ್ಲಿ ಇದು ನಡೆಯುತ್ತದೆ.
ಉದಾ: ಕ್ಲೋರಿನ್ ತುಂಬಿದ ಜಾಡಿಗೆ ಅಲ್ಯೂಮಿನಿಯಂ ಪುಡಿಯನ್ನು ಉದುರಿಸಿದಾಗ, ಅದು ಪ್ರಕಾಶಮಾನವಾಗಿ ಉರಿದು ಅಲ್ಯೂಮಿನಿಯಂ ಕ್ಲೋರೈಡ್ ಉಂಟಾಗುತ್ತದೆ. ಈ ಕ್ರಿಯೆಯಲ್ಲಿ ಆಮ್ಲಜನಕದ ಉಪಸ್ಥಿತಿಯಿಲ್ಲ. ಆದ್ದರಿಂದ ಇದೊಂದು ಆಮ್ಲಜನಕರಹಿತ ದಹನಕ್ರಿಯೆ.
• ದಹನಕ್ರಿಯೆಯ ವೇಗವನ್ನು ಆಧಾರವಾಗಿರಿಸಿಕೊಂಡು ದಹನಕ್ರಿಯೆಯನ್ನು 3 ವಿಧಗಳಾಗಿ ವಿಂಗಡಿಸಲಾಗಿದೆ.
1. ಮಂದ ದಹನ: ದಹ್ಯವಸ್ತುವು ದಹನಾನುಕೂಲಿಯ ಜೊತೆ ನಿಧಾನವಾಗಿ ವರ್ತಿಸಿ ಶಾಖ, ಮತ್ತು ಬೆಳಕನ್ನು ಬಿಡುಗಡೆ ಮಾಡುವ ದಹನಕ್ರಿಯೆಯನ್ನು ‘ ಮಂದ ದಹನ’ ಎನ್ನುವರು.
ಉದಾ: ಕಬ್ಬಿಣ ತುಕ್ಕು ಹಿಡಿಯುವುದು.
2. ತೀವ್ರ ದಹನ : ವಸ್ತುವೊಂದು ವೇಗವಾಗಿ ದಹಿಸಿ ಗಣನೀಯ ಪ್ರಮಾಣದಲ್ಲಿ ಬೆಳಕು ಮತ್ತು ಉಷ್ಣದ ರೂಪದಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುವ ದಹನಕ್ರಿಯೇಯೆ ‘ ತೀವ್ರದಹನ’.
ಇದು ತುಂಬಾ ವೇಗವಾಗಿ ನಡೆದು ಇಂಗಾಲದ ಡೈ ಆಕ್ಸೈಡ್, ನೀರು, ಮತ್ತು ಶಕ್ತಿ( ಬೆಳಕು ಮತ್ತು ಶಾಖದ ರೂಪದಲ್ಲಿ) ಬಿಡುಗಡೆಯಾಗುತ್ತದೆ.
3. ಸ್ಪೋಟ : ದಹನಕ್ರಿಯೆಯು ಅತಿ ಶೀಘ್ರವಾಗಿ ನಡೆದು ಅಧಿಕ ಪ್ರಮಾಣದಲ್ಲಿ ಶಕ್ತಿ ಬಿಡುಗಡೆಯಾಗುವ ಕ್ರಿಯೇಯೆ ಸ್ಪೋಟ.
ಉದಾ: ತುಪಾಕಿ ಮದ್ದಿನ ಪುಡಿಯ ಉರಿಯುವಿಕೆ, ಪಟಾಕಿಯ ಉರಿಯುವಿಕೆ, ಬಾಂಬ್ ಸ್ಪೋಟ
• ಇಂಧನಗಳು
ದಹನಕ್ರಿಯೆಯಲ್ಲಿ ಹೊತ್ತಿ ಉರಿದು ಶಾಖ ಮತ್ತು ಬೆಳಕನ್ನು ಕೊಡುವ ದಹ್ಯವಸ್ತುವೇ ಇಂಧನ.
• ಆದರ್ಶ ಇಂಧನದ ಲಕ್ಷಣಗಳು
1. ಇಂಧನದ ಕ್ಯಾಲೋರಿಮೌಲ್ಯ ಹೆಚ್ಚಾಗಿರಬೇಕು
2. ಇಂಧನವು ಉರಿದಾಗ ಬಿಡುಗಡೆಯಾಗುವ ಬೂದಿ, ಹೊಗೆ, ಅಥವಾ ತ್ಯಾಜ್ಯ ತುಂಬಾ ಕಡಿಮೆಯಿರಬೇಕು.
3. ಇಂಧನವನ್ನು ಸುಲಭವಾಗಿ ಸಂಗ್ರಹಿಸುವಂತಿರಬೇಕು.
4. ಇಂಧನವನ್ನು ಸುಲಭವಾಗಿ ಸಾಗಾಣಿಕೆ ಮಾಡುವಂತಿರಬೇಕು.
• ಇಂಧನಗಳ ವರ್ಗಿಕರಣ:
ಇಂಧನಗಳ ಭೌತಿಕಸ್ಥಿತಿಯ ಆಧಾರದ ಮೇಲೆ ಇವುಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.
1. ಘನ
2. ದ್ರವ
3. ಅನಿಲ
ಇಂಧನಗಳನ್ನು ಅವುಗಳ ಲಭ್ಯತೆಯ ಆಧಾರದ ಮೇಲೆ ಎರಡು ವಿಧಗಳಾಗಿ ಪುನ; ವರ್ಗೀಕರಿಸಲಾಗಿದೆ.
1. ಪ್ರಾಥಮಿಕ ಇಂಧನಗಳು
2. ದ್ವಿತೀಯಕ ಇಂಧನಗಳು
• ಪ್ರಾಥಮಿಕ ಇಂಧನಗಳು : ಪ್ರಾಥಮಿಕ ಇಂಧನಗಳನ್ನು ನೈಸರ್ಗಿಕ ಇಂಧನಗಳೆನ್ನುವರು. ಇವು ಪ್ರಕೃತಿಯಲ್ಲಿ ದೊರೆಯುತ್ತವೆ. ಇವುಗಳಿಂದ ನೇರವಾಗಿ ಶಕ್ತಿ ಪಡೆಯಬಹುದು.
ಉದಾ: ಮರ, ಕಲ್ಲಿದ್ದಲು, ಪೆಟ್ರೊಲಿಯಂ, ನೈಸರ್ಗಿಕ ಅನಿಲ
• ದ್ವಿತೀಯಕ ಇಂಧನಗಳು: ಇವು ಪ್ರಕೃತಿಯಲ್ಲಿ ನೇರವಾಗಿ ದೊರೆಯುವುದಿಲ್ಲ. ಆದರೆ ಪ್ರಾಥಮಿಕ ಇಂಧನಗಳ ವಿಶ್ಲೇಷಣೆಯಿಂದ ಇವು ದೊರೆಯುತ್ತವೆ.
ಉದಾ: ಇದ್ದಿಲು, ಕೋಕ್, ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ಜಲಾನಿಲ, ಜೈವಿಕ ಅನಿಲ, ಎಲ್‍ಪಿಜಿ
• ಕ್ಯಾಲೋರಿ ಮೌಲ್ಯ:
ಏಕಮಾನ ರಾಶಿಯಷ್ಟು ಇಂಧನವು ಹೆಚ್ಚು ಆಕ್ಸಿಜನ್ ಇರುವಾಗ ಪೂರ್ತಿಯಾಗಿ ಉರಿದು ಉತ್ಪತ್ತಿಯಾಗುವ ಉಷ್ಣವೇ ಇಂಧನದ ಕ್ಯಾಲೋರಿ ಮೌಲ್ಯ. ಮೊದಲು ಉಷ್ಣಶಕ್ತಯನ್ನು ಕ್ಯಾಲೋರಿಗಳಲ್ಲಿ ಅಳೆಯುತ್ತಿದ್ದರು. ಆದರೆ ಉಷ್ಣಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸಬಹುದು ಎಂಬುದು ತಿಳಿದ ನಂತರ ಉಷ್ಣಶಕ್ತಯನ್ನು ಜೂಲ್‍ಗಳಲ್ಲಿ ಅಳೆಯುತ್ತಾರೆ.
1 ಕ್ಯಾಲೋರಿ= 4.18 ಜೂಲ್
ಕ್ಯಾಲೋರಿ ಮೌಲ್ಯದ ಏಕಮಾನಗಳು- ಕಿಲೋಕ್ಯಾಲೋರಿ/ ಗ್ರಾಮ್, ಕಿಲೋಜೂಲ್/ ಗ್ರಾಮ್ ಇವು ಕೆಲವು ಇಂಧನಗಳ ಕ್ಯಾಲೋರಿ ಮೌಲ್ಯ.